Home ಅಂಕಣ 300 ರಾಮಾಯಣಗಳ ವಿರುದ್ಧ ನಿಂತ ಎಬಿವಿಪಿ!

300 ರಾಮಾಯಣಗಳ ವಿರುದ್ಧ ನಿಂತ ಎಬಿವಿಪಿ!

0

ಎಷ್ಟು  ರಾಮಾಯಣಗಳಿವೆ ? ಮುನ್ನೂರು? ಮೂರು ಸಾವಿರ? ಕೆಲವು ರಾಮಾಯಣಗಳ ಕೊನೆಯಲ್ಲಿ, ಕೆಲವೊಮ್ಮೆ ಪ್ರಶ್ನೆಯೊಂದನ್ನು ಕೇಳಲಾಗುತ್ತದೆ: ಎಷ್ಟು  ರಾಮಾಯಣಗಳಿವೆ ? ಈ ಪ್ರಶ್ನೆಗೆ ಉತ್ತರಿಸುತ್ತಾ ಕೆಲವು ರಾಮಯಣಗಳು, ಇಲ್ಲೊಂದಿದೆ..ಎನ್ನುತ್ತವೆ!

ಹೀಗೆ ಭಾರತದ ಹೆಸರಾಂತ ಕವಿ ಮತ್ತು ವಿದ್ವಾಂಸ ಎ ಕೆ ರಾಮಾನುಜನ್ ಅವರ ‘ಮುನ್ನೂರು ರಾಮಾಯಣಗಳು’ ಎಂಬ ಪ್ರಬಂಧ ಆರಂಭವಾಗುತ್ತದೆ. 1987ರಲ್ಲಿ ಪಿಟ್ಸ್‍ಬರ್ಗ್ ವಿವಿಯಲ್ಲಿ ಮಂಡಿಸಲಾದ ಈ ಪ್ರಬಂಧವನ್ನು ದೆಹಲಿ ವಿವಿಯ ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. 2008ರಲ್ಲಿ ಈ ಪ್ರಬಂಧ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ ಹಿಂದೂ ಸಂಘಟನೆಗಳು, ಬಿಜೆಪಿ, ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸಿದವು.

ಎಬಿವಿಪಿಯ ಪುಂಡರು ವಿಶ್ವವಿದ್ಯಾನಿಲಯದ ಹಿಸ್ಟರಿ ಡಿಪಾರ್ಟ್‌ಮೆಂಟ್‌ಗೆ ನುಗ್ಗಿ, ದಾಂಧಲೆ ಎಬ್ಬಿಸಿದರು. ತರಗತಿಗಳ ಬಾಗಿಲು ಕಿಟಕಿ ಒಡೆದರು!

ನೂರಾರು ರಾಮಾಯಣಗಳು ಸುಮಾರು 2,500 ವರ್ಷಗಳಿಗೂ ಹೆಚ್ಚು ಕಾಲದಿಂದ ಹೇಗೆ ಭಾರತ ಹಾಗೂ ಏಷ್ಯಾದಾದ್ಯಂತ ಹರಡಿರುವ ಇತಿಹಾಸವನ್ನು ಈ ಪ್ರಬಂಧ ಸರಳ ಸುಂದರವಾಗಿ ವಿವರಿಸುತ್ತದೆ. ರಾಮನ ಒಂದೇ ಕಥೆ ಬೇರೆ ಬೇರೆ ಭಾಷೆಗಳು, ಸಮಾಜಗಳು, ಪ್ರಾದೇಶಿಕತೆ, ಧರ್ಮಗಳು ಮತ್ತು ವಿವಿಧ ಚಾರಿತ್ರಿಕ ಘಟ್ಟಗಳಲ್ಲಿ ಪ್ರಸಾರವಾಗುತ್ತಿರುವಾಗ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ ಎಂಬುದನ್ನು ಇದು ವಿದ್ವತ್ಪೂರ್ಣವಾಗಿ ಇದು ಹೇಳುತ್ತದೆ. 

ಮುಖ್ಯವಾಗಿ ಈ ಪ್ರಬಂಧದಲ್ಲಿ ರಾಮಾಯಣದ ಐದು ಪಠ್ಯಗಳನ್ನು ಪರಿಗಣಿಸಲಾಗಿದೆ: ವಾಲ್ಮೀಕಿ ರಾಮಾಯಣ, ತಮಿಳಿನ ಕಂಬನ್ ರಾಮಾಯಣ, ಜೈನ ರಾಮಾಯಣ ಪಠ್ಯಗಳು, ಥಾಯ್ಲಾಂಡಿನ ಥಾಯ್ ರಾಮಕಿಯನ್ ಮತ್ತು ದಕ್ಷಿಣ ಭಾರತೀಯ ಜಾನಪದ ರಾಮಾಯಣದ ಪಠ್ಯಗಳು.

ಇವುಗಳನ್ನು ಪ್ರಬಂಧದಲ್ಲಿ ತರುವಾಗ ರಾಮಾನುಜನ್‌ ʼವರ್ಷನ್ಸ್‌ʼ ಮತ್ತು ʼವೇರಿಯೆಂಟ್ಸ್‌ʼ ಎಂಬ ಪದಗಳ ಬದಲಾಗಿ ʼಟೆಲ್ಲಿಂಗ್ಸ್‌ʼ ಎಂಬ ಪದವನ್ನು ಬಳಸುತ್ತಾರೆ. ಯಾಕೆರಂದರೆ ಈ ಕಥೆ ಒಂದು ವರ್ಷನ್ (ಆವೃತ್ತಿ) ಎಂದು ಹೇಳಬೇಕಾದರೆ, ಮೂಲದಲ್ಲಿ ಒಂದು ಕಥೆ ಇರಲೇ ಬೇಕು. ಇದು ಆ ಮೂಲಕಥೆಯ ಇನ್ನೊಂದು ವರ್ಷನ್ ಎಂದು ಹೇಳುವುದು ಮೂಲ ಪಠ್ಯದ ಅಸ್ತಿತ್ವವನ್ನು ಸೂಚಿಸುತ್ತದೆ. ಆದರೆ, ಇಡೀ ಪ್ರಬಂಧದಲ್ಲಿ ರಾಮಾನುಜನ್‌ ಅವರ ಮುಖ್ಯ ಅವಲೋಕನವೆಂದರೆ ಅಂತಹ ಒಂದು ಮೂಲ ರಾಮಾಯಣ ಎಂಬುದೇ ಇಲ್ಲ ಎಂಬುದು. ವಾಲ್ಮೀಕಿ ರಾಮಾಯಣ ಕಥೆʼ ಎಂತಹ ಅನೇಕ ರಾಮಾಯಣಗಳ ಕಥೆಗಳಲ್ಲಿ ಒಂದು. ಅದರ ಅರ್ಥ, ವಾಲ್ಮೀಕಿ ರಾಮಾಯಣ ಬರೆಯುವುದಕ್ಕೆ ಮೊದಲೇ ಈ ಕಥೆ ಜನಪದದಲ್ಲಿ ಇದ್ದಿರಬೇಕು. 

ಹೀಗಾಗಿ, ರಾಮಾಯಣವಿರಲಿ…ಮಹಾಭಾರತವಿರಲಿ, ಕವಿಗಳಿಗೆ ತಮಗಿಂತ ಹಿಂದೆಯೇ ಕಥೆಯನ್ನು ಅನೇಕರು ಹೇಳಿದ್ದಾರೆ ಎಂಬ ಅರಿವು ಇತ್ತು. ಕನ್ನಡದ ಕವಿ ಕುಮಾರವ್ಯಾಸ ತನ್ನ ʼಕರ್ಣಾಟ ಭಾರತ ಕಥಾಮಂಜರಿʼಯಲ್ಲಿ “ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ,” ಎನ್ನುತ್ತಾನೆ. ಕವಿ ಕುಮಾರವ್ಯಾಸ ಪೀಠಿಕಾ ಸಂಧಿಯಲ್ಲೇ ಇದನ್ನು ಹೇಳಿ ತನ್ನ ಕಾವ್ಯ ರಚನೆಗೆ ತೊಡಗುತ್ತಾನೆ. ಎಷ್ಟು ರಾಮಾಯಣಗಳಿವೆ ಎಂದರೆ, ಅದರ ಭಾರಕ್ಕೆ ಭೂಮಿಯನ್ನೇ ತಲೆಯ ಮೇಲೆ ಹೊತ್ತಿರುವ ಆದಿಶೇಷ ರಾಮಾಯಣದ ಕವಿಗಳನ್ನು ಹೊರಲಾರದೆ ತಿಣುಕಿದ್ದಾನೆ, ರಘುಚರಿತೆಯ ರಾಶಿಯಲ್ಲಿ ಕಾಲಿಡಲು ಜಾಗವಿಲ್ಲ ಎಂದು ವರ್ಣಿಸಿದ್ದಾನೆ.

ಕವಿಗೆ ಇರುವ ಅರಿವು ಭಾರತದಾದ್ಯಂತ ಬಹುತೇಕ ಕವಿಗಳಿಗೆ, ಜಾನಪದರಿಗೆ ಇತ್ತು. ಹಾಗಾಗಿ, ಎ ಕೆ ರಾಮಾನುಜನ್‌ ಅವರ ಪ್ರಬಂಧ ಆರಂಭವಾಗುವುದೇ ʼಎಷ್ಟು ರಾಮಾಯಣಗಳಿವೆ, ಇಕೋ ಇಲ್ಲೊಂದಿದೆ..ʼ ಎಂಬ ಹೇಳಿಕೆಯಿಂದ

ಎ ಕೆ ರಾಮಾನುಜನ್‌ ನಮಗೆ ಕೊಡುವ ಮಹತ್ವದ ಅರಿವು ಏನೆಂದರೆ ಭಾರತದ ಬಹುತೇಕ ಎಲ್ಲಾ ಭಾಷೆಗಳು, ಸಮುದಾಯಗಳು ರಾಮಾಯಣವನ್ನು ತಮಗೆ ಬೇಕಾದಂತೆ ಬರೆದುಕೊಂಡಿವೆ ಎಂಬುದು. ಇದು ನಮ್ಮ ಅರಿವಿನಲ್ಲಿದ್ದರೆ ಸಹಜವಾಗಿಯೇ ಎಬಿವಿಪಿ ಈ ಪ್ರಬಂಧದ ವಿರುದ್ಧ ನಡೆಸಿದ ಪ್ರತಿಭಟನೆಯ ಹಿಂದಿರುವ ಅವರ ಉದ್ದೇಶ ನಮಗೆ ಗೊತ್ತಾಗುತ್ತದೆ. ಭಾರತ ರಾಮನ ಕಥೆಯನ್ನು ಹೇಳುವ ಬಗೆಯೇ ಬಿಜೆಪಿ ಹಾಗೂ ಸಂಘ ಪರಿವಾರ ರಾಮನನ್ನು ರಾಜಕಾರಣಕ್ಕೆ ಬಳಸುವ ಕುತಂತ್ರಕ್ಕೆ ವಿರೋಧವಾಗಿ ನಿಲ್ಲುತ್ತದೆ. 

<object class="wp-block-file__embed" data="https://peepalmedia.com/wp-content/uploads/2024/01/three-hundred-Ramayanas-A-K-Ramanujan-1.pdf" type="application/pdf" style="width:100%;height:600px" aria-label="<strong>ಮುನ್ನೂರು ರಾಮಾಯಣಗಳು – ಎ ಕೆ ರಾಮಾನುಜನ್ಮುನ್ನೂರು ರಾಮಾಯಣಗಳು – ಎ ಕೆ ರಾಮಾನುಜನ್Download

ಇದು ಕೇವಲ ರಾಮಾಯಣಕ್ಕೆ ಮಾತ್ರವಲ್ಲ, ಮಹಾಭಾರತದ ಸಂದರ್ಭದಲ್ಲೂ ಇದೇ.

 “ವಾಲ್ಮೀಕಿ, ವ್ಯಾಸರು ರಾಮಾಯಣ , ಮಹಾಭಾರತಗಳ ಮೊಟ್ಟ ಮೊದಲ  ಸೃಷ್ಟಿಕರ್ತರಲ್ಲ. ಅವರಿಗಿಂತಲೂ ಪೂರ್ವದಲ್ಲಿ ಈ ಕತೆಗಳು ಜನತೆಯಲ್ಲಿ ಇದ್ದುವು, ಅವರ ತರುವಾಯವೂ ಇದ್ದುವು, ಇವತ್ತಿಗೂ ಇವೆ.ವಾಲ್ಮೀಕಿ ವ್ಯಾಸರು ತಮ್ಮ ಕಾವ್ಯಗಳನ್ನು ರಚಿಸಿದ ಮಾತ್ರಕ್ಕೆ ಇವರಿಗೂ ಪ್ರೇರಕವಾದ,ವಸ್ತುಗಳನ್ನು ಒದಗಿಸಿದ ಜನಪದ ಕಥಾವಾಹಿನಿ ನಿಂತುಹೋಗಿಲ್ಲ.ಸತತವಾಗಿ ಹರಿದಿದೆ. ಆದ್ದರಿ೦ದ ಸಾಮಾನ್ಯ ಜನತೆಗೆ ತಿಳಿದಿರುವುದು ಅಥವಾ ಪ್ರಭಾವ ಬೀರಿರುವುದು ವಾಲ್ಮೀಕಿ,ವ್ಯಾಸರುಗಳ ರಾಮಾಯಣ, ಮಹಾಭಾರತ ಕಥೆಗಳಾಗಿರದೆ,ಅವರಿಗೂ ಮೂಲವಾಗಿ ಇದ್ದ ಇವತ್ತಿಗೂ ಇದ್ದು ಬಂದಿರುವ ಜನಪದ ರಾಮಾಯಣ, ಮಹಾಭಾರತಗಳೆಂಬುದು ಅತ್ಯಂತ ಸ್ಪಷ್ಟವಿರುವ ವಿಷಯ”(ರಾ ಗೌ;ಸಂ.ಜನಪದ ರಾಮಾಯಣ;1973:ix) 

ರಾಮಾಯಣ, ಮಹಾಭಾರತಗಳು ಒಂದು ಸ್ಥಳದಿಂದ ಅನಾಮಿಕ ಕರ್ತೃವಿನಿಂದ ಹುಟ್ಟಿ ಕ್ರಮೇಣ ಇತರ ಸಮುದಾಯಗಳಿಂದಲೂ ಸ್ವೀಕರಿಸಲ್ಪಟ್ಟು ಮೌಖಿಕ ಪರಂಪರೆಗಳಾಗಿ ಸಾಗಿ ಬಂದಿವೆ.ಈ ಪ್ರವಾಹದಲ್ಲಿ ಭಿನ್ನ ಕಥನಗಳು,ಹೊಸ ಅಂಶಗಳು ಸೇರ್ಪಡೆಯಾಗಿ ಅನನ್ಯತೆಯನ್ನು ಮೆರೆದಿವೆ.ಜಾನಪದ ವಸ್ತುಗಳಿಂದ ಪ್ರೇರಿತರಾಗಿ ವಾಲ್ಮೀಕಿ ವ್ಯಾಸಾದಿಗಳು ರಚಿಸಿದ ಕಾವ್ಯಗಳು ಜನಪ್ರಿಯತೆಯನ್ನು ಪಡೆದವು. ಕನ್ನಡದಲ್ಲೂ ಪೊನ್ನನ ‘ ಭುವನೈಕ್ಯ ರಾಮಾಭ್ಯುದಯ'(ಕ್ರಿ.ಶ.ಸು 950), ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ'(ಕ್ರಿ.ಶ.ಸು1100), ಕುಮುದೇಂದುವಿನ ರಾಮಾಯಣ(ಕ್ರಿ.ಶ.ಸು1270), ನಾಗರಾಜನ ‘ಪುಣ್ಯಾಸ್ರವ’ ಗಳಂತ ಜೈನರಾಮಾಯಣಗಳು ಬಂದವು. ಹದಿನಾಲ್ಕನೆ ಶತಮಾನದ ಬಳಿಕ ವೈದಿಕ ಕವಿಗಳು ವಾಲ್ಮೀಕಿ ರಾಮಾಯಣದಿಂದ ಪ್ರೇರಿತರಾಗಿ ಜೈನ ರಾಮಾಯಣಗಳಿಗಿಂತ ಭಿನ್ನವಾದ ಕಾವ್ಯಗಳನ್ನು ರಚಿಸಿದರು. ಕುಮಾರ ವಾಲ್ಮೀಕಿಯ ‘ತೊರವೆ ರಾಮಾಮಣ’ (ಕ್ರಿ.ಶ.1500), ಚಾಮರಾಜ ‘ರಾಮಾಯಣ'(ಕ್ರಿ.ಶ.1630),ಮಲ್ಲರಸನ ‘ ದಶಾವತಾರ ಚರಿತೆ'(ಕ್ರಿ.ಶ.1680) ಮುಂತಾದವುಗಳಿಂದ ಹಿಡಿದು ಕುವೆಂಪು, ಮೋಯ್ಲಿಗಳ ವರೆಗೆ ರಚಿತವಾಗಿರುವ ರಾಮಾಯಣಗಳಿಂದ ʼತಿಂತಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ.’

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಅಂತೆಯೇ ಮಹಾಭಾರತವೂ ಅನೇಕ ಜೈನ ಕವಿಗಳಿಂದ, ವೈದಿಕ ಕವಿಗಳಿಂದ ಪುನರ್ರಚನೆಗೊಂಡಿದೆ. ಪಂಪನ  ‘ವಿಕ್ರಮಾರ್ಜುನ ವಿಜಯ’, ರನ್ನನ ‘ಗದಾಯುದ್ಧ’ ಕುಮಾರವ್ಯಾಸನ ‘ ಕರ್ನಾಟ ಭಾರತ ಕಥಾಮಂಜರಿ’ ಇತ್ಯಾದಿಗಳು. ಕ್ರಮೇಣ 16-17 ಶತಮಾನದಲ್ಲಿ ಶ್ರೋತೃಗಳನ್ನು ಕೇಂದ್ರೀಕರಿಸಿಕೊಂಡು ಕುಂಬಳೆಯ ಪಾರ್ತಿಸುಬ್ಬನಂತಹ ಅನೇಕ ಯಕ್ಷಗಾನ ಕವಿಗಳು ಪ್ರಸಂಗಗಳನ್ನು ಕಾವ್ಯಗಳ ಮೇಲೆ ಬರೆದಿದ್ದಾರೆ. ಕರಾವಳಿಯ ಜನರಿಗೆ ಮಹಾಕಾವ್ಯಗಳು, ಪುರಾಣಗಳು ಯಕ್ಷಗಾನದ ಮೂಲಕ ಚಿರ ಪರಿಚಿತವಾಗಿವೆ.   

 ತುಳುವಿನಲ್ಲಿ ಅರುಣಾಬ್ಜ ಕವಿ ವಿರಜಿತ ‘ಮಹಾಭಾರತೊ’ (ಕ್ರಿ.ಶ.1657) ಇದೆ,’ ಮಂದಾರ ರಾಮಾಯಣ’ ಇದೆ.ಆದರೆ ಇವೆಲ್ಲ ಶಿಷ್ಟ ಕಾವ್ಯಗಳಿಗೆ ನಿಷ್ಠವಾಗಿದ್ದು ಜಾನಪದ ಕಾವ್ಯಗಳಿಗೆ ಭಿನ್ನತೆಗಳವೆ.

ಬ್ರಿಟೀಷ್‌ ಆಡಳಿತದಲ್ಲಿ 1866 ರಲ್ಲಿ ಬಾಂಬೆ ಸರ್ಕಾರ ಭಾರತದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಜಾರ್ಜ್ ಬುಹ್ಲರ್, ಎಫ್ ಕೀಲ್ಹಾರ್ನ್, ಪೀಟರ್ ಪೀಟರ್ಸನ್, ರಾಮಕೃಷ್ಣ ಗೋಪಾಲ್ ಭಂಡಾರ್ಕರ್, ಎಸ್ ಆರ್ ಭಂಡಾರ್ಕರ್, ಕಥಾವಟೆ ಮತ್ತು ಘಾಟೆ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಯೋಜನೆಯಡಿಯಲ್ಲಿ 17,000 ಕ್ಕೂ ಹೆಚ್ಚು ಪ್ರಮುಖ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. 1917ರಲ್ಲಿ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI) ಸ್ಥಾಪನೆಯಾದ ನಂತರ ಬಾಂಬೆ ಪ್ರೆಸಿಡೆನ್ಸಿಯ ಆಗಿನ ಗವರ್ನರ್ ಮತ್ತು BORI ನ ಮೊದಲ ಅಧ್ಯಕ್ಷರಾದ ಲಾರ್ಡ್ ವಿಲಿಂಗ್ಡನ್ ಅವರು 1 ಏಪ್ರಿಲ್ 1918 ರಂದು ಈ ಎಲ್ಲಾ ಹಸ್ತಪ್ರತಿಗಳನ್ನು BORI ಗೆ ಸ್ಥಳಾಂತರಿಸಿದರು.

ಇದರ ಭಾಗವಾಗಿಯೇ, ಪಿ ವಿ ಕಾಣೆ, ವಿ ಎಸ್ ಸೂಕ್ತಂಕರ್, ಎಸ್ ಕೆ ಬೆಲ್ವಲ್ಕರ್, ಎಸ್ ಕೆ ಡೇ ಪ್ರೊ.ಡಾ. ಆರ್ ಎನ್.ದಾಂಡೇಕರ್ ಮುಂತಾದ ವಿದ್ವಾಂಸರು ಸುಮಾರು ಐದು ವರ್ಷಗಳ ಕಾಲ 1,259 ಹಸ್ತಪ್ರತಿಗಳನ್ನು ಅವಲೋಕಿಸಿ ಮಹಾಭಾರತದ ಒಂದು ವಿಮರ್ಶಾತ್ಮಕ ಆವೃತ್ತಿಯನ್ನು ಹೊರಗೆ ತಂದರು. ಸೆಪ್ಟೆಂಬರ್ 22, 1966 ರಂದು ಭಾರತದ ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅದನ್ನು ಬಿಡುಗಡೆ ಮಾಡಿದರು. 18 ಪರ್ವಗಳು; 89000+ ಪದ್ಯಗಳು, 15000+ ಪುಟಗಳ 19 ಸಂಪುಟಗಳನ್ನು ಇದು ಹೊಂದಿದೆ. 

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಇದರಲ್ಲಿ ಸೂಕ್ತಂಕರ್ ಹೇಳುತ್ತಾರೆ- “ವ್ಯಾಸರು ರಚಿಸಿದ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಅಸಾಧ್ಯ.ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ” ಈ ಮಾತು ಗಮನಾರ್ಹವಾದುದು.

ಸಂಶೋಧಕ ರಾಗೌ ಹಾಗೂ ಇತರರು ಸಂಪಾದಿಸಿದ ‘ಜನಪದ ರಾಮಾಯಣ’ದಲ್ಲಿ ತಂಬೂರಿಯವರ ರಾಮಾಯಣವು ರಾವಣ ಹಾಗೂ ಸೀತೆಯರ ತಂದೆ-ಮಗಳ ಸಂಬಂಧದ ಕಥೆಯಿದೆ. “ಇದು ಸೀತೆಯ ಜೀವನ ದುರಂತತೆಯನ್ನು ಧ್ವನಿಸುವುದು ಮಾತ್ರವಲ್ಲ, ಇಡೀ ರಾಮಾಯಣ ಕಥಾ ಕಟ್ಟಡವನ್ನೇ ತನ್ನಲ್ಲಿ ನಿಲ್ಲಿಸಿಕೊಂಡಿರುವಂತಿದೆ. ಇಲ್ಲಿ ಶಿವನಿಂದ ರಾವಣ ಮಾವಿನಹಣ್ಣೊಂದನ್ನು ಪಡೆದು, ಅದನ್ನು ತಿಂದು ವಾಟೆಯನ್ನು ಹೆಂಡತಿಗೆ ನೀಡುತ್ತಾನೆ. ಆಗ ಅವನೇ ಗರ್ಭ ಧರಿಸಿ ಸೀತೆಯನ್ನು ಹೆರುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ದಶರಥ ಹಣ್ಣಿನಿಂದ ಮಕ್ಕಳನ್ನು ಪಡೆಯುವುದನ್ನು ನೋಡಬಹುದು.

 ಇವರದೇ ಸಂಪಾದನೆಯ ‘ಹೊನ್ನಾಜಮ್ಮನ ರಾಮಾಯಣ’ದಲ್ಲಿ ಸೀತೆ ಕಮಲದ ರೂಪದಲ್ಲಿರುವುದು, ತಾವರೆಯನ್ನು ಆಘ್ರಾಣಿಸಿದ ರಾವಣನ ಮೂಗಿನ ಹೊಳ್ಳೆಗಳ ಒಳಗೆ ಸೇರಿಕೊಳ್ಳುವುದು, ಸೀನಿದಾಗ ಮೂಗಿನಿಂದ ಸೀತೆ ಹುಟ್ಟುವುದು- ಇಲ್ಲಿ ಸೀತೆಯ ಜನನ ಅಸಹಜ ಹಾಗೂ ಅಮಂಗಳಕರ. ತಂಬೂರಿಯವರ ರಾಮಾಯಣದಂತೆ ಇಲ್ಲೂ ರಾವಣನಿಂದ ನೀರಿನಲ್ಲಿ ತೇಲಿ ಬಿಟ್ಟ ಸೀತೆ ಜನಕನಿಗೆ ಸಿಗುತ್ತಾಳೆ.

 ಹೊನ್ನಾಜಮ್ಮನ ರಾಮಾಯಣದ ಸೀತೆಯ ಪಾವಿತ್ರ್ಯತೆಯ ಪರೀಕ್ಷೆಯೂ ವಿಶಿಷ್ಟ. ಇಲ್ಲಿ ರಾಮ ಇವಳಿಗೆ ಸರ್ಪವನ್ನು ಸಿಂಬಿಯಾಗಿಸಿಕೊಂಡು ಮರಳಿನ ಮಡಿಕೆಯಲ್ಲಿ ನೀರು ತರುವ ಹಾಗೂ ಮಲ್ಲಿಗೆ ಬಾಡದಂತೆ;ಉಟ್ಟ ಬಟ್ಟೆ ಹಾಳಾಗದಂತೆ, ಅರಶಿನ ಕುಂಕುಮ ಕೆಡದಂತೆ ಅಗ್ನಿ ಕೊಂಡದಲ್ಲಿ ನಿಂತುಕೊಳ್ಳುವ ಪರೀಕ್ಷೆಗಳನ್ನು ಒಡ್ಡುತ್ತಾನೆ.

ಹನುಮಂತನ ಬಗ್ಗೆ ಗಂಗಾ ಯಮುನಾ ಬಯಲಿನಲ್ಲಿ ಪ್ರಚಲಿತದಲ್ಲಿರುವ ಹಲವಾರು ಕತೆಗಳಲ್ಲಿ ಕೆಲವನ್ನು ಅಯೋವಾ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಫಿಲಿಪ್ ಲಟ್ಗೆಂಡಾರ್ಫ್ ಪ್ರಕಟಿಸುತ್ತಾರೆ.ಇದರಲ್ಲೊಂದು ಕತೆಯಲ್ಲಿ ಪಾತ್ರಗಳೇ ನಿರೂಪಕರಾಗುತ್ತಾ ತಮ್ಮದೇ ಪಾತ್ರಗಳಿಗೆ ಮುಖಾಮುಖಿಯಾಗುವ ಅದ್ಭುತ ಸನ್ನಿವೇಷವಿದೆ.ಇದರಲ್ಲಿ ಅಂಜನಾದೇವಿ ಬಾಲ ಆಂಜನೇಯನಿಗೆ ರಾತ್ರಿ ರಾಮನ ಕತೆಯನ್ನು ಹೇಳುತ್ತಾಳೆ. ಆಂಜನೇಯ-ರಾಮನ ಬೇಟಿಯ ಬಗ್ಗೆ ಹೇಳುವಾಗ ಬಾಲ ಆಂಜನೇಯ “ಈ ಆಂಜನೇಯ ಯಾರು?” ಎಂದು ಅಚ್ಚರಿಯಿ೦ದ ಕೇಳುತ್ತಾನೆ. ರಾವಣ-ಆಂಜನೇಯರ ಬೇಟಿಯ ಬಗ್ಗೆ ಹೇಳುವಾಗ ಆಂಜನೇಯ ರಾವಣನನ್ನು ಅಲ್ಲೇ ಕೊಲ್ಲದ್ದಕ್ಕೆ ಬಾಲಾಂಜನೇಯ ಆಕ್ರೋಶ ವ್ಯಕ್ತ ಪಡಿಸುತ್ತಾನೆ! ರಾಮಾಂಜನೇಯರ ಆಲಿಂಗನದ ಬಗ್ಗೆ ಹೇಳುವಾಗ ಆ ಆಂಜನೇಯ ತಾನಾಗಬಾರದಿತ್ತೇ ಎಂದು ಆಸೆ ಪಡುತ್ತಾನೆ. ರಾಮನನ್ನು ಈಗಲೇ ತೋರಿಸುವಂತೆ ಹಠ ಹಿಡಿದಾಗ ಅಂಜನಾದೇವಿ “ರಾಮ ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ. ಅವನದು ಇನ್ನೊಂದು ರಾಮಾಯಣ” ಎನ್ನುತ್ತಾಳೆ. ಆಂಜನೇಯ ತಕ್ಷಣ ಅಯೋಧ್ಯೆಗೆ ಹೊರಡಲನುವಾದಾಗ ತಾಯಿ ತಡೆದು “ಅಲ್ಲಿ ಮಾನವರು ವಾಸಿಸುತ್ತಾರೆ. ಕಪಿಗಳಿಗೆ ಅಲ್ಲಿ ಜಾಗವಿಲ್ಲ. ಕಾಲ ಕೂಡಿ ಬಂದಾಗ ಬೇಟಿಯಾಗು” ಎನ್ನುತ್ತಾಳೆ. ಈ ಕಥಾನಿರೂಪಣೆಯ ಶೈಲಿ ಅದ್ಭುತವಾದುದು.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

 ಹಿ.ಚಿ.ಬೋರಲಿಂಗಯ್ಯರವರು ಸಂಪಾದಿಸಿದ ‘ಗೊಂಡರ ರಾಮಾಯಣ’ ಬಹಳ ವಿಶಿಷ್ಟವಾದದು. ಕೋವಿ ಹಿಡಿದು ಬೇಟೆಗೆ ಹೊರಡುವ ದಶರಥನನ್ನು ಸಾಮಾನ್ಯ ಗೊಂಡನಂತೆ ಚಿತ್ರಿಸಲಾಗಿದೆ.ಕೆರೆಯಲ್ಲಿ ಆನೆಯೊಂದು ನೀರು ಕುಡಿಯುವಾಗ ಅದಕ್ಕೆ ಗುಂಡು ಹಾರಿಸುವ ದಶರಥ ” ನೀನು ನಿನ್ನ ಮಗನಿಂದಲೇ ಮರಣ ಹೊಂದು” ಎಂದು ಆನೆಯಿಂದ ಶಪಿಸಲ್ಪಡುತ್ತಾನೆ. ವಾಲ್ಮೀಕಿಯ ರಾಮಾಯಣದಲ್ಲಿ ಆನೆಯೆಂದು ಭಾವಿಸಿ ಶ್ರವಣ ಕುಮಾರನ ಹತ್ಯೆಯಾಗುತ್ತದೆ.

ಗೊಂಡರ ರಾಮಾಯಣದಲ್ಲಿ ಮಡಿವಾಳ ಮಾಜಯ್ಯ(?) ಹೀಯಾಳಿಸುವಾಗ ರಾಮ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಸೀತೆಯನ್ನು ಕಾಡಿನಲ್ಲಿ ಕೊಂದು ಬರುವಂತೆ ಕಿರಾತಕರಲ್ಲಿ ಆಜ್ಞಾಪಿಸುತ್ತಾನೆ. ಕೊಲ್ಲುವಾಗ ಕಿರಾತಕರಿಗೆ ಕತ್ತಿಯ ಅರಗಿನಲ್ಲಿ ಮಗುವಿನ ಬಿಂಬ ಕಂಡು ಶಿಶುಹತ್ಯಾ ದೋಷಕ್ಕೆ ಹೆದರಿ ಕಾಡಲ್ಲಿ ಬಿಟ್ಟು ಬರುತ್ತಾರೆ.ಇಲ್ಲಿಯೂ ವಾಲ್ಮೀಕಿಯ ರಾಮಾಯಣದಂತೆ ಸೀತೆಗೆ ಅವಳಿ ಮಕ್ಕಳ ಜನನವಾಗುವುದಿಲ್ಲ. ಬದಲಾಗಿ ‘ಚಿತ್ರಪಟ ರಾಮಾಯಣ’ದಂತೆ ಕುಶನು ವಾಲ್ಮೀಕಿಯ ದರ್ಬೆಯಿಂದ ಜನಿಸುತ್ತಾನೆ.

ವಿಲಿಯಮ್ ಡಾಲ್ರಿಂಪಲ್ ನ  ”ನೈನ್ ಲೈವ್ಸ್”  ನಲ್ಲಿ ರಾಜಸ್ಥಾನದ ನಾಲ್ಕು ಸಾವಿರ ಸಾಲುಗಳ ‘ಪಭುಜೀಯ’ ಮಾಖಿಕ ಕಾವ್ಯದ ಬಗ್ಗೆ  ಬರವು ಇದೆ. ಕೇಂಬ್ರಿಡ್ಜ್ ನ ಸಂಶೋಧಕ ಜಾನ್ ಡಿ ಸ್ಮಿತ್ 1970 ರಲ್ಲಿ ಈ ವೀರ ಪಭುಜೀಯ ಕಾವ್ಯ ಹಾಗೂ ಅದನ್ನು ಹಾಡುವ ಭೋಪರ ಮೇಲೆ ಪಿ.ಎಚ್.ಡಿ ಮಾಡಿದ್ದಾರೆ. ಅಖಿಲ ಭಾರತ ಮಟ್ಟದ ರಾಮಾಯಣದಂತೆ ರಾಮ ತನ್ನ ಅಪಹೃತ ಪತ್ನಿಗಾಗಿ ಲಂಕೆಗೆ ಹೋಗುವುದಿಲ್ಲ,ಬದಲಾಗಿ ರಾವಣನ ಒಂಟೆಗಳನ್ನು ಕದಿಯಲು ಹೋಗುತ್ತಾನೆ. ರಾಜಸ್ಥಾನದ ಮರಳುಗಾಡಿಗೆ ಒಂಟೆಗಳನ್ನು ತಂದ ಪಭುಜೀಯನ್ನು ಅಲ್ಲಿಯ ಜನರು ಆರಾಧಿಸುತ್ತಾರೆ. ರೋಬರಿ ಜನಾಂಗದ ಭೋಪ ತನ್ನ ಸಂಗಡಿಗರೊಂದಿಗೆ ಕಾವ್ಯವನ್ನು ಹಾಡುತ್ತಾನೆ.ಜೊತೆಗೆ ‘ಪಾಡ್’ ಎಂಬ ಪವಿತ್ರವಾದ ಚಿತ್ರಪಟವನ್ನು ಕಥಾ ನಿರೂಪಣೆಗೆ ಬಳಸುತ್ತಾರೆ.

ರಾಮಾಯಣವನ್ನು ಹಿಂದೂ ಧರ್ಮದ ಅಧಿಕೃತ ಕಾವ್ಯವೆಂದು ಭಾವಿಸುವ ಸಂದರ್ಭದಲ್ಲಿ ಮತೀಯ ವ್ಯಾಪ್ತಿಯನ್ನು ಮೀರಿ ಅದು ಬೆಳೆದ ಬಗೆಯನ್ನು ಕೇರಳದ ಮಾಪಿಳ್ಳೆ ರಾಮಾಯಣದಲ್ಲಿ ನೋಡಬಹುದು. ಇದು ಮುಸಲ್ಮಾನ ಮಾಪಿಳ್ಳೆಗಳ ಜಾನಪದ ಹಾಡುಗಳಲ್ಲಿ ರಾಮ ಕಾಣಿಸಿಕೊಂಡ ಬಗೆ. ರಾಮನ ಹೆಸರನ್ನು “ಲಾಮನ್” ಎಂದು ಬದಲಿಸಿದ್ದಷ್ಟೇ, ಉಳಿದ ಪಾತ್ರಗಳು ಅಂತೆಯೇ ಇವೆ. ಮುಸ್ಲಿಂ ಮಾಪಿಳ್ಳೆಗಳ ಬದುಕು-ಸಂಸ್ಕøತಿಗೆ ಹೊಂದಿಕೊಳ್ಳುವಂತೆ ರಾಮಾಯಣ ಮರುರೂಪುಗೊಂಡಿದೆ, ಇದು ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯ ಪ್ರೇರಿತ ಮತೀಯ ಸಂಘರ್ಷಗಳಿಗೆ ಮುಖಾಮುಖಿಗೊಳ್ಳುವ ಅಗತ್ಯತೆ ತುಂಬಾ ಇದೆ.

ರಾಮಾಯಣಕ್ಕಿಂತ ತುಸು ಹೆಚ್ಚು ಜನಮಾನಸವನ್ನು ಹೊಕ್ಕಿರುವ ಕಾವ್ಯ ಮಹಾಭಾರತ. ಅದಕ್ಕೆ ಅದರ ಸರ್ವ ರಸೋದಯ ಕಾರಣವೇನೋ…. ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಪ್ರಸಿದ್ಧ ಜಾನಪದ ವಿದ್ವಾಂಸ ಎನ್.ಆರ್.ನಾಯಕರು ಸಂಪಾದಿಸಿದ ‘ಗ್ರಾಮೊಕ್ಕಲ ಮಹಾಭಾರತ’ ಕರಾವಳಿ ಕರ್ನಾಟಕ ಭಾಗದಲ್ಲಿರುವ ಗ್ರಾಮೊಕ್ಕಲು ಸಮುದಾಯದ ಭಾರತ. ಇದರಲ್ಲಿ ಧರ್ಮರು, ಗೀಚಕ(ಕೀಚಕ), ಸುಭದ್ರೆ,ಲಕ್ಷ್ಮಣ,ಅರ್ಜುನ,ಕುಸುಮಾಲಿ(ಚಿತ್ರಾಂಗದೆ),ಕನಕಾಂಗಿ ಕಲ್ಯಾಣ,ಅಭಿಮನ್ಯು ಹಾಗೂ ಸಾವಿತ್ರಿ ಹೀಗೆ ಒಂಬತ್ತು ಬಿಡಿ ಕಥನಗಳಿವೆ.ಈ ಮಹಾಭಾರತ ಅನಕ್ಷರಸ್ಥ ಜನರ ಮೂಲಕ ಮೌಖಿಕವಾಗಿ ಹರಿದು ಬಂದಿದೆ.

ಈ ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ ನಾರಾಯಣ ದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ, ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ. ಇತರರಂತೇ ದುರ್ಯೋಧನನು ಇವನನ್ನು ಸೂತನೆಂದು ಕರೆಯುವ ನವೀನ ಆಶಯ   ಇದೆ. ದ್ರೌಪದಿ ವಸ್ತ್ರಾಪಹರಣದಂತಹ ಅನೈತಿಕ ಪ್ರಸಂಗವನ್ನು ನಿರೂಪಕ ಬದಲಿಸಿದ್ದಾನೆ. ಪಗಡೆಯಾಟದಲ್ಲಿ ದ್ರೌಪದಿ ಗೆದ್ದರೂ ಈ  ಮಹಾಭಾರತದಲ್ಲಿ ಪಾಂಡವರನ್ನು ಸೋಲಿಸಿದ ದುರ್ಯೋಧನನನ್ನು ದ್ರೌಪದಿಯು ಪಗಡೆಯಾಟದಲ್ಲಿ ಗೆಲ್ಲುತ್ತಾಳೆ. ದ್ರೌಪದಿ ಕರ್ಣನ ನೆರವಿನಿಂದ  ನಾರಾಯಣದೇವರ ಪಗಡೆ ಮಣೆಯನ್ನು ತರಿಸಿ ಕೌರವನ ಮೋಸದ ಮಣೆಯನ್ನು ಬದಲಿಸುತ್ತಾಳೆ. ಪಗಡೆಯಾಡುವಾಗ ಗಾಳಿ ಬೀಸಿ ದ್ರೌಪದಿಯ ಸೆರಗು ಜಾರಿ,ಇದರಿಂದ ಚಿತ್ತ ಚಂಚಲಗೊಂಡ ಕೌರವ ಸೋಲುತ್ತಾನೆ. ಕಾವ್ಯದಲ್ಲಿ ಕರ್ಣನ ಧರ್ಮ ಬೀರುತನ, ಸಹೋದರತ್ವ, ನೈತಿಕತೆ ಸುಂದರವಾಗಿ ವ್ಯಕ್ತಗೊಂಡಿದೆ.ಇತರರಂತೇ ದುರ್ಯೋಧನನೂ ಇವನನ್ನು ಸೂತನೆಂದು ಕರೆಯುವ ವನವಾಸಕ್ಕೆ ಕಾರಣ ಅಸ್ಪಷ್ಟ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಈ ಮಹಾಭಾರತದಲ್ಲಿ ‘ಸುಭದ್ರೆಯ ಹಾಡು’ ಅಭಿಜಾತ ಮಹಾಭಾರತಕ್ಕಿಂತ ಭಿನ್ನ . ಜೋಗಿಯಾಗಿ ಬಂದು ಭಿಕ್ಷೆಗಾಗಿ ಪೀಡಿಸುವ ಅರ್ಜುನನ ಉಪಟಳವನ್ನು ತಾಳಲಾರದೆ ಸುಭದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು,ಅರ್ಜುನ ತನ್ನ ನಾಗರ ಬೆತ್ತ- ಅಮೃತ ನೀರಿನಿಂದ ಬದುಕಿಸುವ ವಿಶಿಷ್ಟ ಪ್ರಕರಣಗಳು ಇದರಲ್ಲಿವೆ.ಅರ್ಜುನ ಚದುರಂಗಿ ಕುಸುಮಾಲಿಯನ್ನು ಮದುವೆಯಾಗಿ ಹನ್ನೆರಡು ವರ್ಷದ ನಂತರ ಜೋಗಿ ವೇಷಧಾರಿಯಾಗಿ ಬಂದು ಪರೀಕ್ಷಿಸಿ ಹಸ್ತಿನಾವತಿಗೆ ಕರೆದೊಯ್ಯುವ ಪ್ರಸಂಗ ಇದರಲ್ಲಿ ಮಾತ್ರ ಕಾಣಸಿಗುತ್ತದೆ.

ಮಧ್ಯಭಾರತದ ಗೊಂಡರಲ್ಲಿ ಪ್ರಸಿದ್ಧವಾದ ‘ ಭೀಮ ಸಿದಿ’ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹರಣ ಮಾಡುವವನು.ಸುಂದರಿಯರನ್ನು ನೋಡುವಾಗ ತನ್ನ ತಂದೆ ಪವನಾರನನ್ನು ಪ್ರಾರ್ಥಿಸುತ್ತಾನೆ. ತಂದೆ ಜೋರಾಗಿ ಗಾಳಿ ಬೀಸಿ ಹೆಂಗಳೆಯರು ಬಟ್ಟೆ ಹಾರಿಸುತ್ತಾನೆ. ಗೊಂಡರಿಗೆ ಭೀಮ ಫಲವಂತಿಕೆಯ ದೈವ, ಮಳೆ ತರುವವನು.

ಛತ್ತೀಸಘಡದ ಕಥನವೊಂದರಲ್ಲಿ ಕೃಷ್ಣ ಬಾಣ ಹರಿತಗೊಳಿಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ಬಟ್ಟೆ ತುಂಡೊಂದನ್ನು ಹರಿದು ಅವನ ಬೆರಳಿಗೆ ಕಟ್ಟುತ್ತಾಳೆ. ಇನ್ನೊಂದು ಕಥನದಲ್ಲಿ ಪಾಂಡವರೊಂದಿಗೆ ಕೃಷ್ಣ ಈಜಾಡುವಾಗ ತನ್ನ ಲಂಗೋಟಿಯನ್ನು ಕಳೆದುಕೊಳ್ಳುತ್ತಾನೆ. ಆಗ ದ್ರೌಪದಿ ತನ್ನ ಸೆರಗಿನ ತುಂಡೊಂದನ್ನು ನೀಡುತ್ತಾಳೆ. ಈ ಉಪಕಾರವನ್ನು ಅಕ್ಷಯಾಂಬರ ವಿಲಾಸದಲ್ಲಿ ತೀರಿಸುತ್ತಾನೆ.

 ಮಹಾಭಾರತದ ಪ್ರಮುಖ ಪಾತ್ರ ದ್ರೌಪದಿಯು ತಮಿಳುನಾಡಿನಲ್ಲಿ ದೈವವಾಗಿ ಆರಾಧಿಸಲ್ಪಡುತ್ತಾಳೆ. ಕೊಯಮ್ಬತ್ತೂರಿನ ‘ಅರವನ್ ಜಾತ್ರೆ’ ಯಲ್ಲಿ ಇವಳು ಒಂದು ದೈವ. ಕೃಷ್ಣ ಮೋಹಿನಿಯಾಗಿ ಆರವನ್ ನನ್ನು ಮದುವೆಯಾದ ದಿನದಂದು ಈ ಜಾತ್ರೆ ನಡೆಯುತ್ತದೆ. ಇದರಲ್ಲಿ ತೃತೀಯ ಲಿಂಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಆರವನ್ ಉಲೂಪಿಯ ಮಗ ಇರಾವಂತನೆಂಬ ವಾದ ವಿದ್ವಾಂಸರದ್ದು. ತಮಿಳುನಾಡಿನ ನೃತ್ಯ ಪ್ರಕಾರ ‘ತೆರಕೂತ್ತು’ವಿನಲ್ಲಿ ಮಹಾಭಾರತದ ಪ್ರಸಂಗಗಳಿವೆ.

ತೆಲುಗಿನ ಮಹಾಭಾರತದಲ್ಲಿ ಪಾಂಡವರು ತಾವು ಚಿರಂಜೀವಿಗಳಾಗಲು ತಂದೆ ಪಾಂಡುವಿನ ಹೆಣವನ್ನು ತಿನ್ನುವ ಪ್ರಸಂಗವಿದ್ದು, ಇದನ್ನು ಕೃಷ್ಣ ತಪ್ಪಿಸುತ್ತಾನೆ. ಗ್ರಾಮೊಕ್ಕಲು ಮಹಾಭಾರತದಂತೆ ಇಲ್ಲೂ ದ್ರೌಪದಿ ಕೌರವನೊಂದಿಗೆ ಪಗಡೆಯಾಡುತ್ತಾಳೆ, ಆದರೆ ಕಾಲ ಬೆರಳಿನಲ್ಲಿ!

ಭಾರತದ ಅನೇಕ ಜನಾಂಗಗಳು ಮಹಾಭಾರತದ ಪಾತ್ರಗಳನ್ನು ತಮ್ಮ ಪೂರ್ವಜರೆಂದು ಬಗೆಯುತ್ತವೆ.ಹಿಮಾಚಲಪ್ರದೇಶದ ‘ಮಂಡಿ’ಯಲ್ಲಿ ಹಿಡಿಂಬೆಯ ದೇಗುಲವಿದೆ. ಉತ್ತರಾಖಾಂಡದಾದ್ಯಂತ ಇರುವ ಗಿಡ್ಡಿ ಜನಾಂಗೀಯರಿಗೆ ಜರಾಸಂಧ ದೈವ! ರಾಜಸ್ಥಾನದ ಜೋದಾಪುರದಲ್ಲಿ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ತಮ್ಮನ್ನು ರಾವಣನ ವಂಶಸ್ಥರೆಂದು ಕರೆಸಿಕೊಂಡು ಅವನಿಗೆ ದೇವಾಲಯ ನಿರ್ಮಿಸಿ ಆರಾಧಿಸುತ್ತಾರೆ.

ಹಿಮಾಚಲಪ್ರದೇಶದ ಕಿನ್ನೂರು ಪ್ರದೇಶದ ನಿರೂಪಣೆಯೊಂದರ ಪ್ರಕಾರ ಕುಂತಿಗೆ ಮಂಗಗಳನ್ನು ನೋಡಿ ಮಗುವಿನ ಬಯಕೆಯಾಗಿ ‘ಋಷಿ ಮಾಮ’ನ ಸೇವೆ ಮಾಡಿ ಮಕ್ಕಳನ್ನು ಪಡೆಯುತ್ತಾಳೆ.ಇಲ್ಲಿ ಬೆಟ್ಟದ ಮೇಲೆ ವಾಸಿಸುವ ಪಾಂಡವರಿಗೂ ಕೆಳಗೆ ವಾಸಿಸುವ ಕೌರವರಿಗೂ ನೀರಿಗಾಗಿ ಜಗಳವಾಗುತ್ತದೆ. ಅಸ್ಸಾಂನ ಜನರು ರುಕ್ಮ, ಭಗದತ್ತ,ಬಾಣಾಸುರರನ್ನು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಕೃಷ್ಣನ ಪತ್ನಿ ರುಕ್ಮಿಣಿ  ಬೋಡೋಗಳ ಕನ್ಯೆ!!!

ಭಾರತದಲ್ಲಿ ಅನೇಕ ಸ್ಥಳನಾಮಗಳು ಮಹಾಭಾರತ ರಾಮಾಯಣ ಕೇಂದ್ರಿತವಾಗಿವೆ. ಪಾಂಡವರ ಗುಡ್ಡ, ಪಾಂಡವಪುರ, ಪಾಂಡವ ಪಣೆ, ಹಂಪಿಯ ಸೀತೆಯ ಸೆರಗು, ಭೀಮನ ಕಲ್ಲು ಇತ್ಯಾದಿ. ಸಾಮಾನ್ಯ ಮಾನವ ಮಾಡಲಾಗದ ಅಸಾಮಾನ್ಯ, ಅತಿಮಾನುಷ ಕಾರ್ಯಗಳನ್ನು ಪುರಾಣ ಪಾತ್ರಗಳಿಗೆ ಆರೋಪಿಸುವುದು ಜನಸಮುದಾಯದ ಸಾಮಾನ್ಯ ನಂಬಿಕೆ. ಯಾರೂ ಎತ್ತಲಾಗದ ಭಾರೀ ಗಾತ್ರದ ಕಲ್ಲು ‘ ಭೀಮನ ಕಲ್ಲು’ ಆಗುವುದು ಭೀಮನ ದೇಹ ದಾಢ್ಯತೆಯ ಅರಿವು ಇರುವುದರಿಂದ.ಅನೇಕ ಗ್ರಾಮಗಳು ತಮ್ಮ ಊರಿನ ಐತಿಹ್ಯವನ್ನು ಪಾಂಡವರ ವನವಾಸದೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತವೆ. ನನ್ನ ಊರು ಐವರ್ನಾಡಿಗೆ ಪಾಂಡವರು ಬಂದಿದ್ದರು, ಅವರು ಸ್ಥಾಪಿಸಿದ ಲಿಂಗಗಳೇ ಪಂಚಲಿಂಗೇಶ್ವರ.

ಹೀಗೆ, ಜನಮಾನಸದಲ್ಲಿ ರಾಮ-ಕೃಷ್ಣರ ಕಥೆಗಳು ಬೇರೆ ಬೇರೆ ಭಾಷೆಗಳಲ್ಲಿ, ಜನಪದದಲ್ಲಿ ಹೊಸದಾಗಿ ಕಟ್ಟುವ ಪರಂಪರೆ ಭಾರತ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರಾಮ ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕಿದ್ದಾನೆ. ನಿಜವಾದ ʼರಾಮಂದಿರುʼ ಮರೆಯಾಗಿ ಹಿಂದುತ್ವದ ರಾಮ ನಮ್ಮ ಮುಂದೆ ಬಂದಿದ್ದಾನೆ. ರಾಮ ದೇವಾಲಯದ ಒಳಗೆ ಬಂಧಿಯಾಗುತ್ತಿದ್ದಾನೆ. ಈ ಸಂದರ್ಭದಲ್ಲಿ ರಾಮನ ಭಾರತ ಕಥನಗಳನ್ನು ನಾವು ಸ್ಮರಿಸಿಕೊಳ್ಳಬೇಕು.

ಲೇಖನ: ಚರಣ್ ಐವರ್ನಾಡು

You cannot copy content of this page

Exit mobile version