ಕರ್ನಾಟಕ ಸರ್ಕಾರವು ‘ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು (2026)’ ಎಂಬ ಕರಡು ನೀತಿಯನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ. ಈ ನೀತಿಯು ಜನಕೇಂದ್ರಿತವಾಗಿದ್ದು, ಮದ್ಯಪಾನದಿಂದ ಉಂಟಾಗುವ ನೈಜ ಸಾಮಾಜಿಕ ಪರಿಣಾಮಗಳನ್ನು ದರ ನಿಗದಿಯ ಮಾನದಂಡವಾಗಿ ಆಧರಿಸಿದೆ. ರಾಜ್ಯವು ಮದ್ಯದಿಂದ ವಾರ್ಷಿಕವಾಗಿ ₹34,600 ಕೋಟಿ ಆದಾಯ ಗಳಿಸುತ್ತಿದ್ದರೂ, ರಸ್ತೆ ಅಪಘಾತ, ಕೌಟುಂಬಿಕ ಹಿಂಸಾಚಾರ ಮತ್ತು ಆರೋಗ್ಯ ಸಮಸ್ಯೆಗಳಂತಹ ಸಾಮಾಜಿಕ ಹಾನಿಯಿಂದ ಉಂಟಾಗುವ ಒಟ್ಟಾರೆ ನಷ್ಟ ₹51,000 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಸುಧಾರಣಾ ನೀತಿಯು ಮದ್ಯದಲ್ಲಿರುವ ಶುದ್ಧ ಆಲ್ಕೋಹಾಲ್ ಅಂಶ ಮತ್ತು ವ್ಯಾಟ್ (VAT) ಒಳಗೊಂಡ ತೆರಿಗೆ ವ್ಯವಸ್ಥೆಯನ್ನು ಪ್ರಸ್ತಾವಿಸಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕ್ಯೂಆರ್ (QR) ಆಧಾರಿತ ಪೂರೈಕೆ ಮತ್ತು ಡಿಜಿಟಲ್ ‘ಟ್ರ್ಯಾಕ್ ಆ್ಯಂಡ್ ಟ್ರೇಸ್’ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಜೊತೆಗೆ, ಚಿಲ್ಲರೆ ವ್ಯಾಪಾರವನ್ನು ಕೋಟಾ ಆಧಾರಿತ ವ್ಯವಸ್ಥೆಯಿಂದ ನೋಂದಣಿ ಆಧಾರಿತ ವ್ಯವಸ್ಥೆಗೆ ಬದಲಾಯಿಸುವುದು ಹಾಗೂ ಶಾಲೆ ಮತ್ತು ಆಸ್ಪತ್ರೆಗಳ ಸಮೀಪ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರುವ ಕ್ರಮಗಳು ಇದರಲ್ಲಿವೆ.
ಅಬಕಾರಿ ಆದಾಯದ ಒಂದು ಭಾಗವನ್ನು ಮದ್ಯವರ್ಜನ ಸೇವೆಗಳು, ರಸ್ತೆ ಸುರಕ್ಷತೆ ಮತ್ತು ಕೌಟುಂಬಿಕ ಹಿಂಸಾಚಾರ ತಡೆಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಮುಂದಿನ 6 ವರ್ಷಗಳಲ್ಲಿ ಮದ್ಯ ಸೇವನೆಯ ಪ್ರಮಾಣವನ್ನು ಶೇ. 8-9 ಕ್ಕೆ ಇಳಿಸುವುದು ಈ ನೀತಿಯ ಪ್ರಮುಖ ಗುರಿಯಾಗಿದೆ. ಕಡಿಮೆ ಆಲ್ಕೋಹಾಲ್ ಇರುವ ಮದ್ಯಕ್ಕೆ ಉತ್ತೇಜನ ನೀಡುವುದು ಮತ್ತು ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕುವುದು ಸಹ ಈ ಯೋಜನೆಯ ಭಾಗವಾಗಿದೆ.
ಕರ್ನಾಟಕ ಸರ್ಕಾರವು ನೀತಿಯ ಅನುಷ್ಠಾನಕ್ಕೂ ಮುನ್ನ ಸಮಾಲೋಚನೆಗೆ ಮಹತ್ವ ನೀಡಿದ್ದು, ಸಾರ್ವಜನಿಕರಿಂದ, ವ್ಯಾಪಾರಿಗಳಿಂದ, ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅಧಿಕೃತ ಸಮಾಲೋಚನಾ ಪೋರ್ಟಲ್ (http://www.civis.vote/consultations/1524/read)ಗೆ ಭೇಟಿ ನೀಡಿ ಅಥವಾ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಂಪರ್ಕಿಸಿ. ಚಾಟ್‌ಬಾಟ್‌ಗಾಗಿ “karnatakaexcise” ಎಂಬ ಕೀವರ್ಡ್‌ಅನ್ನು https://wa.link/uv7q49 ಲಿಂಕ್‌ಗೆ ಕಳುಹಿಸಿ.
