ಹೊಸದೆಹಲಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕೊಲಿಜಿಯಂ ಶಿಫಾರಸು ಮಾಡಿದೆ.
ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರನ್ನು ಸಿಜೆ ಆಗಿ ನೇಮಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶುಕ್ರವಾರ ಸಭೆ ಸೇರಿ ಈ ಸಂಬಂಧ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ನಂತರ, ನ್ಯಾಯಮೂರ್ತಿ ವರಾಳೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಸಿ ಸಮುದಾಯದ ಮೂರನೇ ನ್ಯಾಯಾಧೀಶರಾಗಲಿದ್ದಾರೆ. ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರ ನಿವೃತ್ತಿಯೊಂದಿಗೆ ಡಿಸೆಂಬರ್ 25 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಹುದ್ದೆ ಖಾಲಿಯಾಗಿದೆ. ಹೆಚ್ಚಿನ ಕೆಲಸದ ಹೊರೆಯಿಂದಾಗಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರಬಾರದು. ಹೀಗಾಗಿ ನ್ಯಾಯಮೂರ್ತಿ ವರಾಳೆ ಅವರ ಹೆಸರನ್ನು ಶಿಫಾರಸು ಮಾಡುತ್ತಿದ್ದೇವೆ ಎಂದು ಕೊಲಿಜಿಯಂ ಹೇಳಿದೆ.
56 ಸುಪ್ರೀಂ ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನ
ಸುಪ್ರೀಂ ಕೋರ್ಟ್ 11 ಮಹಿಳೆಯರು ಸೇರಿದಂತೆ 56 ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸಿದೆ. ಶುಕ್ರವಾರ ಈ ಕುರಿತು ಆದೇಶ ಹೊರಡಿಸಲಾಗಿದೆ.