Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಸಂಸ್ಕೃತಿಯನ್ನು ಕಟ್ಟಿದವರು ಬೌದ್ಧರೇ ಹೊರತು ವೈದಿಕರಲ್ಲ: ಪುರುಷೋತ್ತಮ ಬಿಳಿಮಲೆ

ಮಂಗಳೂರು : ದೇಸೀ ಭಾಷೆಯ  ನಾಶ, ದೇಸೀ  ಸಂಸ್ಕೃತಿಯ ನಾಶ ಕ್ಕೆ ಮುಖ್ಯವಾಹಿನಿಗಳು ಅಪಾರ ಕೊಡುಗೆ ನೀಡುತ್ತಿರುವಾಗ ಪರ್ಯಾಯ ಮಾಧ್ಯಮಗಳ ಪ್ರಯತ್ನ ಶ್ಲಾಘನೀಯ . ಇವುಗಳೆಡೆಗೆ ಹೆಚ್ಚು ಗಮನಕೊಡಬೇಕಾಗದೆ ಎಂದು  ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ  ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ  ಹೇಳಿದರು.

ಜನಶಕ್ತಿ ವಾರಪತ್ರಿಕೆ ಪ್ರಕಾಶಕ ಮಂಡಳಿಯು ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ  ಆಯೋಜಿಸಿದ ಜನಶಕ್ತಿ ಉತ್ಸವದಲ್ಲಿ ಅವರು ಮಾತಾಡುತ್ತಿದ್ದರು.

ವಸಾಹತು ಕಾಲಘಟ್ಟದಲ್ಲಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡುವಲ್ಲಿ ಆ ಕಾಲದ  ಸ್ಥಳೀಯ ಪತ್ರಿಕೆಗಳು ನಿರ್ಣಾಯಕ ಕೆಲಸ ಮಾಡಿದವು. ಪ್ರಾದೇಶಿಕತೆಯನ್ನು ಬಿಟ್ಟುಕೊಡದೆ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು ಅವು ಶ್ರಮಿಸಿದವು. 1990ರ ಬಳಿಕ ಬಂಡವಾಳವಾದ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿತು. ಅದರ ಬಳಿಕ   ಜನ ಭಾಷೆಯಲ್ಲಿ ಮಾತಾಡಬೇಕಾದ ಮಾಧ್ಯಮಗಳು ಪ್ರಭುತ್ವಕ್ಕೆ ಅಡಿಯಾಳಾಗಿ  ಮಾತಾಡ ತೊಡಗದವು. ಅವುಗಳು ಪ್ರಭುತ್ವಕ್ಕೆ ಎಷ್ಟು ತಲೆಬಾಗಿವೆ ಎಂದರೆ ಜನರು ಮುಖ್ಯವಾಹಿನಿಯನ್ನು  ನಂಬಲಾರದ ಸ್ಥಿತಿಯನ್ನು ತಲಪಿದ್ದಾರೆ.  ಈ ಹಿನ್ನೆಲೆಯಲ್ಲಿ ಪರ್ಯಾಯ ಮಾಧ್ಯಮಗಳನ್ನು ಹೆಚ್ಚು ಹೆಚ್ಚು ರೂಪಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅವರು ಮುಂದುವರೆದು ಕರ್ನಾಟಕ ಸೌಹಾರ್ದ ಸಂಸ್ಕೃತಿಯ ಬಗ್ಗೆ ಮಾತಾಡುತ್ತಾ ಕರ್ನಾಟಕ ಸಂಸ್ಕೃತಿಯನ್ನು ರೂಪಿಸಿದ್ದು ಬೌದ್ಧ ಧರ್ಮವೇ ಹೊರತು ವೈದಿಕ ಧರ್ಮವಲ್ಲ. ರನ್ನ ಜನ್ನ ಪೊನ್ನ, ರತ್ನಾಕರ ವರ್ಣಿಯಂತಹ ಕವಿಗಳನ್ನು  ಕೊಟ್ಟು ಕನ್ನಡ ಸಂವೇದನೆಯನ್ನು ನವಿರಾಗಿ ರೂಪಿಸಿದವರು ಜೈನರು.  ಕ್ರಿಸ್ತ  ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಕನ್ನಡ ಸಂಸ್ಕೃತಿಯೊಂದಿಗೆ ಸೇರಿಹೋಗಿದ್ದಾರೆ. ಹೀಗೆ ಯಾರನ್ನೂ ತಿರಸ್ಕರಿಸದೆ ತನ್ನತೆಕ್ಕೆಗೆ ತೆಗೆದುಕೊಂಡ ಕರ್ನಾಟಕವು ಎಲ್ಲ ಧರ್ಮಗಳನ್ನು ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು ಎಂದರು.

ಮಂಗಳೂರು ಕರಾವಳಿಗೆ ವಿಶೇಷ ಸಂಸ್ಕತಿ ಇದೆ ಎಂಬುದನ್ನು ಉದಾಹರಣೆಯ ಮೂಲಕ ಉಲ್ಲೇಖಿಸಿದರು. ತುಳುನಾಡಿನ ಮಲ್ಪೆಯಲ್ಲಿ ತಯಾರಾಗುತ್ತಿದ್ದ ತೆಂಗಿನ ಹುರಿಹಗ್ಗವು ಉತ್ಕೃಷ್ಟ ಮಟ್ಟದ್ದಾಗಿದ್ದು ಹಡಗು ಕಟ್ಟಲು ಮತ್ತು ದೋಣಿಗಳನ್ನು ದಡಕ್ಕೇರಿಸಲು ಉಪಯುಕ್ತವಾಗಿತ್ತು. ತುಳುವರು ಕಡಲಿನ ಮೂಲಕ ಕೇರಳ, ತಮಿಳುನಾಡು,ಶ್ರೀಲಂಕಾ, ಮಲೇಷಿಯಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಬಂಧ ಸಾಧಿಸಿದ್ದರು. ವಿಜಯನಗರ ಕಾಲದವರೆಗೂ ಬಾರ್ಕೂರು ಪೂರ್ವದ ಮತ್ತು ಪಶ್ಚಿಮದ ದೇಶಗಳನ್ನು ಬೆಸೆಯುವ ಅತಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು.  ಮಲ್ಪೆಯ ಹುಡುಗಿಯೊಬ್ಬಳನ್ನು ಗ್ರೀಕಿನ ರಾಜಕುಮಾರ ಮದುವೆಯಾದದ್ದರ ಬಗ್ಗೆ ಗೋವಿಂದ ಪೈಗಳು ಬಹಳ ಹಿಂದೆಯೇ ಬರೆದಿದ್ದರು. ಕಡಲಿನ ಮೂಲಕ‌ ತುಳುನಾಡಿಗೆ ಆಗಮಿಸಿದ ವಿವಿಧ ವ್ಯಾಪಾರಿಗಳು ಈ ಪ್ರದೇಶವನ್ನು ಬಹುಭಾಷಿಕವಾಗಿಯೂ ಬಹು ಸಂಸ್ಕೃತಿಯ  ನೆಲೆವೀಡಾಗಿಯೂ ಮಾಡಿದರು.  ಇಂತಹ ಬಹು ಸಾಂಸ್ಕೃತಿಕ ನೆಲೆಗಳನ್ನು ನಾಶಪಡಿಸಿ ಆರ್ ಎಸ್ ಎಸ್ ಕಟ್ಟಿಕೊಡುತ್ತಿರುವ ನಿರೂಪಣೆಗಳ ಪೊಳ್ಳುತನವನ್ನು ಬಯಲಿಗೆಳೆಯುವ ಕೆಲಸ ಇವತ್ತಿನ ಬಹುದೊಡ್ಡ ಜವಾಬ್ದಾರಿ  ಎಂದು ಹೇಳಿದರು.

ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವ ಹುನ್ನಾರವನ್ನು ಬಯಲಿಗೆಳೆದು ಮುಂಬರುವ ಜನಗಣತಿಯಲ್ಲಿ ಅವರವರ ಮಾತೃಭಾಷೆಯನ್ನೇ ನಮೂದಿಸಬೇಕೆಂದು ಮನವಿ ಮಾಡಿದರು. ಕೇರಳದ ಸಂಸದ ಜಾನ್ ಬ್ರಿಟ್ಟಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಜನಶಕ್ತಿ ಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆ ಮಾಡಿದರು.  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚಂದ್ರ ಪೂಜಾರಿ ಹಾಗೂ ಲೇಖಕಿ ಬಿ ಎಂ ರೋಹಿಣಿಯವರು  ತಮ್ಮವಿಚಾರಗಳನ್ನು ಮಂಡಿಸಿದರು. ಕೆ. ಯಾದವ ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು. ಡಾ ವಸಂತ ಕುಮಾರ್ ಸ್ವಾಗತಿಸಿ ಗುರುಶಾಂತ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಸುನಿಲ್ ಕುಮಾರ್ ಬಜಾಲ್ ನಿರ್ವಹಣೆ ಮಾಡಿದರು. ಮನೋಜ್ ವಾಮಂಜೂರು ವಂದಿಸಿದರು.

Related Articles

ಇತ್ತೀಚಿನ ಸುದ್ದಿಗಳು