ಪೋಕ್ಸೊ ಪ್ರಕರಣ: ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪೋಕ್ಸೊ ಪ್ರಕರಣದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, “ವಿಚಾರಣಾ ನ್ಯಾಯಾಲಯವು ಮುಂಗಡ ಜಾಮೀನು ಮಂಜೂರು ಮಾಡುವಾಗ ಸಂತ್ರಸ್ತನಿಗೆ ಕಡ್ಡಾಯವಾಗಿ ನೀಡಬೇಕಿದ್ದ ನೋಟಿಸ್ ನೀಡುವಲ್ಲಿ ವಿಫಲವಾಗಿದೆ. ಪೋಕ್ಸೊ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಜಾಮೀನು ಪ್ರಕ್ರಿಯೆಯಲ್ಲಿ ಸಂತ್ರಸ್ತರಿಗೆ ನೋಟಿಸ್ ನೀಡುವುದು ಕಾನೂನುಬದ್ಧವಾಗಿ ಅತ್ಯಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದ ನಿರೀಕ್ಷಣಾ ಜಾಮೀನು ಆದೇಶವನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ,” ಎಂದು ಆದೇಶಿಸಿದೆ. ಆದಾಗ್ಯೂ, ಸ್ವಾಮಿಗೆ ಕಾನೂನುಬದ್ಧವಾಗಿ ನಿಯಮಿತ ಜಾಮೀನು ಪಡೆಯಲು ಅನುಕೂಲವಾಗುವಂತೆ ಹೈಕೋರ್ಟ್ ಮುಂಗಡ ಜಾಮೀನಿನ ರಕ್ಷಣೆಯನ್ನು ಮುಂದಿನ ಮೂರು ವಾರಗಳವರೆಗೆ ವಿಸ್ತರಿಸಿದೆ.

ವಚನಾನಂದ ಸ್ವಾಮಿ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 4, 6, 8, 10 ಮತ್ತು 12 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ವಾಮೀಜಿಯವರಿಗೆ ಮೇ 2 ರಂದು ವಿಶೇಷ ನ್ಯಾಯಾಲಯವು ಮುಂಗಡ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಸೂಕ್ತ ವಸ್ತುಸ್ಥಿತಿಗಳನ್ನು ಸರಿಯಾಗಿ ಪರಿಶೀಲಿಸದೆಯೇ ಆರೋಪಿಗೆ ‘ಸಂಪೂರ್ಣ ಜಾಮೀನು’ ನೀಡಲಾಗಿದೆ ಎಂದು ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಉಚಿತ ವಸತಿ ನಿಲಯದಲ್ಲಿ ತಂಗಿದ್ದ ಅಪ್ರಾಪ್ತ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

Related Articles

ಇತ್ತೀಚಿನ ಸುದ್ದಿಗಳು