ಕರ್ನಾಟಕ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು 4,000ಕ್ಕೂ ಹೆಚ್ಚು ಫಾರ್ಮ್ 7 ಅರ್ಜಿ; ಮುಸ್ಲಿಂ ಮತದಾರರೇ ಪ್ರಮುಖ ಗುರಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ 4,000ಕ್ಕೂ ಹೆಚ್ಚು ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿವೆ.ಈ ರೀತಿ ಕೈಬಿಡಲು ಕೋರಲಾದ ಮತದಾರರಲ್ಲಿ ಬಹುಪಾಲು ಮಂದಿ ಮುಸ್ಲಿಮರೇ ಆಗಿದ್ದಾರೆ ಎಂಬ ಅಂಶ ಚುನಾವಣಾ ಅಂಕಿಅಂಶಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಎರಡೂ ಪಕ್ಷಗಳ ಕ್ಷೇತ್ರಗಳಲ್ಲಿ ಈ ರೀತಿಯ ಸಗಟು ಆಕ್ಷೇಪಣೆಗಳು ದಾಖಲಾಗಿವೆ. ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ತೆಗೆದುಹಾಕುವ ಮುನ್ನ ಪ್ರತಿಯೊಂದು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಸೇರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲು, ಮತದಾರರು ಗೈರುಹಾಜರಾಗಿದ್ದಾರೆ ಅಥವಾ ಶಾಶ್ವತವಾಗಿ ವಲಸೆ ಹೋಗಿದ್ದಾರೆ ಎಂಬ ಕಾರಣಗಳನ್ನು ನೀಡಿ ಫಾರ್ಮ್ 7 ಅನ್ನು ಬಳಸಲಾಗುತ್ತದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 22 ರಂದು ಒಂದೇ ದಿನ 1,373 ಫಾರ್ಮ್ 7 ಅರ್ಜಿಗಳು ಬಂದಿದ್ದವು.ಇವುಗಳಲ್ಲಿ 1,363 ಅರ್ಜಿಗಳನ್ನು ಕೇವಲ 10 ಮಂದಿ ಸಲ್ಲಿಸಿದ್ದು, ಅರ್ಜಿದಾರರು ತಮ್ಮ ಮತಗಟ್ಟೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇತರ ಬೂತ್‌ಗಳಲ್ಲಿರುವ ಮುಸ್ಲಿಂ ಮತದಾರರನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ಆಕ್ಷೇಪಣೆ ಸಲ್ಲಿಸಿರುವುದು ಕಂಡುಬಂದಿದೆ.

ಹುಚ್ಚಪ್ಪ ಗಾಣಿಗೇರ್ ಎಂಬ ಮತದಾರರೊಬ್ಬರು ಸೆಪ್ಟೆಂಬರ್ 22 ಮತ್ತು 23 ರ ನಡುವೆ 493 ಅರ್ಜಿಗಳನ್ನು ಸಲ್ಲಿಸಿದ್ದರೆ, ಗೋವಿಂದರಾಜ್ ಮುಂಡೂರು ಎಂಬುವವರು ಸೆಪ್ಟೆಂಬರ್ 23 ರಂದು 33 ಮತಗಟ್ಟೆಗಳ ವ್ಯಾಪ್ತಿಯಲ್ಲಿ 413 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್ ಸಚಿವ ಎಂ.ಬಿ. ಪಾಟೀಲ್ ಪ್ರತಿನಿಧಿಸುತ್ತಿದ್ದಾರೆ.

ಕಾಂಗ್ರೆಸ್ ಸಚಿವ ಈಶ್ವರ್ ಖಂಡ್ರೆ ಪ್ರತಿನಿಧಿಸುವ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲೂ ಇಂತಹುದೇ ಮಾದರಿ ಕಂಡುಬಂದಿದೆ. ಸೆಪ್ಟೆಂಬರ್ 23 ರಂದು ಕನಿಷ್ಠ 30 ಮಂದಿ 1,700 ಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡುವಂತೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸಂತೋಷ್ ಎಂಬ ಮತದಾರರೊಬ್ಬರು ಸೆಪ್ಟೆಂಬರ್ 22 ರಂದು 54 ಅರ್ಜಿಗಳನ್ನು ಸಲ್ಲಿಸಿದ ನಂತರ, ಮರುದಿನ 120 ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 23 ರ ನಂತರವೂ ಭಾಲ್ಕಿಯಲ್ಲಿ ಮತ್ತಷ್ಟು ಅರ್ಜಿಗಳು ಬಂದಿದ್ದು, ಸೆಪ್ಟೆಂಬರ್ 24 ರಂದು ಸಲ್ಲಿಕೆಯಾದ ಹೆಚ್ಚುವರಿ 525 ಆಕ್ಷೇಪಣೆಗಳಲ್ಲಿ ಕೇವಲ ಎರಡನ್ನು ಹೊರತುಪಡಿಸಿ ಉಳಿದೆಲ್ಲವನ್ನೂ 20 ಮಂದಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯೂ ಗುರಿಯಾಗಿಸಲಾದ ಹೆಚ್ಚಿನ ಮತದಾರರು ಮುಸ್ಲಿಮರೇ ಆಗಿದ್ದಾರೆ.

ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲೂ ಈ ಮಾದರಿ ಗೋಚರಿಸಿದೆ.ಬಸವಕಲ್ಯಾಣದಲ್ಲಿ ಸಿದ್ದಪ್ಪ ಎಂಬ ಮತದಾರರೊಬ್ಬರು ಒಂದೇ ದಿನ ಸ್ವೀಕರಿಸಲಾದ 37 ಫಾರ್ಮ್ 7 ಅರ್ಜಿಗಳಲ್ಲಿ 32 ಅರ್ಜಿಗಳನ್ನು ಸಲ್ಲಿಸಿದ್ದು, ಇವೆಲ್ಲವೂ ಒಂದೇ ಮತಗಟ್ಟೆಯ ಮುಸ್ಲಿಂ ಮತದಾರರ ವಿರುದ್ಧವಾಗಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಉಮೇಶ್ ಬಂಗೇರ ಎಂಬುವವರು ಒಂದೇ ಮತಗಟ್ಟೆಯ ಮುಸ್ಲಿಂ ಮತದಾರರನ್ನು ಗುರಿಯಾಗಿಸಿ 21 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಸಾಮಾನ್ಯವಾಗಿ “ಗೈರುಹಾಜರಿ/ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂಬ ಕಾರಣವನ್ನು ನೀಡಲಾಗಿದೆ.

ಕೆಲವು ಅರ್ಜಿಗಳನ್ನು ಸಿದ್ಧಪಡಿಸಿದ ವಿಧಾನವೂ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಭಾಲ್ಕಿಯಲ್ಲಿ ಪರಿಶೀಲಿಸಲಾದ ಎರಡು ಪ್ರಕರಣಗಳಲ್ಲಿ, ಯಾರ ಹೆಸರನ್ನು ಕೈಬಿಡಬೇಕೋ ಅವರ ವಿವರಗಳು ಫಾರ್ಮ್‌ಗಳಲ್ಲಿ ಮುದ್ರಿತವಾಗಿದ್ದವು (ಪ್ರಿಂಟೆಡ್), ಆದರೆ ಆಕ್ಷೇಪಣೆ ಸಲ್ಲಿಸಿದವರ ವಿವರಗಳು ಮಾತ್ರ ಕೈಬರಹದಲ್ಲಿದ್ದವು. ಮತ್ತೊಂದು ಪ್ರಕರಣದಲ್ಲಿ, ವಿಷ್ಣುವರ್ಧನ್ ಕೋಟೆ ಎಂಬುವವರನ್ನು ಆಕ್ಷೇಪಣಾದಾರರೆಂದು ನಮೂದಿಸಲಾಗಿತ್ತು. ಆದರೆ ಅವರನ್ನು ಸಂಪರ್ಕಿಸಿದಾಗ, ತಾವು ವಿಷ್ಣುವರ್ಧನ್ ಅಲ್ಲ, ಸುರೇಶ್ ಎಂದು ಗುರುತಿಸಿಕೊಂಡಿದ್ದರು; ಆದರೆ ಅರ್ಜಿಯಲ್ಲಿದ್ದ ಎಪಿಕ್ (EPIC) ವಿವರಗಳು ವಿಷ್ಣುವರ್ಧನ್ ಹೆಸರಿನಲ್ಲಿದ್ದವು. ಕೆಲವು ಅರ್ಜಿಗಳನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಲಾಗಿದ್ದು, ಅವುಗಳನ್ನು ಇನ್ನೂ ಡಿಜಿಟಲೀಕರಣಗೊಳಿಸದ ಕಾರಣ ಭೌತಿಕ ಅರ್ಜಿಗಳು ಮತ್ತು ಆನ್‌ಲೈನ್ ಡೇಟಾ ನಡುವೆ ವ್ಯತ್ಯಾಸಗಳು ಕಂಡುಬಂದಿರಬಹುದು ಎಂದು ಬೀದರ್ ಅಧಿಕಾರಿಗಳು ಹೇಳಿದ್ದಾರೆ.

ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆಯ ಗಡುವು ಮುಕ್ತಾಯಗೊಳ್ಳುವ ಸ್ವಲ್ಪ ಮುನ್ನ, ಅಂದರೆ ಸೆಪ್ಟೆಂಬರ್ 22 ರ ಆಸುಪಾಸಿನಲ್ಲಿ ಈ ಸಗಟು ಫಾರ್ಮ್ 7 ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗತೊಡಗಿದವು.ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಲು, ಕ್ರಮ ಕೈಗೊಳ್ಳುವ ಮುನ್ನ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಬೀದರ್ ಮತ್ತು ವಿಜಯಪುರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಸಮರ್ಪಕ ಕಾರಣಗಳಿಲ್ಲದೆ ಕೇವಲ ಸುಳ್ಳು ಆರೋಪಗಳೊಂದಿಗೆ ಸಾಮೂಹಿಕ ಆಕ್ಷೇಪಣೆಗಳನ್ನು ಸಲ್ಲಿಸಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಗಟು ಆಕ್ಷೇಪಣೆ ಸಲ್ಲಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ.

ವಿವಿಧ ಚುನಾವಣಾ ದಾಖಲೆಗಳಲ್ಲಿ ಕಂಡುಬರುತ್ತಿರುವ ಫಾರ್ಮ್ 7 ಅರ್ಜಿಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಈಗಾಗಲೇ ಆತಂಕಗಳು ವ್ಯಕ್ತವಾಗಿದ್ದು, ಈ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಕೇವಲ ಸಗಟು ಆಕ್ಷೇಪಣೆಗಳ ಆಧಾರದ ಮೇಲೆ ಯಾವುದೇ ಅರ್ಹ ಮತದಾರರ ಹೆಸರನ್ನು ಅಕ್ರಮವಾಗಿ ತೆಗೆದುಹಾಕಲಾಗಿಲ್ಲ; ಎಲ್ಲಾ ಅರ್ಜಿಗಳು ಪ್ರಸ್ತುತ ಚುನಾವಣಾ ಪ್ರಾಧಿಕಾರಗಳ ಕಟ್ಟುನಿಟ್ಟಿನ ಪರಿಶೀಲನೆಯಲ್ಲಿವೆ.

Related Articles

ಇತ್ತೀಚಿನ ಸುದ್ದಿಗಳು