“ಜಾತ್ಯತೀತ ಮತ್ತು ಧರ್ಮನಿರಪೇಕ್ಷ ಕೇಂದ್ರಗಳಾದ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅವಶ್ಯಕತೆ ಮತ್ತು ಔಚಿತ್ಯವಾದರೂ ಏನು!” ಎನ್ನುವ ಮೂಲಕ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ಅವರು ಪ್ರಸ್ತುತ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರಂಜನಾರಾಧ್ಯ ಅವರು ಸರ್ಕಾರಿ ಶಾಲೆಗಳ ಶಾಲಾ ಪಠ್ಯಕ್ರಮ ಮತ್ತು ಶಾಲೆಗಳಲ್ಲಿನ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಬರೆದ ಬಹಿರಂಗ ಪತ್ರದಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
“ಅವೈಜ್ಞಾನಿಕ ನೆಲೆಯಲ್ಲಿ ಧರ್ಮ ಹಾಗು ಕೋಮುವಾದದ ಮೂಲಕ ಜಾತ್ಯತೀತ ಸಂಸ್ಥೆಗಳಾದ ಸರಕಾರಿ ಶಾಲೆಗಳನ್ನು ಧಾರ್ಮಿಕ ಪಠಣ ಕೇಂದ್ರಗಳನ್ನಾಗಿಸಲು ಪ್ರಯತ್ನಿಸಿದ್ದ ಕೋಮುವಾದಿ ಸರ್ಕಾರವನ್ನು ಕರ್ನಾಟಕದ ಜನತೆ ತಿರಸ್ಕರಿಸಿ ಒಂದು ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನಬದ್ಧ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ತಮ್ಮ ಸಾರಥ್ಯದ ಶಿಕ್ಷಣ ಇಲಾಖೆ, ಹಿಂದಿನ ಕೋಮುವಾದಿ ಸರಕಾರ ರೂಪಿಸಿದ್ದ ಅವೈಜ್ಞಾನಿಕ ಕೋಮುವಾದಿ ನೀತಿಗಳನ್ನೇ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಸು ತ್ತಿರುವುದು ಆತಂಕ ಹುಟ್ಟಿಸುತ್ತದೆ” ಎಂದಿದ್ದಾರೆ.
ಅಷ್ಟೆ ಅಲ್ಲದೆ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರು ರಾಜ್ಯ ಮಟ್ಟದಲ್ಲಿ ಜೂನ್ 19 ರಲ್ಲಿ ಹೊರಡಿಸಿದ ಆದೇಶದ ಬಗ್ಗೆ ಪ್ರಸ್ತಾಪಿಸಿ, ದಿನಾಂಕ ೧೭.೦೭.೨೦೨೩ ರಂದು ಹೊರಡಿಸಿರುವ ಜ್ಞಾಪನ ಪತ್ರದಲ್ಲಿ ಧಾರ್ಮಿಕ ಪಠಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಿದ ಬಗ್ಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅಗತ್ಯತೆ ಇದೆಯೇ ಎಂಬುದನ್ನು ಪ್ರಸ್ತಾಪಿಸಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾಗೆಯೇ “ಸಂಸ್ಕೃತ ಅಥವಾ ಅರೇಬಿಕ್ ಭಾಷೆಯನ್ನೇ ತಿಳಿಯದ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ, ಸಂಸ್ಕೃತ ಅಥವಾ ಅರೇಬಿಕ್ ಭಾಷೆಗಳಲ್ಲಿ ಭಗವದ್ಗೀತೆ ಹಾಗು ಸೂರ್ -ಎ- ಫತೇಹನ್ನು ಮಕ್ಕಳು ಏಕೆ ಪಠಣ ಮಾಡಬೇಕು? ಹಾಗೂ ಒಂದರಿಂದ ಐದನೇ ತರಗತಿ ಜೊತೆಗೆ ಆರರಿಂದ ಏಳನೆ ತರಗತಿ ಮಕ್ಕಳಿಗೆ ಭಗವದ್ಗೀತೆಯ ನಿಗದಿತ ಅಧ್ಯಾಯವನ್ನ ಸಂಸ್ಕೃತದಲ್ಲಿ ಹಾಗೂ ಸೂರ್ ಎ ಪಾತೆಹವನ್ನು ಅರೇಬಿಕ್ ಭಾಷೆಯಲ್ಲಿ ಸ್ಪರ್ಧಿಸಲು ಸೂಚಿಸಿರುವುದು, ಸಂಸ್ಕೃತ ಭಾಷೆಯನ್ನು ಮತ್ತು ಧಾರ್ಮಿಕ ಬೋಧನೆಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ಕೋಮುವಾದಿ ನೀತಿಯಲ್ಲವೇ! ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಹಾಗೆಯೇ ಮುಂದುವರಿದು, “ಕನ್ನಡ ಮಾಧ್ಯಮದ ಗ್ರಾಮೀಣ ಪ್ರಾಥಮಿಕ ಹಾಗೂ ಆಡಳಿತ ಕನ್ನಡ ಜಾರಿ ಇರುವ ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭೆಯನ್ನು ಪರೀಕ್ಷಿಸಲು ಸಂಸ್ಕೃತ ಹಾಗೂ ಅರೇಬಿಕ್ ಭಾಷೆಯಲ್ಲಿ ಧಾರ್ಮಿಕ ಪಠಣ ಸ್ಪರ್ಧೆ ಏರ್ಪಡಿಸುವ ಉದ್ದೇಶವಾದರೂ ಏನು! ಶಾಲಾ ಹಂತದಲ್ಲಿ ಮಕ್ಕಳ ಧಾರ್ಮಿಕ ಪಠಣ ಸಾಮರ್ಥ್ಯವನ್ನು ಬೆಳೆಸುವ ಪಠ್ಯವಸ್ತುವಿಗೆ ಅವಕಾಶ ಇರದಿದ್ದರೂ ಪಠ್ಯ ಮತ್ತು ಪಠ್ಯೇತರ ಪ್ರತಿಭೆಯ ಸಂಕೇತವಾದ ಪ್ರತಿಭಾಕಾರಂಜಿಯಂತಹ ಸಂದರ್ಭದಲ್ಲಿ ಏಕೆ ಇದನ್ನು ಅಳವಡಿಸಲಾಗಿದೆ. ನಮ್ಮ ಅಧಿಕಾರಿಗಳಿಗೆ ವೈಜ್ಞಾನಿಕ ಹಾಗು ಜಾತ್ಯತೀತ ಶಿಕ್ಷಣ ವ್ಯವಸ್ಥೆಯ ಮೂಲ ತತ್ವಗಳ ಪರಿಚಯವಿದೆಯೇ ಅಥವಾ ಕುರುಡಾಗಿ ನೀತಿಗಳನ್ನು ಮಕ್ಕಳ ಮೇಲೆ ಹೇರುತ್ತಾರೆಯೇ!” ಎನ್ನುವ ಮೂಲಕ ಶಿಕ್ಷಣ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ಜಾತ್ಯತೀತ ಮೌಲ್ಯ ಅರಿಯದ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
“ಪ್ರತಿಭಾ ಕಾರಂಜಿಯಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಿಂದ ಕನ್ನಡ ಮಾಧ್ಯಮದ ಕನ್ನಡದ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಸಂಸ್ಕೃತದ ಗಂಧಗಾಳಿ ಇಲ್ಲದ ಕೆಳಸ್ತರದ ವರ್ಗದ ಮಕ್ಕಳು ಪ್ರತಿಭಾಕಾರಂಜಿಯಲ್ಲಿ ಭಾಗವಹಿಸುವ ಹಕ್ಕಿನ ಅವಕಾಶ ವಂಚನೆಯಲ್ಲವೇ!?” ಎಂದು ಸಚಿವರ ಗಮನ ಸೆಳೆದಿದ್ದಾರೆ.
“ಎಲ್ಲ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಸಮಾನವಾಗಿ ಸ್ಪರ್ಧಿಸಲು ಅವಕಾಶ ಒದಗಿಸಬೇಕು. ಶಾಲಾ ಹಂತದ ಈ ಚಟುವಟಿಕೆಗಳಲ್ಲಿ, ಪರೋಕ್ಷವಾಗಿ ಧಾರ್ಮಿಕ ಅಜಂಡಗಳನ್ನ ಹೇರುವುದಕ್ಕಿಂತ ವೈಚಾರಿಕ ನಿಲುವು ಮತ್ತು ಜಾತ್ಯತೀತ ಮೌಲ್ಯಗಳತ್ತ ಸಾಗುವಂತೆ ಪ್ರತಿಭಾ ಕಾರಂಜಿಯಲ್ಲಿ ಹೆಚ್ಚೆಹೆಚ್ಚು ಸ್ಪರ್ಧೆಗಳನ್ನು ಆಯೋಜಿಸುವುದು ಇಂದಿನ ತುರ್ತು ಅಗತ್ಯವಲ್ಲವೇ? ಅತ್ಯಂತ ದುರದೃಷ್ಟವೆಂದರೆ, ಅಂತಹ ಮೌಲ್ಯಗಳಿರುವ ದಾಸರ ಮತ್ತು ಶರಣರ ಕೃತಿಗಳಿಂದ ಹಾಡುವುದನ್ನು ಜ್ಞಾಪನ ಹೊರತುಪಡಿಸಿದೆ. ಇದರ ಉದ್ದೇಶವೇನು” ಎಂದು ಶಿಕ್ಷಣ ಸಚಿವರಿಗೆ ಪ್ರಶ್ನೆ ಹಾಕಿದ್ದಾರೆ.
ಕೊನೆಯದಾಗಿ “ತಾವು,(ಮಧು ಬಂಗಾರಪ್ಪ) ದಯವಿಟ್ಟು ಇದನ್ನು ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸುತ್ತೇನೆ.” ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದ ಅನೇಕ ನಿಯಮಗಳು ಇಂದಿಗೂ ಸಹ ಮುಂದುವರೆಯುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಇಂತಹವುಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಜಾತ್ಯತೀತ ನೆಲೆಗಟ್ಟಿನಲ್ಲಿ ರೂಪುಗೊಳ್ಳಬೇಕಾದ ಶಿಕ್ಷಣ ವ್ಯವಸ್ಥೆ ಕೋಮುಕೇಂದ್ರಿತ ವ್ಯವಸ್ಥೆ ಆಗಿರುವ ಬಗ್ಗೆ ಹೊಸ ಸರ್ಕಾರ ರಚನೆ ಆದ ದಿನದಿಂದಲೂ ಅನೇಕ ಶಿಕ್ಷಣ ತಜ್ಞರು ಸರ್ಕಾರವನ್ನು ಎಚ್ಚರಿಸಿಕೊಂಡು ಬಂದಿದ್ದಾರೆ. ಅನೇಕ ಸಂದರ್ಭದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರೂ ಸಹ ಪಠ್ಯಕ್ರಮ ಬದಲಾವಣೆಯ ತುರ್ತಿನ ಬಗ್ಗೆಯೂ ನಿರಂತರವಾಗಿ ಪ್ರಸ್ತಾಪಿಸುತ್ತಲಿದ್ದು, ಸರ್ಕಾರ ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಲಿದ್ದಾರೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ.