ಕುಲ್ಗಾಮ್ ಜಿಲ್ಲೆಯಲ್ಲಿ ಶಂಕಿತ ಉಗ್ರಗಾಮಿಗಳು ನಿವೃತ್ತ ಸೈನಿಕನನ್ನು ಕೊಂದು, ಅವರ ಪತ್ನಿ ಮತ್ತು ಸೊಸೆಯ ಮೇಲೆ ಹಲ್ಲೆ ನಡೆಸಿದ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಪ್ರದೇಶದಾದ್ಯಂತ 500 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಬುಧವಾರ ವರದಿ ಮಾಡಿದೆ.
ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಬಂಧಿತರಲ್ಲಿ ಅನೇಕರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಕಾಶ್ಮೀರಿ ಉಗ್ರಗಾಮಿಗಳ ಸಂಬಂಧಿಕರಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ನಿವೃತ್ತ ಸೈನಿಕ 45 ವರ್ಷದ ಮಂಜೂರ್ ಅಹ್ಮದ್ ವಾಗೆ ಅವರ ಪತ್ನಿ ಮತ್ತು ಸೊಸೆಯ ಮೇಲೆ ಸೋಮವಾರ ಬೆಹಿಬಾಗ್ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿದ್ದರು . ವಾಗೆಯವರ ಹೊಟ್ಟೆಗೆ ಗುಂಡು ತಗುಲಿ ಸಾವನ್ನಪ್ಪಿದ್ದರೆ, ಅವರ ಪತ್ನಿ ಮತ್ತು ಸೊಸೆಯ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
“ಕಾಶ್ಮೀರ ಕಣಿವೆಯಾದ್ಯಂತ ದೊಡ್ಡ ಮಟ್ಟದ ಬಂಧನ ಕ್ರಮಗಳು ನಡೆದಿವೆ ಮತ್ತು ಈ ಸಂಖ್ಯೆ 500 ಕ್ಕಿಂತ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಉಗ್ರಗಾಮಿ ದಾಳಿಯ ನಂತರ ಈ ಪ್ರಮಾಣದಲ್ಲಿ ಬಂಧನಗಳು ನಡೆದಿರುವುದು ನನಗೆ ನೆನಪಿಲ್ಲ,” ಎಂದು ಹೆಸರು ತಿಳಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಗಡಿಯಾಚೆಯಿಂದ ಇರುವ ಉಗ್ರಗಾಮಿಗಳಿಗೆ ಬಲವಾದ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಈ ಬಂಧನಗಳನ್ನು ಮಾಡಲಾಗಿದೆ, “ಇಂತಹ ದಾಳಿಗಳನ್ನು ಸಹಿಸಲಾಗುವುದಿಲ್ಲ. ಹಿಂದೆಯೂ ಇಂತಹ ಸಂದೇಶಗಳನ್ನು ಕಳುಹಿಸುವುದರಿಂದ ಅಪೇಕ್ಷಿತ ಫಲಿತಾಂಶಗಳು ದೊರೆತಿವೆ,” ಎಂದು ಅಧಿಕಾರಿ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಮೂಲದ ಕಾಶ್ಮೀರಿ ಉಗ್ರಗಾಮಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಾಗಿದ್ದೂ, ಅಧಿಕಾರಿಗಳು ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರನ್ನು ಬಂಧಿಸಿರುವುದು ಇದೇ ಮೊದಲು.
“ಈ ಬಾರಿ ಅವರು [ಉಗ್ರಗಾಮಿಗಳು] ಸೈನಿಕನ ಕುಟುಂಬದ ಸದಸ್ಯರನ್ನು ಗುರಿಯಾಗಿಸಿ ತಮ್ಮ ಎಲ್ಲೆಯನ್ನು ಮೀರಿದ್ದಾರೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು TIE ಗೆ ತಿಳಿಸಿದ್ದಾರೆ.