ಹೊಸದೆಹಲಿ: ಸಂವಿಧಾನದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ನೀಡಿರುವ ಮೀಸಲಾತಿಯು ಕೇವಲ ಅವಕಾಶಗಳನ್ನು ಒದಗಿಸುವ ಸೌಲಭ್ಯವಲ್ಲ; ಬದಲಿಗೆ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧದ ಸಾಮಾಜಿಕ ನ್ಯಾಯದ ರಕ್ಷಾ ಕವಚವಾಗಿದೆ ಎಂದು ಕೇಂದ್ರ ಸಚಿವ ಹಾಗೂ ಎಲ್‌ಜೆಪಿ (ಆರ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಪ್ರತಿಪಾದಿಸಿದ್ದಾರೆ.
ಈ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಅವರು, ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ‘ಕೆನೆಪದರ’ (Creamy Layer) ಅಥವಾ ಒಳವರ್ಗೀಕರಣದ (Sub-classification) ಬೇಡಿಕೆಯು ಸಾಮಾಜಿಕ ನ್ಯಾಯದ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವ್ಯವಸ್ಥೆಯನ್ನು ಬೆಂಬಲಿಸುವವರು ಮೊದಲು ತಾವೇ ಸ್ವತಃ ಮೀಸಲಾತಿಯ ಸೌಲಭ್ಯವನ್ನು ತ್ಯಜಿಸುವ ಮೂಲಕ ನೈತಿಕ ಮಾದರಿಯನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಸಮಾಜದಲ್ಲಿ ತಾರತಮ್ಯ ಮತ್ತು ಅಸಮಾನತೆ ಇರುವವರೆಗೂ ವಂಚಿತ ಹಾಗೂ ಶೋಷಿತ ವರ್ಗಗಳ ಹಕ್ಕು, ಗೌರವ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ನಮ್ಮ ಹೋರಾಟವು ಸಂಪೂರ್ಣ ಬದ್ಧತೆಯಿಂದ ಮುಂದುವರಿಯಲಿದೆ ಎಂದು ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
