ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದ್ದು, 14 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಪ್ರಕಾರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಎಡಿಜಿಪಿ) ಹರಿಶೇಖರನ್ ಪಿ. ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿ ಹಾಗೂ ಎಂ. ನಂಜುಂಡಸ್ವಾಮಿ ಅವರನ್ನು ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ದೇವಜ್ಯೋತಿ ರೇ ಅವರನ್ನು ಬೆಂಗಳೂರಿನ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿಯಾಗಿ ನಿಯೋಜಿಸಲಾಗಿದೆ. ಮಂಗಳೂರು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತರಾಗಿದ್ದ ಬೋರಸೆ ಭೂಷಣ್ ಗುಲಾಬ್‌ರಾವ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದ್ದು, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಆರ್. ಚೇತನ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಡಿಐಜಿಯನ್ನಾಗಿ ಹಾಗೂ ನಿಕಂ ಪ್ರಕಾಶ್ ಅಮೃತ್ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ಇನ್ನುಳಿದಂತೆ, ಶಿವಪ್ರಕಾಶ್ ದೇವರಾಜು ಅವರಿಗೆ ಆ್ಯಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್‌ನ ಎಸ್‌ಪಿ ಹೊಣೆ ನೀಡಲಾಗಿದ್ದು, ಪದ್ಮಿನಿ ಸಾಹು ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ), ಆರ್. ಶ್ರೀನಿವಾಸ್ ಗೌಡ ಅವರನ್ನು ಬೆಂಗಳೂರು ಸಿಸಿಬಿ-1 ಡಿಸಿಪಿಯಾಗಿ, ಡಾ. ಶಿವಕುಮಾರ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್‌ಪಿಯಾಗಿ ಹಾಗೂ ಕುಶಾಲ್ ಚೌಕ್ಸೆ ಅವರನ್ನು ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಯನ್ನಾಗಿ ನೇಮಕ ಮಾಡಲಾಗಿದೆ.
ಸಾಹಿಲ್ ಬಾಗ್ಲಾ ಅವರನ್ನು ಕೊಪ್ಪಳ ಎಸ್‌ಪಿಯಾಗಿ, ರೋಹನ್ ಜಗದೀಶ್ ಅವರನ್ನು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಎಸ್‌ಪಿಯಾಗಿ ಮತ್ತು ಮಿಥುನ್ ಎಚ್.ಎನ್. ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ವರ್ಗಾಯಿಸಿ ಆದೇಶಿಸಲಾಗಿದೆ.
