Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕೆಎಂಎಫ್‌ ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಬಹಿರಂಗ ಪತ್ರ

ಅಮೂಲ್-ನಂದಿನಿ ವಿಲೀನಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಇಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸುದೀರ್ಘ ಬಹಿರಂಗ ಪತ್ರ ಬರೆದಿದ್ದು, ಒಂದುವೇಳೆ ವಿಲೀನಕ್ಕೆ ಒಪ್ಪಿದರೆ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ. ಕರ್ನಾಟಕದ ಜನತೆ ಯಾವುದೇ ಸ್ವರೂಪದ ಹೋರಾಟಕ್ಕೆ ಸಿದ್ಧವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಬಹಿರಂಗ ಪತ್ರವನ್ನು ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ, ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮತ್ತಿತರರು ಇಂದು ಮಧ್ಯಾಹ್ನ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಅವರಿಗೆ ಹಸ್ತಾಂತರಿಸಿದರು.

ಬಹಿರಂಗಪತ್ರದ ಪೂರ್ಣಪಾಠ ಈ ಕೆಳಗಿನಂತಿದೆ.

ಇವರಿಗೆ,
ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)
ಬೆಂಗಳೂರು

ಮಾನ್ಯರೆ,

ಕನ್ನಡಿಗರ ಹೆಮ್ಮೆಯ ಸಹಕಾರಿ ಸಂಸ್ಥೆ ಮತ್ತು ಗ್ರಾಮೀಣ ಭಾಗದ ರೈತರ ಒಡನಾಡಿಯಾಗಿರುವ ಕೆಎಂಎಫ್‌ ಭವಿಷ್ಯದ ಕುರಿತು ರಾಜ್ಯದ ನಾಗರಿಕರಲ್ಲಿ ಉಂಟಾಗಿರುವ ಆತಂಕ, ಅನುಮಾನ, ಅಭದ್ರತೆಗಳಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಈ ಆತಂಕಗಳನ್ನು ಬಗೆಹರಿಸಬೇಕಾಗಿರುವುದು ಸಂಸ್ಥೆಯ ಮುಖ್ಯಸ್ಥರಾದ ತಮ್ಮ ನೈತಿಕ, ಸಾಮಾಜಿಕ ಮತ್ತು ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ.

ಕೆಎಂಎಫ್‌ ಸಂಸ್ಥೆ ಸ್ಥಾಪನೆಯಾದಾಗಿನಿಂದಲೂ ಅದು ಹೈನುಗಾರಿಕೆ ಉದ್ಯಮದಲ್ಲಿ ತೊಡಗಿಕೊಂಡ ರೈತಾಪಿ ಜನರ ಜೀವನದಲ್ಲಿ ಆಶಾದಾಯಕವಾಗಿ ಮೂಡಿಬಂದಿದೆ. ಸುಮಾರು 26 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆಯನ್ನು, ಕೆಎಂಎಫ್‌ ಅನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವುದು ಸಾಮಾನ್ಯ ವಿಷಯವೇನಲ್ಲ. ಕೆಎಂಎಫ್‌ ಅಭದ್ರಗೊಂಡರೆ ಕೋಟ್ಯಂತರ ಜನರ ಬದುಕೂ ಅಭದ್ರಗೊಳ್ಳುತ್ತದೆ ಎಂಬುದನ್ನು ಅರಿಯಲು ಹೆಚ್ಚಿನ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ.

ನನಗೆ ತಿಳಿದಿರುವ ಮಾಹಿತಿ ಪ್ರಕಾರ ಕರ್ನಾಟಕ ಹಾಲು ಮಹಾಮಂಡಳದ ಅಡಿಯಲ್ಲಿ 17,014 ನೋಂದಾಯಿತ ಸಂಘಗಳು ಇದ್ದು 27,000 ಹಳ್ಳಿಗಳಲ್ಲಿ ಈ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 15,043 ಸಂಘಗಳು ಸಕ್ರಿಯವಾಗಿವೆ. ಇಷ್ಟು ದೊಡ್ಡ ಜಾಲವನ್ನು ಹೊಂದಿರುವ ಕೆಎಂಎಫ್‌ ಪ್ರತಿನಿತ್ಯ 70 ರಿಂದ 80 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುತ್ತಿದೆ. ಈಗಾಗಲೇ ಪ್ರತಿ ಆರ್ಥಿಕ ವರ್ಷದಲ್ಲಿ ಸರಿಸುಮಾರು 5000 ಕೋಟಿ ರುಪಾಯಿ ಆದಾಯವನ್ನು ಕೆಎಂಎಫ್‌ ಗಳಿಸುತ್ತಿದ್ದ, ಅದರ ವಹಿವಾಟು 20 ಸಾವಿರ ಕೋಟಿಯ ಸನಿಹ ತಲುಪಿರುವುದು ಸಾಮಾನ್ಯ ವಿಚಾರವೇನೂ ಅಲ್ಲ. ಇಂಥ ಮಹಾಸಂಸ್ಥೆಯ ಭವಿಷ್ಯದ ಕುರಿತು ಕರ್ನಾಟಕದ ಜನತೆ ಆತಂಕಿತರಾಗಿರುವುದು ನಂದಿನಿ ಉಳಿಸಿ ಎಂಬ ಅಭಿಯಾನ ನಡೆಸುತ್ತಿರುವುದಕ್ಕೆ ಊಹಾಪೋಹಗಳು ಕಾರಣ ಅಲ್ಲ. ಜನರ ಆತಂಕಕ್ಕೆ ಕಾರಣವಾಗಿರುವ ಹಲವು ಅಂಶಗಳು ಇಲ್ಲಿವೆ.

  1. ರಾಜ್ಯಪಟ್ಟಿಯಲ್ಲಿದ್ದ ಸಹಕಾರಿ ಇಲಾಖೆಯನ್ನು ಕೇಂದ್ರ ಸರ್ಕಾರ ಒಕ್ಕೂಟ ವಿರೋಧೀ ನೀತಿ ಅನುಸರಿಸಿ ಕೇಂದ್ರ ಪಟ್ಟಿಗೆ ತೆಗೆದುಕೊಂಡಿತು. ಇಡೀ ದೇಶದ ಸಹಕಾರಿ ಮಾರುಕಟ್ಟೆಯನ್ನು ನಿಯಂತ್ರಿಸುವ ಸಲುವಾಗಿ 2021 ಜುಲೈ 6ರಂದು ಕೇಂದ್ರ ಸರ್ಕಾರದ ಅಡಿಯಲ್ಲಿ ಸಹಕಾರಿ ಇಲಾಖೆಯನ್ನು ಹೊಸದಾಗಿ ಸ್ಥಾಪಿಸಲಾಯಿತು. ಮರುದಿನವೇ ಅಂದರೆ ಜುಲೈ 7ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಯಿತು.
  2. 2022ರ ಅಕ್ಟೋಬರ್‌ 7ರಂದು ಸಿಕ್ಕಿಂನ ಗ್ಯಾಂಗ್ಟಾಕ್‌ ನಲ್ಲಿ ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್‌ ಶಾ ಹೇಳಿಕೆಯೊಂದನ್ನು ನೀಡಿ, ಬಹುರಾಜ್ಯ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು, ಈ ಮೂಲಕ ಹೈನುಗಾರಿಕೆ ಉತ್ಪನ್ನಗಳ ರಫ್ತು ಮಾಡಲಾಗುವುದು ಎಂದರು.
  3. ಅಸ್ಸಾಂನ ಗುವಾಹಟಿಯಲ್ಲಿ ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್‌ ಶಾ ಮತ್ತೊಂದು ಹೇಳಿಕೆ ನೀಡಿ, ಅಮೂಲ್‌ ಜೊತೆಗೆ ಐದು ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿ ಬಹುರಾಜ್ಯ ಸಹಕಾರಿ ಸಂಸ್ಥೆ ಆರಂಭಿಸಲಾಗುವುದು ಎಂಬ ಹೇಳಿಕೆ ನೀಡಿದರು.
  4. ಡಿಸೆಂಬರ್‌ 30ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್‌ ಶಾ, ಕರ್ನಾಟಕದಲ್ಲಿ ಅಮೂಲ್‌ ಮತ್ತು ನಂದಿನಿ ಸಂಸ್ಥೆಗಳು ಒಟ್ಟಾಗಿ ಪ್ರತಿ ಹಳ್ಳಿಗಳಲ್ಲಿ ಪ್ರೈಮರಿ ಡೈರಿಗಳನ್ನು ತೆರೆಯಲಿವೆ, ಇನ್ನು ಮೂರು ವರ್ಷಗಳಲ್ಲಿ ಕರ್ನಾಟಕದ ಒಂದೂ ಹಳ್ಳಿಯನ್ನೂ ಬಿಡದಂತೆ ಎಲ್ಲ ಹಳ್ಳಿಗಳಲ್ಲೂ ಅಮೂಲ್‌ ಮತ್ತು ನಂದಿನಿಗಳು ಒಂದಾಗಿ ಪ್ರೈಮರಿ ಡೈರಿಗಳನ್ನು ತೆರೆಯಲಿವೆ ಎಂದು ಹೇಳಿಕೆ ನೀಡಿದರು.
  5. 2023ರ ಜನವರಿ 11ರಂದು ಕೇಂದ್ರ ಸಚಿವ ಸಂಪುಟ ಬಹುರಾಜ್ಯ ಸಹಕಾರಿ ಸಂಸ್ಥೆ ಸ್ಥಾಪನೆಗೆ ಒಪ್ಪಿಗೆ ನೀಡಿತು.
  6. 2023ರ ಮಾರ್ಚ್‌ 10 ರಂದು ಎಫ್‌ ಎಸ್‌ ಎಸ್‌ ಎ ಐ ಸಂಸ್ಥೆ ನಂದಿನಿ ಮೊಸರಿನ ಪ್ಯಾಕೆಟ್‌ ಮೇಲೆ ದಹಿ ಎಂಬ ಹಿಂದಿ ಶಬ್ದವನ್ನು ಕಡ್ಡಾಯವಾಗಿ ಮುದ್ರಿಸುವಂತೆ ಕೆಎಂಎಪ್‌ಗೆ ಆದೇಶಿಸಿತು. ನಂತರ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಾರ್ಚ್‌ 30ರಂದು ಇದೇ ಸಂಸ್ಥೆ ತನ್ನ ಸೂಚನೆಯನ್ನು ಹಿಂದಕ್ಕೆ ಪಡೆಯಿತು.
  7. ಗುಜರಾತ್‌ನ ಗಾಂಧಿನಗರದಲ್ಲಿ 2023ರ ಮಾರ್ಚ್‌ 18ರಂದು ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್‌ ಶಾ ಹೇಳಿಕೆಯೊಂದನ್ನು ನೀಡಿ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಟನೆಗಳನ್ನು ಬಹುರಾಜ್ಯ ಸಹಕಾರ ಸಂಸ್ಥೆಯಡಿಯಲ್ಲಿ ತರುವುದಾಗಿ ಘೋಷಿಸಿದರು.

ಇದೆಲ್ಲದರ ನಡುವೆ ಬಹುರಾಜ್ಯ ಸಹಕಾರಿ ಸಂಸ್ಥೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್‌ ಶಾ ಸಂಸತ್ತಿನಲ್ಲಿ ಮಂಡಿಸಿದ್ದು, ಅದು ಜಾರಿಯಾಗುವ ಹಂತದಲ್ಲಿದೆ. ಇದರ ಪ್ರಕಾರ ಹೈನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಹಕಾರಿ ಸಂಘಗಳೂ ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರಲಿದೆ. ಕೆಎಂಎಫ್‌ನಂಥ ಮಹಾಮಂಡಳದ ಚುನಾವಣೆಗಳನ್ನು ಕೇಂದ್ರ ಸರ್ಕಾರವೇ ನಡೆಸಲಿದ್ದು, ಕೇಂದ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರೂ ಸಹ ಮಂಡಳವನ್ನು ಸೇರಲಿದ್ದಾರೆ.

ಇಷ್ಟೆಲ್ಲ ನಡೆಯುತ್ತಿರುವಾಗ, ಕೆಎಂಎಫ್‌ ಅಸ್ತಿತ್ವದ ಬಗ್ಗೆ ಅನುಮಾನ ಬರುವುದು ಸಹಜವಲ್ಲವೇ? ಕೇಂದ್ರ ಸರ್ಕಾರದ ಸುಪರ್ದಿಗೆ ನಮ್ಮ ಸಹಕಾರಿ ಸಂಸ್ಥೆಯನ್ನು ಒಪ್ಪಿಸುವುದು ಸಹಕಾರಿ ತತ್ವ ಮತ್ತು ಒಕ್ಕೂಟ ತತ್ವಕ್ಕೆ ವಿರುದ್ಧ ನಡೆ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಆದರೆ ಈ ಬಗ್ಗೆ ಸ್ವತಃ ಕೆ ಎಂ ಎಫ್‌ ಇದುವರೆಗೆ ಒಂದೇ ಒಂದು ಹೇಳಿಕೆ ನೀಡಿದೆ ವಿರೋಧಿಸದಿರುವುದು ವಿಪರ್ಯಾಸ. ಯಾಕೆ ಇದುವರೆಗೆ ಕೆಎಂಎಫ್‌ ಕಡೆಯಿಂದ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಲು ಆಗಿಲ್ಲ? ಕೆಎಂಎಫ್‌ ಅಮೂಲ್‌ ನೊಂದಿಗೆ ವಿಲೀನಗೊಳ್ಳಲು ಸಿದ್ಧವಾಗಿದೆಯೇ? ಕನ್ನಡಿಗರು ಕಷ್ಟಪಟ್ಟು ಕಟ್ಟಿದ ಸಂಸ್ಥೆ, ಲಾಭದಲ್ಲಿರುವ ಸಂಸ್ಥೆ ಗುಜರಾತ್‌ ನ ಅಮೂಲ್‌ ಜೊತೆ ಯಾಕೆ ವಿಲೀನವಾಗಬೇಕು? ಈ ಕುರಿತು ನಿಮ್ಮ ಅಭಿಪ್ರಾಯವೇನು?

ಅಮುಲ್‌ ಬಹಳ ವರ್ಷಗಳಿಂದ ಕರ್ನಾಟಕದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಅಮುಲ್‌ ಹಾಲು ಸಹ ಮಾರಾಟವಾಗುತ್ತಿದೆ. ಆದರೆ ಈಗ ಬೆಂಗಳೂರಿನಲ್ಲಿ ಇ ಕಾಮರ್ಸ್‌ ಮೂಲಕ ಅಮುಲ್‌ ವ್ಯಪಾರ ಘೋಷಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸಲಾಗಿದೆ. ಇದಕ್ಕೆ ಹೊಣೆ ಯಾರು? ಈ ಬಗ್ಗೆ ಏನಾದರೂ ತನಿಖೆಯನ್ನು ನಡೆಸಲಾಗಿದೆಯೇ? ನಂದಿನಿ ಹಾಲಿನ ಅಭಾವ ದಿಢೀರನೆ ಕಾಣಿಸಿಕೊಳ್ಳಲು ಕಾರಣವೇನು?

ಇಡೀ ರಾಜ್ಯದ ಪ್ರಜ್ಞಾವಂತ ಜನರು ಸಕಾರಣವಾಗಿ ಧ್ವನಿ ಎತ್ತಿದ್ದಾರೆ. ಮೇಲುನೋಟಕ್ಕೇ ಎಲ್ಲರಿಗೂ ಕೆಎಂಎಫ್‌-ನಂದಿನಿಗೆ ಬಂದಿರುವ ಅಪಾಯ ಅರಿವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಂದಿನಿ ಉಳಿವಿಗಾಗಿ ಕನ್ನಡಿಗರು ಧ್ವನಿ ಎತ್ತಿರುವಾಗ ಅವರ ಜೊತೆಗೆ ನಿಲ್ಲಬೇಕಿರುವ ಕೆಎಂಎಫ್‌ ಅಧಿಕಾರಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ಏಕೆ? ಗ್ರಾಹಕರಿಗೆ ನಂದಿನಿ ಹಾಲು ಸಿಗುತ್ತಿಲ್ಲ ಎಂದು ದೂರಿದಾಗಲೂ ಏನೂ ಆಗಿಲ್ಲ ಎಂಬಂತೆ ಅಧಿಕಾರಿಗಳು ಮಾತಾಡುತ್ತಿರುವುದು ಕನ್ನಡಿಗರ ಅನುಮಾನಕ್ಕೆ ಕಾರಣವಾಗಿದೆ. ಇದನ್ನು ಹೇಗೆ ಪರಿಹರಿಸುತ್ತೀರಿ?

ಕೆಎಂಎಫ್‌ ಡಿಸೆಂಬರ್‌ ನಲ್ಲಿ ನಡೆಸಿದ ವಿವಿಧ ವೃಂದಗಳ ಸುಮಾರು 487 ಹುದ್ದೆಗಳ ನೇಮಕಾತಿಯನ್ನು ನಡೆಸಲು ಗುಜರಾತ್‌ನ ಇನ್ಸ್ಟಿಟ್ಯೂಟ್‌ ಆಫ್‌ ರೂರಲ್‌ ಮ್ಯಾನೇಜ್‌ ಮೆಂಟ್‌ ಆನಂದ್‌ (ಐಆರ್‌ ಎಂಎ) ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಈ ಐಆರ್‌ ಎಂಎ ಸಂಸ್ಥೆ ಗುಜರಾತಿ ಸಂಸ್ಥೆ. ಮಾತ್ರವಲ್ಲದೆ ಅಮೂಲ್‌ ಜೊತೆ ನಿಕಟ ಸಂಬಂಧ ಹೊಂದಿರುವ ಸಂಸ್ಥೆ. ಕನ್ನಡಿಗರು ಕಟ್ಟಿದ ಕೆಎಂಎಫ್‌ನಲ್ಲಿ ಉದ್ಯೋಗ ನೇಮಕಾತಿಯನ್ನು ಗುಜರಾತಿ ಸಂಸ್ಥೆ ಯಾಕೆ ಮಾಡಬೇಕು? ಕೆಎಂಎಫ್‌ ತಾನೇ ಈ ನೇಮಕಾತಿ ನಡೆಸಲು ಸಾಧ್ಯವಿಲ್ಲವೇ? ಅಥವಾ ನೇಮಕಾತಿ ನಡೆಸಲು ಕರ್ನಾಟಕದ ಯಾವುದೇ ಸಂಸ್ಥೆ ಇಲ್ಲವೇ? ಈ ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪ ನಡೆದಿರುವುದು, ನೊಂದ ಅಭ್ಯರ್ಥಿಗಳು ದೂರು ನೀಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ನೇಮಕಾತಿಯೇ ಅಮೂಲ್‌ ರಂಗಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ನಮ್ಮ ಅನುಮಾನಕ್ಕೆ ನಿಮ್ಮ ಉತ್ತರವೇನು?

ಗುಜರಾತಿನಲ್ಲಿ ಅಮುಲ್‌ ಹೇಗೋ ರಾಜ್ಯದಲ್ಲಿ ನಂದಿನಿ ಹಾಗೇ ಒಂದು ಸಹಕಾರಿ ತತ್ವದಲ್ಲಿ ನಡೆಯುತ್ತಿರುವ ಹಾಲು ಒಕ್ಕೂಟ. ಆದರೆ ಇಡೀ ಹಾಲಿನ ಉದ್ಯಮವನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ತರಲು ಕೇಂದ್ರ ಸಹಕಾರ ಇಲಾಖೆ ರಚಿಸಲಾಗಿದೆ. ಮಾತ್ರವಲ್ಲ ಅಂಬಾನಿಯಂತಹ ಕಾರ್ಪೊರೇಟ್‌ ಉದ್ಯಮಿಗಳು ಈಗಾಗಲೇ ಅಮುಲ್‌ ಜೊತೆ ನಿಕಟ ಸಂಪರ್ಕ ಸಾಧಿಸಿದ್ದಾರೆ. ನಾಳೆ ನಂದಿನಿ ಯನ್ನು ಅಮುಲ್‌ ಜೊತೆ ವಿಲೀನಗೊಳಿಸಿದರೆ ಕೇಂದ್ರದ ಮೂಲಕ ಕೆಎಂಫ್‌ ಹತೋಟಿ ಅಂಬಾನಿಯಂತವರ ಕೈಗೆ ಹೋಗುತ್ತದೆ. ಈ ಬೆಳವಣಿಗೆಯ ಕುರಿತು ಕೆಎಂಎಫ್‌ ಅಧಿಕಾರಿಗಳಿಗೆ ಮಾಹಿತಿಯಾಗಲೀ, ಅಧ್ಯಯನವಾಗಲೀ ಇದೆಯಾ? ಅಂತಿಮವಾಗಿ ಇದು ಕನ್ನಡಿಗರ, ಕರ್ನಾಟಕದ ಹಿತಕ್ಕೆ ಮಾರಕವಾಗಲಿದೆ ಎಂಬ ಅರಿವು ಇದೆಯೇ?

ಅಮೂಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹತಾ ಅವರ ಇತ್ತೀಚಿನ ಹೇಳಿಕೆಯನ್ನು ತಾವು ಗಮನಿಸಿರುತ್ತೀರಿ ಎಂದು ನಂಬಿರುತ್ತೇನೆ. ನಂದಿನಿಗೆ ಅಮುಲ್ ಪ್ರತಿಸ್ಪರ್ಧಿಯಲ್ಲವೆಂದೂ , ತಾವು ಅಮುಲ್ ಬ್ರಾಂಡಿನ ತಾಜಾ ಹಾಲನ್ನು ಕೇವಲ ಈ-ಕಾಮರ್ಸ್ ಪ್ಲಾಟ್ ಫಾರ್ಮ್ ನಿಮ್ದ ಮಾತ್ರ ಮಾರಾಟ ಮಾಡುತ್ತೇವೆಂದು , ಸಾಮೂಹಿಕ ಮಾರಾಟ ಮಾಡುವುದಿಲ್ಲವೆಂದು ಅವರು ಹೇಳಿಕೊಂಡಿದ್ದಾರೆ.

ಆದರೆ ಇದೇ ಜಯನ್‌ ಮೆಹತಾ ಅವರು ಫೈನಾನ್ಷಿಯಲ್‌ ಎಕ್ಸ್‌ ಪ್ರೆಸ್‌ ಗೆ ನೀಡಿದ ಸಂದರ್ಶನದಲ್ಲಿ ನೀಡಿರುವ ಹೇಳಿಕೆಯನ್ನೂ ಸಹ ಒಮ್ಮೆ ಗಮನಿಸಿ.

“.. I would like to indicate that we are only looking at e-commerce/quick commerce channels right now. We are not looking at general trade at the moment. … And a modern trade entry of Amul in Bengaluru will happen only six months later”

(https://www.financialexpress.com/industry/amul-vs-nandini-milk-war-hots-up-in-karnataka/3039474/)

ಈ ಹೇಳಿಕೆಯ ಪ್ರಕಾರ ಸದ್ಯಕ್ಕೆ ಅವರು ಇ-ಕಾಮರ್ಸ್‌ ಸಂಸ್ಥೆಗಳ ಮೂಲಕ ಹಾಲು-ಮೊಸರು ಮಾರುತ್ತಾರೆ, ಆರು ತಿಂಗಳ ನಂತರ ಬೆಂಗಳೂರಿನಲ್ಲಿ modern trade ಸಾಧನಗಳ ಮೂಲಕ ಪ್ರವೇಶ ಪಡೆಯುತ್ತಾರೆ. modern trade ಎಂದರೆ ಉತ್ಪಾದಕರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸುವ ಸಂಪೂರ್ಣ ಏಕಸ್ವಾಮ್ಯ ವ್ಯವಸ್ಥೆ. ಅದಕ್ಕೆ ಬೇಕಿರುವ ಮಳಿಗೆ, ದಾಸ್ತಾನು, ಹಾಗೂ ಮಾಲ್ ಗಳ ಸರಣಿಯನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳ ಸಂಘಟಿತ ಚಿಲ್ಲರೆ ವ್ಯಾಪಾರ ವಹಿವಾಟು ಎಂದರ್ಥ.

ಜಯನ್‌ ಮೆಹ್ತಾ ಹೇಳಿಕೆ ಪ್ರಕಾರ ಮುಂದಿನ ಆರು ತಿಂಗಳಲ್ಲಿ ಅಮೂಲ್‌ ಸಂಸ್ಥೆಯೂ ಕೆಎಂಎಫ್‌ ನ ಹಾಗೆಯೇ ಸ್ಥಳೀಯ ಹಾಲು ಉತ್ಪಾದಕರಿಂದ ನೇರ ಖರೀದಿಸಿ , ದಾಸ್ತಾನು ಮಾಡಿ, ಗ್ರಾಹಕರಿಗೆ ತಲುಪಿಸುತ್ತಾರೆ.

ಅಮೂಲ್‌ ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತಿರುವುದು, ಕರ್ನಾಟಕದಲ್ಲಿ ಹಾಲು ಉತ್ಪಾದಕರಿಂದ ನೇರವಾಗಿ ಹಾಲು ಖರೀದಿ ಮಾಡಲು ಮುಂದಾಗುತ್ತಿರುವುದು ಕೆಎಂಎಫ್‌ಗೆ ಗೊತ್ತಿಲ್ಲವೇ? ಕರ್ನಾಟಕದಲ್ಲಿ ನಂದಿನಿ ಅಲ್ಲದೇ ದೊಡ್ಲಾ, ಹೆರಿಟೇಜ್‌, ಆರೋಗ್ಯ ಇತ್ಯಾದಿ ಹಾಲುಗಳು ಮಾರಾಟವಾಗುತ್ತಿರುವುದು ನಿಜ. ಅಷ್ಟೇ ಯಾಕೆ ಅಮೂಲ್‌ ಸಹ ಮಹಾರಾಷ್ಟ್ರಕ್ಕೆ ಗಡಿಭಾಗದಲ್ಲಿರುವ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹಾಲು ಮಾರುತ್ತಿರುವುದು ನಿಜ. ಆದರೆ ಅಮೂಲ್‌ ಕರ್ನಾಟಕದ ಹಳ್ಳಿಗಳನ್ನು ಪ್ರವೇಶಿಸಿ ರೈತರಿಂದ ನೇರವಾಗಿ ಹಾಲು ಖರೀದಿಗೆ ಯತ್ನಿಸಿದರೆ ಆ ಪೈಪೋಟಿಯನ್ನು ತಡೆದುಕೊಳ್ಳಲು ಕೆಎಂಎಫ್‌ ಸಜ್ಜಾಗಿದೆಯೇ?

ನಂದಿನಿ ಮತ್ತು ಅಮೂಲ್‌ ಎರಡೂ ಕೂಡ ಸಹಕಾರಿ ತತ್ತ್ವದಡಿಯಲ್ಲಿ ಬೆಳೆದುಬಂದ ಸಂಸ್ಥೆಗಳು. ಇದುವರೆಗೆ ಎರಡೂ ಸಂಸ್ಥೆಗಳ ನಡುವೆ ಹೊಂದಾಣಿಕೆಯ ಕೊಡು ಕೊಳ್ವಿಕೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಒಳಗೆ ಅಮೂಲ್‌, ಗುಜರಾತ್‌ನ ಒಳಗೆ ನಂದಿನಿ ಆಕ್ರಮಣಕಾರಿ ನೀತಿಯನ್ನು ಅನುಸರಿಸಿರುವುದಿಲ್ಲ. ಒಂದು ಸಂಸ್ಥೆಯನ್ನು ಇನ್ನೊಂದು ಸಂಸ್ಥೆ ತುಳಿದು ಮೇಲಕ್ಕೆ ಬರುವ ಪ್ರಯತ್ನ ಮಾಡಿಲ್ಲ. ಆದರೆ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಅಮೂಲ್‌ ಬರುತ್ತಿರುವುದೇ ನಂದಿನಿಯನ್ನು ಮುಳುಗಿಸಲು ಎಂಬಂತಾಗಿದೆ. ದುರದೃಷ್ಟಕರ ವಿಷಯವೇನೆಂದರೆ ಅಮೂಲ್‌ ಬೆನ್ನಿಗೆ ಈಗ ಕೇಂದ್ರ ಸರ್ಕಾರವೇ ನಿಂತಿದೆ. ಇದಕ್ಕಾಗಿ ಸರ್ಕಾರ ಇಡೀ ಸಹಕಾರ ಇಲಾಖೆಯನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಮುಂಬರುವ ದಿನಗಳು ಕರ್ನಾಟಕದಲ್ಲಿ ಹೈನೋದ್ಯಮವನ್ನು ನೆಚ್ಚಿಕೊಂಡವರ ಪಾಲಿಗೆ ದುರ್ದಿನಗಳಾಗುವ ಎಲ್ಲ ಲಕ್ಷಣಗಳೂ ಇವೆ.

ಅಮೂಲ್‌, ನಂದಿನಿ ಇತ್ಯಾದಿ ಬೃಹತ್‌ ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿದ ನಂತರ ಏನಾಗಬಹುದು ಎಂಬ ಊಹೆ ನಮ್ಮೆಲ್ಲರಲ್ಲೂ ಇದೆ. ಪ್ರತಿನಿತ್ಯ ಸಾವಿರಾರು ಕೋಟಿ ರುಪಾಯಿಗಳ ಆದಾಯವನ್ನು ತರುವ ಈ ಹೈನೋದ್ಯಮ ಗುಜರಾತ್‌ನ ಉದ್ಯಮಪತಿಗಳ ಕೈಗೆ ಹೋಗಲಿದೆ ಎಂಬುದು ಊಹೆ ಮಾತ್ರವಲ್ಲ, ಇತ್ತೀಚಿನ ಎಲ್ಲ ಬೆಳವಣಿಗೆಗಳೂ ಇದಕ್ಕೆ ಪುಷ್ಠಿ ನೀಡುತ್ತವೆ.

ಕೆಎಂಎಫ್‌ ಕನ್ನಡಿಗರ ಸಂಸ್ಥೆ, ಕರ್ನಾಟಕದ ರೈತರು ಹಾಲು ನೀಡಿ ಪೊರೆದ ಸಂಸ್ಥೆ. ಅದು ಈಗ ಹೇಗಿದೆಯೋ ಅದೇ ಸ್ವರೂಪದಲ್ಲಿ ಮುಂದುವರೆಯಬೇಕು. ಒಂದು ವೇಳೆ ಕರ್ನಾಟಕದಲ್ಲಿ ನಂದಿನಿಯ ಜೊತೆಗೆ ಪೈಪೋಟಿಗೆ ನಿಂತರೆ, ನಂದಿನಿಯನ್ನು ಅಮೂಲ್‌ ನೊಂದಿಗೆ ವಿಲೀನಗೊಳಿಸಲು ಮುಂದಾದರೆ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ. ಕರ್ನಾಟಕದ ಜನತೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಸ್ವರೂಪದ ಹೋರಾಟಕ್ಕೂ ಸಜ್ಜಾಗಿರುತ್ತದೆ ಎಂದು ತಮಗೆ ನಮ್ರವಾಗಿ ತಿಳಿಸಲು ಬಯಸುತ್ತೇವೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ

(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

Related Articles

ಇತ್ತೀಚಿನ ಸುದ್ದಿಗಳು