Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಾಂತಾರ ಗೆದ್ದಿದೆ ದೈವಾರಾಧನೆ ಸೋತಿದೆ…!

ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ ಎನ್ನುವುದನ್ನು ಗುರುತಿಸುತ್ತಾರೆ  ಚರಣ್‌ ಐವರ್ನಾಡು

ಕಾಂತಾರ ಸಿನೇಮಾದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ರೋಮ್ಯಾಂಟಿಸೈಸ್ಡ್‌ ಆಸಕ್ತಿ ಹುಟ್ಟಿಕೊಂಡಿದೆ. ಕಾಂತಾರ ಸಿನೇಮಾ ದೈವಾರಾಧನೆಯನ್ನು ಪ್ರತಿನಿಧಿಸಿದ ರೀತಿಯಲ್ಲಿರುವ ದೋಷಗಳ ಬಗ್ಗೆ ಚರ್ಚೆಗಳು ನಡೆದವು. ಇದು ಸಿನೇಮಾ ಮಾತ್ರ, ಸಂಸ್ಕೃತಿಯೊಂದರ ದಾಖಲೀಕರಣ ಅಲ್ಲ ಎಂಬ ವಾದಗಳನ್ನು ಕಾಂತಾರದ ಅಭಿಮಾನಿಗಳು ಟೀಕಿಸಿದ್ದರು. ಸಿನೇಮಾ ಆರಾಧನಾ ಪರಂಪರೆಯೊಂದರ ಮೇಲೆ ಬೀರಬಲ್ಲ ಪ್ರಭಾವದ ಬಗ್ಗೆ ಚಿಕಿತ್ಸಕ ನೋಟಗಳ ಬರಹಗಳನ್ನು ಕೌಂಟರ್‌ ಮಾಡಲೆಂದು ಕಾಂತಾರವನ್ನು ದೈವಾರಾಧನೆಯ ನಿಜವಾದ ಪ್ರತಿನಿಧೀಕರಣದ ಮಾಧ್ಯಮ ಎಂಬಂತೆ ಬಿಂಬಿಸಲಾಯಿತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ “ಕಾಂತಾರ ಸಿನೇಮಾದಿಂದ ಇಡೀ ಜಗತ್ತಿಗೆ ದೈವ ಎಂದರೇನು ಮತ್ತು ಅದರ ಮಹಿಮೆ ಏನು ಎಂಬುದು ತಿಳಿಯಿತು!” ಎಂಬ ಮಾತು ವ್ಯಾಪಕವಾಗಿ ಪ್ರಚಾರಕ್ಕೆ ಬಂತು.

ಎಲ್ಲೆಲ್ಲೂ ಕಾಂತಾರದ ದೈವಗಳೇ..

ಈ ಸಿನೇಮಾದ ನಂತರ “ಕಾಂತಾರದ ದೈವ” ಎಂಬ ಮಾತು ಚಾಲ್ತಿಗೆ ಬಂದಿದೆ. ಎಲ್ಲಾ ದೈವಗಳನ್ನು ಕಾಂತಾರದ ದೈವ ಎಂದು ಹೇಳುವ ಪರಿಪಾಠ ಕರ್ನಾಟಕದಲ್ಲಿ ಶುರುವಾಗಿದೆ. ಜನ ದೈವದ ವೇಷಭೂಷಣಗಳನ್ನು ಧರಿಸಿ ರಸ್ತೆಗಳಲ್ಲಿ, ವೇದಿಕೆಗಳಲ್ಲಿ, ಪೊಲೀಸ್‌ ಪೆರೇಡ್‌, ಇನ್ಸ್ಟಾಗ್ರಾಂ ರೀಲ್ಸ್‌ ಗಳಲ್ಲಿ ಹೋ….ಎಂದು ಅರೆಬಾಯಿ ಹಾಕುತ್ತಿದ್ದಾರೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳು ಏಳುತ್ತಿವೆ. ಮೈಸೂರಿನಲ್ಲಿ ಗುಳಿಗನ ನೇಮ ನಡೆಯುತ್ತದೆ. ಇದರಿಂದ ತುಳುನಾಡಿನ ಜನರಲ್ಲಿ ಒಂದು ರೀತಿಯ ಆಕ್ರೋಶ ಹುಟ್ಟಿಕೊಂಡಿದೆ.

ಕಾಂತಾರ ಸಿನೇಮಾಗಿಂತ ಹಿಂದೆ ಯಾವುದೇ ದೈವದ ವೇಷವನ್ನು ತೊಟ್ಟು ರಸ್ತೆಗಳಲ್ಲಿ, ವೇದಿಕೆಗಳಲ್ಲಿ ಕುಣಿಯುವುದನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಿರೋಧಿಸುತ್ತಿದ್ದರು. ಅನೇಕರ ಮೇಲೆ ಕೇಸ್‌ ಕೂಡ ಹಾಕಲಾಗಿತ್ತು. ಒಂದು ಬಾರಿ ಜಾದೂ ಒಂದರಲ್ಲಿ ದೈವದ ಪಾತ್ರವನ್ನು ತಂದಾಗ ಅದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಯಿತು. ಯಕ್ಷಗಾನ, ನಾಟಕಗಳಲ್ಲಿ ದೈವಗಳ ಪಾತ್ರಗಳನ್ನು ತರುವ ಬಗ್ಗೆ ತಕರಾರುಗಳಿದ್ದರೂ ಅವುಗಳನ್ನು ರಂಗದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಜನ ಸಿನೇಮಾವನ್ನು ಸಂಭ್ರಮಿಸಿದರು..

ಇಷ್ಟೆಲ್ಲಾ ರಿಜಿಡಿಟಿಯನ್ನು ಕಾಯ್ದುಕೊಂಡಿದ್ದ ತುಳುವರು ಕಾಂತಾರ ಸಿನೇಮಾ ಬಂದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡರು. ಇದರಲ್ಲಿ ದೈವಾರಾಧನೆಯನ್ನು ನಿರೂಪಿಸಿದ ರೀತಿಯಲ್ಲಿ ದೋಷಗಳಿದ್ದರೂ ಸಿನೇಮಾವನ್ನು ಸಂಭ್ರಮಿಸಿದರು. ಇದರ ಹಿಂದೆ ಇರುವ ರಾಜಕೀಯವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ನಾವು ಚರ್ಚೆ ಮಾಡಬೇಕಷ್ಟೇ. ಆದರೆ ಯಾವುದೇ ವಿರೋಧಗಳು ವ್ಯಕ್ತವಾದರೂ ಅವನ್ನು ನಿವಾರಿಸಲು ಬೇಕಾದ ಸಿದ್ಧತೆಯನ್ನು ಸಿನೇಮಾ ತಂಡ ಮಾಡಿಕೊಂಡಿದ್ದಂತೆ ತೋರುತ್ತದೆ. ಮತ್ತು ಈ ವಿರೋಧಗಳನ್ನು ಬಗ್ಗುಬಡಿಯಲು ಪ್ರೇಕ್ಷಕರೇ ನಿಂತರು.

ತುಳು ಭಾಷಿಕರು ಯಾಕೆ ಸಿಟ್ಟಾಗಿದ್ದಾರೆ?

ಆದರೆ ತುಳುಭಾಷಿಕ ಕಾಂತಾರ ಸಿನೆಮಾದ ಅಭಿಮಾನಿಗಳು ಇಂದು ಈ ಸಿನೆಮಾದ ಪ್ರಭಾವದಿಂದ ಘಟಿಸುತ್ತಿರುವ “ದೈವಗಳ ಅವಹೇಳನ”ದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತುಳುನಾಡಿನಿಂದ ಹೊರಗೆ ಇಂದು ದೈವಸ್ಥಾನ, ಕಟ್ಟೆಗಳು ಆರಂಭವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸುವ ಬಗ್ಗೆ ಅವರಿಗೆ ಆಕ್ರೋಶ ಇದೆ. ಆದರೆ ಜನರು ಮಾತ್ರ ಕಾಂತಾರ ಸಿನೆಮಾಕ್ಕೆ ಮರುಳಾಗಿ ತಮ್ಮ ಹಕ್ಕು ಎಂಬಂತೆ ದೈವದ ವೇಷವನ್ನು ಕಟ್ಟಿ ಕುಣಿಯುತ್ತಿದ್ದಾರೆ. “ಸಿನೆಮಾ ಮಾಡುವಾಗ ಮಾಡದ ವಿರೋಧ ನಾವು ಭಕ್ತಿಯಿಂದ ಮಾಡುವಾಗ ಯಾಕೆ ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಟ್ರೆಂಡಿಂಗ್‌ ನಲ್ಲಿ ಇರುವ ಕೊರಗಜ್ಜ

ಸದ್ಯ ತುಳುನಾಡಿನಲ್ಲಿ ಟ್ರೆಂಡಿಂಗ್‌ ನಲ್ಲಿ ಇರುವ ದೈವ ಕೊರಗಜ್ಜ. ಕೊರಗಜ್ಜನ ಕಟ್ಟೆಗಳು ಅಲ್ಲಲ್ಲಿ ತಲೆ ಎತ್ತಿವೆ. ಅನೇಕ ಪವಾಡ ಕಥೆಗಳು ಹುಟ್ಟಿಕೊಂಡು ರಾಜ್ಯ – ಪರ ರಾಜ್ಯದಿಂದ ಭಕ್ತರು ತುಳುನಾಡಿಗೆ ಬರುತ್ತಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ನಡೆದಿರುವ ಬದಲಾವಣೆ. ಹಿಂದೆ ಕೊರಗಜ್ಜ ಇಷ್ಟೊಂದು ಖ್ಯಾತಿಯ ದೈವ ಆಗಿರಲಿಲ್ಲ. ಒಂದು ದಶಕದಿಂದ ಈಚೆಗೆ ವ್ಯಾಪಕವಾದ ಪ್ರಚಾರವನ್ನು ಪಡೆದ ಕೊರಗಜ್ಜನಿಗೆ ಅಲ್ಲಲ್ಲಿ ನೇಮ ನಡೆಯುತ್ತಿದೆ.

ಕೊರಗ ತನಿಯ ಎಂಬ ಹುಡುಗ ದೈವವಾಗಿ ಅವನದೇ ಕೊರಗ ಸಮುದಾಯದವರ ದೈವವಾಗುತ್ತಾನೆ. ಈ ಸಮುದಾಯದಲ್ಲಿ ಕೊರಗ ತನಿಯನಿಗೆ ಕಲ್ಲು ಹಾಕಿ ನಂಬುತ್ತಾರೆಯೇ ಹೊರತು ಕೋಲ ಮಾಡುವುದಿಲ್ಲ. ಯುವಕನಾದ ತನಿಯ ಕೊರಗ ಸಮುದಾಯದಲ್ಲಿ ಸಂದಿ ಹೋದ ಹಿರಿಯ ವ್ಯಕ್ತಿಯಾದ್ದರಿಂದ ಅವರು ಅವನನ್ನು ಅಜ್ಜೆರ್‌ / ಅಜ್ಜ ಎಂದು ಕರೆಯುತ್ತಾರೆ. ಕ್ರಮೇಣ ಇತರ ಸಮುದಾಯಗಳೂ ಈ ದೈವವನ್ನು ನೇಮದ ಮೂಲಕ ಆರಾಧಿಸಲು ಆರಂಭ ಮಾಡಿ ಕೊರಗಜ್ಜ ಎಂದು ಕರೆದರು.

ಅಷ್ಟೇನು ಖ್ಯಾತವಲ್ಲದ ದೈವ ಇದ್ದಕ್ಕಿದ್ದಂತೆ ಪ್ರಚಾರವನ್ನು ಪಡೆಯುತ್ತದೆ. ಸಾವಿರಾರು ಭಕ್ತರು ಸೃಷ್ಟಿಯಾಗುತ್ತಾರೆ. ಭಕ್ತಿಯನ್ನು ಬಂಡವಾಳವಾಗಿ ಮಾಡಿಕೊಂಡು ಅಲ್ಲಲ್ಲಿ ಕಟ್ಟೆಗಳು ನಿರ್ಮಾಣವಾಗುತ್ತವೆ. ಈಗ ಕೊರಗ ತನಿಯನನ್ನು “ಕರಿಯಜ್ಜ” ಎಂದೆಲ್ಲಾ ಕರೆಯಲು ಶುರು ಮಾಡಿದ್ದಾರೆ. ಈಗ “ಕರಿ ಹೈದ ಕರಿ ಅಜ್ಜ” ಎಂಬ ಅಸಂಬದ್ಧ ಟೈಟಲ್‌ ಇರುವ ಕನ್ನಡ ಸಿನೇಮಾ ಒಂದು ಬರುತ್ತಿದೆ. ಬೇರೆ ಬೇರೆ ಭಕ್ತಿ ಗೀತೆಗಳು ಹುಟ್ಟಿಕೊಂಡಿವೆ. ಈ ಮೂಲಕ ದುರಂತ ನಾಯಕ ಕೊರಗ ತನಿಯನ ಜೀವನಗಾಥೆಯನ್ನು, ಪಾಡ್ದನವನ್ನು ವ್ಯವಸ್ಥಿತವಾಗಿ ತಿರುಚುತ್ತಿದ್ದಾರೆ.

ವ್ಯಾಪಕ ಪ್ರಚಾರ ಪಡೆದ ಶಬರಿಮಲೆ ಅಯ್ಯಪ್ಪ..

ಎಪ್ಪತ್ತು – ಎಂಬತ್ತರ ದಶಕದಲ್ಲಿ ಶಬರಿಮಲೆ ಅಯ್ಯಪ್ಪ ಅತ್ಯಂತ ವ್ಯಾಪಕ ಪ್ರಚಾರವನ್ನು ಪಡೆದ ದೈವ. ಸಾಲು ಸಾಲು ಚಲನಚಿತ್ರಗಳು ಅಯ್ಯಪ್ಪನ ಬಗ್ಗೆ ನಿರ್ಮಾಣವಾದವು. ಭಕ್ತಿ ಗೀತೆಗಳು, ಕ್ಯಾಸೆಟ್‌ ಗಳು ಬಂದವು. ಗಾಯಕ ಏಸುದಾಸ್‌ ಹಾಡಿದ “ಹರಿವರಾಸನಂ” ಎಂಬ ಗೀತೆಗೆ ಅಯ್ಯಪ್ಪನ ಬಾಗಿಲು ತೆರೆಯಿತು ಎಂಬ ಕಥೆಗಳು ಸೃಷ್ಟಿಯಾದವು. ದೇಶದ ಮೂಲೆ ಮೂಲೆಯಿಂದ “ಮಕರ ಜ್ಯೋತಿ” ನೋಡಲು ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಜ್ಯೋತಿ ಮನುಷ್ಯ ನಿರ್ಮಿತ ಎಂದು ತಿರುವಂಕೂರ್ ದೇವಸ್ವಂ ಬೋರ್ಡ್‌ ಸ್ಪಷ್ಟನೆ ನೀಡಿದರೂ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ.

ಸಿನೆಮಾದಿಂದ ಹುಟ್ಟಿದ ದೇವರು ಸಂತೋಷಿ ಮಾತಾ

ಸಂತೋಷಿ ಮಾತಾ ಎಂಬ ದೇವತೆಯನ್ನು ಇಂದು ಭಾರತದಾದ್ಯಂತ ಪೂಜೆ ಮಾಡುತ್ತಾರೆ. ಅನೇಕ ದೇವಾಲಯಗಳು ಕಟ್ಟಲ್ಪಟ್ಟಿವೆ. ಅಚ್ಚರಿಯಾದರೂ ಸತ್ಯ, ಸಂತೋಷಿ ಮಾತಾ ಎಂಬುದು ಎಂದು ಸೆಲ್ಯುಲಾಯಿಡ್‌ ರೀಲ್‌ ನಿಂದ ಹುಟ್ಟಿದ ದೇವಿ. ಎಪ್ಪತ್ತರ ದಶಕದಲ್ಲಿ ಬಂದ ಸಿನೇಮಾವೊಂದು ಸೃಷ್ಟಿಸಿದ ದೇವತೆ.

೧೯೭೫ರಲ್ಲಿ ಶೋಲೇ ಹಾಗೂ ದೀವಾರ್‌ ಸಿನೇಮಾದ ಜೊತೆ ಜೊತೆಗೆ ಅತ್ಯಂತ ಕಡಿಮೆ ಬಜೆಟ್‌ ನ “ಜೈ ಸಂತೋಷಿ ಮಾ” ಎಂಬ ಸಿನೇಮಾ ಬಂತು. ಇದರಲ್ಲಿ ಅಭಿನಯಿಸಲು ರೆಡ್‌ ಲೈಟ್‌ ಏರಿಯಾಗಳಿಂದ ಕಲಾವಿದೆಯರನ್ನು ಕರೆತರಲಾಯಿತು. ಬಜೆಟ್‌ ಜೊತೆಗೆ ತುಲನೆ ಮಾಡಿದರೆ ಸಿನೇಮಾ ಒಳ್ಳೆಯ ಗಳಿಕೆಯನ್ನು ಕೂಡ ಕಂಡಿತ್ತು. ಕಾಂತಾರದ ರೀತಿ ಕಡಿಮೆ ಬಜೆಟ್‌ – ಹೆಚ್ಚಿನ ಗಳಿಕೆ!

ಸಿನೇಮಾದಲ್ಲಿ ಸಂತೋಷಿ ಮಾತಾ ಪಾತ್ರವನ್ನು ಮಾಡಿದ್ದ ಅನಿತಾ ಗುಹ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ “ಜನರು ಸಿನೇಮಾ ನೋಡುತ್ತಾ ಸ್ಕ್ರೀನ್‌ ಮೇಲೆ ಅಕ್ಕಿ, ನಾಣ್ಯ ಹೂಗಳನ್ನು ಎಸೆಯುತ್ತಿದ್ದರು. ಥಿಯೇಟರ್‌ ಒಳಗಡೆ ಬರುವಾಗ ಚಪ್ಪಲಿಯನ್ನು ಕಳಚಿ ಬರುತ್ತಿದ್ದರು. ಹೊರಗಡೆ ಸಣ್ಣ ಗುಡಿಯನ್ನು ಕೂಡ ಕಟ್ಟಿದ್ದರು. ಭಕ್ತಿಪ್ರಧಾನ ಸಿನೇಮಾಗಳು ಪ್ರದರ್ಶನಗೊಳ್ಳದ ಬಾಂದ್ರದಲ್ಲಿ ಈ ಸಿನೇಮಾ ಐವತ್ತು ವಾರಗಳ ಕಾಲ ಓಡಿತು” ಎನ್ನುತ್ತಾರೆ. ಯಾವುದೇ ಪೌರಾಣಿಕ ಹಿನ್ನಲೆ ಇಲ್ಲದ ಹೊಸದಾಗಿ ಸಿನೇಮಾದಿಂದ ಹುಟ್ಟಿಕೊಂಡ ಸಂತೋಷಿ ಮಾತಾನನ್ನು ಇಡೀ ಭಾರತವೇ ಆರಾಧಿಸಲು ಆರಂಭ ಮಾಡಿತ್ತು. ಇಂದಿಗೂ ವೇಶ್ಯಾಗೃಹಗಳಲ್ಲಿ, ಟ್ರಾನ್ಸ್‌ ಜೆಂಡರ್‌ ಗಳ ಮನೆಗಳಲ್ಲಿ ಈ ಸಂತೋಷಿ ಮಾತಾನ ಫೋಟೋಗಳನ್ನು ನೋಡಬಹುದು.

ಕಾಂತಾರ ಬೀರಿದ ಪ್ರಭಾವ..

ಇಂದು ಕಾಂತಾರ ಕೂಡ ಜನರ ಮೇಲೆ ಇಂತಹ ಪ್ರಭಾವವನ್ನು ಬೀರಿದಂತೆ ತೋರುತ್ತದೆ. ಸಿನೇಮಾವನ್ನು ಮಾಡುವಾಗ ಮಾಂಸಾಹಾರ ತ್ಯಜಿಸಿದ್ದೆ, ವೃತ ಮಾಡಿದ್ದೆ ಎಂದು ನಿರ್ದೇಶಕ-ನಟ ರಿಷಬ್‌ ಶೆಟ್ಟಿ ಹೇಳಿಕೆಗಳನ್ನು ನೀಡಿ ಇಡೀ ಸಿನೇಮಾವನ್ನು “ಭಕ್ತಿ ಭಾವ”ದಿಂದ ಜನರು ನೋಡುವಂತೆ ಮಾಡಿದರು. ಜೈ ಸಂತೋಷಿ ಮಾ ಸಿನೇಮಾವನ್ನು ನೋಡಿದಂತೆ ಜನರು ಚಪ್ಪಲಿ ಕಳಚಿ ಸಿನೇಮಾ ನೋಡಿದರು. ಥಿಯೇಟರ್‌ ಒಳಗಡೆ ಕೆಲವರಿಗೆ ದೈವದ ಆವಾಹನೆಯಾಗಿ ವಿಚಿತ್ರವಾಗಿ ಕುಣಿಯಲು ಶುರು ಮಾಡಿದರು. ರಾತ್ರಿಯಾದರೆ ಟೆರೇಸ್‌ ಹತ್ತಿ “ಹೋ……….ಗುತ್ತಿನಾರೇ…..!” ಎಂದು ಕಿರುಚುತ್ತಿದ್ದಾರೆ.

ಸಿನೇಮಾದಿಂದಾಗಿ ಈಗಾಗಲೇ ಕರ್ನಾಟಕದಾದ್ಯಂತ ಪ್ರಚಾರ ಪಡೆದಿದ್ದ ಕೊರಗಜ್ಜನ ಸಾಲಿಗೆ ಪಂಜುರ್ಲಿ – ಗುಳಿಗವೂ ಸೇರಿವೆ. ಕರ್ನಾಟಕದಾದ್ಯಂತ ಭಕ್ತರು ಸೃಷ್ಟಿಯಾಗಿ ತಮ್ಮ ತಮ್ಮ ಊರುಗಳಲ್ಲಿ ನೇಮ ಮಾಡಲು ಮುಂದಾಗುತ್ತಿದ್ದಾರೆ. ಹೀಗೆ ತುಳುನಾಡಿನ ಹೊರಗೆ ಗುಳಿಗ ದೈವದ ಕಟ್ಟೆ ನಿರ್ಮಾಣ ಮಾಡಿದವರಿಗೆ ಕಾಂತಾರ ಸಿನೇಮಾದ ನಟ ಪ್ರಮೋದ್‌ ಶೆಟ್ಟಿ ಅಭಿನಂದಿಸಿದ್ದರು ಕೂಡ.

ತುಳುವರ ಅಳಲು..

ರಿಷಬ್‌ ಶೆಟ್ಟಿ ಯಶಸ್ವಿಯಾಗಿ ಸಿನೇಮಾವನ್ನು ತೆಗೆದಿದ್ದಾರೆ. ನಾಲ್ಕುನೂರು ಕೋಟಿಗೂ ಅಧಿಕ ಆದಾಯವನ್ನು ಗಳಿಸಿದ್ದಾರೆ. ಅವರ ಈ ಪ್ರಾಜೆಕ್ಟ್‌ ಮುಗಿದಿದೆ. ಮುಂದೆ ಕಾಂತಾರ ಭಾಗ -೨ ಬಂದರೂ ಬರಬಹುದು. ಎಲ್ಲಾ ತುಳುವ ಸಮಾಜವೇ ಕಟ್ಟಿಕೊಂಡ ವಿಧಿ ನಿಷೇಧಗಳನ್ನು ಮೀರಿ ತೆಗೆದ ಈ ಚಿತ್ರವನ್ನು ತುಳುವರೇ ಪ್ರೋತ್ಸಾಹಿಸಿ ಇಂದು ಸಿನೇಮಾದ ಪ್ರಭಾವದಿಂದ ದೈವಾರಾಧನೆಗೆ ಜನರು ಅವಮಾನ ಮಾಡುತ್ತಿದ್ದಾರೆ ಎಂದು ಗೋಗರೆಯುತ್ತಿದ್ದಾರೆ.

ಇದೊಂದು ಅಚ್ಚರಿಯ ಸಂಗತಿ..

ದೈವಾರಾಧನೆ ಒಂದು ಸಂಕೀರ್ಣ ವ್ಯವಸ್ಥೆ. ಇದರಲ್ಲಿ ನಲಿಕೆ, ಪರವ, ಪಂಬದ ಸಮುದಾಯಗಳು ಪಾತ್ರಿಗಳಾಗಿ ಭಾಗವಹಿಸಿದರೆ, ಮಡಿವಾಳ, ಬಿಲ್ಲವ, ಬಂಟ, ಗೌಡ, ಕುಲಾಲ ಮೊದಲಾದ ಸಮುದಾಯಗಳೂ ಪ್ರಧಾನ ಪಾತ್ರಗಳನ್ನು ವಹಿಸುತ್ತಾರೆ. ಇಲ್ಲೊಂದು ಜಾತೀಯ ಶ್ರೇಣೀಕೃತ ವ್ಯವಸ್ಥೆ ಇದೆ. ಇದು ಹಾಗೆಯೇ ಮುಂದುವರಿಯುತ್ತದೆ. ಅಲ್ಲದೇ ಇದೇ ಶ್ರೇಣೀಕೃತ ವ್ಯವಸ್ಥೆ ದೈವಗಳಲ್ಲೂ ಇವೆ. ಪಂಜುರ್ಲಿ, ಗುಳಿಗ ದೈವಗಳಿಗಿಂತ ಪ್ರಧಾನ ದೈವಗಳು ಅನೇಕ ಇವೆ. ಕೊಡಮಣಿತ್ತಾಯ, ವೈದ್ಯನಾಥ, ಕಿನ್ನಿಮಾಣಿ-ಪೂಮಾಣಿ, ಜಾರಂದಾಯ, ಜುಮಾದಿ, ಅರಸು ದೈವಗಳು ಮೊದಲಾದ ಪ್ರಧಾನ ದೈವಗಳಿವೆ. ಇವ್ಯಾವುವೂ ಇಷ್ಟೊಂದು ಪ್ರಚಾರ ಪಡೆಯದೆ ಪಂಜುರ್ಲಿ, ಕೊರಗಜ್ಜ, ಗುಳಿಗ ದೈವಗಳು ಪಡೆದಿರುವುದು ಅಚ್ಚರಿಯ ಸಂಗತಿ.

ದೈವಗಳ ಓಡಾಟಕ್ಕೆ ನಿರ್ಧಿಷ್ಟ ವ್ಯಾಪ್ತಿಯಿದೆ..

ಒಂದು ದೈವಕ್ಕೆ ನಿರ್ಧಿಷ್ಟ ಭೌಗೋಳಿಕ ವ್ಯಾಪ್ತಿ ಇರುತ್ತದೆ. ಇದು ತುಳುನಾಡಿನ ಆಡಳಿತ ವ್ಯವಸ್ಥೆ ರೂಪಿಸಿರುವ ವ್ಯಾಪ್ತಿ. ದೈವಗಳು ಆ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ದೈವಗಳು ಹೋಗುವುದು ಅಪರೂಪದ ಸಂಗತಿ. ಹೆರಿಗೆಯಾಗಿ ತವರಿನಿಂದ ಗಂಡನ ಮನೆಗೆ ಹೋಗುವಾಗ ದೈವ ಮಗುವಿನ ತೊಟ್ಟಿಲಿನ  ಜೊತೆಗೆ ಹೋಗುವುದು, ಬಾಲೊಳಿಗಳಿಂದ ದೈವಗಳನ್ನು ತರುವುದು, ಕುಟುಂಬ ವಲಸೆ ಹೋಗುವಾಗ ದೈವಗಳೂ ಹೋಗುವುದು -ಅವೆಲ್ಲವಕ್ಕೂ ಒಂದು ವ್ಯಾಪ್ತಿ – ನಿರ್ಬಂಧಗಳಿವೆ. ಇನ್ನು ಇವು ಕನ್ನಡ ಭಾಷಿಕ ಪ್ರದೇಶಗಳಿಗೆ ಹೋಗುವುದಿದೆ. ಹೆಚ್ಚೆಂದರೆ ಕೊಡಗು, ಶಿವಮೊಗ್ಗ, ಮಲೆನಾಡು ಭಾಗಗಳಲ್ಲಿ ನೇಮ ನಡೆಯುತ್ತದೆ. ಇದು ಕುಟುಂಬಗಳು ವಲಸೆ ಹೋಗಿ ನಡೆಯುವ ಪ್ರಕರಣಗಳು.

ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ..

ಇಂದು ಮೈಸೂರು, ಬೆಂಗಳೂರಿಗೆ ದೈವಗಳು ಹೋಗುತ್ತಿವೆ. ಕಲ್ಲು ಬಿಟ್ಟು ಬ್ಯಾನರ್‌ ಗಳಲ್ಲಿ ದೈವಗಳು ಪ್ರತಿಷ್ಠೆ ಗೊಳ್ಳುತ್ತಿವೆ. ದುಡ್ಡು ಮಾಡುವ ದಂಧೆಯಾಗಿ ಬಳಕೆಯಾಗುತ್ತಿದೆ. ದೈವಗಳನ್ನು ಕಾಂತಾರದ ದೈವಗಳು ಎಂದು ಕರೆಯುವ ಪರಿಪಾಠ ಶುರುವಾಗಿದೆ. ಒಟ್ಟಿನಲ್ಲಿ ಸಿನೇಮಾ ಗೆದ್ದಿದೆ, ಆದರೆ ದೈವಾರಾಧನೆಯ ಆಶಯಗಳು ಸೋತಿವೆ.

ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು