Thursday, January 2, 2025

ಸತ್ಯ | ನ್ಯಾಯ |ಧರ್ಮ

ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಕನ್ನಡ ಟಿವಿ ಚಾನೆಲ್‌ಗಳು!

ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸತತ ಎರಡನೇ ವರ್ಷವೂ ಕನ್ನಡ ಸುದ್ದಿ ವಾಹಿನಿಗಳು ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಮತ್ತು ಕೋರಮಂಗಲದ ಕಿಕ್ಕಿರಿದ ರಸ್ತೆಗಳಲ್ಲಿ ಜೋಡಿಗಳು ಮತ್ತು ಮಹಿಳೆಯರನ್ನು ಕ್ಯಾಮರಾ ಹಿಡಿದುಕೊಂಡು ಬೆನ್ನಟ್ಟುವ ವಿಕೃತಿಯನ್ನು ತೋರಿವೆ. ಕಿರುಕುಳವು ಕೇವಲ ಸುದ್ದಿ ಚಾನೆಲ್‌ಗಳಿಗೆ ಸೀಮಿತವಾಗಿಲ್ಲ, X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಈ ಮಹಿಳೆಯರ ವೀಡಿಯೊಗಳನ್ನು ಚಿತ್ರೀಕರಿಸಿ ಪೋಸ್ಟ್‌ ಮಾಡಲಾಗಿದೆ.

ನ್ಯೂಸ್ 18 ಕನ್ನಡ, ಟಿವಿ9 ಕನ್ನಡ, ಮತ್ತು ಪವರ್ ಟಿವಿ ನ್ಯೂಸ್‌ನಂತಹ ಚಾನೆಲ್‌ಗಳು ಈ ಕ್ಷಣಗಳ ಕಚ್ಚಾ, ಎಡಿಟ್ ಮಾಡದ ದೃಶ್ಯಗಳನ್ನು ಪ್ರಸಾರ ಮಾಡಿ, ನಿರ್ದಿಷ್ಟವಾಗಿ ‘ಆಧುನಿಕ’ ಬಟ್ಟೆಗಳನ್ನು ಧರಿಸಿರುವ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿವೆ. ಪಬ್‌ಗಳಿಂದ ಹೊರಬರುವ ಮಹಿಳೆಯರ ದೇಹವನ್ನು ಝೂಮ್‌ ಮಾಡಿ, ಸುಮ್ಮನೆ ಕುಳಿತುಕೊಂಡಿರುವ ಹೆಣ್ಣು ಮಕ್ಕಳ ವಿಡಿಯೋ ತೆಗೆದು ವೈರಲ್‌ ಮಾಡಿವೆ. ಇದಕ್ಕೆ “ಫುಲ್‌ ಟೈಟಾಗಿ ಯುವತಿಯರ ಓಲಾಟ..ತೂರಾಟ” ಎಂಬೆಲ್ಲಾ ಅಸಭ್ಯ ಟೈಟಲ್‌ಗಳನ್ನು ಕೊಟ್ಟು ಸುದ್ದಿ ಮಾಡಿವೆ.

ಜೋಡಿಗಳ ವಿಡಿಯೋ ತೆಗೆದು, ಅವರ ಖಾಸಗಿತನಕ್ಕೆ ಧಕ್ಕೆಯನ್ನು ತಂದು “ಅಣ್ಣಾ.. ಕ್ಯಾಮರಾದಲ್ಲಿ ನನ್ನ ತೋರಿಸ್ಬೇಡ ಕನಣ್ಣ” ಎಂಬ ಟೈಟಲನ್ನು ಟಿವಿ9 ಕನ್ನಡ ಎಂಬ ಖಾಸಗಿ ಚಾನೆಲ್‌ ನೀಡಿದೆ.

ಟಿವಿ9 ಕನ್ನಡದ ಮಾಡಿರುವ ಮಾನಹಾನಿಕರ ಮತ್ತು ಮಹಿಳಾ ದೌರ್ಜನ್ಯವನ್ನು ಈ ಕೆಳಗೆ ನೀವು ನೋಡಬಹುದು:

ಟಿವಿ 9 ಕನ್ನಡ ತನ್ನ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಈ ರೀತಿಯ ವಿವರಣೆಯನ್ನೂ ನೀಡಿರುವುದು ಮಾಧ್ಯಮ ರಂಗದಲ್ಲಿ ಅತ್ಯಂತ ಹೇಯ ಕೃತ್ಯವಾಗಿ ಪರಿಗಣಿಸಬೇಕಾಗಿದೆ.

ತಮ್ಮ ಚಾನೆಲ್‌ ನಡೆಸಿದ ಮಹಿಳಾ ದೌರ್ಜನ್ಯವನ್ನು ಸುದ್ದಿ ಮಾಡುತ್ತಿರುವ ಟಿವಿ9 ಕನ್ನಡದ ನಿರೂಪಕಿ

ಕನ್ನಡದ ಟಿವಿ ಮಾಧ್ಯಮಗಳು ಮಹಿಳೆಯರ ಅಂಗಾಂಗಗಳನ್ನು ತೋರಿಸುವ ಮೂಲಕ ತಮ್ಮ ವೀಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಸುದ್ದಿ ಮಾಡಬೇಕಾದ ಮಾಧ್ಯಮಗಳು ಸಂವೇದನಾರಹಿತರಾಗಿ ನೈತಿಕ ಪೋಲೀಸ್‌ಗಿರಿಗೆ, ಕಿರುಕುಳ ನೀಡಲು ಇಳಿದಿವೆ. ರಸ್ತೆಗಳಲ್ಲಿ ಕ್ಯಾಮರಾಗಳನ್ನು ಹಿಡಿದುಕೊಂಡು ಹೋಗಿ ಯುವತಿಯರ ದೇಹವನ್ನು ಚಿತ್ರೀಕರಿಸಿ, ಕೊಳಕು ಟೈಟಲ್‌ಗಳನ್ನು ನೀಡಿ ಸುದ್ದಿ ಮಾಡಿವೆ. ಮಹಿಳೆಯರ, ಜೋಡಿಗಳ ಒಪ್ಪಿಗೆ ಇಲ್ಲದೆ ಅವರ ಖಾಸಗಿ ಕ್ಷಣಗಳನ್ನು ರಾಜ್ಯದಾದ್ಯಂತ ಜನ ನೋಡುವಂತೆ ಮಾಡಿವೆ. ಈ ಯುವತಿಯರು ತಮ್ಮ ಮುಖವನ್ನು ಮುಚ್ಚಿಕೊಂಡು ಓಡುವಾಗಲೂ ಕ್ರೂರ ಟಿವಿ ಚಾನೆಲ್‌ಗಳು ಅವರನ್ನು ಸೆರೆ ಹಿಡಿದು ದೌರ್ಜನ್ಯ ನಡೆಸಿವೆ.

“ಪಬ್‌ನಲ್ಲಿ ಕ್ಯೂಟ್‌ ಕ್ಯೂಟ್‌ ಹುಡುಗೀರ ಮಸ್ತ್‌ ಮಸ್ತ್‌ ಡ್ಯಾನ್ಸ್,” “ತೇಲಾಡುತಾ ರಸ್ತೆಯಲ್ಲಿ ಕೂತ ಯುವತಿಯರು,” ಮತ್ತು “ಫುಲ್ ಟೈಟ್ ಆಗಿ ಹಾದಿ ಬೀದಿಯಲ್ಲೆಲ್ಲ ಹುಡುಗೀರು ಕಿರಿಕ್ ” ಮುಂತಾದ ಶೀರ್ಷಿಕೆಗಳನ್ನು ನೀಡಿ ಮಹಿಳೆಯರ ಮುಖ, ಸೊಂಟ, ಎದೆಭಾಗವನ್ನು ಝೂಮ್ ಮಾಡಿ ತಮ್ಮ ಚಾನೆಲ್‌ನಲ್ಲಿ ಹಾಕಿಕೊಂಡಿವೆ.

ಹುಡುಗಿಯರ ವಿಡಿಯೋ ತೆಗೆದು ಅಸಭ್ಯವಾಗಿ ಸುದ್ದಿ ಮಾಡಿರುವ ಸುವರ್ಣ ನ್ಯೂಸ್‌ ಎಂಬ ಕನ್ನಡ ಖಾಸಗಿ ಚಾನೆಲ್‌!

ಪವರ್ ಟಿವಿ ನ್ಯೂಸ್‌ ಎಂಬ ಒಂದು ಚಾನೆಲ್‌ನ ಮಹಿಳಾ ಪೀಡಕ ವರದಿಗಾರರನ್ನು ಪೊಲೀಸರು ಹಿಂದೆ ಸರಿಯುವಂತೆ ಹೇಳಿದರೂ ಅದನ್ನು ನಿರ್ಲಕ್ಷಿಸಿ ವಿಡಿಯೋ ಮಾಡುತ್ತಿರುವುದು ಕಂಡು ಬಂದಿದೆ. ಅಂತಹ ಒಂದು ಕ್ಲಿಪ್‌ನಲ್ಲಿ, ಅಸಮಾಧಾನಗೊಂಡ ಮಹಿಳೆಯೊಬ್ಬಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿಡಿಯೋ ಮಾಡುತ್ತಿದ್ದ ಕ್ಯಾಮರಾವನ್ನು ಕಸಿಯಲು ಪ್ರಯತ್ನಿಸಿದಳು, ಆದರೆ ಕ್ಯಾಮರಾಮ್ಯಾನ್‌ ಮಾತ್ರ ತನ್ನ ಕಿರುಕುಳವನ್ನು ಮುಂದುವರಿಸಿದ.

ನ್ಯೂಸ್‌ 18 ಕನ್ನಡ ಎಂಬ ಚಾನೆಲ್‌ನಿಂದ ಮಹಿಳಾ ದೌರ್ಜನ್ಯ!

ಮೇಲ್ನೋಟಕ್ಕೆ ಅತ್ಯಂತ ಹೆಚ್ಚು ಮಹಿಳಾ ದೌರ್ಜನ್ಯ ಎಸಗಿರುವ ಕನ್ನಡ ಚಾನೆಲ್‌ ನ್ಯೂಸ್‌ 18 ಕನ್ನಡ. ಇದು ಹಾಕಿರುವ ಅಸಭ್ಯ ಸುದ್ದಿಗಳನ್ನು ನೀವಿಲ್ಲಿ ನೋಡಬಹುದು. ಇದು ಯಾವುದೇ ರೀತಿಯಲ್ಲಿಯೂ ಒಂದು ಸುದ್ದಿಯಲ್ಲ. ಆದರೆ ಈ ರೀತಿ ಮಹಿಳೆಯ ದೇಹವನ್ನು, ಅಸಭ್ಯ ಶೀರ್ಷಿಕೆಗಳ ಮೂಲಕ ನೀಡಿ ಜನರಿಗೆ ತಪ್ಪು ಸಂದೇಶವನ್ನು ನೀಡಿದೆ. “ಕಲರ್‌ ಕಲರ್‌ ಬ್ಯೂಟೀಸ್‌, ಮಸ್ತ್‌ ಮಸ್ತ್‌ ಡ್ಯಾನ್ಸ್”, “ಕುಡಿದು ರೋಡಲ್ಲಿ ಯುವತಿಯರ ತೇಲಾಟ,” ಮುಂತಾದ ಕೀಳು ಅಭಿರುಚಿಯ ಕ್ಯಾಪ್ಷನ್‌ಗಳನ್ನು ನೀಡಿದೆ.

ಹೊಸ ವರ್ಷದ ದಿನದ ಸಂಪೂರ್ಣ ಸುದ್ದಿಗಳಲ್ಲಿ ನ್ಯೂಸ್‌ 18 ಮಹಿಳಾ ದೌರ್ಜನ್ಯವನ್ನು ಎಸಗಿದೆ.

ಮಹಿಳೆಯರನ್ನು ʼಬ್ಯೂಟೀಸ್‌ʼ ಎಂದು ಕರೆದಿರುವ ಈ ಚಾನೆಲ್‌ ತನ್ನ ಪೋಲಿತನವನ್ನು ಸುದ್ದಿಯಲ್ಲಿ ತೋರಿಸಿದೆ. ರಸ್ತೆಯಲ್ಲಿ ಹೋಗಿ ಬರುವ ಯುವತಿಯರ ವಿಡಿಯೋ, ಫೋಟೋ ತೆಗೆಯುವುದು ಅಪರಾಧ, ಅಲ್ಲದೇ ಬ್ಯೂಟೀಸ್‌ ಎಂದೆಲ್ಲಾ ಕರೆಯುವುದು ಅಶ್ಲೀಲ ಮತ್ತು ಕಿರುಕುಳ. ನ್ಯೂಸ್‌ 18 ಯಾವುದೇ ನಾಚಿಕೆ, ಮಾನ-ಮರ್ಯಾದೆ ಇಲ್ಲದೆ ಇದನ್ನು ಮಾಡಿದೆ.

ಪವರ್‌ ಟಿವಿಯಿಂದ ದೌರ್ಜನ್ಯ:

ಹೊಸ ವರ್ಷದಲ್ಲಿ ಪವರ್‌ ಟಿವಿ ಎಂಬ ಖಾಸಗಿ ಚಾನೆಲ್‌ ಎರಡು ರೀತಿಯ ಸುದ್ದಿಗಳನ್ನು ಮಾಡಿದೆ. ಒಂದು ಇಡೀ ವರ್ಷದ ಭವಿಷ್ಯವನ್ನು ಹೇಳಿಸಲು ಓರ್ವ ಜ್ಯೋತಿಷಿಯನ್ನು ಕೂರಿಸಿಕೊಂಡಿದ್ದು, ಇನ್ನೊಂದು ಮಹಿಳೆಯರ ಒಪ್ಪಿಗೆ ಇಲ್ಲದೆ ಅವರ ಅಂಗಾಂಗಗಳನ್ನು ತೋರಿಸಿದ್ದು. ಮಾಧ್ಯಮಗಳು ಯಾವ ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಒಂದು ಒಳ್ಳೆಯ ನಿದರ್ಶನ ಇದಾಗಿದೆ.

ಪವರ್‌ ಟಿವಿ ಜನರು ಒಂದೋ ವರ್ಷದ ಭವಿಷ್ಯ ನೋಡುತ್ತಾರೆ, ಇಲ್ಲವೇ ಮಹಿಳೆಯರ ದೇಹದ ವಿಡಿಯೋ ನೋಡುತ್ತಾರೆ ಎಂಬ ಕೀಳು ಯೋಚನೆಯನ್ನು ಹೊಂದಿದೆ ಎಂಬುದು ಇದರಿಂದ ಸಾಬೀತಾಗಿದೆ.

ಹಣದ ಆಸೆಗೆ ನ್ಯೂಸ್‌ ಫಸ್ಟ್‌ ಕನ್ನಡನಿಂದ ಪಬ್‌ಗಳಿಗೆ ಪ್ರಚಾರ?

ಒಂದು ಕಡೆಯಲ್ಲಿ ಪಬ್‌ನಲ್ಲಿರುವ ಮಹಿಳೆಯರ ಮೇಲೆ ವಿಡಿಯೋ ಮಾಡುವ ಮೂಲಕ ದೌರ್ಜನ್ಯವನ್ನು ಎಸಗುತ್ತಲೇ, ಅದೇ ಪಬ್‌ಗಳ ಬಗ್ಗೆ ಜಾಹೀರಾತಿನಂತೆ ಸುದ್ದಿ ಮಾಡುವ ಕನ್ನಡ ಮಾಧ್ಯಮಗಳ ಗುಲಾಮಿತನವನ್ನು ನಾವಿಲ್ಲಿ ನೋಡಬಹುದು. ನ್ಯೂಸ್‌ ಫಸ್ಟ್‌ ಕನ್ನಡ ಎಂಬ ಚಾನಲ್‌ ತನ್ನ ಅನೈತಿಕ ಪೊಲೀಸ್‌ಗಿರಿಯನ್ನು ನಡೆಸುವ ಮೊದಲು ನ್ಯಾಸ್‌ ಸ್ಕೈ ಬಾರ್‌ ಎಂಬ ಪಬ್‌ ಒಳಗೆ ನುಗ್ಗಿ ಅದರ ಚಿತ್ರೀಕರಣ ಮಾಡಿದೆ.

ಸಾಮಾನ್ಯವಾಗಿ ಇಂತಹ ಸುದ್ದಿಗಳಿಗೆ ವರದಿಗಾರರು ಇಲ್ಲವೇ, ಚಾನಲ್‌ಗೆ ಆ ಪಬ್‌ಗಳು ಹಣ ನೀಡುತ್ತವೆ. ಇದಕ್ಕೆ ಪ್ರತಿಫಲವಾಗಿ ಆ ಪಬ್‌ನ ಪ್ರಚಾರವನ್ನು ಮಾಡುತ್ತವೆ. ಇದಾದ ಮೇಲೆ ಅದೇ ಪಬ್‌ನಿಂದ ಹೊರಬರುವ ಯುವತಿಯರ ಜೊತೆಗೆ ಅಶ್ಲೀಲವಾಗಿ ವರ್ತಿಸುತ್ತವೆ.

ನ್ಯಾಸ್‌ ಸ್ಕೈ ಬಾರ್‌ ಪಬ್‌ನ ಒಳಗೆ ಹೆಂಡದ ವಿಡಿಯೋ ಮಾಡುತ್ತಾ ವೀಕ್ಷಕ ವಿವರಣೆ ನೀಡುತ್ತಿರುವ ವರದಿಗಾರ
ಹುಬ್ಬಳ್ಳಿಯ ಕ್ಯೂಬಿಕ್ಸ್‌ ಹೋಟೇಲ್‌ ಒಳಗಡೆ ಪಬ್‌ ಪ್ರಚಾರದಲ್ಲಿ ತೊಡಗಿರುವ ವರದಿಗಾರ
ಕೋರಮಂಗಲದ ಟಿಪ್ಸಿ ಬುಲ್‌ ರೆಸ್ಟೋರೆಂಟಿನ ಪ್ರಚಾರದಲ್ಲಿ ತೊಡಗಿರುವ ನ್ಯೂಸ್‌ಫಸ್ಟ್‌ ಕನ್ನಡದ ವರದಿಗಾರ
ವಿದೇಶಿ ಮಹಿಳೆಯ ಮೇಲೆ ಮುತ್ತಿಗೆ ಹಾಕಿರುವ ರಣಹದ್ದು ಕನ್ನಡ ಟಿವಿ ಚಾನೆಲ್‌ಗಳು

ಕನ್ನಡ ಟಿವಿ ಮಾಧ್ಯಮಗಳಿಂದ ಮಹಿಳೆಯ ಜೊತೆಗೆ ಅಸಭ್ಯ ವರ್ತನೆ- ಕಾನೂನು ಏನಿದೆ?

ಮಹಿಳೆಯರು ಕುಡಿದಿದ್ದಾರೆ, ನೃತ್ಯ ಮಾಡುತ್ತಿದ್ದಾರೆ ಎಂಬುದು ಒಂದು ಸುದ್ದಿಯಲ್ಲ. ಆದರೆ ಅದನ್ನು ಟಿವಿ ಚಾನೆಲ್‌ಗಳು ಸುದ್ದಿ ಮಾಡುತ್ತಿರುವುದು, ಅದೂ ಪೋಲಿ ಟೈಟಲ್‌ಗಳ ಮೂಲಕ ಸುದ್ದಿ ಮಾಡುತ್ತಿರುವುದು ಪತ್ರಿಕಾಧರ್ಮಕ್ಕೆ ವಿರುದ್ಧ. ಯುವತಿ ಕುಡಿಯುವುದು, ನೃತ್ಯ ಮಾಡುವುದು ಅವಳ ಖಾಸಗಿ ಕ್ಷಣಗಳು. ಅವುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಅಶ್ಲೀಲ ಮತ್ತು ಕಿರುಕುಳ.

ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 79 ಘನತೆಯ ಮೇಲೆ ನಡೆಸುವ ಅವಮಾನದಿಂದ ಮಹಿಳೆಯರನ್ನು ರಕ್ಷಿಸುತ್ತದೆ. ಪದಗಳನ್ನು ಉಚ್ಚರಿಸುವ, ಸನ್ನೆಗಳನ್ನು ಮಾಡುವ, ವಸ್ತುವನ್ನು ಪ್ರದರ್ಶಿಸುವ ಮತ್ತು ಮಹಿಳೆಯ ಗೌಪ್ಯತೆಗೆ ಒಳನುಗ್ಗುವ ಮೂಲಕ ನಡೆಸುವ ಅವಮಾನಕ್ಕೆ ದಂಡ ಮತ್ತು ಮೂರು ವರ್ಷಗಳವರೆಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸಬಹುದು. ಇದರ ಪ್ರಕಾರ ಮಹಿಳೆಯರ ಖಾಸಗಿ ಕ್ಷಣಗಳನ್ನು ಕ್ಯಾಮರಾ ಮೂಲಕ ಚಿತ್ರೀಕರಿಸುವುದು ಮಾಧ್ಯಮಗಳ ಕೆಲಸ ಅಲ್ಲ, ಅದೊಂದು ಕ್ರಿಮಿನಲ್‌ ಅಪರಾಧ. ಅದು ಮಹಿಳಾ ದೌರ್ಜನ್ಯ.

ಮಹಿಳೆಯರ ಜೊತೆಗೆ ಅಸಭ್ಯ ವರ್ತನೆ (ನಿಷೇಧ) ಕಾಯಿದೆ, 1986, ಪುಸ್ತಕಗಳು, ಕರಪತ್ರಗಳು, ಚಲನಚಿತ್ರಗಳು, ಛಾಯಾಚಿತ್ರಗಳು ಅಥವಾ ರೇಖಾಚಿತ್ರಗಳಂತಹ ಮಹಿಳೆಯ ಜೊತೆಗೆ ಅಸಭ್ಯತೆಯನ್ನು ತೋರಿಸುವ ಯಾವುದೇ ವಸ್ತುವನ್ನು ಉತ್ಪಾದಿಸುವುದು, ವಿತರಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸುತ್ತದೆ.

ಈ ಕಾನೂನುಗಳ ಅಡಿಯಲ್ಲಿ ಮಹಿಳಾ ದೌರ್ಜನ್ಯ ಎಸಗಿರುವ ಟಿವಿ ಮಾಧ್ಯಮಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page