Home ರಾಜಕೀಯ ಒಳ ಮೀಸಲಾತಿಗೆ ಮುದ್ರೆ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿಗೆ ಮುದ್ರೆ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್

0

ಬೆಂಗಳೂರು, ಏಪ್ರಿಲ್ 24: ರಾಜ್ಯದಲ್ಲಿ ಒಳ ಮೀಸಲಾತಿ ಹಂಚಿಕೆ ಕುರಿತು ಬಹುಕಾಲದಿಂದ ನಿರೀಕ್ಷಿತ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಇಂದು ಮುದ್ರೆಯೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಅನುಸೂಚಿತ ಜಾತಿಗಳ ಒಳ ಮೀಸಲಾತಿಯನ್ನು ಎಡಗೈ ಸಮುದಾಯಕ್ಕೆ 5.25%, ಬಲಗೈ ಸಮುದಾಯಕ್ಕೆ 5.25% ಹಾಗೂ ಇತರೆ ಸಮುದಾಯಗಳಿಗೆ 4.5% ಆಗಿ ಹಂಚಿಕೆ ಮಾಡುವುದಾಗಿ ಘೋಷಿಸಿದರು. ಈ ಮೂಲಕ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಒಳ ಮೀಸಲಾತಿ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಮರುಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಒಳ ಮೀಸಲಾತಿ ಕುರಿತ ಅಂತಿಮ ನಿರ್ಧಾರ ವಿಳಂಬವಾಗಿದ್ದ ಕಾರಣ ನೇಮಕಾತಿ ಪ್ರಕ್ರಿಯೆ ತಡೆಗೊಳ್ಳಲಾಗಿತ್ತು. ಇದೀಗ ನಿರ್ಧಾರ ಸ್ಪಷ್ಟವಾದ ಹಿನ್ನೆಲೆಯಲ್ಲಿ ನೇಮಕಾತಿಗೆ ದಾರಿ ಸುಗಮವಾಗಿದೆ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ರಾಜ್ಯಗಳಿಗೆ ಒಳ ಮೀಸಲಾತಿ ಜಾರಿಗೆ ಅಧಿಕಾರವಿದೆ ಎಂಬುದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗದ ವರದಿ ಹಾಗೂ ತಾಂತ್ರಿಕ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಮೊದಲು ಆಯೋಗವು ಎ, ಬಿ, ಸಿ, ಡಿ ವರ್ಗೀಕರಣದಡಿ ಮೀಸಲಾತಿ ಶಿಫಾರಸು ಮಾಡಿದ್ದರೂ, ರೋಸ್ಟರ್ ಪಾಯಿಂಟ್ ಸಮಸ್ಯೆ ಮತ್ತು ನ್ಯಾಯಾಲಯದ ವಿಚಾರಣೆಗಳ ಹಿನ್ನೆಲೆಯಲ್ಲಿ ಅನುಷ್ಠಾನ ವಿಳಂಬವಾಗಿತ್ತು. ವಿವಿಧ ಸಮುದಾಯಗಳಿಂದ ಬಂದ ವಿರೋಧ ಹಾಗೂ ಪ್ರತಿಭಟನೆಗಳನ್ನೂ ಸರ್ಕಾರ ಪರಿಗಣಿಸಿದೆ ಎಂದು ಅವರು ಹೇಳಿದರು.

ಇಂದು ಕೈಗೊಳ್ಳಲಾದ ನಿರ್ಧಾರದಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜನಸಂಖ್ಯೆ ಆಧಾರಿತ ಮೀಸಲಾತಿ ಹಂಚಿಕೆಗಾಗಿ ಆಗಿದ್ದ ಬೇಡಿಕೆಗೂ ಇದು ಸ್ಪಂದನೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೋರ್ಟ್‌ನ ಮುಂದಿನ ಆದೇಶದವರೆಗೆ ಹೊಸ ಒಳ ಮೀಸಲಾತಿ ವ್ಯವಸ್ಥೆಯಂತೆ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

You cannot copy content of this page

Exit mobile version