ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲ ಹಾಗೂ ಬೆಂಗಳೂರು ದಕ್ಷಿಣ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಪುಟ್ಟ ಭೈರೇಗೌಡ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕರ್ನಾಟಕ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಬಿಜೆಪಿ ಮಹಿಳಾ ಮುಖಂಡೆ ಮಹೇಶ್ವರಿ, ಅನಿಲ್ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಬೆಂಬಲಿಗರು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಗೂಂಡಾಗಿರಿ ನಡೆಸಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ. ಈ ಗುಂಪು ವಕೀಲ ಪುಟ್ಟ ಭೈರೇಗೌಡ ಅವರ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಕಾನೂನು ರಕ್ಷಿಸಬೇಕಾದ ವಕೀಲರ ಮೇಲೆಯೇ ಇಂತಹ ದೌರ್ಜನ್ಯ ನಡೆಯುತ್ತಿದ್ದರೆ, ಸಾಮಾನ್ಯ ಜನರ ಸುರಕ್ಷತೆಯ ಗತಿ ಏನು ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ರಾಜಕೀಯ ಅಧಿಕಾರದ ಬಲದಿಂದ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರವೃತ್ತಿಗೆ ಪೊಲೀಸರು ಯಾವುದೇ ಮುಲಾಜಿಲ್ಲದೆ ಕಡಿವಾಣ ಹಾಕಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಮತ್ತು ಅವರ ರಾಜಕೀಯ ಹಿನ್ನೆಲೆ ಏನೇ ಇರಲಿ, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗೂಂಡಾಗಿರಿಗೆ ರಾಜಕೀಯ ರಕ್ಷಣೆ ನೀಡುವುದನ್ನು ಕೂಡಲೇ ನಿಲ್ಲಿಸಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸಾಬೀತುಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
