Home ಬ್ರೇಕಿಂಗ್ ಸುದ್ದಿ ಕರ್ನಾಟಕದ ಬೆಳೆಗಳಿಗೆ ಆಂಧ್ರದಲ್ಲಿ ನಿಷೇಧ; ಆದೇಶ ತಕ್ಷಣ ಹಿಂಪಡೆಯುವಂತೆ ಆಂಧ್ರ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಕರ್ನಾಟಕದ ಬೆಳೆಗಳಿಗೆ ಆಂಧ್ರದಲ್ಲಿ ನಿಷೇಧ; ಆದೇಶ ತಕ್ಷಣ ಹಿಂಪಡೆಯುವಂತೆ ಆಂಧ್ರ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

0

ಆಂಧ್ರಪ್ರದೇಶದಲ್ಲಿ ಕರ್ನಾಟಕದ ತೋತಾಪುರಿ ಮಾವಿನಕಾಯಿಗೆ ಹೇರಿರುವ ನಿಷೇಧವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ರೈತರು ಸಂಕಷ್ಟ ಎದುರಿಸಲಿದ್ದಾರೆ. ಹಲವಾರು ವರ್ಷಗಳಿಂದ ಈ ಪ್ರಕ್ರಿಯೆ ಮುಂದುವರೆದಿದೆ. ಏಕಾಏಕಿ ಈ ಕ್ರಮಕ್ಕೆ ಮುಂದಾದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ತೋತಾಪುರಿ ಮಾವು ಖರೀದಿ ನಿಷೇಧಿಸಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಇದರ ಬೆನ್ನಲ್ಲೇ ಮಧ್ಯ ಪ್ರವೇಶ ಮಾಡಿದ್ದ ಕರ್ನಾಟಕ ಸರ್ಕಾರದ ಆಂಧ್ರಪ್ರದೇಶ ರಾಜ್ಯಕ್ಕೆ ಪತ್ರ ಬರೆದಿದ್ದು, ನಿಷೇಧ ಆದೇಶ ಹಿಂಪಡೆಯುವಂತೆ ಮನವಿ ಮಾಡಿದೆ.

ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘಕಾಲದಿಂದ ಸಂಪರ್ಕ ಹೊಂದಿದ್ದಾರೆ. ಪ್ರಸ್ತುತ ನಿರ್ಬಂಧವು ಈ ಸುಸ್ಥಾಪಿತ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ ಮತ್ತು ಕೊಯ್ಲಿನ ನಂತರದ ಗಮನಾರ್ಹ ನಷ್ಟವನ್ನುಂಟು ಮಾಡಿದೆ, ಇದು ಸಾವಿರಾರು ರೈತರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣುಗಳನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ 07 ರಂದು ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ. ಈ ಹಠಾತ್ ಮತ್ತು ಏಕಪಕ್ಷೀಯ ಕ್ರಮವು ಕರ್ನಾಟಕದ ಮಾವು ಬೆಳೆಗಾರರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಬೆಳೆಯುವವರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಶ್ರೀನಿವಾಸಪುರದ ತೋತಾಪುರಿ ಮಾವು ಖರೀದಿ ಮಾಡದಂತೆ ಚಿತ್ತೂರು ಜಿಲ್ಲಾಡಳಿತ ಮೌಖಿಕ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಮಾವು ಬೆಲೆ ಕುಸಿತ ಉಂಟಾಗಿ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಇದೀಗ ಮಾವು ಮಾರಾಟ ಸಂಬಂಧ ಯಾವುದೇ ನಿರ್ಬಂಧ ಹೇರದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.

You cannot copy content of this page

Exit mobile version