ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಪಕ್ಷದ ಹೈಕಮಾಂಡ್ ಈಗಾಗಲೇ ನಿರ್ಧರಿಸಿದ್ದು, ಘೋಷಣೆಯೊಂದೇ ಬಾಕಿ ಇದೆ.
ಕಾರ್ಕಳ ಕಾಂಗ್ರೆಸ್ ಮಟ್ಟಿಗೆ ಸ್ಥಳೀಯ ನಾಯಕರು, ಕಾರ್ಯಕರ್ತರು ಎಲ್ಲರೂ ಹೇಳುವುದು ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲ್ ಅವರ ಹೆಸರು. ಆದರೆ ‘ಕಾರ್ಕಳದ ಹೈಕಮಾಂಡ್’ ವೀರಪ್ಪ ಮೊಯ್ಲಿ ಹೇಳುತ್ತಿರುವುದು ಮಂಜುನಾಥ ಪೂಜಾರಿ ಹೆಸರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಟಿಕೆಟ್‌ಗಾಗಿ ಲಾಬಿ ನಡೆಸಿದವರಲ್ಲ. ಅವರ ಬೆನ್ನಿಗೆ ವೀರಪ್ಪ ಮೊಯ್ಲಿ ಅವರೇ ನಿಂತು, ಅರ್ಜಿ ಹಾಕಿಸಿ, ಕೆಪಿಸಿಸಿ ಹಾಗೂ ದೆಹಲಿ ಮಟ್ಟದಲ್ಲಿಯೂ ಒತ್ತಡ ಹೇರುತ್ತಿದ್ದಾರೆ. ಹಾಗಂತ ಟಿಕೆಟ್ ಸಿಕ್ಕರೆ ಮಂಜುನಾಥ ಪೂಜಾರಿ ಬೇಡ ಎಂದು ಹೇಳುವಂತೆಯೂ ಇಲ್ಲ! ಸುನಿಲ್ ಕುಮಾರ್ ಗೆಲುವು ಸುಲಭ ಮಾಡಿ ಕೊಡಲು ಮೊಯ್ಲಿ ಈ ಪ್ರಯತ್ನದಲ್ಲಿದ್ದಾರೆ ಎಂಬ ಆರೋಪಗಳೂ ಸ್ಥಳೀಯವಾಗಿ ಮೊಯ್ಲಿ ವಿರುದ್ಧ ಕೇಳಿ ಬರುತ್ತಿವೆ.
ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ವಲ್ಪದರಲ್ಲಿ ಟಿಕೆಟ್ ವಂಚಿತರಾದವರು. ಆಗಲೂ ಟಿಕೆಟ್ ರೇಸಲ್ಲಿ ಮುಂಚೂಣಿಯಲ್ಲಿದ್ದ ಮುನಿಯಾಲು ಶೆಟ್ಟಿ ಅವರಿಗೆ ಅಡ್ಡ ಬಂದದ್ದು ಮಾಜಿ ಮುಖ್ಯಮಂತ್ರಿ ಮೊಯ್ಲಿಯೇ. ಆದರೆ, ಅಂದು ಟಿಕೆಟ್ ವಂಚಿತರಾದಾಗ ಮುನಿಯಾಲು ಬೆಂಬಲಿಗರು ಮಾಡಿದ ಮೊಯ್ಲಿಯ ಅಣಕು ಶವ ಯಾತ್ರೆ ಈಗ ಮಾಜಿ ಮುಖ್ಯ ಮಂತ್ರಿಯ ದ್ವೇಷಕ್ಕೆ ಕಾರಣವಾಗಿದೆ. ಜೊತೆಗೆ, ಬಿಜೆಪಿ ಸರಕಾರದ ವಿರುದ್ಧ ಗುತ್ತಿಗೆದಾರರಿಂದ 40% ಕಮಿಷನ್ ವಿವಾದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಗುತ್ತಿಗೆದಾರರ ಸಂಘದ ಮುಖಂಡರೂ ಆಗಿರುವ ಉದಯ ಮುನಿಯಾಲು ಪತ್ರಿಕಾಗೋಷ್ಠಿ ಕರೆದು ಕಮಿಷನ್ ಆರೋಪ ನಿರಾಕರಿಸಿದ್ದು, ಎರಡನೇ ಮೈನಸ್ ಪಾಯಿಂಟ್. ಮುನಿಯಾಲು ಮನೆ ಹೊರಗೆ ಐಟಿ ಜೀಪು ನಿಲ್ಲಿಸಿ ಈ ಪತ್ರಿಕಾಗೋಷ್ಠಿಯಲ್ಲಿ ಕಮಿಷನ್ ಆರೋಪ ನಿರಾಕರಿಸಲು ಒತ್ತಡ ಹೇರಲಾಗಿತ್ತು ಎಂಬುದು ವದಂತಿಯೋ, ಸತ್ಯವೋ ಎಂಬುದನ್ನು ಮುನಿಯಾಲು ಅವರೇ ಸ್ಪಷ್ಟಪಡಿಸಬೇಕಿದೆ.
ಇಂತಹ ಅನೇಕ ಸಣ್ಣ- ದೊಡ್ಡ ವಿಷಯಗಳನ್ನು ಮೊಯ್ಲಿ ಖುದ್ದು ಟಿಕೆಟ್ ಸ್ಕ್ರೀನಿಂಗ್ ಕಮಿಟಿಯಲ್ಲಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಆದರೂ ಮುನಿಯಾಲು ಉದಯ ಮೂಲತಃ ಕಾಂಗ್ರೆಸಿಗರು ಎಂಬ ಏಕೈಕ ಕಾರಣಕ್ಕಾಗಿ ಪಕ್ಷದ ನಾಯಕರು ಕಾರ್ಕಳ ಕ್ಷೇತ್ರದಾದ್ಯಂತ ಸರ್ವೇ ನಡೆಸಿ ಕಾರ್ಯಕರ್ತರ, ಮತದಾರರ ಅಭಿಪ್ರಾಯ ಸಂಗ್ರಹಿಸಿ, ಸ್ಪಷ್ಟ ನಿರ್ಧಾರವೊಂದಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಬಿಲ್ಲವ ಸಮುದಾಯದ ಕಾಂಗ್ರೆಸ್ ಮುಂಖಂಡ ಡಿ. ಆರ್. ರಾಜು ಅವರನ್ನು ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿರುವುದಕ್ಕೂ, ಟಿಕೆಟ್ ಹಂಚಿಕೆ ವಿಚಾರಕ್ಕೂ ತಳಕು ಹಾಕುತ್ತಿವೆ. ಆದರೆ ಪಕ್ಷದ ಮೂಲಗಳ ಪ್ರಕಾರ ಇದು ಮಧು ಬಂಗಾರಪ್ಪ ಅಧ್ಯಕ್ಷರಾಗಿರುವ ಸಮಿತಿಯ ನಿರ್ಧಾರವೇ ಹೊರತು, ಟಿಕೆಟ್ ವಿತರಣೆಗೂ ಈ ನೇಮಕಾತಿಗೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ.
ದಿನೇಶ್ ಕಿಣಿ
ಪತ್ರಕರ್ತರು.