ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ 15 ಜನರ ವಿರುದ್ಧದ ತನಿಖೆ ಮತ್ತು ಕಾನೂನು ಕ್ರಮಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.
ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
71ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನಿರ್ದೇಶನದಂತೆ ಸೋಮವಾರ ಬೆಂಗಳೂರು ಪೊಲೀಸರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಗೋಪಾಲಕೃಷ್ಣನ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಇತರ 17 ಅಧ್ಯಾಪಕರು ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಡಿ ಸಣ್ಣ ದುರ್ಗಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳು ತನ್ನನ ಜಾತಿ ನಿಂದನೆ ಮಾಡಿದ್ದಾರೆ ಮತ್ತು ಲೈಂಗಿಕ ಕಿರುಕುಳದ ಸುಳ್ಳು ಹೇಳಿಕೆಗಳ ಆಧಾರದ ಮೇಲೆ 2014 ರಲ್ಲಿ ಇನ್ಸ್ಟಿಟ್ಯೂಟ್‌ನ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜಿಯ ಸ್ಥಾನದಿಂದ ತಪ್ಪಾಗಿ ವಜಾ ಮಾಡಿದ್ದಾರೆ ಎಂದು ದುರ್ಗಪ್ಪ ಆರೋಪಿಸಿದ್ದಾರೆ.
ರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿರುವ ಬೋವಿ ಸಮುದಾಯಕ್ಕೆ ಸೇರಿದ ದುರ್ಗಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡ ಯೋಜನೆಯಡಿ ಪ್ರತ್ಯೇಕ ಪ್ರಯೋಗಾಲಯ ಹಾಗೂ ಕುಳಿತುಕೊಳ್ಳುವ ಪ್ರದೇಶಕ್ಕೆ ಅನುದಾನ ಕೋರಿದ ನಂತರ ತಮ್ಮ ಮೇಲೆ ತಾರತಮ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಡೈರೆಕ್ಟರ್ ಬಲರಾಮ್ ಪಿ, ಇನ್‌ಸ್ಟಿಟ್ಯೂಟ್‌ನ ಆಡಳಿತ ಮಂಡಳಿಯ ಇತರ ಸದಸ್ಯರೊಂದಿಗೆ ಸೇರಿಕೊಂಡು, ತಮ್ಮನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಲು “ಹನಿ ಟ್ರ್ಯಾಪ್” ಮಾಡಲು ಯತ್ನಿಸಿದ್ದಾರೆ ಎಂದು ದುರ್ಗಪ್ಪ ಆರೋಪಿಸಿದ್ದಾರೆ.
ಕರ್ನಾಟಕ ಅಸೆಂಬ್ಲಿ ಸಮಿತಿಯು 2017 ರಲ್ಲಿ ನಡೆಸಿದ ತನಿಖೆಯಲ್ಲಿ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಮತ್ತು ಅವರ ದಲಿತ ಗುರುತಿನಿಂದ ಅವರನ್ನು ಆರೋಪಕ್ಕೆ ಗುರಿಯಾಗಿಸಲಾಗಿದೆ ಎಂದು ತೀರ್ಮಾನಿಸಿದರು ಎಂದು ದುರ್ಗಪ್ಪ ಹೇಳಿದರು. ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಸಂಸ್ಥೆಯು ಅವರನ್ನು ಮತ್ತೆ ಹುದ್ದೆಗೆ ಮರುನೇಮಕ ಮಾಡಲು ಒಪ್ಪಿಕೊಂಡಿದ್ದರೂ, ಅದನ್ನು ಮಾಡಲು ವಿಫಲವಾಗಿದೆ. ಇವರು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಿರುದ್ಯೋಗಿಯಾಗಿದ್ದರು.
‘ನ್ಯಾಯವೇ ಮೇಲುಗೈ ಸಾಧಿಸುತ್ತದೆ’: ಗೋಪಾಲಕೃಷ್ಣನ್
ಗೋಪಾಲಕೃಷ್ಣನ್ ಅವರು ಗುರುವಾರ, ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಹೊಂದಿರುವುದಾಗಿ ಮತ್ತು “ನ್ಯಾಯವೇ ಮೇಲುಗೈ ಸಾಧಿಸುತ್ತದೆ ಎಂದು ನಂಬುತ್ತೇನೆ” ಎಂದು ಹೇಳಿಕೆ ನೀಡಿದ್ದನ್ನು ಎನ್‌ಡಿಟಿವಿ ವರದಿ ಮಾಡಿದೆ. “ಈ ವಿಷಯವು ನ್ಯಾಯಾಲಯದ ಮುಂದಿರುವ ಕಾರಣ, ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಅವರು ಹೇಳಿದ್ದರು.
ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಅಂಚಿನಲ್ಲಿರುವ ಸಮುದಾಯಗಳನ್ನು ರಕ್ಷಿಸಲು ಇರುವ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಗೋಪಾಲಕೃಷ್ಣನ್ ಹೇಳಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.
“ನಾನು ಯಾವಾಗಲೂ ಸಮಾನತೆ, ನ್ಯಾಯಯ ಪರ ಮತ್ತು ಯಾರೊಬ್ಬರ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನು ಗೌರವದಿಂದ ನಡೆಸಿಕೊಳ್ಳುವುದರಲ್ಲಿ ನಂಬಿದ್ದೇನೆ,” ಎಂದು ಅವರು ಹೇಳಿದ್ದಾರೆ.
ಗೋಪಾಲಕೃಷ್ಣನ್ ಅವರು ತಾವು 2022 ರಿಂದ ಕೌನ್ಸಿಲ್‌ನ ಅಧ್ಯಕ್ಷರಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನೊಂದಿಗೆ ಸಂಬಂಧ ಹೊಂದಿದ್ದಾಗಿ, ತಮ್ಮ ಮೇಲಿನ ಆರೋಪಗಳು 2014 ರ ಹಿಂದಿನದು ಎಂದು ಹೇಳಿದ್ದಾರೆ.