ಶಿವಮೊಗ್ಗ: ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಸಚಿವಾರಾಗಿರುವ ಮಧು ಬಂಗಾರಪ್ಪನವರ ಲೆಟರ್ ಹೆಡ್ಡಿನಲ್ಲಿ ಕನ್ನಡವೇ ನಾಪತ್ತೆಯಾಗಿದೆ. ಒಂದೆಡೆ ನವೆಂಬರ್ ತಿಂಗಳಿನಲ್ಲಿ ಕನ್ನಡ ಕುರಿತಾದ ಅಭಿಯಾನಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ಕರ್ನಾಟಕ, ಕನ್ನಡವನ್ನು ಪ್ರತಿನಿಧಿಸುವ ಸಚಿವರ ಲೆಟರ್ ಹೆಡ್ಡಿನಲ್ಲೇ ಕನ್ನಡ ಇಲ್ಲದಿರುವುದು ಕನ್ನಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಸಚಿವ ಮಧು ಬಂಗಾರಪ್ಪ ಅವರ ಅಧಿಕೃತ ಸಹಿ ಮತ್ತು ಸೀಲ್ ಇರುವ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದರು ಅದರಲ್ಲಿರುವ ಅವರ ವೈಯಕ್ತಿಕ ವಿವರಗಳು ಮತ್ತು ಪದವಿ ಕುರಿತಾದ ವಿವರಗಳಲ್ಲಿ ಒಂದೇ ಒಂದು ಅಕ್ಷರ ಕನ್ನಡವಿಲ್ಲ. ಇದು ಕನ್ನಡಿಗರಿಗೆ ಬೇಸರ ತರಿಸಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರು ಕನ್ನಡ ಮತ್ತು ಕರ್ನಾಟಕದ ಕುರಿತ ಬದ್ಧತೆಗೆ ಹೆಸರಾದವರು. ಅವರು ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನ ಬದ್ಧ ಅಧಿಕಾರ ಕೊಟ್ಟು ಸಂಪುಟ ದರ್ಜೆ ಸ್ಥಾನಮಾನ ನೀಡಿದವರು. ಅವರ ಪರಂಪರೆಯನ್ನು ಮುಂದುವರೆಸಬೇಕಾಗಿದ್ದ ಮಧು ಬಂಗಾರಪ್ಪ ಈ ರೀತಿ ಕನ್ನಡವನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ.
ಶಿಕ್ಷಣ ಸಚಿವರಿಗೆ ನಿಜವಾಗಿಯೂ ಕನ್ನಡ ಭಾಷೆಯ ಕುರಿತು ಅಭಿಮಾನ ಮತ್ತು ಕಾಳಜಿ ಇದ್ದಲ್ಲಿ ಅವರು ತಮ್ಮ ಲೆಟರ್ ಹೆಡ್ಡನ್ನು ಕನ್ನಡದಲ್ಲಿ ಮಾಡಿಸಬೇಕು. ಅದು ಅವರಿಂದ ಸಾಧ್ಯವಿಲ್ಲವಾದರೆ ನಾನೇ ಒಂದು ಲೆಟರ್ ಹೆಡ್ ಮಾಡಿಕೊಡುತ್ತೇನೆ ಎಂದು ಹಿರಿಯ ಪತ್ರಕರ್ತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.