Saturday, March 15, 2025

ಸತ್ಯ | ನ್ಯಾಯ |ಧರ್ಮ

ತೆಲುಗಲ್ಲಿ ಕನ್ನಡತಿಯರ ಸ್ಟಾರ್ ವಾರ್ ; ರಶ್ಮಿಕಾ ಜಾಗ ಆಕ್ರಮಿಸ್ತಾರಾ ಶ್ರೀಲೀಲಾ?

ಕಿರಿಕ್ ಬೆಡಗಿ ರಶ್ಮಿಕಾ ಕನ್ನಡ ಚಿತ್ರರಂಗದ ಆಚೆಗೆ ಮಾಡಿದ ಹೆಸರಿನ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಗಾಸಿಪ್ ಜೊತೆಗೆ ಅಪಾರ ಖ್ಯಾತಿ ಪಡೆದ ರಶ್ಮಿಕಾ ಬಾಲಿವುಡ್ ಗೂ ಲಗ್ಗೆ ಇಟ್ಟು ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಇತ್ತ ರಶ್ಮಿಕಾ ಒಂದರ ಮೇಲೆ ಒಂದರಂತೆ ಸಿನೆಮಾದಲ್ಲಿ ಬ್ಯುಸಿ ಆಗ್ತಿದ್ರೆ ಸದ್ದೇ ಇಲ್ಲದಂತೆ ಆ ಜಾಗವನ್ನು ಇನ್ನೊಬ್ಬ ಬೆಡಗಿ ಆಕ್ರಮಿಸುತ್ತಿದ್ದಾರೆ‌. ವಿಶೇಷ ಎಂದರೆ ಆಕೆಯೂ ಕನ್ನಡತಿನೇ.. ಹೆಸರು ಶ್ರೀಲೀಲಾ.

ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟ ಶ್ರೀಲೀಲಾಗೆ ‘ಕಿಸ್’ ನಿರೀಕ್ಷಿತ ಮಟ್ಟಕ್ಕೆ ಮತ್ತೇರಿಸಿರಲಿಲ್ಲ. ಅದಾದ ನಂತರ ಬಂದ ಶ್ರೀಮುರಳಿ ನಾಯಕರಾದ ಭರಾಟೆ ಕೂಡಾ ಮಕಾಡೆ ಮಲಗಿತ್ತು. ಇನ್ನು ‘ಬೈ ಟು ಲವ್’ ಕೂಡಾ ಬಂದದ್ದೂ ಗೊತ್ತಾಗಿಲ್ಲ, ಹೋದದ್ದೂ ಗೊತ್ತಾಗಿಲ್ಲ.

ಯಾಕೋ ಕನ್ನಡ ಇಂಡಸ್ಟ್ರಿ ಕೈ ಹಿಡಿದಿಲ್ಲ ಅಂತ ಶ್ರೀಲೀಲಾ ನಿಧಾನಕ್ಕೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನೋಡಿ. ಅವರ ಲಕ್ ಸಖತಾಗಿಯೇ ತಿರುಗಿದೆ. ಶ್ರೀಲೀಲಾ ಅವರ ಮೊಟ್ಟ ಮೊದಲ ತೆಲುಗು ಸಿನಿಮಾ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರಿಗೂ ಪರಿಚಿತಗೊಂಡರು.

ಆ ನಂತರ ಕನ್ನಡದ ಇನ್ನೊಂದು ಬೆಡಗಿಗೆ ತೆಲುಗಿನ ಮಂದಿ ಹಾಕಿದ್ದು ರೆಡ್ ಕಾರ್ಪೆಟ್. ವಿಷಯ ಏನಪ್ಪಾ ಅಂದ್ರೆ ಈಗ ರಶ್ಮಿಕಾ ಮಂದಣ್ಣರಂತಹ ನ್ಯಾಷನಲ್ ಕ್ರಶ್ ಗೆ ಶ್ರೀಲೀಲಾ ಠಕ್ಕರ್ ಕೊಡ್ತಿದ್ದಾರೆ. ಶ್ರೀವಲ್ಲಿ ರಶ್ಮಿಕಾ ಕೈಯಲ್ಲಿರೋ ಎಲ್ಲಾ ಅದ್ಭುತ ಸಿನಿಮಾಗಳನ್ನ ಕಿಕ್ ಚೆಲುವೆ ಶ್ರೀಲೀಲಾ ಕಿತ್ತುಕೊಳ್ಳುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಇದೀಗ ಲೇಟೆಸ್ಟ್ ಸುದ್ದಿ ಏನಂದ್ರೆ, ನಿರ್ದೇಶಕ ವೆಂಕಿ ಕುದುಮುಲಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾಗೆ ನಿತಿನ್ ಅವರ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದರು, ಚಿತ್ರದ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಕೂಡಾ ನಡೆದಿತ್ತು. ಈಗ ದಿಢೀರನೆ ರಶ್ಮಿಕಾರನ್ನ ಎತ್ತಂಗಡಿ ಮಾಡಿದ ಚಿತ್ರತಂಡ ಆ ಜಾಗಕ್ಕೆ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದೆ. ಸಧ್ಯ ಟಾಲಿವುಡ್ ಅಂಗಳದಲ್ಲಿ ಈ ಬದಲಾವಣೆಯೇ ಹಾಟ್ ಫೆವರಿಟ್ ಸುದ್ದಿಯಾಗಿ ಹರಿದಾಡುತ್ತಿದೆ.

ಎಷ್ಟೇ ಆದರೂ ರಶ್ಮಿಕಾ ಮಾತ್ರ ಈ ಕ್ಷಣಕ್ಕೂ ಬ್ಯುಸಿ ನಟಿ. ಸ್ಯಾಂಡಲ್ವುಡ್ ನಲ್ಲಿ ಅಷ್ಟಕ್ಕಷ್ಟೇ ಆದರೂ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಭರ್ಜರಿ ಅವಕಾಶ ಹುಡುಕಿ ಬರುತ್ತಿವೆ. ‘ಪುಷ್ಪ 2’, ‘ಅನಿಮಲ್‌’, ‘ರೈನ್‌ ಬೋ’ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಬಾಲಿವುಡ್‌ ನಿರ್ದೇಶಕ ಅನೀಸ್‌ ಬಾಜ್ಮೀ ಅವರ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ. ಸಧ್ಯ ಆ ಮಟ್ಟಕ್ಕೆ ಶ್ರೀಲೀಲಾ ಏರಲು ಇನ್ನಷ್ಟು ಕಾಲ ಬೇಕೇಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page