ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ದಲಿತ ವಿದ್ಯಾರ್ಥಿಯ ವಿರುದ್ಧ ಜಾತಿ ನಿಂದನೆ, ಸಾಮಾಜಿಕ ಬಹಿಷ್ಕಾರ

ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರಶ್ನಿಸಿದ ಮಾದಿಗ ಸಮುದಾಯದ ವಿದ್ಯಾರ್ಥಿಯೊಬ್ಬನ ವಿರುದ್ಧ ಜಾತಿ ನಿಂದನೆ ಮಾಡಿ, ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿದ ಆರೋಪದ ಮೇಲೆ 11 ಮಂದಿ ಮೇಲ್ಜಾತಿಯ ವ್ಯಕ್ತಿಗಳ ವಿರುದ್ಧ ತುಮಕೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಆರ್. ದೇವರಾಜು ಎಂಬ ವಿದ್ಯಾರ್ಥಿ ಈ ದೂರು ನೀಡಿದ್ದು, “ನಾನು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದರಿಂದ ಕೆರಳಿದ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ” ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಯ ದೂರಿನನ್ವಯ ಡಿ.ಸಿ.ಆರ್.ಇ ಅಧಿಕಾರಿಗಳು ನಟರಾಜು, ಸಂದೇಶ್ ಗೌಡ, ಮುದ್ದೇಗೌಡ, ವಸಂತ್ ಕುಮಾರ್, ಕಲ್ಯಾಣ್ ಕುಮಾರ್, ತ್ಯಾಗರಾಜು, ಯೋಗೀಶ್ ಆಚಾರಿ, ಕುಮಾರ್ ಆಚಾರಿ, ಶಾಂತರಾಜು, ಲಕ್ಷ್ಮಣ್ ಮತ್ತು ಕರಿಯಪ್ಪ ಎಂಬುವವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಶಂಕಿತರಲ್ಲಿ ಕೆಲವರು ಒಕ್ಕಲಿಗ ಮತ್ತು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದರೆ, ಇನ್ನು ಕೆಲವರು ಹಿಂದುಳಿದ ವರ್ಗ (OBC) ಮತ್ತು ಒಬ್ಬರು ಕ್ಷತ್ರಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾಲೋನಿಯಲ್ಲಿ ನಡೆದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿ ದೇವರಾಜು ಅವರು ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ವಿಷಯ ಚರ್ಚಿಸುವ ನೆಪದಲ್ಲಿ ಆರೋಪಿಗಳು ದೇವರಾಜುನನ್ನು ಕರಿಯಮ್ಮ ದೇವಸ್ಥಾನಕ್ಕೆ ಕರೆಸಿಕೊಂಡಿದ್ದರು. ಅಲ್ಲಿಗೆ ಬಂದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಕೂಡಲೇ ತನ್ನ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು