Home ರಾಜಕೀಯ ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು :  ಕರ್ನಾಟಕ ರಫ್ತು ಮಾಡುವುದರಲ್ಲಿ ಮೊದಲಿನಿಂದಲೂ ಮುಂಚೂಣಿ ಯಲ್ಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಒಂದು ಮತ್ತು 2 ನೇ ಸ್ಥಾನದಲ್ಲಿವೆ. ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ  ತಿಳಿಸಿದರು.

ಅವರು ಇಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕೈಗಾರಿಕೆಗಳ ಅಭಿವೃದ್ಧಿ ಯಾಗಬೇಕೆಂದು ಕೌಶಲ್ಯ ತರಬೇತಿಯುಳ್ಳ ಕಾರ್ಮಿಕರಿದ್ದರೆ  ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಲಾಗಿತ್ತು. ಈಗ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಆ ಮೂಲಕ ಕರ್ನಾಟಕ ರಫ್ತು ವಹಿವಾಟಿನಲ್ಲಿ ಮೊದಲ ಸ್ಥಾನಕ್ಕೆ ಏರಬೇಕು. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಮಾತನಾಡಿದ್ದಾರೆ.

ಹೊಸ ಕೈಗಾರಿಕಾ ನೀತಿ ಅಭಿವೃದ್ಧಿಗೆ ಪೂರಕವಾಗಿದೆ
ಹೊಸ ಕೈಗಾರಿಕಾ ನೀತಿಯನ್ನು ಸರ್ಕಾರ  ಘೋಷಣೆ ಮಾಡಿದಾಗ ಕೈಗಾರಿಕೋದ್ಯಮಿಗಳು ನೀತಿಯನ್ನು ಬೆಂಬಲಿಸಿ ಅದನ್ನು ಸ್ವಾಗತಿಸಿದರು. ಈಗಲೂ ಎಲ್ಲರೊಂದಿಗೆ ಚರ್ಚೆ ಮಾಡಿ ರಫ್ತು ಬೆಳವಣಿಗೆಗೆ ಪೂರಕವಾದಂಥ ಕೈಗಾರಿಕಾ ನೀತಿಯನ್ನು ರೂಪಿಸಲು  ಕ್ರಮ ವಹಿಸಲಾಗುವುದು ಎಂದರು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೈಗಾರಿಕಾ ಇಲಾಖೆಯ ನೇತೃತ್ವವನ್ನು ವಹಿಸಿದ್ದು, ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಆಗಬೇಕು ಎನ್ನುವ ಆಶಯವನ್ನು ಹೊಂದಿದ್ದು, ಕರ್ನಾಟಕ ಸರ್ಕಾರ ಎಲ್ಲ ರೀತಿಯ ಬೆಂಬಲವನ್ನು ಉದ್ಯಮಿಗಳಿಗೆ ನೀಡಲಿದೆ ಎಂದು ಭರವಸೆ ನೀಡಿದರು.

ದೇಶದ ಜಿಡಿಪಿ ವೃದ್ಧಿಗೆ ಕರ್ನಾಟಕ ಮಹತ್ತರ ಪಾತ್ರ ವಹಿಸಲಿದೆ
ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ದೇಶದ ಆರ್ಥಿಕತೆ ಬೆಳೆಯಲು ನೆರವಾಗಲಿದೆ. ಜಿಡಿಪಿ ಬೆಳೆದು ರಾಜ್ಯ ಬೆಳೆಯಲು ಸಾಧ್ಯವಾಗಿ ರಾಷ್ಟ್ರದ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕೊಡಲು ಸಾಧ್ಯವಾಗುತ್ತದೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೂಡಿಕೆಗಳು ಬರುತ್ತವೆ. ಹೂಡಿಕೆಗಳು ಬಂದಲ್ಲಿ ಕೈಗಾರಿಕೆಗಳು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ. ಆ ಮೂಲಕ ಕರ್ನಾಟಕದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಲ್ಪಿಸಲಾಗುವುದು. ಮಾರುಕಟ್ಟೆ ಯಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಆ ಮೂಲಕ ದೇಶದ ಜಿಡಿಪಿ ವೃದ್ಧಿಗೆ ಕರ್ನಾಟಕ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಬಹುತೇಕ  ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಕೌಶಲ್ಯ ಇಲಾಖೆಯಿಂದ ಕೈಗಾರಿಕೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ತಯಾರು ಮಾಡುವ ಸಲುವಾಗಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಮಾರುಕಟ್ಟೆಗೆ ಸೂಕ್ತವಾಗಿರುವ  ಉದ್ಯೋಗಿಗಳನ್ನು ತಯಾರು ಮಾಡಿದರೆ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ ಎಂದರು.

ಇಂದು 68 ಉದ್ದಿಮೆಗಳಿಗೆ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು  ಪ್ರದಾನ ಮಾಡಲಾಗಿದೆ.  ರಫ್ತು ನಲ್ಲಿ  ಸಾಧನೆ ಮಾಡಿರುವ ಉದ್ದಿಮೆಗಳಿಗೆ 1992-93 ರಿಂದ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ನೀಡುವ ಪರಿಪಾಠ ಪ್ರಾರಂಭಿಸಲಾಗಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉದ್ದಿಮೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರು ಇತರ ಉದ್ದಿಮೆದಾರರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ. ರಾಜ್ಯದಲ್ಲಿ ಉದ್ದಿಮೆಗಳ ಪ್ರಾರಂಭಕ್ಕೆ ಹಾಗೂ  ಕೈಗಾರಿಕೆಗಳಿಗೆ ಪ್ರೋತ್ಸಾಹದಾಯಕ ವಾತಾವರಣ ಇದೆ. ಕರ್ನಾಟಕದಲ್ಲಿ ಸುಮಾರು 80ರ ದಶಕದಲ್ಲಿ ಕೈಗಾರಿಕಾ ನೀತಿ ರೂಪಿಸುವತ್ತ ಹೆಜ್ಜೆ ಇಡಲಾಗಿತ್ತು ಎಂದು ತಿಳಿಸಿದರು.

You cannot copy content of this page

Exit mobile version