ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕನ್ನಡ ಭಾಷೆಯ ನಾಮಫಲಕಗಳಿಗಿಂತ ಹೆಚ್ಚಿನದಾಗಿ, ಅನ್ಯ ಭಾಷೆಯ ನಾಮಫಲಕಗಳಿದ್ದು, ಅವುಗಳನ್ನ ಕಿತ್ತೊಗೆದು, ಕನ್ನಡ ಭಾಷೆಯನ್ನ ಬಳಕೆ ಮಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರುಗಳೆಲ್ಲ ಸೇರಿ ಹೋರಾಟಕ್ಕಿಳಿದಿದ್ದಾರೆ. ಈ ಹೋರಾಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರುನಾಡಿನ ನಾಮಫಲಕದಲ್ಲಿ ಕನ್ನಡವಿರಲೇಬೇಕು, ಇದು ನಮ್ಮ ನೆಲದ ನಿಯಮ ಎಂದು ಹೇಳಿದ್ದಾರೆ.
ಪೀಪಲ್ ಮೀಡಿಯಾದ ವಾಟ್ಸಾಪ್ ಗ್ರೂಪಿಗೆ ಸೇರಲು ಇಲ್ಲಿ ಒತ್ತಿ: ಪೀಪಲ್ ಮೀಡಿಯಾ
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರಿನ ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕ ಹಾಕಬೇಕೆನ್ನುವ ಕನ್ನಡಪರ ಸಂಘಟನೆಗಳ ಬೇಡಿಕೆ ಸರಿಯಿದೆ. ನ್ಯಾಯದ ಪರ ಧ್ವನಿ ಎತ್ತುವ ಯಾವುದೇ ಹೋರಾಟಗಳಿಗೆ ನಮ್ಮ ಸರ್ಕಾರದ ವಿರೋಧವಿಲ್ಲ. ಸಂಘಟನೆಗಳು ಶಾಂತಿಯುತ ಪ್ರತಿಭಟನೆಗಳನ್ನು ಮಾಡಬೇಕು. ಆದರೆ ಕಾನೂನನ್ನು ಉಲ್ಲಂಘಿಸುವ ಕೆಲಸ ನಡೆದರೆ, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೇರೆ ಭಾಷೆಯ ಬಗ್ಗೆ ನನಗಾಗಲೀ, ನಮ್ಮ ಸರ್ಕಾರಕ್ಕಾಗಲೀ ವಿರೋಧವಿಲ್ಲ. ಕನ್ನಡ ನಾಡಿನಲ್ಲಿ ನಾಮಫಲಕದಲ್ಲಿ ಕನ್ನಡವಿರಲೇಬೇಕು. ಇದು ನಮ್ಮ ನೆಲದ ನಿಯಮ. ಎಲ್ಲರೂ ಇದನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.