Monday, May 6, 2024

ಸತ್ಯ | ನ್ಯಾಯ |ಧರ್ಮ

“ರೋಹಿತ್ ವೇಮುಲ ಸಾವಿಗೆ ಕೊನೆಗೂ ದಕ್ಕದ ನ್ಯಾಯ”

ಲೇಖನ: ವಿ ಎಲ್‌ ನರಸಿಂಹಮೂರ್ತಿ

2016ರಲ್ಲಿ ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ವಿಶ್ವವಿದ್ಯಾಲಯದ ವ್ಯವಸ್ಥಿತ ಕಿರುಕುಳ ಮತ್ತು ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ದೇಶದಾದ್ಯಂತ ಸಂಚಲನ ಮೂಡಿಸಿದ ರೋಹಿತ್ ಸಾವು ಒಂದು ‘ಸಾಂಸ್ಥಿಕ ಹತ್ಯೆ’ಯಾಗಿತ್ತು. ದೇಶದ ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಾತಿ ತಾರತಮ್ಯ ಮತ್ತು ಸಂಘಪರಿವಾರದ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದವು. ರೋಹಿತ್ ಸಾವು ದೇಶದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಬಡಿದೆಬ್ಬಿಸಿ ಹೊಸ ತಲೆಮಾರಿನಲ್ಲಿ ದೊಡ್ಡ ಮಟ್ಟದ Dalit assertionಗೆ ಕಾರಣವಾಗಿತ್ತು.

ಹೈದರಾಬಾದ್ ಕೇಂದ್ರಿಯ ವಿವಿಯ ASA (Ambedkar Students Association)ನಲ್ಲಿ ಸಕ್ರಿಯವಾಗಿದ್ದ ರೋಹಿತ್ ವೇಮುಲ ಎಬಿವಿಪಿಗೆ ಸೈದ್ಧಾಂತಿಕವಾಗಿ ಪ್ರತಿರೋಧ ಒಡ್ಡುತ್ತಿದ್ದರು. ASA ಮತ್ತು ABVP ಮಧ್ಯೆ ನಿರಂತರವಾದ ಘರ್ಷಣೆ ನಡೆಯುತ್ತಿತ್ತು. ಯಾವಾಗ ಸೈದ್ಧಾಂತಿಕವಾಗಿ ಎದುರಿಸುವುದು ಕಷ್ಟವಾಯಿತೋ ಆಗ ವ್ಯವಸ್ಥೆಯನ್ನು ಬಳಸಿಕೊಂಡು ರೋಹಿತ್ ವೇಮುಲ ಮತ್ತವರ ಗೆಳೆಯರ ಮೇಲೆ ಸಂಘಪರಿವಾದ ಕಿರುಕುಳ ಕೊಡಲು ಪ್ರಾರಂಭಿಸಿತು. ಮುಂದುವರೆದು ಸಿಕಂದರಾಬಾದ್ ಬಿಜೆಪಿ ಎಂಪಿ ಬಂಡಾರು ದತ್ತಾತ್ರೇಯ ಮತ್ತು ಎಂಎಲ್‌ಸಿ ರಾಮಚಂದ್ರರಾವ್ ಆಗ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿಗೆ ಪತ್ರ ಬರೆದು ASA ವಿದ್ಯಾರ್ಥಿಗಳ ಮೇಲೆ ಕ್ರಮ ಜರುಗಿಸಲು ಕೋರಿದ್ದರು. ಎಬಿವಿಪಿ ಮತ್ತು ಸಂಘಪರಿವಾರದ ಹಿನ್ನಲೆಯ ವಿಸಿ ಅಪ್ಪಾರಾವ್ ಪೊದಿಲೆ ರೋಹಿತ್ ವೇಮುಲ ಮತ್ತು ಗೆಳೆಯರನ್ನು ಹಾಸ್ಟೆಲ್‌ನಿಂದ ಅಮಾನತುಗೊಳಿಸಿದ್ದಲ್ಲದೆ ಅವರ ಫೆಲೋಶಿಪ್ ತಡೆಹಿಡಿದಿದ್ದರು. ವಿಶ್ವವಿದ್ಯಾಲಯದ ಆಡಳಿತದ ವಿರುದ್ಧ ಹೋರಾಟ ಮಾಡುತ್ತಲೇ ನೊಂದು ರೋಹಿತ್ ಆತ್ಮಹತ್ಯೆಗೆ ಒಳಗಾಗದರು.

ರೋಹಿತ್ ವೇಮುಲ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ನಡೆಸುತ್ತಿದ್ದ ಹೋರಾಟದ ಅರಿವು ಇರುವ ಎಲ್ಲರಿಗೂ ಅದೊಂದು ಸಾಂಸ್ಥಿಕ ಹತ್ಯೆ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿಯೇ ಬಂಡಾರು ದತ್ತಾತ್ರೆಯ, ರಾಮಚಂದ್ರರಾವ್, ಸ್ಮೃತಿ ಇರಾನಿ, ವಿಸಿ ಮತ್ತು ಎಬಿವಿಪಿ ನಾಯಕರ ಮೇಲೆ ಕೊಲೆಗೆ ಪ್ರಚೋದನೆ ಮತ್ತು ಎಸ್ಸಿ ಎಸ್‌ಟಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಇಂದು ತೆಲಂಗಾಣ ಪೋಲಿಸರು ರೋಹಿತ್ ಹತ್ಯೆಯ ಕುರಿತು ಕೋರ್ಟಿಗೆ ಸಲ್ಲಿಸುತ್ತಿರುವ ವರದಿಯಲ್ಲಿ ಎಲ್ಲ ಆಪಾದಿತರನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ರೋಹಿತ್ ಆತ್ಮಹತ್ಯೆಗೆ ವಿವಿ ಆಡಳಿತ ಮಂಡಳಿ ಸೇರಿದಂತೆ ಯಾರೂ ಕಾರಣರಲ್ಲ ಬದಲಿಗೆ ರೋಹಿತ್ ತನ್ನ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿವಿಯ ಆಡಳಿತ ಮಂಡಳಿ ನೀಡುತ್ತಿದ್ದ ಕಿರುಕುಳದ ಕುರಿತು ಮುಂಚೆಯೇ ವಿಸಿಗೆ ರೋಹಿತ್ ವೇಮುಲ ಪತ್ರ ಬರೆದಿದ್ದರು. ಸಾವಿಗೆ ಶರಣಾಗುವ ಮುಂಚೆ ಬರೆದಿರುವ ಡೆತ್‌ನೋಟ್‌ನಲ್ಲಿ ಕೂಡ ರೊಹಿತ್ ಎದುರಿಸಿದ ಕಿರುಕುಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಪೋಲಿಸರ ವರದಿಯಲ್ಲಿ ಡೆತ್‌ನೋಟ್‌ನಲ್ಲಿ ರೋಹಿತ್ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವ ಕಾರಣ ಯಾರನ್ನೂ ಜವಾಬ್ದಾರಿ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ರೋಹಿತ್ ಸಾವಿಗೆ ಪೋಲಿಸರು ನೀಡುತ್ತಿರುವ ಇನ್ನೊಂದು ಮುಖ್ಯ ಕಾರಣ ರೋಹಿತ್ ತನ್ನ ನಿಜವಾದ ಜಾತಿ ಯಾವುದು ಎನ್ನುವುದು ಹೊರಜಗತ್ತಿಗೆ ಗೊತ್ತಾಗುತ್ತದೆ ಎನ್ನುವ ಆತಂಕದಿಂದ ಆತ್ಮಹತ್ಯೆಗೆ ಶರಣಾದ ಎಂದಿದ್ದಾರೆ.

ರೋಹಿತ್ ತೀರಿಕೊಂಡಾಗ ಆತನ‌ ಜಾತಿಯ ಕುರಿತು ಸರ್ಕಾರ ಮತ್ತು ಸಂಘಪರಿವಾರ ವಿವಾದ ಎಬ್ಬಿಸಲು ಪ್ರಯತ್ನಿಸಿದವು. ರೋಹಿತ್ ತಾಯಿ ರಾಧಿಕಾ ಮಾಲ ಸಮುದಾಯಕ್ಕೆ ಸೇರಿದವರು. ಕೂಲಿ ಕಾರ್ಮಿಕರ ಮಗಳಾಗಿದ್ದ ರಾಧಿಕಾರನ್ನು ಚಿಕ್ಕವಯಸ್ಸಿನಲ್ಲೆ ಗುಂಟೂರಿನ ವಡ್ಡೇರ(OBC) ಸಮುದಾಯದ ಅಂಜಿನಿ ದೇವಿ ದತ್ತು ಪಡೆಯುತ್ತಾರೆ. ಆದರೆ ವಾಸ್ತವದಲ್ಲಿ ಇದು ದತ್ತು ತೆಗೆದುಕೊಂಡಿದ್ದಲ್ಲ.

ಮನೆಗೆಲಸಕ್ಕೆಂದು ತಂದು ಮನೆಯಲ್ಲಿಟ್ಟುಕೊಂಡಿದ್ದು. ಅಂಜಿನಿದೇವಿ ಸರ್ಕಾರಿ ಉದ್ಯೋಗದಲ್ಲಿದ್ದವರು. ಆಕೆಯ ನಾಲ್ಕು ಮಕ್ಕಳು ಒಳ್ಳೆ ವಿಧ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸಗಳಲ್ಲಿ ಇದ್ದಾರೆ. ಆದರೆ ರಾಧಿಕಾ ವೇಮುಲ ಮನೆಗೆಲಸದವರಾಗಿಯೇ ಉಳಿದು ಮನೆಯವರಿಂದ ನಿರಂತರ ಅಪಮಾನ, ಶೋಷಣೆಗೆ ಒಳಗಾಗಿದ್ದಾರೆ. ಅದರಲ್ಲೂ ರಾಧಿಕಾರನ್ನು ಮದುವೆಯಾದ ವಡ್ಡೇರ ಸಮುದಾಯದ ವ್ಯಕ್ತಿ ರಾಧಿಕಾ ಮಾಲ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಮನೆಯಿಂದ ಹೊರಹಾಕುತ್ತಾನೆ. ಹೆತ್ತ ತಂದೆ ತಾಯಿಯಿಂದ ದೂರಾಗಿ ಸಾಕಿಕೊಂಡವರ ಮನೆಯಲ್ಲಿ ಶೋಷಣೆಗೆ ಒಳಗಾದ ರಾಧಿಕಾ ವೇಮುಲ ಮದುವೆಯಾಗಿ abusive relationshipಗೆ ಒಳಗಾಗಿತ್ತಾರೆ. ಕೊನೆಗೂ ಗಂಡನಿಂದ ದೂರಾಗಿ ಮೂರು ಮಕ್ಕಳನ್ನು ಬೆಳೆಸಲು ಕಷ್ಟ ಪಡುತ್ತಾರೆ.

ರಾಧಿಕಾ ವೇಮುಲದ ದತ್ತು ತಾಯಿ ಎಂದು ಹೇಳಿಕೊಳ್ಳುವ ಅಂಜಿನಿ ದೇವಿ ಮತ್ತವರ ಕುಟುಂಬಸ್ಥರು ಹಾಗೂ ರಾಧಿಕಾ ವೇಮುಲರ ಗಂಡ ರಾಧಿಕಾ ಅವರಿಗೆ ಕಿರುಕುಳ‌ ಕೊಡುವುದಕ್ಕೆ, ಅವಮಾನಿಸುವುದಕ್ಕೆ ಕಾರಣ ಅವರ ಜಾತಿ. ಇದು ಆ ಕುಟುಂಬವನ್ನು ಬಲ್ಲವರಿಗೆಲ್ಲ ಗೊತ್ತಿರುವ ವಿಚಾರ. ಹಾಗಾಗಿಯೇ ರಾಧಿಕಾ ವೇಮುಲ ತಮ್ಮ ಮಕ್ಕಳಿಗೆ ಎಸ್‌ಸಿ ಸರ್ಟಿಫಿಕೇಟ್ ಮಾಡಿಸಿದ್ದರು. ರೋಹಿತ್ ಮತ್ತು ಅವರ ತಮ್ಮ ಇಬ್ಬರೂ ಓದಿನಲ್ಲಿ ಚುರುಕಾಗಿದ್ದರು. ಅದರಲ್ಲೂ ರೋಹಿತ್ ವೇಮುಲ Outstanding student. ತನ್ನ ಪ್ರತಿಭೆಯ ಕಾರಣಕ್ಕೆ ಸಂಶೋಧನೆಗೆ ಎರಡು ಫೆಲೋಶಿಪ್ ಪಡೆದುಕೊಂಡಿದ್ದ ಪ್ರತಿಭಾವಂತ.

ಈಗ ಪೋಲಿಸರ ವರದಿಯಲ್ಲಿ ರೋಹಿತ್ ತಂದೆ ವಡ್ಡೇರ (OBC) ಸಮುದಾಯದಕ್ಕೆ ಸೇರಿರುವುದರಿಂದ ಆತ OBC ಸಮುದಾಯಕ್ಕೆ ಸೇರುತ್ತಾನೆ‌. ಆದರೆ ಆಕೆಯ ತಾಯಿ SC certificate ಕೊಡಿಸಿದ್ದಾರೆ. ಇದು ಗೊತ್ತಾಗುವುದರಿಂದ ಸಮಸ್ಯೆಯಾಗಿ ತಾನು ಪಡೆದಿರುವ ಪದವಿಗಳು ಮತ್ತು ತನ್ನ ಅಡಕೆಮಿಕ್ ಕೆರಿಯರ್ ಹೋಗುತ್ತದೆ. Fake Certificate ಕೇಸಿನಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ ರೋಹಿತ್ student politics ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ಅಕಡೆಮಿಕ್ಸ್‌ನಲ್ಲಿ ಆತನ performance ಅಷ್ಟು ಚೆನಾಗಿರಲಿಲ್ಲ ಎನ್ನಲಾಗಿದೆ.


ರೋಹಿತ್ ವೇಮುಲರನ್ನ ಬಲ್ಲ ಎಲ್ಲರೂ ಆತ ಎಂಥಹ ಪ್ರತಿಭಾವಂತ ಎನ್ನುವುದನ್ನು ಪ್ರಸ್ತಾಪಿಸದೆ ಇರಲಾರರು. ರೋಹಿತ್ ಸಾವಿನ ನಂತರ ಬಂದ ಚರ್ಚೆಗಳಲ್ಲೆಲ್ಲಾ ರೋಹಿತ್ ಸಾವಿನಿಂದ ಒಬ್ಬ ಮೇಧಾವಿಯನ್ನು ಕಳೆದುಕೊಂಡೆವು ಎನ್ನುವ ಮಾತು ಪದೆ ಪದೆ ಕೇಳಿ ಬರುತ್ತಿತ್ತು. ಆದರೀಗ ಆತನ ಬುದ್ದಿವಂತಿಕೆಯನ್ನು ಅನುಮಾನಿಸಲಾಗುತ್ತಿದೆ.

ರೋಹಿತ್ ವೇಮುಲ ಕೇವಲ ಸರ್ಟಿಫಿಕೇಟ್ ಕೇಸಿಗೆ ಹೆದರಿ ಸಾಯುವ ವ್ಯಕ್ತಿ ಅಲ್ಲ ಎನ್ನುವುದು ಜಗತ್ತಿಗೆ ಗೊತ್ತಿದೆ. ರೋಹಿತ್ ತನ್ನ ಹುಟ್ಟಿನ ಕಾರಣಕ್ಕೆ ಅನುಭವಿಸಿದ ಅವಮಾನ, ನೋವಿನಿಂದ ಬಾಲ್ಯದಿಂದಲೇ ಒಂಟಿನತವನ್ನು ಅನುಭವಿಸಿದ ನತದೃಷ್ಟ‌. ಕ್ರೂರ ತಂದೆಯ ಕಾರಣಕ್ಕೆ ಚೆಂದದ ಬಾಲ್ಯ ಕಾಣದವನು. ಬಡತನದ ನೋವು ಉಂಡವನು. ಆದರೆ ದುರ್ಬಲ ಮನಸ್ಸಿನವನಲ್ಲ.
ತನ್ನಂತೆ ನೋವು, ಅವಮಾನ ಉಂಡು ಬರುವ ತಳಸಮುದಾಯಗಳ ಏಳಿಗೆಗೆ ದುಡಿಯುವ ಕನಸು ಕಂಡಿದ್ದ ಸಮಾನತಾವಾದಿ.

ಆತನ ಪ್ರಶ್ನೆ ಮಾಡುವ ಮನೋಭಾವ, ವ್ಯವಸ್ಥೆಯ ವಿರುದ್ಧ ಹೋರಾಡುವ ಧೈರ್ಯ, ಅಂಬೇಡ್ಕರ್ ಬರಹಗಳು ಕೊಟ್ಟ ಆತ್ಮಸ್ಥೈರ್ಯ ಸಂಘಪರಿವಾರದ ವಿರುದ್ಧ ಹೋರಾಡಲು ಪ್ರೇರೆಪಿಸಿದ್ದವು. ಆದರೆ ಸಂಘಪರಿವಾರ ಹೇಡಿತನ ರೋಹಿತ್ ವೇಮುಲನನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿತು.

ರೋಹಿತ್ ಸತ್ತಾಗ ತೆಲಂಗಾಣದ ಕಾಂಗ್ರೇಸ್ ಪಕ್ಷ ವೇಮುಲ ಹತ್ಯೆಯ ವಿರುದ್ಧ ದನಿ ಎತ್ತಿತ್ತು. ಹೈದರಾಬಾದ್ ವಿವಿಗೆ ಹೋಗಿದ್ದ ರಾಹುಲ್ ಗಾಂಧಿ ರೋಹಿತ್ ಸಾವನ್ನು ವ್ಯವಸ್ಥೆ ಮಾಡಿದ ಕೊಲೆ ಎಂದಿದ್ದರು. ಕಾಂಗ್ರೆಸ್ ಸರ್ಕಾರ ಬಂದರೆ ದಲಿತ, ಆದಿವಾಸಿ, ಅಲ್ಪಸಂಖ್ಯಾತ ವಿಧ್ಯಾರ್ಥಿ-ವಿದ್ಯಾರ್ಥಿನಿಯರ ರಕ್ಷಣೆಗಾಗಿ ‘ರೋಹಿತ್ ‌ಆ್ಯಕ್ಟ್’ ಜಾರಿ ಮಾಡುವ ಭರವಸೆ ನೀಡಿದ್ದರು. ಅಲ್ಲದೆ ಕಳೆದ ವರ್ಷ ಮಾಡಿದ ಭಾರತ್ ಜೋಡೋ ಯಾತ್ರೆಗೆ ರೋಹಿತ್ ತಾಯಿ ರಾಧಿಕಾ ವೇಮುಲರನ್ನು ಆಹ್ವಾನಿಸಿದ್ದರು. ಆದರೆ ಈಗ ರಾಹುಲ್ ‌ಗಾಂಧಿಯವರ ಕಾಂಗ್ರೆಸ್ ಪಕ್ಷವೇ ತೆಲಂಗಾಣದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೀಡುತ್ತಿರುವ ಪೋಲಿಸ್ ವರದಿಯಲ್ಲಿ ರೋಹಿತ್ ಸಾವಿಗೆ ಯಾರೂ ಕಾರಣರಲ್ಲ ಎನ್ನುವ ಮೂಲಕ ರೋಹಿತ್ ವೇಮುಲನ ‘ಸಾಂಸ್ಥಿಕ ಹತ್ಯೆ’ಯನ್ನು ಅಲ್ಲಗೆಳೆದಿದೆ.

ಕೊನೆಗೂ ರೋಹಿತ್ ವೇಮುಲ ಸಾವಿಗೆ ನ್ಯಾಯ ನಿರಾಕರಿಸ್ಪಟ್ಟಿದೆ…

ಲೇಖನ: ವಿ ಎಲ್‌ ನರಸಿಂಹಮೂರ್ತಿ

Related Articles

ಇತ್ತೀಚಿನ ಸುದ್ದಿಗಳು