Saturday, May 4, 2024

ಸತ್ಯ | ನ್ಯಾಯ |ಧರ್ಮ

ಫೇಲ್ ಆದವನಿಗೆ ಎಷ್ಟೇ ಖರ್ಚು ಆಗಲಿ, ಡಿಸ್ಟಿಂಕ್ಷನ್ ಬಂದವಳಿಗೆ ಯಾಕೆ ಇಷ್ಟು ಖರ್ಚು!

ಇತ್ತೀಚಿಗೆ ಪಿಯುಸಿ ಮತ್ತು ಮೆಟ್ರಿಕ್ ಪರೀಕ್ಷೆಯ ಫಲಿತಾಂಶ ಹೊರಬಂತು. ಅದೆಷ್ಟೋ ಮಕ್ಕಳು ಸಾಧಕರ ಸಾಲಿನಲ್ಲಿ ನಿಂತರು. ಅದರಲ್ಲಿ ಆಟೋ ಚಾಲಕರ, ಮ್ಯಾಕನಿಕ್, ಮನೆ ಕೆಲಸದ ಒಂಟಿ ಮಹಿಳೆಯ ಮಕ್ಕಳು ಹೀಗೆ ಸಾಕಷ್ಟು ತಳ ಮತ್ತು ರೈತ ಬಡವರ್ಗದ ಹಿನ್ನಲೆಯುಳ್ಳ ಕುಟುಂಬದ ಮಕ್ಕಳ ಸಿಗುತ್ತಾರೆ.

ಮೆಟ್ರಿಕ್ ಮತ್ತು ಪಿಯುಸಿ ಮುಗೀತು ಮುಂದೇನು ಎಂಬ ಗೊಂದಲ ಎಲ್ಲರಿಗೂ ಇದ್ದೆ ಇರುತ್ತೆ.ನನಗೆ ಒಬ್ಬ ಪರಿಚಯವಿರುವ ಪಂಚರ್ ಹಾಕಿ ಜೀವನ ಸಾಗಿಸುವ ಕುಟುಂಬದ ಹಿನ್ನಲೆಯ ವಿಧ್ಯಾರ್ಥಿ ಇದ್ದಾನೆ.ಅವನಿಗೆ ಪಿಯುಸಿ ಓದುವಾಗ ನಾನೇ ಹಾಸ್ಟೆಲ್ ಮಾಡಿ ಕೊಟ್ಟಿದ್ದೆ. ಕಳೆದ ಎರೆಡು ವರ್ಷ ಒಂದೆರಡು ವಿಷಯ ಪಾಸಾಗದೆ ಪದೇ ಪದೇ ಫೆಲ್ ಆಗಿದ್ದವನು ಈ ಬಾರಿ ಪಾಸಾದ.

ಇನ್ನೊಂದೆಡೆ ಪರಿಚಯವಿರುವ ಒಂದು ಹಳ್ಳಿಯಲ್ಲಿ ಸ್ವಲ್ಪ ಆರ್ಥಿಕವಾಗಿ ಸಬಲರಿರುವವರ ಮಗಳು. ಇವಳು ಒಂದೇ ಬಾರಿಗೆ 85% ರಷ್ಟು ಫಲಿತಾಂಶ ಪಡೆದು ಪಾಸಾಗಿದ್ದಾಳೆ. ಈ ಹೆಣ್ಣುಮಗು ಒಂದರಿಂದ ಎಂಟನೇ ತರಗತಿಯವರೆಗೆ ಓದಿದ್ದು ಕನ್ನಡ ಮಾಧ್ಯಮದಲ್ಲಿ 9 ಮತ್ತು 10ನೇ ತರಗತಿ ಮಾತ್ರ ಇಂಗ್ಲಿಷ್ ನಲ್ಲಿ ಓದಿ, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಆಗಿದ್ದಾಳೆ.

ಇವಾಗ ಇವರಿಬ್ಬರ ಮುಂದಿನ ದಾರಿ ಯಾವುದು? ಇವರಿಬ್ಬರ ಕುಟುಂಬದಲ್ಲಿ ಮಾತಾಡಿದೆ. ಅವನಿಗೆ ಯಾವುದಾದರೂ ಒಂದು ಡಿಗ್ರಿ ಕಾಲೇಜ್ ಅಲ್ಲಿ ಸೀಟು ಕೊಡಿಸು ಅಡ್ಮಿಶನ್ ಮಾಡೋಣ, ಎಷ್ಟು ಆದರೂ ಆಗಲಿ ಅಂತ ಅವರಪ್ಪ ಹೇಳಿದ. ಅವನು ಕೂಡ ಬಾಯ್ ನೋಡು ನಾನು ಪಾಸದೆ ಎಲ್ಲಿ ಅಡ್ಮಿಷನ್ ಮಾಡಿಸಲಿ ಅಂತ ಬಹಳ ಹೆಮ್ಮೆಯಿಂದ ಕೇಳಿದ. ಆಯಿತು ಯೋಚಿಸಿ ಹೇಳುವೆ ಎಂದು ಬಂದೆ.

ಈ ಕಡೆ ಈ ಹೆಣ್ಣುಮಗುವಿಗೆ ಕಾನೂನು ಓದುವ ಆಸೆ. ಆದರೆ ಅವರ ಅಪ್ಪ ಮತ್ತು ಕುಟುಂಬದ ಇತರ ಸದಸ್ಯರು ಮಾತ್ರ ಇಲ್ಲೇ ಹತ್ತಿರದ ಪಟ್ಟಣದಲ್ಲಿ ಅವಳಿಗೆ ಓದಲು ಇಷ್ಟವೇ ಇರದ ಕೋರ್ಸ್ ಗೆ ಯಾವುದಾದರೂ ಒಂದು ಕಾಲೇಜ್ ಗೆ ಸೇರಿಸ್ತಿನಿ ಅಂತ ಹಠ. ಕಾರಣ ಇವಳು ಹೆಣ್ಣು! ದೂರದ ಕಾಲೇಜ್ ಗೆ ಹೋದರೆ ಹೇಗೆ? ಅವಳು ಒಬ್ಬಂಟಿಯಾಗಿ ಅಷ್ಟು ದೂರ ಹೇಗೆ ಇರ್ತಾಳೆ ಅಂತ ಹೇಳಿದ್ರು.ಆದರೆ ಅವಳು ಈಗಾಗಲೇ 2ವರ್ಷ ಹಾಸ್ಟೆಲ್ ಅಲ್ಲಿ ಇದ್ದು ಬಂದವಳು.

ಇದು ಆ ಹೆಣ್ಣು ಮಗುವಿನ ಮೇಲಿನ ಪ್ರೀತಿ ಒಂದಾಡೆ ಆದರೆ ಇದರಲ್ಲಿ ಇನ್ನೊಂದು ಭಯವಿದೆ.ಆ ಸೂಕ್ಷ್ಮ ಪ್ರಜ್ಞೆಯೂ ಮಾತಲ್ಲಿ ಅರ್ಥವಾಯಿತು.ಅವಳು ಹೆಣ್ಣು ಯಾರನ್ನಾದರೂ ಪ್ರೀತಿಸಿದರೆ,ಹುಡುಗರ ಸಹವಾಸ ಮಾಡಿದರೆ ಹೇಗೆ? ಅದರಿಂದ ಕುಟುಂಬ ಮತ್ತು ಕುಲಕ್ಕೆ ಅವಮಾನ ಅಲ್ಲವೇ! ಅದೇ ಗಂಡು ಮಗ ಮಾಡಿದ್ರೆ ಅವನು ಗಂಡಸು ಅಲ್ಲವೇ ಅಂತ ಇದೇ ಸಮಾಜ ಸಮಜಾಯಿಷಿ ನೀಡುತ್ತೆ.
ಹೆಣ್ಣಿನ ಶೀಲದ ಮೇಲಿನ ಒಡೆತನದ ಅಹಂಕಾರ ಅಲ್ಲಿತ್ತು.ಒಂದೆಡೆ ಇದು ಅವರ ಮುಗ್ಧತೆಯ ಪ್ರೀತಿ ಮತ್ತು ಜವಾಬ್ದಾರಿ ಅಂತ ಹೇಳಿದರು ಕೂಡ ಇದು ಪುರುಷತ್ವದ ಅಧಿಕಾರದ ಪಂಜರದಲ್ಲಿ ಆ ಮಗವನ್ನು ಕಟ್ಟಿಡುವ ಸೂಚಕ.

ಅದೇ ಎರೆಡು ಮೂರು ಬಾರಿ ಫೇಲ್ ಆಗಿರುವ,ಅವನಿಗೆ ಓದಲ್ಲಿ ಆಸಕ್ತಿ ಮತ್ತು ಭವಿಷ್ಯದಲ್ಲಿ ಏನಾದ್ರೂ ಓದಿ ಆಗುಬೇಕು ಎನ್ನುವ ಛಲವಿಲ್ಲದಿದ್ದರು ಹುಡುಗನಿಗೆ ಪಂಚರ್ ಹಾಕಿ ಬರುವ ದುಡ್ಡಲ್ಲಿ ಎಷ್ಟೇ ಖರ್ಚು ಮಾಡಲು ತಯಾರು ಇರುವ ಕುಟುಂಬ.
ಇನ್ನೊಂದೆಡೆ ಸ್ವಲ್ಪ ಆರ್ಥಿಕವಾಗಿ ಸಬಲರಾಗಿದ್ದು, ಈ ಹೆಣ್ಣು ಮಗುವಿಗೆ ಆಸಕ್ತಿ ಜೊತೆಗೆ ಮುಂದೆ ನಾನು ಇದನ್ನೇ ಓದಿ ಹೀಗೆ ಬದುಕು ಕಟ್ಟಿಕೊಂಡು ಸಾಧನೆ ಮಾಡುವ ಛಲವಿದ್ದರೂ ಪ್ರೋತ್ಸಾಹ ನೀಡುವ ಮನಸ್ಸುಗಳಿಲ್ಲ.

ಈ ಎರೆಡು ಸನ್ನಿವೇಶಗಳು ಪ್ರತಿ ಹಳ್ಳಿಯ ಬಹುತೇಕ ಮನೆಯ ಪ್ರಸ್ತುತ ಕಥೆಗಳಾಗಿವೆ.ಅದೆಷ್ಟೋ ಹುಡುಗಿಯರಿಗೆ ಈಗಾಗಲೇ SSLC, ಪಿಯುಸಿ ಪಾಸ್ ಆಗಿದ್ದಾಳೆ ಅಂತ ಮದುವೆಗಳು ಕೂಡ ಗೊತ್ತಾಗುತ್ತಿವೆ.
ಮಗುವಾಗಿ ಆಡಬೇಕಾದ ಕೈ, ಮಗುವನ್ನೇ ಎತ್ತಿಕೊಡಬೇಕೆಂದು ಬುದ್ಧಿ ಹೇಳಲು ಸಮಾಜ ಮತ್ತು ಪಿತೃಪ್ರಭುತ್ವದ ವಕ್ತಾರರು ಕಾಯುತ್ತಿರುತ್ತಾರೆ.

ಹೆಣ್ಣು ಪುರುಷನಿಗಿಂತ ಓದಿನಲ್ಲಿ ಮುಂದಿದ್ದ ಮೇಲೆಯೂ ಅವಳಿಗೆ ಅವಕಾಶ ಪ್ರೋತ್ಸಹಗಳಿಲ್ಲ ಯಾಕೆ? ಪ್ರತಿಯೊಂದು ಆಯ್ಕೆಯಲ್ಲಿ ಹುಡುಗರಿಗೆ ಸಿಕ್ಕಷ್ಟು ಆಯ್ಕೆ ಹುಡುಗಿಯರಿಗೂ ತಂದೆ-ತಾಯಿ ಸಮಾಜ ಏಕೆ ಕೊಡುವುದಿಲ್ಲ ಎಂಬುದನ್ನು ಪ್ರಶ್ನೆ ಮಾಡುತ್ತಾ ಹೋದರೆ ಇವರಿಂದ ಉಡಾಫೆ ಉತ್ತರ ಸಿಗುತ್ತೆ.

ನಾನು ಒಮ್ಮೊಮ್ಮೆ ಊಹಿಸಿ ಅಚ್ಚರಿ ಪಟ್ಟಿದ್ದೇನೆ. ನಾನು ಹೆಣ್ಣಾಗಿದ್ದರೆ ಇವಾಗ ಸಿಕ್ಕಿರುವ ಇಸ್ಟೊಂದು ಅವಕಾಶ ಪ್ರೋತ್ಸಾಹ ಸಿಗುತಿತ್ತೆ ಅಥವಾ ಯಾವುದೋ ಪುರುಷನ ದಾಹಕ್ಕೆ ಮೈಯೊಡ್ಡಿ ಅವನ ಸೇವೆಯಲ್ಲಿಯೇ ಬದುಕು ನರಕ ಆಗ್ತಿತ್ತೋ ಅಂತ!

ಹೆಣ್ಣಿನ ದೇಹದ ರಕ್ಷಣೆಯ,ಆಕೆಯ ಲೈಂಗಿಕ ಇಚ್ಛೆ ನಿಯಂತ್ರಣ ಪುರುಷನ ಕರ್ತವ್ಯವೇ? ತನಗಿಂತ ಕಿರಿಯವನಾದ ತಮ್ಮ ,ಅಣ್ಣಾ,ಅಪ್ಪ ಇವರೇ ಆಕೆಯ ದೇಹದ ವಾರಸುದಾರರೇ?
ಹೆಣ್ಣಿಗೆ ಆಕೆಯ ದೇಹ ಮತ್ತು ತನ್ನನ್ನು ಸಂಭಾಳಿಸುವ ಶಕ್ತಿಯನ್ನ ತಂದೆ,ತಾಯಿ,ಸಮಾಜ ನೀಡಬೇಕು.ಹೆಣ್ಣು ಮಕ್ಕಳು ಮುಕ್ತವಾಗಿ ಎಲ್ಲವನ್ನೂ ನಿರ್ಭೀತಿಯಿಂದ ಹಂಚಿಕೊಳ್ಳವಂತಹ ವ್ಯವಸ್ಥೆಯನ್ನು ಹುಟ್ಟುಹಾಕಬೇಕು. ಹೆಣ್ಣು ಕರೆದರೆ ಜೊತೆಯಾಗಿ, ಇಲ್ಲದಿದ್ದರೆ ದೂರದಿಂದ ಸುಮ್ಮನಿರುವ ಮನಸ್ಥಿತಿಗಳ ನಿರ್ಮಿಸುವ ಜವಾಬ್ದಾರಿಯೂ ನಮ್ಮದೇ.ತಿಳಿದವರು ಇಂತಹ ಪೋಷಕರಿಗೆ ತಿಳಿಸಬೇಕಿದೆ. ನಿಮಗೆ ಪರಿಚಯವಿರುವ ಪೋಷಕರಲ್ಲಿ ಮಾತಾಡುತ್ತಾ ಇರಿ.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲ್ ಬಾಸಿನ್ ಅವರ ಮಾತು ನೆನಪಾಯಿತು “ನನ್ನ ಶೀಲದಲ್ಲಿ ನಿಮ್ಮ ಮರ್ಯಾದೆ ಇಡಿ ಎಂದವರು ಯಾರು?” ಆದರೆ ಈ ಪ್ರಶ್ನೆಗೆ ಉತ್ತರ ಹುಡುಕಿ!.
ನಾನು ಒತ್ತಾಯ ಮಾಡಿ ಸಾಕಷ್ಟು ಚರ್ಚೆ ಮಾಡಿ ತಿಳಿ ಹೇಳಿದ ಮೇಲೆ ಅವರ ತಂದೆ ಆಯಿತು ನೋಡೋಣ ಅಂದಿದ್ದಾರೆ…ಆದರೆ ಏನಾಗುತ್ತೆ ಕಾದು ನೋಡಬೇಕು ಅಷ್ಟೆ..

M.K ಸಾಹೇಬ್ ನಾಗೇಶನಹಳ್ಳಿ

Related Articles

ಇತ್ತೀಚಿನ ಸುದ್ದಿಗಳು