ಸಂಡೂರು: ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯುವ ಹಕ್ಕನ್ನು ಕಳೆದುಕೊಂಡಿದ್ದು, ಮುಂದಿನ 15ರಿಂದ 20 ದಿನಗಳ ಒಳಗೆ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ
ಸಂಡೂರು ವಿಧಾನಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ್ ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಡಾ ನಿವೇಶನ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ, ನಮಗೆ ಲೋಕಾಯುಕ್ತ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗೆ ವಹಿಸಬೇಕು. ಬಹುಕೋಟಿ ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಹೊರಿಸಲಾಗುವುದು ಎಂದು ತಿಳಿದ ಸಿದ್ದರಾಮಯ್ಯ ಅವರು ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್ ಮೂಲಕ ರಾಜ್ಯವು ಹೊಸ ಜಿಹಾದ್‌ಗೆ ಸಾಕ್ಷಿಯಾಗುತ್ತಿದೆ ಮತ್ತು ಇದು ಆಡಳಿತಾರೂಢ ಕಾಂಗ್ರೆಸ್‌ನ ಆಜ್ಞೆಯ ಮೇರೆಗೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಕಾಂಗ್ರೆಸ್ ಗೆ ಜನ ತಕ್ಕ ಪಾಠ ಕಲಿಸಬೇಕು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸದಿದ್ದರೆ ರಾಜ್ಯದ ಎಲ್ಲ ಮನೆಗಳೂ ವಕ್ಫ್ ಆಸ್ತಿಯಾಗಲಿವೆ ಎಂದು ಜೋಶಿ ಹೇಳಿದರು.
‘‘ರಾಜ್ಯದ ಬಿಜೆಪಿ ಸರಕಾರ ಅನ್ವರ್ ಮಾಣಿಪ್ಪಾಡಿ ವರದಿ ಆಧರಿಸಿ ವಕ್ಫ್ ಆಸ್ತಿಗಳನ್ನು ರಕ್ಷಿಸುವುದಾಗಿ ಹೇಳಿತ್ತು, ವಕ್ಫ್ ಆಸ್ತಿಯನ್ನು ಮನಬಂದಂತೆ ಕಬಳಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ರೆಹಮಾನ್ ಖಾನ್, ಹಾರಿಸ್, ಸಿ ಎಂ ಇಬ್ರಾಹಿಂ ಅವರಂತಹ ಹಲವು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಉಲ್ಲೇಖಿಸಿತ್ತು. ಉಳಿದಂತೆ ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣ ಉತ್ತುಂಗಕ್ಕೇರಿದೆ” ಎಂದು ಕೇಂದ್ರ ಸಚಿವ ಹೇಳಿದರು.