Home ಬೆಂಗಳೂರು ನಾನೇನು ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ: ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ...

ನಾನೇನು ತಪ್ಪು ಮಾಡಿಲ್ಲ, ಪಕ್ಷಕ್ಕಾಗಿ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ: ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಬಿ. ನಾಗೇಂದ್ರ

0

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ, ಯೋಜನಾ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ತಮ್ಮ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾವುಕರಾಗಿ ಕಣ್ಣೀರಿಡುತ್ತಾ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ನಾಗೇಂದ್ರ, “ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ನಾನಾಗಲಿ ಅಥವಾ ನನ್ನ ಇಲಾಖೆಯಾಗಲಿ ಯಾವುದೇ ಹಣಕಾಸಿನ ಅವ್ಯವಹಾರ ನಡೆಸಿಲ್ಲ. ನಾನು ಎಲ್ಲಿಯಾದರೂ ಒಂದು ಸಹಿ ಮಾಡಿದ್ದೇನಾ? ಒಂದು ಆದೇಶ ಕೊಟ್ಟಿದ್ದೇನಾ? ನನ್ನಿಂದ ಒಂದು ರೂಪಾಯಿಯಾದರೂ ಬಂದಿದೆಯಾ? ಅಥವಾ ನನ್ನ ನೋಟ್ ಶೀಟ್ ಇದೆಯಾ? ಬ್ಯಾಂಕ್‌ನಲ್ಲಿ ಆದ ಅಕ್ರಮಕ್ಕೆ ನನ್ನನ್ನು ಗುರಿ ಮಾಡಲಾಗುತ್ತಿದೆ. ಹಾಗಾದರೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬರುವುದು ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ, ಅದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕಲ್ಲವೇ? ನಾನು ದಲಿತ, ಆದಿವಾಸಿ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ?” ಎಂದು ಆಕ್ರೋಶ ಹೊರಹಾಕಿದರು.

“ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ವಿಪಕ್ಷಗಳ ಸುಳ್ಳು ಆರೋಪಗಳಿಂದಾಗಿ ನನ್ನ ಪಕ್ಷಕ್ಕೆ, ಮುಖ್ಯಮಂತ್ರಿಗಳಿಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ನಾಯಕರಿಗೆ ಯಾವುದೇ ಮುಜುಗರ ಆಗಬಾರದು ಎಂಬ ಒಂದೇ ಕಾರಣಕ್ಕೆ ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಕಣ್ಣೀರು ಹಾಕಿದರು.

You cannot copy content of this page

Exit mobile version