ಕರ್ನಾಟಕದಲ್ಲಿ ಧ್ವೇಷ ಭಾಷಣ ಮತ್ತು ಕೋಮು ಸಂಘರ್ಷ ಹುಟ್ಟು ಹಾಕುವವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಪೊಲೀಸ್ ಇಲಾಖೆ ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ಹುಟ್ಟು ಹಾಕುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಹಾಗೆಯೇ ಬಿಜೆಪಿ ಪಕ್ಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೂ ಈಗ ಧ್ವೇಷ ಭಾಷಣದ ಉರುಳು ಸುತ್ತಿಕೊಳ್ಳುವ ಭಯ ಎದುರಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ ಭಾಷಣಗಳನ್ನು ಕಲೆ ಹಾಕುವ ಕೆಲಸಕ್ಕೆ ಕರ್ನಾಟಕ ಪೊಲೀಸರು ಮುಂದಾಗಿದ್ದಾರೆ. ಇದು ಚಕ್ರವರ್ತಿ ಸೂಲಿಬೆಲೆ ಅಲಿಯಾಸ್ ಮಿಥುನ್ ಚಕ್ರವರ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಗೆ ಬರುತ್ತಿರುವ ಚಕ್ರವರ್ತಿ ಸೂಲಿಬೆಲೆ ಈಗ ಈ ಆಪತ್ತಿನಿಂದ ಪಾರಾಗಲು ಸಹಾಯಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಳಿ ಅಂಗಲಾಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಪಾಳಯದಲ್ಲಿ ‘ಚಿಂತಕ’ ಎಂದೇ ಗುರುತಿಸಲ್ಪಡುವ, ಸದಾ ದ್ವೇಷ ಭಾಷಣ ಮತ್ತು ಸುಳ್ಳು ನರೇಟಿವ್ ಗಳಿಂದಲೇ ಕರ್ನಾಟಕದಲ್ಲಿ ಬಿಜೆಪಿ ಪರ ಮಾತನಾಡುವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಈಗ ಪೊಲೀಸರ ಭಯ ಉಂಟಾಗಿದೆ. ಪೊಲೀಸರು ಚಕ್ರವರ್ತಿ ಸೂಲಿಬೆಲೆಯ ಕಳೆದ ಕೆಲವು ವರ್ಷಗಳ ಭಾಷಣಗಳನ್ನು ಕಲೆ ಹಾಕಿ, ಕೋಮು ಭಾವನೆ ಕೆದಕುವ ಅಂಶಗಳೇನೇ ಇದ್ದರೂ ಆತನ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುವುದು ಖಾತರಿ ಆಗುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣದ ಮೂಲಕ “ಚಕ್ರವರ್ತಿ ಸೂಲಿಬೆಲೆಯಂತಹ ‘ಚಿಂತಕ’ರ ತಂಟೆಗೆ ಹೋದರೆ ಸುಮ್ಮನಿರುವುದಿಲ್ಲ” ಎಂದು ಗುಡುಗಿದ್ದಾರೆ. ಸುಳ್ಳು ಮೊಕದ್ದಮೆ ದಾಖಲಿಸಿ ಚಕ್ರವರ್ತಿ ಸೂಲಿಬೆಲೆಗೆ ಕಿರುಕುಳ ನೀಡಿದರೆ, ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರ ಸಂಘಟನೆಗಳು, ಮುಖಂಡರು, ಚಿಂತಕರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಿರಂತರ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ. ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಸಂಘರ್ಷ ಪರಿಸ್ಥಿತಿಯನ್ನು ಹತೋಟಿಗೆ ತರುವ ಬದಲು ರಾಷ್ಟ್ರವಿದ್ರೋಹಿ ಮತೀಯ ಶಕ್ತಿಗಳನ್ನು ಓಲೈಸುವ ಸಲುವಾಗಿ ಸದ್ಯ ಕೋಮು ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.
ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವುದು ಪೊಲೀಸ್ ಇಲಾಖೆಯಿಂದ ಸೋರಿಕೆಯಾಗಿರುವ ದಾಖಲೆ ಹಾಗೂ ಆಡಿಯೋ ರೆಕಾರ್ಡ್ ಗಳಿಂದ ಸ್ಪಷ್ಟವಾಗುತ್ತಿದೆ. ಸೂಲಿಬೆಲೆ ಅವರಂತಹ ಚಿಂತಕರನ್ನೇ ಈ ಪರಿಯಾಗಿ ಗುರಿಯಾಗಿಸಿಕೊಂಡಿರುವಾಗ ಸಾಮಾನ್ಯ ಹಿಂದೂ ಪರ ಕಾರ್ಯಕರ್ತರನ್ನು ಯಾವ ಪರಿಯಲ್ಲಿ ಪೊಲೀಸ್ ಇಲಾಖೆ ಕಿರುಕುಳ ನೀಡಲು ಸಜ್ಜಾಗಿದೆ ಎನ್ನುವುದು ಸದ್ಯ ಸೋರಿಕೆಯಾಗಿರುವ ಆಡಿಯೋ ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರ ಹೇಳಿದ್ದಾರೆ.