ಬೆಳಗಾವಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ನಕಲಿ ದಾಖಲೆಗಳು ಮತ್ತು ಸುಳ್ಳು ಮಾಹಿತಿ ಒಳಗೊಂಡ ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಕೆ ಮಾಡಿ 198 ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ನಾಯಕ ಡಾ. ರವಿ ಪಾಟೀಲ್ ಸೇರಿದಂತೆ 20 ರಿಂದ 25 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 12 ರ ಬೂತ್ ಮಟ್ಟದ ಏಜೆಂಟ್ (BLA) ಮೀರಾಸಾಬ್ ಸನದಿ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 30 ರಂದು ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರಿನ ಪ್ರಕಾರ, ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಸುಮಾರು 2:30 ಕ್ಕೆ ವೀರಭದ್ರ ನಗರದ ಬೂತ್ ಸಂಖ್ಯೆ 195 ಮತ್ತು 196 ರಲ್ಲಿ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಡಾ. ರವಿ ಪಾಟೀಲ್, ಶಂಕರ್ ಬೀರಪ್ಪ ನಾಯ್ಕ್, ಪ್ರಶಾಂತ್ ದೀಪಕ್ ಮುಂದಿನಮನಿ ಹಾಗೂ ಇತರರು ಒಟ್ಟಾಗಿ ಸಂಚು ರೂಪಿಸಿ, ನಕಲಿ ದಾಖಲೆಗಳೊಂದಿಗೆ ಸಿದ್ಧಪಡಿಸಿದ ಫಾರ್ಮ್ 7 ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಕೆ ಮಾಡಿದ್ದರು.
ಈ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿಗಳು (ERO) ನೀಡಿದ್ದಾರೆಂದು ಸುಳ್ಳು ಹೇಳಿ, ಅರ್ಜಿಗಳಿಗೆ ಸಹಿ ಹಾಕುವಂತೆ ಬಿಎಲ್‌ಒ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು. ಅಲ್ಲದೆ, ಮತ್ತೊಬ್ಬ ವ್ಯಕ್ತಿಯಿಂದ ಫೋನ್ ಕರೆ ಮಾಡಿಸಿ ತಾನು ಇಆರ್‌ಒ ಎಂದು ಸೋಗು ಹಾಕಿಸಿ ಬೆದರಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಆಕ್ಷೇಪಣಾ ಅರ್ಜಿಗಳಲ್ಲಿ ದೂರುದಾರ ಮೀರಾಸಾಬ್ ಸನದಿ ಹಾಗೂ ಅವರ ಕುಟುಂಬಸ್ಥರ ಹೆಸರುಗಳೂ ಸೇರಿದಂತೆ ಒಟ್ಟು 198 ಅರ್ಹ ಮುಸ್ಲಿಂ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಯತ್ನಿಸಲಾಗಿತ್ತು. ಈ ಕುತಂತ್ರವು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅಪಾಯವನ್ನುಂಟುಮಾಡಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಂಚನೆ, ನಕಲಿ ದಾಖಲೆ ಸೃಷ್ಟಿ, ಕ್ರಿಮಿನಲ್ ಪಿತೂರಿ, ದಂಗೆಗೆ ಪ್ರಚೋದನೆ ಮತ್ತು ಕಾನೂನುಬಾಹಿರ ಕೂಟ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇತರ ಭಾಗಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇಂತಹದ್ದೇ ಅಕ್ರಮಗಳು ಬೆಳಕಿಗೆ ಬಂದಿವೆ. ಬೀದರ್‌ನಲ್ಲಿ ಅಧಿಕೃತ ದಾಖಲೆಗಳಿಲ್ಲದೆ ಹಾಗೂ ನಕಲಿ ಸಹಿಗಳನ್ನು ಸೃಷ್ಟಿಸಿ ಉದ್ಯಮಿ ಮೊಹಮ್ಮದ್ ಅತೀಕ್ ಅಹ್ಮದ್ ಸೇರಿದಂತೆ 3,244 ಮತದಾರರನ್ನು “ಸ್ಥಳಾಂತರಗೊಂಡವರು/ಅನುಪಸ್ಥಿತರು” ಎಂದು ಸುಳ್ಳಾಗಿ ತೋರಿಸಿ ಫಾರ್ಮ್ 7 ಸಲ್ಲಿಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 1 ರಂದು 32 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸೈಯದ್ ಹಸರತ್ ಉಲ್ಲಾ ನೀಡಿದ ದೂರಿನ ಮೇರೆಗೆ ಸುಳ್ಳು ಮಾಹಿತಿ ನೀಡಿ 28 ಮತದಾರರ ಹೆಸರುಗಳನ್ನು ತೆಗೆಯಲು ಯತ್ನಿಸಿದ ಆರೋಪದಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಅನಿಲ್ ಥಾಮಸ್ ಸೇರಿದಂತೆ ಮೂವರ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಮಧ್ಯೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಚುನಾವಣಾ ವಂಚನೆ ನಡೆಯುತ್ತಿದೆ ಎಂದು ಆರೋಪಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ್ದು, ಈ ಎಲ್ಲಾ ಪ್ರಕರಣಗಳ ತನಿಖೆ ಮುಂದುವರಿದಿದೆ.
