Home ಬೆಂಗಳೂರು ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 5.25%, ಇತರ ಸಮುದಾಯಗಳಿಗೆ 4.5% ಒಳ ಮೀಸಲಾತಿ ಜಾರಿಗೆ...

ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 5.25%, ಇತರ ಸಮುದಾಯಗಳಿಗೆ 4.5% ಒಳ ಮೀಸಲಾತಿ ಜಾರಿಗೆ ತೀರ್ಮಾನಿಸಿದ ಸರ್ಕಾರ

0

ಬೆಂಗಳೂರು: ರಾಜ್ಯದ ಎಸ್‌ಸಿ (SC) ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ‘ಒಳ ಮೀಸಲಾತಿ’ಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಎಸ್‌ಸಿ ಮೀಸಲಾತಿಯನ್ನು ವರ್ಗೀಕರಿಸಿ ಹಂಚಿಕೆ ಮಾಡಲು ಅಂತಿಮ ಒಪ್ಪಿಗೆ ಸೂಚಿಸಲಾಗಿದೆ. ಈ ನಿರ್ಧಾರವು ರಾಜ್ಯದ 101 ಸಮುದಾಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸಚಿವ ಸಂಪುಟದ ತೀರ್ಮಾನದ ಕುರಿತು ಮಾಹಿತಿ ನೀಡಿದ ಸಚಿವರು, ಈ ಹಿಂದೆ ಇದ್ದ ಮೀಸಲಾತಿಯ ಪ್ರಮಾಣವನ್ನು ಆಧರಿಸಿ, ಇದೀಗ 5.25%, 5.25% ಮತ್ತು 4.5% ರಂತೆ ಪ್ರೊಪೋರ್ಷನೇಟ್ ಆಧಾರದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು. ವಿಶೇಷವಾಗಿ ‘ಸಿ’ ಗ್ರೂಪ್ ನೇಮಕಾತಿಯಲ್ಲಿ ರೋಸ್ಟರ್ ವ್ಯವಸ್ಥೆಯಿಂದ ಉಂಟಾಗುತ್ತಿದ್ದ ಆತಂಕವನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಎ, ಬಿ ಮತ್ತು ಸಿ ಗ್ರೂಪ್‌ಗಳಲ್ಲೂ ಯಾರಿಗೂ ಅನ್ಯಾಯವಾಗದಂತೆ ಅವಕಾಶ ಕಲ್ಪಿಸುವುದು ಈ ತೀರ್ಮಾನದ ಪ್ರಮುಖ ಉದ್ದೇಶವಾಗಿದೆ. ಇದರಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ. 5ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದ್ದು, ಒಂದು ವೇಳೆ ಅರ್ಹ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಅದನ್ನು ಸಿ ಕೆಟಗರಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಈ ತೀರ್ಮಾನವು ಕಾನೂನಾತ್ಮಕ ಹಾಗೂ ಆಡಳಿತಾತ್ಮಕವಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ಜಾರಿಗೆ ಬರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯನ್ನು ಸರ್ಕಾರ ಹಂತ ಹಂತವಾಗಿ ಈಡೇರಿಸುತ್ತಿದ್ದು, ಕರ್ನಾಟಕದ ಈ ಒಳ ಮೀಸಲಾತಿ ಮಾದರಿಯು ದೇಶದ ಉಳಿದ ರಾಜ್ಯಗಳಿಗೂ ಮಾದರಿಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಸಮಾಜದ ಎಲ್ಲಾ ವರ್ಗದವರ ಮನವೊಲಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲಾ ಸದಸ್ಯರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.

ಸರ್ಕಾರದ ಈ ನಿರ್ಧಾರದೊಂದಿಗೆ ಬಾಕಿ ಉಳಿದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದ್ದು, ನಾಳೆಯಿಂದಲೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲು ಸರ್ಕಾರ ಸಜ್ಜಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿಯ ಸಂಕೀರ್ಣ ಸಮಸ್ಯೆಯನ್ನು ಕಾನೂನು ಮತ್ತು ಆಡಳಿತಾತ್ಮಕವಾಗಿ ಸಮರ್ಥವಾಗಿ ಪರಿಹರಿಸಿರುವುದು ಸರ್ಕಾರದ ಬಹುದೊಡ್ಡ ಸಾಧನೆ ಎಂದು ಸಚಿವರು ಬಣ್ಣಿಸಿದರು. ಈ ಮೂಲಕ 101 ಸಮುದಾಯಗಳ ಪಾಲಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ಮೀಸಲಾತಿಯ ಸಮಾನ ಹಂಚಿಕೆಗೆ ದಾರಿ ಸುಗಮವಾಗಿದೆ.

You cannot copy content of this page

Exit mobile version