Home ವಿಶೇಷ ರಾಜಕೀಯ ಕಿರುಕುಳದ ಸಾಧನವಾಗಿ ಅತ್ಯಾಚಾರ: ಮಣಿಪುರದ ವೀಡಿಯೊ ಹೇಳುವ ಸಂಗತಿಗಳು

ರಾಜಕೀಯ ಕಿರುಕುಳದ ಸಾಧನವಾಗಿ ಅತ್ಯಾಚಾರ: ಮಣಿಪುರದ ವೀಡಿಯೊ ಹೇಳುವ ಸಂಗತಿಗಳು

0

ಅದು ಯುದ್ಧ, ಕೋಮು ದಂಗೆ, ನಾಗರಿಕ ಭಿನ್ನಾಭಿಪ್ರಾಯಗಳು ಅಥವಾ ಜಾತಿ ಜಾತಿ ನಡುವಿನ ಘರ್ಷಣೆ ಹೀಗೆ ಯಾವುದೇ ಸಂಘರ್ಷವಿರಲಿ, ಇದೆಲ್ಲದರಲ್ಲೂ ಸ್ತ್ರೀ ದೇಹವು ಹಿಂಸಾಚಾರದ ತಾಣವಾಗಿ ಮಾರ್ಪಡುತ್ತದೆ.

ಈಗ ಮಣಿಪುರದಿಂದ ಬಂದಿರುವ ವಿಡಿಯೋದಲ್ಲಿ ಮೂವರು ಕುಕಿ ಸಮುದಾಯದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ನಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಹಿಂಸಾ ಪೀಡಿತ ಪ್ರದೇಶದಲ್ಲಿ ಲಿಂಗತ್ವ ಹಿಂಸಾಚಾರವು ಹೇಗೆ ಯುದ್ಧತಂತ್ರದ ಭಾಗವಾಗಿ ಉಳಿದಿದೆಯೆನ್ನುವುದನ್ನು ಇನ್ನೊಮ್ಮೆ ಸಾಬೀತುಪಡಿಸಿದೆ. ಇದನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೈಗೊಳ್ಳದ ಪ್ರಭುತ್ವದ ಪಾತ್ರದ ಕುರಿತಾಗಿಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಮೂವರು ಮಹಿಳೆಯರ ವಿರುದ್ಧ ನಡೆದಿರುವ ಹಿಂಸಾಚಾರವು ಸಾಕಷ್ಟು ಭಯಾನಕವಾಗಿರುವುದರ ಜೊತೆಗೆ ಇದರಲ್ಲಿ ಪೊಲೀಸರೂ ಭಾಗಿಯಾಗಿರುವುದರ ಕುರಿತು ವರದಿಯಾಗಿರುವುದನ್ನು ಗಮನಿಸಬೇಕು. ಈ ಘಟನೆಯ ಸಂತ್ರಸ್ಥರೊಬ್ಬರನ್ನು ಮಾತನಾಡಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಜುಲೈ 20ರಂದು ವರದಿ ಮಾಡಿದೆ. ಸಂತ್ರಸ್ಥೆ ಆ ಪತ್ರಿಕೆಗೆ ಹೀಗೆ ಹೇಳಿದ್ದಾರೆ, “ನಮ್ಮ ಊರಿನ ಮೇಲೆ ದಾಳಿ ಮಾಡಿದ ಗುಂಪಿನೊಂದಿಗೆ ಪೊಲೀಸರೂ ಇದ್ದರು. ಮನೆಯಲ್ಲಿದ್ದ ನಮ್ಮನ್ನು ಪೊಲೀಸರು ಸ್ವಲ್ಪ ದೂರ ಕರೆದುಕೊಂಡು ಹೋಗಿ ರಸ್ತೆಯಲ್ಲಿದ್ದ ಜನಸಮೂಹದೊಡನೆ ಬಿಟ್ಟರು.”

ಮಣಿಪುರದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸಂಘರ್ಷ ವಲಯಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ತಜ್ಞರಾದ ಮೇರಿ ಬೆತ್ ಸನಾಟೆ ಹೇಳುವಂತೆ ಮಣಿಪುರವು ಅನೇಕ ದಶಕಗಳಿಂದ ಸಂಘರ್ಷದಲ್ಲಿದೆ, ಮತ್ತು 1980ರ ದಶಕದ ಮಧ್ಯಭಾಗದಿಂದ, ಅಲ್ಲಿ ಹಲವಾರು ಜನಾಂಗೀಯ ಘರ್ಷಣೆಗಳು, ಸಶಸ್ತ್ರ ಸಂಘರ್ಷಗಳು, ಭೂಮಿ ಮತ್ತು ಅರಣ್ಯದ ವಿಷಯದ ಸಂಘರ್ಷಗಳು, ಅಂತರ-ಗಡಿ ವಿವಾದಗಳು, ರಾಜಕೀಯ ಆಕಾಂಕ್ಷೆಗಳು ಮತ್ತು ಸಿದ್ಧಾಂತದ ಸಂಘರ್ಷ ಇತ್ಯಾದಿಗಳು ನಡೆದಿವೆ ಮತ್ತು ಇದು ಬಹುತೇಕ ಮಿಲಿಟರಿ ರಾಜ್ಯವಾಗಿದೆ.  “ಈ ಎಲ್ಲಾ ಸಂಘರ್ಷಗಳು ಮತ್ತು ಮಿಲಿಟರೀಕರಣಗಳಲ್ಲಿ, ಮಹಿಳೆಯರು ಮತ್ತು ಮಕ್ಕಳು ಅತಿ ಹೆಚ್ಚು ಹಿಂಸೆಯನ್ನು ಅನುಭವಿಸಿದ್ದಾರೆ” ಎಂದು ಅವರು ಹೇಳುತ್ತಾರೆ.

ಮಣಿಪುರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ವಿವರಿಸಿದ ವಕೀಲೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ವೃಂದಾ ಗ್ರೋವರ್, ವೀಡಿಯೊದಲ್ಲಿನ ಈ ಘಟನೆ ಸಂಭವಿಸಿದ ಕೆಲವು ದಿನಗಳ ನಂತರ ಮೇ 18ರಂದು ಶೂನ್ಯ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ ಎಂದು ಈ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ‘ಶೂನ್ಯ ಎಫ್ಐಆರ್’ ಎನ್ನುವುದು ಅಪರಾಧ ಸಂಭವಿಸಿದ ನ್ಯಾಯವ್ಯಾಪ್ತಿಯಲ್ಲಿ ದಾಖಲಿಸಬೇಕಾದ ಸಾಮಾನ್ಯ FIR ಬದಲಿಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದಾದ ಪ್ರಥಮ ಮಾಹಿತಿ ವರದಿಯಾಗಿದೆ. “ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಈ ಘಟನೆಯ ಬಗ್ಗೆ ಬುಧವಾರ (ಜುಲೈ 19) ವಷ್ಟೇ ತಿಳಿಯಿತು, ಆದರೆ ಸರ್ಕಾರಕ್ಕೆ ಈ ಕುರಿತು ಮೊದಲೇ ತಿಳಿದಿತ್ತು.  ಮುಖ್ಯಮಂತ್ರಿಗೆ ತಿಳಿದಿತ್ತು ಮತ್ತು ಗೃಹ ಸಚಿವರಿಗೂ ತಿಳಿಸಲಾಗಿತ್ತು ಎಂದು ನಾವು ಭಾವಿಸುತ್ತೇವೆ. ಆದರೂ, ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೌರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವವರೆಗೂ, ಈ ಕುರಿತು ಸಂಪೂರ್ಣ ಮೌನವಿತ್ತು. ಸಂಘರ್ಷ ಭುಗಿಲೆದ್ದಾಗ ಇಂತಹ ಲೈಂಗಿಕ ಹಿಂಸಾಚಾರದ ಘಟನೆಗಳು ಸಂಭವಿಸುವುದು ಸಾಮಾನ್ಯ ಎಂಬ ವಿವರಣೆಯ ಹಿಂದೆ ಸರ್ಕಾರವು ಅಡಗಿಕೊಳ್ಳಬಹುದೇ?” ಎಂದು ಅವರು ಕೇಳುತ್ತಾರೆ.

ಬರಹಗಾರ್ತಿ ಹಾಗೂ ಪೊಲೀಸ್‌ ಪ್ರಾಜೆಕ್ಟ್‌ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುವ ಸುಚಿತ್ರಾ ವಿಜಯನ್‌ TNM ಸುದ್ದಿ ಸಂಸ್ಥೆಯೊಡನೆ ಮಾತನಾಡುತ್ತಾ ಈ ಘಟನೆಯನ್ನು “ಎಲ್ಲೋ ಕೆಲವು ಕೆಟ್ಟ ಘಟನೆಗಳಲ್ಲಿ ಒಂದು” ಎಂಬಂತೆ ನೋಡಬಾರದು ಎನ್ನುವುದನ್ನು ಒತ್ತಿ ಹೇಳುತ್ತಾರೆ. ಅವರು ಮಣಿಪುರದಲ್ಲಿ ಸಶಸ್ತ್ರ ಪಡೆಗಳು ನಡೆಸುವ ಮಾರ್ಷಲ್‌ ರೇಪ್‌, ಪೊಲೀಸರ ಪಾತ್ರ ಮತ್ತು ಮಣಿಪುರದ ಪ್ರಸ್ತುತ ಹಿಂಸಾಚಾರದ ನಡುವೆ ಇರುವ ಸಂಬಂಧವನ್ನು ಅವರು ಬಿಡಿಸಿ ಹೇಳುತ್ತಾರೆ.

ಮಣಿಪುರದಲ್ಲಿ ತಲ್ಲಣವೆಬ್ಬಿಸಿದ್ದ ಎರಡು ಅತ್ಯಾಚಾರ ಘಟನೆಗಳನ್ನು ಉಲ್ಲೇಖಿಸುತ್ತಾ ಮೇರಿ ಬೆತ್‌ ಅಸ್ಸಾಂ ರೈಫಲ್ಸ್ ಪಡೆಯ ಪ್ಯಾರಾ ಮಿಲಿಟರಿ ಘಟಕದಿಂದ ಜುಲೈ 11 2004ರಂದು ಅತ್ಯಾಚರಕ್ಕೊಳಗಾಗಿ ಕೊಲೆಯಾದ 32 ವರ್ಷದ ಮಹಿಳೆ ತಂಜೋಮ್‌ ಮನೋರಮಾ ಕುರಿತು ಮಾತನಾಡುತ್ತಾರೆ. “ಆಕೆಯ ಗುಂಡಿನಿಂದ ತುಂಬಿಹೋಗಿದ್ದ ಮತ್ತು ಜರ್ಜರಿತಗೊಂಡಿದ್ದ ಮೃತ ದೇಹವು ಆಕೆಯ ಮನೆಯಿಂದ ಮೂರು ಕಿಲೋಮೀಟರ್‌ ದೂರದಲ್ಲಿ ಪತ್ತೆಯಾಗಿತ್ತು. ಅದರ ಹಿಂದಿನ ರಾತ್ರಿ ಆಕೆಯನ್ನು ಅಲ್ಲಿಯೇ ಬಂಧಿಸಲಾಗಿತ್ತು. ಜನವರಿ 16, 2006 ರಂದು, ಕಣಿವೆ ಮೂಲದ ಯುನೈಟೆಡ್ ನೇಷನ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್) ಗೆ ಸೇರಿದ ಸಶಸ್ತ್ರ ದಂಗೆಕೋರರು 21 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದರು. ಯುಎನ್ಎಲ್ಎಫ್ ಸದಸ್ಯರು ತಮ್ಮ ಊರಿನ ಮೇಲೆ ದಾಳಿ ಮಾಡಿ ಊರಿನಲ್ಲಿದ್ದ ಗಂಡಸರ ಮೇಲೆ ದಾಳಿ ಮಾಡಿ ಸುಂದರವಾಗಿದ್ದ ಹುಡುಗಿಯರನ್ನು ಹಿಂಸೆಗೆ ಗುರಿಪಡಿಸಿದರು. ಅವರಲ್ಲಿ ಕೆಲವರನ್ನು ಕಾಡಿಗೆ ಅಥವಾ ಹತ್ತಿರದ ಮನೆಗಳಿಗೆ ಎಳೆದೊಯ್ದರು ಎಂದು 21 ವರ್ಷದ ಲೆವಿಸ್ ಹ್ಮಾರ್ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಎಲ್ಲಾ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು” ಎಂದು ಅವರು ಅಂದಿನ ವರದಿಗಳನ್ನು ನೆನಪಿಸಿಕೊಳ್ಳುತ್ತಾರೆ.

ಮನೋರಮಾ ಪ್ರಕರಣದಲ್ಲಿ, ಅಸ್ಸಾಂ ರೈಫಲ್ಸ್ ಪಡೆಯನ್ನು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958ರ ಅಡಿಯಲ್ಲಿ ನಿಯೋಜಿಸಲಾಗಿರುವುದರಿಂದ ಮತ್ತು ರಾಜ್ಯ ಸರ್ಕಾರಕ್ಕೆ ಅವರ ಮೇಲೆ ನ್ಯಾಯವ್ಯಾಪ್ತಿ ಇಲ್ಲದ ಕಾರಣ ಗುವಾಹಟಿ ಹೈಕೋರ್ಟ್ ಕಿರುಕುಳ ನೀಡಿದವರನ್ನು ಹಾಗೆಯೇ ಬಿಟ್ಟಿತ್ತು. ಹಲವು ಪ್ರತಿಭಟನೆಗಳ ನಂತರ 2014ರಲ್ಲಿ ಸುಪ್ರೀಂ ಕೋರ್ಟ್ ಆಕೆಯ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರವನ್ನು ನೀಡಿತು. ಆದರೆ ಆಕೆಯ ಮೇಲೆ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆಯಾಗಲಿಲ್ಲ.  ‘ಭಾರತೀಯ ಸೇನೆಯೇ ಬನ್ನಿ ನಮ್ಮ ಮೇಲೆ ಅತ್ಯಾಚಾರ ಮಾಡಿ’ ಎಂಬ ಬ್ಯಾನರುಗಳನ್ನು ಹಿಡಿದುಕೊಂಡು ನಗ್ನವಾಗಿ ನಿಷ್ಕ್ರಿಯತೆಯನ್ನು ಪ್ರತಿಭಟಿಸಿದ್ದ ಮಹಿಳೆಯರ ಚಿತ್ರವು ಇಂದಿಗೂ ರಾಷ್ಟ್ರದ ಆತ್ಮಸಾಕ್ಷಿಯನ್ನು ಕಾಡುತ್ತಿದೆ.

ಕಾಶ್ಮೀರದಲ್ಲಿ ಅಥವಾ ಈಶಾನ್ಯ ರಾಜ್ಯಗಳಲ್ಲಿ ಮಿಲಿಟರಿಯು ಗಡಿಗಳಲ್ಲಿ ಲೈಂಗಿಕ ಹಿಂಸಾಚಾರವನ್ನು ಬಳಸುತ್ತದೆ ಎಂದು ಸುಚಿತ್ರಾ ಹೇಳುತ್ತಾರೆ, ಇದನ್ನು ಸರ್ವವ್ಯಾಪಿ ಎಂದು ಕರೆಯುತ್ತಾರೆ. “ಅಂತಹ ಹಿಂಸಾಚಾರದ ಬಗ್ಗೆ ವ್ಯಾಪಕವಾದ ದಾಖಲೆಗಳಿವೆ. ಇವುಗಳಿಂದ ತಿಳಿಯುವುದೇನೆಂದರೆ, ಸಮುದಾಯಗಳ ಹಿಂಸಾಚಾರದ ವಿಷಯದಲ್ಲಿ ಪೊಲೀಸರು ಮಧ್ಯಸ್ಥಗಾರರಾಗುವುದನ್ನು ನಾವು ನೋಡುತ್ತೇವೆ. ಅವರು ಕಸ್ಟೋಡಿಯಲ್ ಹಿಂಸಾಚಾರ ಮತ್ತು ಸಾವಿನ ಪ್ರತಿಪಾದಕರಾಗುವುದಲ್ಲದೆ, ಸಮುದಾಯಗಳೊಳಗಿನ ಲೈಂಗಿಕ ಹಿಂಸಾಚಾರದ ಪ್ರವರ್ತಕರಾಗುತ್ತಾರೆ. ಅಲ್ಲಿಂದ ಮುಂದೆ ಸಾಗುವಾಗ, ಹಿಂಸಾಚಾರ ಆಗ ಆಡಳಿತದ ಕೈಯಲ್ಲಿರುವುದಿಲ್ಲ. ಇದನ್ನು ಬಹುಸಂಖ್ಯಾತ ಜನಸಮೂಹಕ್ಕೆ ಹೊರಗುತ್ತಿಗೆ ನೀಡಲಾಗುತ್ತದೆ- ಇದನ್ನು ನಾವು ಸಾಮೂಹಿಕ ಸಾರ್ವಜನಿಕ ಹಿಂಸಾಚಾರ ಎಂದು ಕರೆಯುತ್ತೇವೆ.”

ಈ ನಿಟ್ಟಿನಲ್ಲಿ ಸುಚಿತ್ರಾ ಹೇಳುತ್ತಾರೆ, “ಜನಸಮೂಹವು ಈಗಾಗಲೇ ದೇಶದಾದ್ಯಂತ ಹಿಂಸಾಚಾರಕ್ಕೆ ಸಿದ್ಧಗೊಂಡಿದೆ. ಗುಜರಾತ್ ದಂಗೆಗಳ ವಿಷಯದಲ್ಲೂ ನಾವು ಇದನ್ನು ನೋಡಬಹುದು. ಆ ಮಾದರಿಯನ್ನು ಪರಿಪೂರ್ಣಗೊಳಿಸಲಾಗುತ್ತಿದೆ. ಜನಸಮೂಹವು ಸಾಮೂಹಿಕ ಸಾರ್ವಜನಿಕ ಹಿಂಸಾಚಾರದ ಸಂಪೂರ್ಣ ಪೂರೈಕೆದಾರನಾಗುತ್ತದೆ, ಇದಕ್ಕೆ ಪೊಲೀಸರು ಮತ್ತು ಭಾರತೀಯ ಸರ್ಕಾರದ ಸಹಾಯ ಮತ್ತು ಪ್ರಚೋದನೆಯಿದೆ. ಆಡಳಿತದಿಂದ ಅಪಾರ ಅಧಿಕಾರವನ್ನು ಪಡೆದ ಬಹುಸಂಖ್ಯಾತ ಗುಂಪು ಈಗ ತಾನಾಗಿಯೇ ದೈಹಿಕ ಮತ್ತು ಲೈಂಗಿಕ ಹಿಂಸೆಯನ್ನು ಉಂಟುಮಾಡಬಲ್ಲದು. ಮತ್ತು ಆಡಳಿತವು ಅರಿವಿನಿಂದಲೇ ಇದೆಲ್ಲವನ್ನೂ ಪಕ್ಕಕ್ಕೆ ನಿಂತು ನೋಡುತ್ತಿದೆ ಅಥವಾ ಸಹಾಯ ಮಾಡುತ್ತಿದೆ ಮತ್ತು ಕುಮ್ಮಕ್ಕು ನೀಡುತ್ತಿದೆ.”

ಇಸೈ ಪ್ರಿಯಾ

ಅದು ಯುದ್ಧ, ಕೋಮು ದಂಗೆ, ನಾಗರಿಕ ಭಿನ್ನಾಭಿಪ್ರಾಯಗಳು ಅಥವಾ ಜಾತಿ ಜಾತಿ ನಡುವಿನ ಘರ್ಷಣೆಗಳೇ ಇರಲಿ, ಇದೆಲ್ಲದರಲ್ಲೂ ಹೆಣ್ಣಿನ ದೇಹವು ಹಿಂಸಾಚಾರದ ತಾಣವಾಗಿ ಮಾರ್ಪಡುತ್ತದೆ. ಇಸೈಪ್ರಿಯ ಎಂದು ಕರೆಯಲ್ಪಡುವ ಶೋಭನಾ ಧರ್ಮರಾಜ್‌ ಅವರ ಉದಾಹರಣೆಯು ಈ ಘಟನೆಗಳೊಡನೆ ಸಮಾನ ಹೋಲಿಕೆ ಹೊಂದಿದೆ. ಶ್ರೀಲಂಕಾದ ತಮಿಳು ಪತ್ರಕರ್ತೆಯಾಗಿದ್ದು, ಶ್ರೀಲಂಕಾದಲ್ಲಿ ನಡೆದ ನಾಗರಿಕ ಸಂಘರ್ಷದ ಸಮಯದಲ್ಲಿ ಲಿಬರೇಶನ್ ತಮಿಳ್ ಟೈಗರ್ಸ್ ಆಫ್ ಈಳಂ (ಎಲ್ಟಿಟಿಇ) ಗಾಗಿ ಸುದ್ದಿ ಪ್ರಸಾರ ಮಾಡಿದ್ದರು. ಶ್ರೀಲಂಕಾದ ಅಂತರ್ಯುದ್ಧದ ಕೊನೆಯ ಹಂತದಲ್ಲಿ, ಇಸೈಪ್ರಿಯಾ ಅವರನ್ನು ಶ್ರೀಲಂಕಾ ಸೈನ್ಯವು ಸೆರೆಹಿಡಿಯಿತು. ಆಕೆಯನ್ನು ಕೊಲ್ಲುವ ಮೊದಲು ಅವರ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಲಾಗಿತ್ತು.

“ಇದೊಂದು ಪುನರಾವರ್ತಿತ ಮಾದರಿ ಮತ್ತು ಕೋಮು ಅಥವಾ ಜನಾಂಗೀಯ ಉದ್ವಿಗ್ನತೆಗಳು ಭುಗಿಲೆದ್ದಾಗಲೆಲ್ಲಾ, ಮಹಿಳೆಯರ ದೇಹಗಳನ್ನು ಗುರಿಯಾಗಿಸಲಾಗಿದೆ ಏಕೆಂದರೆ ಹೆಣ್ಣುಗಳ ದೇಹವನ್ನು ಆಕೆಯ ಸ್ವಂತ ದೇಹವನ್ನಾಗಿ ನೋಡಲಾಗುವುದಿಲ್ಲ, ಅದನ್ನು ಸಮುದಾಯದ ಗೌರವದ ಖಜಾನೆಯಾಗಿ ಮತ್ತು ಇಡೀ ಸಮುದಾಯವನ್ನು ಅವಮಾನಿಸುವ ಮತ್ತು ಸಮುದಾಯವನ್ನು ಹೆದರಿಸಿ ಅದನ್ನು ಅದರ ಸ್ಥಾನದಲ್ಲೇ ಇರಿಸಬಲ್ಲ ಸಾಧನಗಳಾಗಿ ನೋಡಲಾಗುತ್ತದೆ” ಎಂದು ವೃಂದಾ ಹೇಳುತ್ತಾರೆ.

ಸಂಘರ್ಷ ವಲಯಗಳಲ್ಲಿ ಪುನರಾವರ್ತಿತ ಮಾದರಿ

ಸಂಘರ್ಷದ ಸಮಯದಲ್ಲಿ ಮಹಿಳೆಯರ ಮೇಲಿನ ಉದ್ದೇಶಿತ ಲೈಂಗಿಕ ಹಿಂಸಾಚಾರದ ಈ ಮಾದರಿಯು ಪ್ರಪಂಚದಾದ್ಯಂತ ನಡೆಯುತ್ತಿರುವ ಕಳವಳಕಾರಿ ಪ್ರವೃತ್ತಿಯಾಗಿದೆ. ವಿಶ್ವಸಂಸ್ಥೆಯ (ಯುಎನ್) ಅನೇಕ ವರದಿಗಳನ್ನು ಉಲ್ಲೇಖಿಸಿ, ಥಿಂಕ್ ಗ್ಲೋಬಲ್ ಹೆಲ್ತ್ ಪ್ರಕಟಣೆಯು ಈ ಕುರಿತು ಗಮನಸೆಳೆಯುತ್ತದೆ, “ಸಂಘರ್ಷದ ಸಮಯದಲ್ಲಿನ ಲೈಂಗಿಕ ಹಿಂಸಾಚಾರವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು: ಯುದ್ಧ ತಂತ್ರವಾಗಿ, ಉದ್ದೇಶಪೂರ್ವಕವಾಗಿ ವ್ಯಾಪಕವಾಗಿ ದೌರ್ಜನ್ಯ ಎಸಗುವುದು; ನಾಯಕರು ಇದನ್ನು ಸಹಿಸಿಕೊಳ್ಳುತ್ತಾರೆ, ಆದರೆ ಹೀಗೆ ಮಾಡುವಂತೆ ಆದೇಶಿಸುವುದಿಲ್ಲ; ಮತ್ತು ಅವಕಾಶ ಬಂದಾಗ ವ್ಯಕ್ತಿಗಳು ಸ್ವತಂತ್ರವಾಗಿ ಇದನ್ನು ಎಸಗಲು ಬದ್ಧರಾಗಿರುತ್ತಾರೆ.”

ಅಂತೆಯೇ, ರ್ವಾಂಡಾ (Rwand) ನರಮೇಧದ ಮುಖ್ಯಾಂಶಗಳ ಬಗ್ಗೆ 2014ರ ಯುಎನ್ ವರದಿಯು ಸಶಸ್ತ್ರ ಸಂಘರ್ಷದಲ್ಲಿ ಸೈನಿಕರಿಗಿಂತಲೂ ಹೆಚ್ಚು ನಾಗರಿಕರು ಸಾಯುವ ಸಾಧ್ಯತೆ ಹೆಚ್ಚು ಎನ್ನುತ್ತದೆ. “ಇಂದಿನ ಯುದ್ಧಗಳಲ್ಲಿ ಹೆಚ್ಚಿನ ಸಾವುನೋವುಗಳಿಗೆ ಬಲಿಯಾಗುವುದು ನಾಗರಿಕರು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು. ನಿರ್ದಿಷ್ಟವಾಗಿ ಮಹಿಳೆಯರು ವಿನಾಶಕಾರಿ ಸ್ವರೂಪದ ಲೈಂಗಿಕ ಹಿಂಸಾಚಾರವನ್ನು ಎದುರಿಸಬಹುದು, ಅವುಗಳನ್ನು ಕೆಲವೊಮ್ಮೆ ಮಿಲಿಟರಿ ಅಥವಾ ರಾಜಕೀಯ ಉದ್ದೇಶಗಳನ್ನು ಸಾಧಿಸಲು ವ್ಯವಸ್ಥಿತವಾಗಿ ಎಸಗಲಾಗುತ್ತದೆ.

“ಯುದ್ಧದ ಸಮಯದಲ್ಲಿ ನಡೆಯುವ ಅತ್ಯಾಚಾರವು ಹೆಚ್ಚಾಗಿ ಜನರನ್ನು ಭಯಭೀತಗೊಳಿಸುವುದು, ಕುಟುಂಬಗಳನ್ನು ವಿಭಜಿಸುವುದು, ಸಮುದಾಯಗಳನ್ನು ನಾಶಪಡಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ಮುಂದಿನ ಪೀಳಿಗೆಯ ಜನಾಂಗೀಯ ರಚನೆಯನ್ನು ಬದಲಾಯಿಸುವ ಉದ್ದೇಶವನ್ನು ಹೊಂದಿರುತ್ತವೆ” ಎಂದು ವರದಿ ಹೇಳಿದೆ.

TNM ಜೊತೆ ಮಾತನಾಡಿದ ವಕೀಲ, ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಪೀಪಲ್‌ ವಾಚ್‌ ಸಂಘಟನೆಯ ನಿರ್ದೇಶಕರಾದ ಹೆನ್ರಿ ಟಿಫಾಗ್ನೆ, ಸಂಘರ್ಷ ಯಾವುದೇ ಇರಲಿ, ಅಲ್ಲೆಲ್ಲವೂ ಈ ಮಹಿಳೆಯರ ಮೇಲಿನ ಹಿಂಸಾಚಾರದ ಮಾದರಿ ಪುನಾರವರ್ತಿತಗೊಂಡಿರುವುದರ ಕುರಿತು ಗಮನಸೆಳೆದರು. “ಜಾತಿ ನಡುವಿನ ಜಗಳ, ಕೋಮುವಾದಿ ಜಗಳ, ಅಥವಾ ಜನಾಂಗೀಯ ಹಿಂಸಾಚಾರ ಹೀಗೆ ಸಂಘರ್ಷ ಯಾವುದೇ ಇರಲಿ ಅಲ್ಲಿ ಲೈಂಗಿಕ ಹಿಂಸಾಚಾರವು ಪ್ರಥಮ ಅಸ್ತ್ರವಾಗಿ ಬಳಕೆಯಾಗಿರುತ್ತದೆ. ಜನರ ನಡುವಿನ ಸಂಘರ್ಷವಿರಲಿ, ಆಡಳಿತಗಳ ನಡುವಿನ ಸಂಘರ್ಷವಿರಲಿ ಅಲ್ಲೆಲ್ಲವೂ ಇದು ಕಾಮನ್‌ ಫ್ಯಾಕ್ಟರ್‌ ಆಗಿರುತ್ತದೆ. ಆಡಳಿತಾಧಿಕಾರಗಳ ವಿಷಯಕ್ಕೆ ಬಂದಾಗ ಲೈಂಗಿಕ ಹಿಂಸಾಚಾರವು ಆಡಳಿತದಡಿ ಅಷ್ಟೂ ಜನರನ್ನು ನಿಯಂತ್ರಿಸುವ ಸಾಧನವಾಗಿ ಇದು ಬಳಕೆಯಾಗುತ್ತದೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ದಲಿತ, ಆದಿವಾಸಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಹಿಳೆಯರ ವಿರುದ್ಧ ಬಳಸಲಾಗುತ್ತದೆ. ಮತ್ತು ಇಂತಹವು ಕೇವಲ ಉತ್ತರ ಭಾರತದಲ್ಲಿ ನಡೆಯುತ್ತವೆಯೆನ್ನುವ ನಂಬಿಕೆಗೆ ವಿರುದ್ಧವಾಗಿ ಇವು ದಕ್ಷಿಣ ಭಾರತದಲ್ಲೂ ನಡೆಯುತ್ತವೆ.”

ವಕೀಲೆ ಸುಧಾ ರಾಮಲಿಂಗಂ ಕೂಡ ಈ ಮಾದರಿ ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಒತ್ತಿಹೇಳುತ್ತಾರೆ. “ಲೈಂಗಿಕ ಹಿಂಸಾಚಾರವನ್ನು ಇತಿಹಾಸದುದ್ದಕ್ಕೂ ರಾಜಕೀಯವಾಗಿ ಮೇಲುಗೈ ಸಾಧಿಸಲು  ಯಾವಾಗಲೂ ಬಳಸಲಾಗಿದೆ. ಯುದ್ಧಗಳ ಸಂದರ್ಭಗಳಲ್ಲಿ, ಉದಾಹರಣೆಗೆ, ಸೋತ ಭಾಗವನ್ನು ಲೂಟಿ ಮಾಡುವುದಲ್ಲದೆ, ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದನ್ನು ಸಹ ನಾವು ನೋಡುತ್ತೇವೆ” ಎಂದು ಅವರು ಹೇಳುತ್ತಾರೆ.

ಅವರ ಪ್ರಕಾರ, ರಾಜಕೀಯ ವಿಪ್ಲವವಾಗಲಿ ಅಥವಾ ವೈಯಕ್ತಿಕ ದ್ವೇಷವಾಗಿರಲಿ ಇದರಲ್ಲಿ ಮೇಲುಗೈ ಸಾಧಿಸುವುದಕ್ಕಾಗಿ ಲೈಂಗಿಕ ಹಿಂಸಾಚಾರವನ್ನು ಬಳಸುವುದು ಹಿಂದಿನಂತೆಯೇ ಇಂದಿಗೂ ನಿಜವಾಗಿದೆ. “ಪಿತೃಪ್ರಭುತ್ವದ ರಚನೆಯಲ್ಲಿ, ಮಹಿಳೆಯರನ್ನು ಆಸ್ತಿಯಾಗಿ ನೋಡಲಾಗುತ್ತದೆ ಮತ್ತು ಅವರ ಮೇಲಿನ ದಾಳಿಯು ಎದುರು ಬದಿಯ ಪುರುಷರನ್ನು ಶರಣಾಗುವಂತೆ ಮಾಡುವ ಒಂದು ಮಾರ್ಗವಾಗಿದೆ. ಇದು ಒಂದು ರೀತಿಯ ಸಾಂಕೇತಿಕ ಎಚ್ಚರಿಕೆ ನೀಡುವ ವಿಧಾನವಾಗಿದೆ. ಇದರ ಹಿಂದಿನ ಆಲೋಚನಾ ಪ್ರಕ್ರಿಯೆಯೆಂದರೆ, ಯಾವುದಕ್ಕೂ ಹೆದರದ ಗಂಡಸು ಕೂಡಾ ತನ್ನ ಗುಂಪಿನ ಮಹಿಳೆಯರು ಮಕ್ಕಳ ಮೇಲಿನ ಹಲ್ಲೆಗೆ ಹೆದರುತ್ತಾನೆ ಎನ್ನುವುದು.

ಇಬ್ಬರು ಪುರುಷರ ನಡುವಿನ ಭಿನ್ನಾಭಿಪ್ರಾಯಕ್ಕೆ ಹೇಗೆ ಮಹಿಳೆ ಬಲಿಯಾಗುತ್ತಾಳೆ ಎನ್ನುವುದಕ್ಕೆ ಉದಾಹರಣೆಯಾಗಿ ಸುಧಾ ಇತ್ತೀಚೆಗೆ ತಮಿಳುನಾಡಿನ ಘಟನೆಯೊಂದನ್ನು ವಿವರಿಸುತ್ತಾರೆ, “ತಮಿಳುನಾಡಿನ ಸೆಮ್ಮಕೋಟೈ ಪಂಚಾಯತಿಯ ಅಧ್ಯಕ್ಷರಾಗಿದ್ದ ಯುವಕ ಮಣಿವಣ್ಣನ್‌ ತನ್ನ ಪಂಚಾಯತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಒಳ್ಳೆಯ ಹೆಸರು ಮತ್ತು ಸಾಕಷ್ಟು ಬೆಂಬಲಿಗರನ್ನು ಗಳಿಸಿದ್ದರು. ಅವರ ವಿರೋಧಿಯಾಗಿದ್ದ ವೇಲ್‌ ಮುರುಗನ್‌ ಮಣಿವಣ್ಣನ್‌ ಅವರನ್ನು ಸೋಲಿಸುವಲ್ಲಿ ವಿಫಲನಾಗುತ್ತಿದ್ದ. ಕೊನೆಗೆ ವೇಲ್‌ ಮುರುಗನ್ನು ಮಣಿವಣ್ಣನ್‌ ಅವರನ್ನು ಹಣಿಯಲು ಬಳಸಿಕೊಂಡಿದ್ದು ಅವರ ವಿವಾಹೇತರ ಸಂಬಂಧವೊಂದನ್ನು. ಆತ ಮಣಿವಣ್ಣನ್‌ ಮತ್ತು ಆತನ ಪ್ರೇಯಸಿ ಜೊತೆಗಿರುವ ವಿಡಿಯೋ ಒಂದನ್ನು ಸಾರ್ವಜನಿಕರ ನಡುವೆ ಪಸರಿಸಿದ್ದ. ಅವನು ಅದನ್ನು ಸ್ಥಳೀಯ ಪತ್ರಿಕೆಗಳಿಗೂ ನೀಡಿ ಅದು ಸುದ್ದಿಯಾಗಿತ್ತು. ಈಗ ಆ ಮಹಿಳೆ ಸಾರ್ವಜನಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಯ ಕುರಿತು ಯೋಚಿಸುತ್ತಾ ಸಾವು ಬದುಕಿನ ನಡುವೆ ಹೆಣಗಾಡುತ್ತಿದ್ದಾಳೆ.

ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಕ್ಲೌಡಿಯಾ ಕಾರ್ಡ್ ಅವರ ಪ್ರಬಂಧದಲ್ಲಿ ಸುಧಾ ಅವರ ಮಾತುಗಳು ಪ್ರತಿಧ್ವನಿಸುತ್ತವೆ. ಅವರು ತಮ್ಮ ́Rape as weaponʼ ಎಂಬ ಪ್ರಬಂಧದಲ್ಲಿ “ನಾಗರಿಕ ಅತ್ಯಾಚಾರದಂತೆ ಯುದ್ಧದಲ್ಲಿನ ಅತ್ಯಾಚಾರದ ಸರ್ವವ್ಯಾಪಿ ಬೆದರಿಕೆಯು ಭಯೋತ್ಪಾದನೆ ಒಂದು ರೂಪವಾಗಿದೆ. ಇತರ ರೀತಿಯ ಭಯೋತ್ಪಾದನೆಗಳಂತೆ ಅತ್ಯಾಚಾರವು ಎರಡು ಗುರಿಗಳನ್ನು ಹೊಂದಿರುತ್ತದೆ. ಒಂದು ಎದುರಿನ ತಂಡಕ್ಕೆ ತೀವ್ರವಾದ ಸಂದೇಶವನ್ನು ತಲುಪಿಸುವುದು. ಅತ್ಯಾಚಾರ ಮತ್ತು ಕೊಲೆಗೆ ಈಡಾದ ಮಹಿಳೆಯು ಬಾಂಬ್‌ ದಾಳಿಗೆ ಒಳಗಾದ ಜನರು ನೀಡುವ ಸಂದೇಶವನ್ನೂ ನೀಡುತ್ತಾಳೆ. ಎರಡನೆಯದಾಗಿ ತಮ್ಮ ಬೇಡಿಕೆಗಳು ನಿರೀಕ್ಷೆಗಳನ್ನು ಈಡೇರಿಸುವಂತೆ ಎದುರಾಳಿಯನ್ನು ಹೆದರಿಸುವ ಸಲುವಾಗಿ.”

ಲೇಖಕಿ ಮತ್ತು ಕಾರ್ಯಕರ್ತೆ ಮೀನಾ ಕಂದಸಾಮಿ ಹೇಳುವಂತೆ, ಯುದ್ಧವು ಸಂಪೂರ್ಣವಾಗಿ ಪುರುಷ ಚಟುವಟಿಕೆಯಾಗಿದ್ದ ಸಮಯದಿಂದ, ಮತ್ತು ಗೆದ್ದ ಮಹಿಳೆಯರನ್ನು ತಮ್ಮ ಅಧೀನಕ್ಕೆ ಒಳಪಡಿಸುವ ಅಥವಾ ಅತ್ಯಾಚಾರ ಮಾಡುವ ಕಲ್ಪನೆಯು ಲೂಟಿ ಮತ್ತು ಸುಲಿಗೆಯನ್ನು ಹೋಲುತ್ತದೆ. ಕಾಲಾನಂತರದಲ್ಲಿ, ಅತ್ಯಾಚಾರವನ್ನು ಯುದ್ಧ ಅಥವಾ ಸಂಘರ್ಷದ ತಂತ್ರವಾಗಿ ಆಯುಧವನ್ನಾಗಿ ಮಾಡಲಾಗಿದೆ, ಇದು ಜನಸಮೂಹವನ್ನು ಶರಣಾಗುವಂತೆ ಬೆದರಿಸಲು ಸುಲಭ ಮಾರ್ಗವಾಗಿದೆ.

ಆಡಳಿತವು ಮಹಿಳೆಯರಿಗೆ ನೀಡುತ್ತಿರುವ ಸಂದೇಶವೇನು?

FIR ದಾಖಲಾಗಿದ್ದರೂ ವಿಡಿಯೋದಲ್ಲಿ ಕಂಡುಬರುವ ಆರೋಪಿಯನ್ನು ಬಂಧಿಸಿದ್ದು ಘಟನೆ ನಡೆದ 77 ದಿನಗಳ ನಂತರ. ಇಂತಹ ನಿಷ್ಕ್ರಿಯತೆಯ ಮೂಲಕ ಆಡಳಿತವು ನಿಮ್ಮ ವಿರುದ್ಧ ಯಾರಾದರೂ ದೌರ್ಜನ್ಯವೆಸಗಿದರೆ ನಾವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಸಂದೇಶವನ್ನು ಮಹಿಳೆಯರಿಗೆ ನೀಡಿದಂತಾಗುತ್ತದೆ ಎನ್ನುತ್ತಾರೆ ವೃಂದಾ ಗ್ರೋವರ್.

“ವಿಡಿಯೋದಲ್ಲಿ ಆ ಗಂಡಸರನ್ನು ಸ್ಪಷ್ಟವಾಗಿ ನೋಡಬಹುದು, ಇದು ಗುರುತಿಸಬಹುದಾದ, ಜಾಮೀನು ರಹಿತ ಅಪರಾಧವೂ ಹೌದು. ಹೀಗಾಗಿ ಇಂತಹ ಪ್ರಕರಣದಲ್ಲಿ FIR ದಾಖಲಿಸಿದ್ದಲ್ಲಿ ತಕ್ಷಣವೇ ಬಂಧಿಸಬೇಕು. ಆದರೆ ಈ ಬಂಧನ ನಡೆದಿದ್ದು ಜುಲೈ 20ರಂದು. ಅದೂ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಂತರ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸ್ವಯಂಪ್ರೇರಿತವಾಗಿ ಈ ಕುರಿತು ಗಮನಹರಿಸಿ, ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಸೂಚಿಸಿದ ನಂತರ. ಇಷ್ಟೆಲ್ಲ ಆದ ನಂತರ ಕೇಂದ್ರ ಮತ್ತು ರಾಜ್ಯದ ಆಡಳಿತ ಯಂತ್ರ ಎಚ್ಚರಗೊಳ್ಳುತ್ತದೆಯಾದರೆ ಈ ಮೂಲಕ ಅವರು ದೇಶದ ಮಹಿಳೆಯರಿಗೆ ನೀಡುತ್ತಿರುವ ಸಂದೇಶವಾದರೂ ಏನು?

ಕಳೆದ 6 ವರ್ಷಗಳಿಂದ ಕಾಶ್ಮೀರದಿಂದ ವರದಿ ಮಾಡುತ್ತಿರುವ, ಹೆಸರು ಹೇಳಲಿಚ್ಛಿಸದ  ಮಹಿಳಾ ಪತ್ರಕರ್ತೆಯೊಬ್ಬರು, ವಿಶೇಷವಾಗಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಆಡಳಿತವು ಇಂಟರ್ನೆಟ್‌ ಬ್ಯಾನ್‌ ಮಾಡುವುದನ್ನು ಅಸ್ತ್ರವಾಗಿ ಬಳಸಿಕೊಳ್ಳತೊಡಗಿದೆ TNM ಗೆ ತಿಳಿಸಿದರು. ಸಂಘರ್ಷ ವಲಯಗಳಲ್ಲಿ ಪದೇ ಪದೇ ವಿಧಿಸಲಾಗುವ ಇಂಟರ್ನೆಟ್‌ ಬ್ಯಾನ್‌ ಮಹಿಳೆಯರ ಮೇಲಿನ ಹಿಂಸಾಚಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಆ ಮಹಿಳೆಯರು ಯಾವುದೇ ಹೊರಗಿನ ಸಹಾಯವನ್ನು ಪಡೆಯದಂತೆ ಮಾಡುತ್ತದೆ.

“ಇಂತಹ ಹಿಂಸಾಚಾರದ ಸಮಯದಲ್ಲಿ ಏನಾಗುತ್ತದೆಯೋ ಅದಕ್ಕೆ ಸರ್ಕಾರವೇ ಯಾವಾಗಲೂ ಜವಾಬ್ದಾರನಾಗಿರುತ್ತದೆ. ಅದು ಪರಿಸ್ಥಿತಿಯನ್ನು ಅರಿತು ಮಹಿಳೆಯರ ವಿರುದ್ಧ ನಡೆಯುವ ಇಂತಹ ಘೋರ ಅಪರಾಧಗಳಿಗೆ ಕಾರಣರಾದವರನ್ನು ಗುರುತಿಸಬೇಕು. ಸಾಮಾನ್ಯ ನಾಗರಿಕರು ಮಾತ್ರವಲ್ಲ, ಭದ್ರತಾ ಪಡೆಗಳು / ಪೊಲೀಸ್ ಸಿಬ್ಬಂದಿಯನ್ನು ಸಹ ಕಾನೂನಿನೆದುರು ಪ್ರಸ್ತುತಪಡಿಸಬೇಕು” ಎಂದು ಅವರು ಹೇಳುತ್ತಾರೆ.

ಮಣಿಪುರದ ಪ್ರಕರಣವಾಗಲಿ ಅಥವಾ ಈಳಂನ ತಮಿಳು ಮಹಿಳೆಯರ ವಿಷಯವಾಗಲಿ, ಅತ್ಯಾಚಾರವನ್ನು ಮೊದಲು ಆಡಳಿತಗಾರರು, ಆಕ್ರಮಿತ ಪಡೆಗಳು, ಪೊಲೀಸರು ಮತ್ತು ಸೈನ್ಯವು ಆಯುಧವನ್ನಾಗಿ ಮಾಡಿತು ಎಂದು ಮೀನಾ ಹೇಳುತ್ತಾರೆ. “ಆಗಾಗ್ಗೆ ರಾಜ್ಯ ಶಕ್ತಿಯಿಂದ ಅತ್ಯಾಚಾರವು ಈ ಪ್ರದೇಶದಲ್ಲಿ ದೀರ್ಘಕಾಲದಿಂದ ನಿರ್ಭಯತೆಯನ್ನು ಅನುಭವಿಸಿದೆ ಎಂಬುದನ್ನು ನಾವು ಗುರುತಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ, ಮತ್ತು ಈಗ ವ್ಯವಸ್ಥಿತ ಜನಾಂಗೀಯ ಘರ್ಷಣೆಗಳ ಸಂದರ್ಭದಲ್ಲಿ, ಅದು ಮತ್ತೆ ಮುನ್ನೆಲೆಗೆ ಬರುತ್ತಿರುವುದನ್ನು ನಾವು ನೋಡುತ್ತೇವೆ. ಅಪಾರ ದೈಹಿಕ ಮತ್ತು ಮಾನಸಿಕ ಹಾನಿ, ಅನುಭವದ ಆಘಾತ ಮತ್ತು ಬಲಿಪಶುಗಳು ಎದುರಿಸುತ್ತಿರುವ ಸ್ವಯಂತ್ವದ ನಾಶದ ಜೊತೆಗೆ, ಅತ್ಯಾಚಾರದ ಅಂತಹ ಬಳಕೆಯು ಖಂಡಿತವಾಗಿಯೂ ಇತರ ನಿರ್ದಿಷ್ಟ ಗುಂಪಿನ ಜನರನ್ನು ಗುರಿಯಾಗಿಸುತ್ತದೆ, ಅವರನ್ನು ಅವಮಾನಿಸುತ್ತದೆ ಮತ್ತು ಅವರನ್ನು ನಿರಂತರ, ಊಹಿಸಬಹುದಾದ ಭಯದಲ್ಲಿ ಬದುಕುವಂತೆ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.

ಮಣಿಪುರದ ಪ್ರಕರಣವಾಗಲಿ ಅಥವಾ ಈಳಂ ಪ್ರಕರಣವಾಗಲಿ ಇಲ್ಲೆಲ್ಲವೂ ಅತ್ಯಾಚಾರವನ್ನು ರಾಜಕೀಯ ನಾಯಕರು, ಆಕ್ರಮಿತ ಪಡೆಗಳು, ಪೊಲೀಸರು ಮತ್ತು ಸೈನ್ಯವು ಆಯುಧವನ್ನಾಗಿ ಬಳಸಿಕೊಂಡಿವೆ ಎಂದು ಮೀನಾ ಹೇಳುತ್ತಾರೆ. “ಕೆಲವೊಮ್ಮೆ ಅತ್ಯಾಚಾರವು ಆಯಾ ಪ್ರದೇಶಗಳಲ್ಲಿ ಯಾವುದೇ ಭಯವನ್ನು ಎದರುಸಿರುವುದಿಲ್ಲವೆನ್ನುವುದನ್ನು ಗಮನಿಸುವುದು ಬಹಳ ಮುಖ್ಯ ಎನ್ನುವುದು ನನ್ನ ಭಾವನೆ. ಈಗ ಅತ್ಯಾಚಾರ ವ್ಯವಸ್ಥಿತ ಜನಾಂಗೀಯ ಯುದ್ಧದ ಭಾಗವಾಗಿ ಮುನ್ನೆಲೆಗೆ ಬಂದಿದೆ. ಅಪಾರ ದೈಹಿಕ ಹಾನಿ ಮತ್ತು ಮಾನಸಿಕ ಹಾನಿಯೊಂದಿಗೆ ಹೆಣ್ಣನ್ನು ಜರ್ಜರಿತಗೊಳಿಸುವ, ಆಕೆಯ ಆತ್ಮವನ್ನು ಘಾಸಿಗೊಳಿಸುವ ಅತ್ಯಾಚಾರವನ್ನು ಖಂಡಿತವಾಗಿಯೂ ಒಂದು ಗುಂಪನ್ನು ಗುರಿಯಾಗಿಸಿಕೊಂಡೇ ಇಲ್ಲಿ ಎಸಗಲಾಗಿದೆ. ಇದು ನಿರಂತರ ಅವರನ್ನು ಭಯದಲ್ಲಿ ಹೆದರಿಕೊಂಡೇ ಬದುಕುವಂತೆ ಮಾಡುತ್ತದೆ” ಎಂದು ಮೀನಾ ಹೇಳುತ್ತಾರೆ.

ಈ ಸಂದರ್ಭದಲ್ಲಿ, 2002ರಲ್ಲಿ ಗುಜರಾತಿನಲ್ಲಿ ನಡೆದ ಗಲಭೆಯ ಸಮಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನು ಅವರನ್ನು ನಾವು ಮರೆಯಬಾರದು ಎಂದು ವೃಂದಾ ಹೇಳುತ್ತಾರೆ. “ಆಕೆಯ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿತು ಮತ್ತು ಇತ್ತೀಚೆಗೆ ಬಿಡುಗಡೆ ಮಾಡಿತು. ಆಕೆಗೆ ನ್ಯಾಯವನ್ನು ನಿರಾಕರಿಸಿದ ರೀತಿ ಇನ್ನೂ ರಾಷ್ಟ್ರವನ್ನು ಕಾಡುತ್ತಿದೆ” ಎಂದು ಅವರು ಹೇಳುತ್ತಾರೆ.

ಯಾವುದೇ ಪ್ರದೇಶದಲ್ಲಿ ಸಂಘರ್ಷ ಭುಗಿಲೆದ್ದಾಗ ಅಂಚಿನಲ್ಲಿರುವ ಗುರುತುಗಳ ಮಹಿಳೆಯರು ಮತ್ತು ವ್ಯಕ್ತಿಗಳನ್ನು ರಕ್ಷಿಸಲು ಆಡಳಿತವು ತನ್ನ ಅಧಿಕಾರವನ್ನು ಬಳಸಬೇಕು ಎಂದು ಒತ್ತಿಹೇಳಿದ ವೃಂದಾ, ಇಡೀ ಪರಿಸ್ಥಿತಿಯನ್ನು ಪೊಲೀಸರು ತನಿಖೆ ಮಾಡಬೇಕು ಎಂದು ಹೇಳುತ್ತಾರೆ. “ನಾವು ಈ ಒಂದು ವೀಡಿಯೊವನ್ನು ನೋಡಿದ್ದೇವೆ, ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಮಣಿಪುರದಲ್ಲಿ ಇದೊಂದೇ ಘಟನೆ ನಡೆದಿರುವುದೆ? ನಮಗೆ ತಿಳಿದಿಲ್ಲ ಆದರೆ ಪೊಲೀಸರು ಅದನ್ನು ಕಂಡುಹಿಡಿಯಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಮಹಿಳೆ ಈ ಆಡಳಿತ ಅಥವಾ ಅದರ ಯಾವುದೇ ಯಂತ್ರಗಳು ಅವಳನ್ನು ರಕ್ಷಿಸುತ್ತವೆಯೆನ್ನುವುದನ್ನು ಏಕೆ ನಂಬಬೇಕು?” ಎಂದು ಅವರು ಕೇಳುತ್ತಾರೆ, ಜನರ ಘನತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ತನ್ನ ಅಧಿಕಾರವನ್ನು ಬಳಸುವುದು ಆಡಳಿತದ ಕರ್ತವ್ಯವಾಗಿದೆ. “ಅದು ಅದನ್ನು ಮಾಡಲು ವಿಫಲವಾದರೆ, ಅದರ ಶಕ್ತಿಯ ಮೌಲ್ಯವೇನು?” ಎಂದು ಅವರು ಕೇಳುತ್ತಾರೆ.

ನಾವು ನೋಡಿದ ಚಿತ್ರಗಳಿಗಷ್ಟೇ ಪ್ರತಿಕ್ರಿಯಿಸುತ್ತಿದ್ದೇವೆ – ಇಂಟರ್ನೆಟ್ ಸ್ಥಗಿತದಿಂದಾಗಿ ಮುಖ್ಯವಾಹಿನಿಗೆ ತಲುಪದ ಚಿತ್ರಗಳು ಎಷ್ಟಿವೆಯೋ. “ಇದು ಘೋರ ದುರಂತದ ಸಣ್ಣ ತುಣುಕು ಮಾತ್ರ. ಬಯಲಾಗದು ಚಿತ್ರಗಳು ಇನ್ನಷ್ಟೇ ಹೊರಬರಬೇಕಿದೆ” ಎಂದು ಅವರು ಹೇಳುತ್ತಾರೆ.

ಮೇರಿ ಬೇತ್‌ ಹೇಳುವಂತೆ, ಶಾಂತಿ ಸ್ಥಾಪಿಸುವ ವಿಷಯ ಬಂದಾಗಲೂ ಮಹಿಳೆಯರೇ ಈ ಜವಾಬ್ದಾರಿಯನ್ನು ಹೊರುತ್ತಾರೆ. “ಮಣಿಪುರದ ಮಹಿಳೆಯರು ವೈಯಕ್ತಿಕವಾಗಿ ಮತ್ತು ಮಹಿಳಾ ಗುಂಪಾಗಿ ಸಂಘರ್ಷದ ಮುಂಚೂಣಿಯಲ್ಲಿ ಮಾನವ ಗುರಾಣಿಗಳಾಗಿ, ಪ್ರತಿಭಟನಾಕಾರರಾಗಿ, ಸಮುದಾಯದ ರಕ್ಷಕರಾಗಿ, ಮಧ್ಯವರ್ತಿಗಳಾಗಿ ಮತ್ತು ಶಾಂತಿ ನಿರ್ಮಾತೃಗಳಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಘರ್ಷದ ನಂತರ, ಶಾಂತಿ ನಿರ್ಮಾಣ ಮತ್ತು ಸಮುದಾಯ ನಿರ್ಮಾಣದ ಹೊರೆಯನ್ನು ಮತ್ತೆ ಮಹಿಳೆಯರು ಹೊರುತ್ತಾರೆ” ಎಂದು ಅವರು ಹೇಳಿದರು.

– ಇಂಗ್ಲಿಷ್‌ ಮೂಲ: ಭಾರತಿ ಸಿಂಗಾರವೇಲ್‌

(ದಿ ನ್ಯೂಸ್‌ ಮಿನಿಟ್‌ ಡಾಟ್‌ ಕಾಮ್‌ ಜಾಲತಾಣದಲ್ಲಿ ಪ್ರಕಟವಾದ ಇಂಗ್ಲಿಷ್‌ ಲೇಖನದ ಅನುವಾದ)

You cannot copy content of this page

Exit mobile version