Thursday, May 2, 2024

ಸತ್ಯ | ನ್ಯಾಯ |ಧರ್ಮ

ಅಗ್ರಹಾರದೊಳಗಣ ಹೊಲ(ಸು)ಗೇರಿ..

ಯಾರ ಆಯ್ಕೆಗೂ ನಿಲುಕದ ಕೇವಲ ಹುಟ್ಟಿನ ಕಾರಣಕ್ಕಾಗಿ ಸಾಮಾಜಿಕವಾಗಿ ಅವಮಾನಿತವೆಂದು ಗುರುತಿಸಲ್ಪಟ್ಟಂತಹ ಪದವೊಂದು ಸಾರ್ವಜನಿಕವಾಗಿ ಮಾಡುವ ಅವಮಾನ ಅದು ಅನುಭವಿಸಿದವರಿಗಷ್ಟೇ ಗೊತ್ತು. ಉಪೇಂದ್ರವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ – ಶಂಕರ್ ಸೂರ್ನಳ್ಳಿ, ಲೇಖಕರು

ನಮ್ಮ ಸೂಪರ್ ಸ್ಟಾರ್ ನಟ ಉಪೇಂದ್ರರವರು ತಮ್ಮನ್ನು ತಾವೇ ಬುದ್ಧಿವಂತ ಎಂದು ಕರೆದು ಕೊಂಡಂತವರು. ಅವರ ಸಿನಿಮಾ ಒಂದು ʼಬುದ್ಧಿವಂತರಿಗಾʼ ಎಂಬ ಟೈಟಲನ್ನು ಹೊತ್ತು ಬಂದದ್ದೂ ಇದೆ. ಜೊತೆಗೆ ಬುದ್ಧಿವಂತ ಎನ್ನುವ ಹೆಸರಿನ ಅವರ ಸಿನಿಮಾವೂ ಕೂಡಾ ಇದೆ.

ಹೌದು, ಸನ್ಮಾನ್ಯ ಉಪೇಂದ್ರರವರು ಬುದ್ಧಿವಂತ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅವರಿದನ್ನು ಅನೇಕ ಸಂದರ್ಭಗಳಲ್ಲಿ ಸಾಕ್ಷೀಕರಿಸಿ ತೋರಿಸಿಯೂ ಇದ್ದಾರೆ ಕೂಡ. ಅಂದರೆ, ತಮ್ಮದೇ ಚಿತ್ರಗಳಲ್ಲಿ ಬಡತನ, ಸಾಮಾಜಿಕ ಅಸಮಾನತೆಯ ನೋವನ್ನು ತೋರಿಸಲೂ ಅವರಿಗೆ ಗೊತ್ತು ಅದೇ ರೀತಿ ಬ್ರಾಹ್ಮಣ್ಯದ ಮೆರೆಸುವಿಕೆಯೂ ಕೂಡ ಅವರಿಗೆ ಕರತಲಾಮಲಕ. ತನ್ನದೇ ಹೆಸರಿಟ್ಟುಕೊಂಡ ’ಉಪೇಂದ್ರ’ ದಂತಹ ಚಿತ್ರದ ಮೂಲಕ ಹೆಣ್ಣನ್ನು ಕೆಳಮಟ್ಟದಲ್ಲಿ ಚಿತ್ರಿಸಲೂ ಗೊತ್ತು. ರಕ್ತ ಕಣ್ಣೀರಿನಂತಹ ಚಿತ್ರದ ಮೂಲಕ ಅವಳನ್ನು ಹಾಡಿ ಹೊಗಳಲೂ ಕೂಡ ಗೊತ್ತೆಂಬ ವಿಚಾರ ಅವರ ಚಿತ್ರಗಳನ್ನು ನೋಡಿದವರಿಗೆ ಗೊತ್ತಿದ್ದ ವಿಚಾರವೇ.

ಯಾವುದೋ ಮಾತಿನ ಭರದಲ್ಲಿ ಊರಿದ್ದಲ್ಲಿ ಹೊಲಗೇರಿ ಎಂಬ ಗಾದೆ ಮಾತನ್ನು ನಟ ಉಪೇಂದ್ರರವರು ಉಲ್ಲೇಖ ಮಾಡಿದ್ದನ್ನು ಒಪ್ಪಿಕೊಳ್ಳಬಹುದಾದರೂ ನಂತರದ ಬೆಳವಣಿಗೆಗಳಲ್ಲಿ ಅವರ ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡಹೊರಟ ಉಪೇಂದ್ರ ಪರ ಮೊಂಡುವಾದಗಳನ್ನು ನೋಡಿದಾಗ ಯಾಕೋ ಇವರುಗಳ ಮನಸ್ಸೇ ತೊಳೆದರೂ ಹೋಗದಷ್ಟು ಹೊಲಸಿನಿಂದ ಮಲಿನಗೊಂಡಿದೆ ಎಂಬುದನ್ನ ಎತ್ತಿ ತೋರಿಸುತ್ತಿದೆ.

ಬಾಯಿ ತಪ್ಪಿ ಬಂದ ಒಂದು ಸಣ್ಣ ಗಾದೆ ಮಾತಿಗೆ ಕೇಸು, ಎಫ್ ಐ ಆರ್, ಪ್ರತಿಭಟನೆ ಇವೆಲ್ಲಾ ಬೇಕಿತ್ತಾ..!? ಇದು ಅತಿರೇಕವೆನಿಸೋಲ್ಲವೇ ಎಂಬುದು ಅನೇಕರ ವಾದ. ಹೌದು, ಇಂತಹ ಗಾದೆಯ ಮಾತುಗಳು ಸಮಾಜದಲ್ಲಿ ಸಹಜವಾಗಿ ಬಳಕೆಯಲ್ಲಿದ್ದಂತವುಗಳು. ಕಳೆದ ವರ್ಷ ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್ ರವರು ನಾವು ಸಾಮಾನ್ಯವಾಗಿ ಬಳಸುವ ಹಗಲುವೇಷ ಎನ್ನುವ ಹೆಸರನ್ನು ಹೊಂದಿರುವ ಜಾತಿ ಸಹ ಇದ್ದಿರುವ ಬಗ್ಗೆ ಹೇಳಿದ್ದರು. ಅದೇ ರೀತಿ ದೊಂಬರಾಟ ಎನ್ನುವ ಪದವೂ ಕೂಡ ಇಂದಿನ ಸಂದರ್ಭದಲ್ಲಿ ಆಕ್ಷೇಪಾರ್ಹ ಪದವೇ ಆಗಿದೆ. ದೊಂಬ ಸಮುದಾಯವನ್ನು ಬೊಟ್ಟು ಮಾಡುವ ಈ ಪದ ಸರ್ವೇ ಸಾಮಾನ್ಯ ಎಂಬಂತೆ ಸಮಾಜದಲ್ಲಿ ಬಳಕೆಯಲ್ಲಿದೆ.

ಹೌದು, ಸದ್ಯಕ್ಕೆ ಸುದ್ದಿಯಲ್ಲಿರುವ ಈ ಹೊಲಗೇರಿ ಯಂತಹ ಗಾದೆ, ನಾಣ್ನುಡಿಗಳು ಬಿಂಬಿಸುವಂತಹ ಮಾತಿನ ತೀಕ್ಷ್ಣತೆಯ ಅರಿವಿಲ್ಲದವರಿಗೆ ಮೇಲಿನ ಪ್ರತಿರೋಧಗಳೆಲ್ಲ ಅತಿರೇಕ ಅನ್ನಿಸೋದು ಸಹಜವೇ. ಆದರೆ, ಆ ಕುಹಕದ ಮಾತುಗಳು ಮಾಡುವ ಘಾಸಿಯ ನೋವುಂಡವರಿಗೆ ಮಾತ್ರ ಖಂಡಿತಾ ಹಾಗನ್ನಿಸದು.

ನನ್ನೊಬ್ಬ ಗೆಳೆಯನಿದ್ದ ಆತ ಚಿಕ್ಕವನಿದ್ದಾಗ ಅವನಿಗೆ ಕವಿ ಪಂಜೆ ಮಂಗೇಶ್ ರಾವ್ ಹೆಸರು ಕೇಳಿದರೇನೇ ಮಹಾ ಕೋಪ. ಅಷ್ಟಕ್ಕೂ ಪಾಪದ ಆ ಕವಿ ಆತನಿಗೆ ಮಾಡಿದ ದ್ರೋಹವಾದರೂ ಏನು ಗೊತ್ತೇ ಅದೇ ಅವರ ಉದಯರಾಗ ಹಾಡು.

ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ…..
ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನೂ ಕಣ್ ಬಿಡಿಸುವನು…

ಶಾಲೆಯ ಪಠ್ಯದಲ್ಲಿದ್ದ ಈ ಪದ್ಯದಲ್ಲಿ ಬರುವ ’ಕೂಸ” (ಕೂಸು) ಎನ್ನುವ ಪದ ಹಾಗು ಅದಕ್ಕೆ ಕನ್ನಡ ಶಿಕ್ಷಕರು ನೀಡುವ ವಿವರಣೆ ಆ ದುರ್-ಗಳಿಗೆಯಲ್ಲಿನ ಅವನ ಒದ್ದಾಟ, ಚಡಪಡಿಸುವಿಕೆ (ಈ ಪಾಠ ಮುಗಿದರೆ ಸಾಕಪ್ಪಾ ಎನ್ನುವ) ಆ ಮಾನಸಿಕ ಹಿಂಸೆ ಪಾಪ ಅವನಿಗಷ್ಟೇ ಗೊತ್ತು. ದಲಿತ ಸಮುದಾಯಕ್ಕೆ ಸೇರಿದ ಅವನ ಉಪಜಾತಿಯ ಹೆಸರಾದ ಈ ಕೂಸ (ಕೂಸಾಳು) ಪದ ಕೇಳಿ ಮಿಕ್ಕ ಮಕ್ಕಳೆಲ್ಲ ನಗಾಡುವುದು, ಅವನ ಜಾತಿ ಗೊತ್ತಿದ್ದ ನೆರೆಕೆರೆಯ ಸಹಪಾಠಿಗಳು ಈ ಸಂದರ್ಭದಲ್ಲಿ ಇವನನ್ನೇ ನೋಡಿ ಎಲ್ಲರೆದುರು ಕುಹಕದಿಂದ ಹಲ್ಕಿರಿದು ನೋಡುವುದು ಅವನಿಗೊಂದು ಭಯಂಕರ ದುಃಸ್ವಪ್ನ..

ಭಟ್ಟರ ಮನೆಗೋ, ಶೆಟ್ಟರ ಮನೆಗೋ ಹೋಗುವ ದಾರಿಯಲಿ ಸಿಗುವ ಎರಡು ದಲಿತರ ಮನೆಯ ನೆಪದಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಅಲ್ಲೊಂದು ಸಿಮೆಂಟ್ ಬೋರ್ಡ್ ನೆಟ್ಟು “ಹರಿಜನ ಕಾಲನಿಗೆ ಹೋಗುವ ರಸ್ತೆ” ಕಾಮಗಾರಿಯ ವೆಚ್ಚ ಇಷ್ಟು ಅಂತ ಬೋರ್ಡ್ ಹಾಕುವುದು, ಯಾರಾದರೂ ಅಲ್ಲಿನವರ ಮನೆಯ ದಾರಿ ಕೇಳಿದರೆ ಯಾವ ದಲಿತನೂ ಕೂಡ ಹರಿಜನ ಕಾಲನಿ ರಸ್ತೆ ಅಂತ ಬೋರ್ಡ್ ಇದೆಯಲ್ಲ ಅಲ್ಲೇ ಪಕ್ಕದ್ದು ನಮ್ಮ ಮನೆ ಅಂತ ಹೇಳ ಹೋಗರು.

ಹಿಂದೆಲ್ಲಾ ದಲಿತರ ಮಕ್ಕಳು ಶಾಲೆಗೆ ಸೇರುವಾಗ ಓದು ಬರಹ ತಿಳಿಯದ ಅವರ ಪೋಷಕರೊಂದಿಗೆ ಬಂದ ಇಂತಹ ಮಕ್ಕಳ ಹೆಸರನ್ನು ಅಡ್ಮಿಷನ್ ಮಾಡಿ ಬರೆದುಕೊಳ್ಳುವಾತ ವಿದ್ಯಾರ್ಥಿಯ ಜಾತಿಯನ್ನು ಕೇಳಿ ಮಂಜು ಹರಿಜನ, ಗಣಪ ಹರಿಜನ ಅಂತಲೇ ಹೆಸರು ಬರೆದುಕೊಳ್ಳುತ್ತಿದ್ದರು. ಆ ರೀತಿಯ ಹೆಸರು ಬೇಡ ಅಂತ ಹೇಳಿದರೆ ಉಳಿದವರಿಗೆ ಸೀತಾರಾಮ ಆಚಾರಿ, ನಾಗರಾಜ ಶೆಟ್ಟಿ, ರಮೇಶ ಭಟ್ಟ ಅಂತ ಬರಕೊಳ್ಳುವ ಹಾಗೆ ನಿಂದೇನಯ್ಯ ಹೊಸ ರಾಗ ಅಂತ ಉಡಾಫೆಯ ಉತ್ತರ. ಅಂತೂ ಜೀವಮಾನವಿಡೀ ಎಲ್ಲಾ ದಾಖಲೆಗಳಲ್ಲೂ ಅವರ ಮಕ್ಕಳ ದಾಖಲೆಗಳಲ್ಲೂ ಕೂಡ (ಪೋಷಕರಿಗೆ ಸಂಬಂಧಿಸಿದ ಮಾಹಿತಿಯಲ್ಲಿ) ಈ ನಿಷೇಧಿತ ಹರಿಜನ ಪದವನ್ನು ಹೊತ್ತೇ ಅವನ ಕುರಿತ ದಾಖಲೆಗಳು ಓಡಾಡುತ್ತಿರುತ್ತವೆ.

ಇಲ್ಲಿ ಹರಿಜನ ಕಾಲನಿಯ ಬೋರ್ಡ್ ಹಾಕುವವನಿಗಾಗಲೀ, ಶಾಲೆಯಲ್ಲಿ ಹೆಸರನ್ನು ನೊಂದಾಯಿಸಿ ಕೊಳ್ಳುವವನಿಗಾಗಲೀ ಆ ಹರಿಜನ ಪದ ಕೇವಲ ಎಲ್ಲದರಂತೆ ಒಂದು ಸಾಮಾನ್ಯ ಪದವೇ ವಿನಹ ಅದರ ಹಿಂದೆ ಅಡಗಿರುವಂತಹ ಒಂದು ಅವಮಾನದ ಹಿನ್ನೆಲೆಯ ಅರಿವು ಖಂಡಿತಾ ಇದ್ದಿರುವುದಿಲ್ಲ. ಒಂದು ವೇಳೆ ಈ ಅರಿವು ಇದ್ದರೂ ಕೂಡ ಅವರಿಗದು ಬೇಕಾಗಿಯೂ ಇಲ್ಲ. ಸಂಬಂಧಿಸಲ್ಪಟ್ಟ ಈ ಜಾತಿ ಇಲ್ಲಿ ನಿಜ ತಾನೇ? ಉಳಿದ ಜಾತಿಯವರು ಮಾಡಿದಂತೆ ಅದನ್ನ ಇಲ್ಲಿಯೂ ಕೂಡ ನಮೂದಿಸಿದ್ದರಲ್ಲಿ ತಪ್ಪೇನು? ಒಂದು ವೇಳೆ ಜಾತಿ ನಮೂದಿಸದೇ ಬಿಟ್ಟ ಮಾತ್ರಕ್ಕೆ ಅವರ ಜಾತಿಯೇನು ಬದಲಾಗುತ್ತಾ? ಇಲ್ಲ ತಾನೆ? ಎಂಬ ವಿತಂಡವಾದಕ್ಕಿಳಿಯುತ್ತಾರೆ. ಉಪೇಂದ್ರರ ’ಊರಿದ್ದಲ್ಲಿ ಹೊಲಗೇರಿಯೂ ಇರುತ್ತದೆ” ಎನ್ನುವ ಗಾದೆಯ ಸಮರ್ಥನೆ ಮಾಡುತ್ತಿರುವ ಉಪೇಂದ್ರವಾದಿಗಳ ಮನೋಸ್ಥಿತಿಯೂ ಕೂಡ ಇದೇ ಹೊರತು ಬೇರೇನಲ್ಲ.

ತನ್ನ ಮಾತಿಗೆ ವಿರೋಧ ಬಂದಾಕ್ಷಣ ಉಪೇಂದ್ರ ಅವರು ತಕ್ಷಣ ಮತ್ತೊಂದು ವೀಡಿಯೋ ಮಾಡಿ ನಾನು ಬಾಲ್ಯದಲ್ಲಿ ಬಡತನದ ನೋವುಂಡಂತವನು ಹಾಗೆ ಹೀಗೆ ಎಂದು ಜಾಲತಾಣದಲ್ಲಿ ಪ್ರತಿರೋಧಕ್ಕೆ ಪ್ರತಿಯಾಗಿ ಮಾತಾಡಿದ್ದರು. ಮಿ. ಉಪೇಂದ್ರರವರೇ ನೀವು ಇಲ್ಲಿ ಹೇಳಿದಂತಹ ಆರ್ಥಿಕ ದಾರಿದ್ರ್ಯಕ್ಕೂ ಮತ್ತು ನಿಮಗರಿವಿಲ್ಲದ ಸಾಮಾಜಿಕ ದಾರಿದ್ರ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕುಂದಾಪುರದ ಬಡ ಕುಟುಂಬದಲ್ಲಿ ಹುಟ್ಟಿದ ನೀವು (ನಿಮ್ಮ ಹೆತ್ತವರು) ಬೆಂಗಳೂರಿಗೆ ಬಂದು ಹೊಟ್ಟೆಪಾಡಿಗಾಗಿ ಯಾವುದೋ ಸಣ್ಣ ಹೋಟೇಲನ್ನಾದರೂ ತೆರೆದು ’ಬ್ರಾಹ್ಮಣರ ಹೋಟೆಲ್” ಎಂಬ ನಾಮದಡಿಯಲ್ಲಿ ಬದುಕಿದಿರಿ. ಆದರೆ ಶೂದ್ರನೊಬ್ಬ ಸಮಾಜದಲ್ಲಿ ತನ್ನ ಹೆಸರನ್ನ ಬಹಿರಂಗವಾಗಿ ಬಿಂಬಿಸಿಕೊಂಡು ಈ ರೀತಿ ಬದುಕಲು ಸಾಧ್ಯವೇ? ಶೂದ್ರನ ಹೋಟೇಲಿಗೆ ಗಂಜಿ ಕುಡಿಯಲು ನಿಮ್ಮಂತವರಿಗೆ ಆ ಕಾಲದಲ್ಲಿ ಸಾಧ್ಯವಿತ್ತೇ? ಈಗ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಿದೆಯೇ ವಿನಹ ಜಾತೀಯತೆ ಇಂದಿಗೂ ಕೂಡ ಸಮಾಜದಲ್ಲಿ ಬೇರೆ ಬೇರೆ ಬಗೆಯಲ್ಲಿ ಚಾಲ್ತಿಯಲ್ಲಿದೆ. ಇಂತಾದ್ದರಲ್ಲಿ ಹೊಲಗೇರಿಯಂತಹ ಮಾತುಗಳಿಂದ ನಿಮ್ಮಂತವರ ಮೇಲರಿಮೆಯನ್ನು ಸದಾ ಜೀವಂತವಾಗಿಡಲು ದಯವಿಟ್ಟು ಪ್ರಯತ್ನಿಸದಿರಿ.

ಯಾರ ಆಯ್ಕೆಗೂ ನಿಲುಕದ ಕೇವಲ ಹುಟ್ಟಿನ ಕಾರಣಕ್ಕಾಗಿ ಸಾಮಾಜಿಕವಾಗಿ ಅವಮಾನಿತವೆಂದು ಗುರುತಿಸಲ್ಪಟ್ಟಂತಹ ಪದವೊಂದು ಸಾರ್ವಜನಿಕವಾಗಿ ಮಾಡುವ ಅವಮಾನ ಅದು ಅನುಭವಿಸಿದವರಿಗಷ್ಟೇ ಗೊತ್ತು. ಉಪೇಂದ್ರವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ

ಶಂಕರ್ ಸೂರ್ನಳ್ಳಿ

ಲೇಖಕರು

ಇದನ್ನೂ ಓದಿ-ಉಪೇಂದ್ರ-ತರ್ಲೆನನ್ಮಗ

Related Articles

ಇತ್ತೀಚಿನ ಸುದ್ದಿಗಳು