ಕಸ್ತೂರಿ ರಂಗನ್ ವರದಿ | ಉಪಗ್ರಹ ಆಧಾರಿತ ಸಮೀಕ್ಷೆ ದೋಷಪೂರಿತವಾಗಿದೆ; ಭೌತಿಕವಾಗಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಿ: ಕೆ.ಎಂ. ಶಿವಲಿಂಗೇಗೌಡ

ಸಕಲೇಶಪುರ, ಸೆ.20: ಕಸ್ತೂರಿ ರಂಗನ್‌ ಸಮಿತಿಯು ಉಪಗ್ರಹ ಆಧಾರಿತವಾಗಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿದೆ. ಇದರ ಬದಲು ಭೌತಿಕವಾಗಿ ಸಮೀಕ್ಷೆ ನಡೆಸಿ ವಾಸ್ತವಾಂಶಗಳನ್ನು ದಾಖಲಿಸುವಂತಾಗಬೇಕು. ಮಲೆನಾಡಿನ ಭಾಗದ ಉದ್ದಗಲಕ್ಕೂ ಅಧಿಕಾರಿಗಳು ಓಡಾಡಿ ಸಮೀಕ್ಷೆ ನಡೆಸಬೇಕು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಸಕಲೇಶಪುರದ ಎಪಿಎಂಸಿ ಯಾರ್ಡ್ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತು ನೇರ ಸಂವಾದದಲ್ಲಿ ಶಿವಲಿಂಗೇಗೌಡ ಅವರು ಮಾತನಾಡಿದರು. ಕಾಡಂಚಿನಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವವರ ಬದುಕಿಗೆ ಭದ್ರತೆಯನ್ನು ಒದಗಿಸು ನಿಟ್ಟಿನಲ್ಲಿ ನಮ್ಮ ಸರ್ಕಾರ ಭೂಗ್ಯಾರಂಟಿ ಯೋಜನೆಯನ್ನು ಕೊಟ್ಟಿದೆ. ಆದರೆ ಕಸ್ತೂರಿ ರಂಗನ್ ವರದಿಯ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಕಾರಣಕ್ಕೆ 94 ಸಿ ಅರ್ಜಿದಾರರಿಗೆ ಹಕ್ಕುಪತ್ರ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಕಾಡಂಚಿನ ಜನರಿಂದ ಪ್ರಕೃತಿಗೆ ಯಾವುದೇ ಧಕ್ಕೆಯಾಗುತ್ತಿಲ್ಲ. ನಿಜಾರ್ಥದಲ್ಲಿ ಅವರೇ ಕಾಡಿನ ರಕ್ಷಕರು. ಅವರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದರು.

ಸರ್ಕಾರವೇ ಜನರ ಬಳಿಗೆ ಹೋಗಿ, ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡುವ ನಿಟ್ಟಿನಲ್ಲಿ  ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಪ್ರಜಾ ಸೇವಾ ಇಲಾಖೆಯನ್ನು ಸ್ಥಾಪಿಸಿ, ಒಂದು ಕಾನೂನಿನ ಚೌಕಟ್ಟನ್ನು ರೂಪಿಸಿದ್ದಾರೆ. ನಿನ್ನೆ ಇಡೀ ದಿನ ನಾನು ಸಕಲೇಶಪುರದಲ್ಲಿ ನಡೆಸಿದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುತ್ತಿರುವ ಜನರ ಹಕ್ಕುಪತ್ರದ ಬೇಡಿಕೆಗಳೇ ಹೆಚ್ಚಿದ್ದವು. ಕೇಂದ್ರ ಸರ್ಕಾರದ ತಪ್ಪಾದ ನೀತಿಯ ಪರಿಣಾಮ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಹಲವು ವರ್ಷಗಳಿಂದ ಬದುಕು ನಡೆಸುತ್ತಿರುವ ಜನರು ಆತಂಕಗೊಂಡಿದ್ದಾರೆ. ಹುಟ್ಟಿ ಬೆಳೆದ ನೆಲೆಯನ್ನೇ ಕಳೆದುಕೊಳ್ಳುವ ಭಯ ಅವರಲ್ಲಿ ಹುಟ್ಟಿಕೊಂಡಿದೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ಇದರಿಂದ ಕಾಫಿ, ಏಲಕ್ಕಿ ಮತ್ತು ಮೆಣಸು ಬೆಳೆಗಾರರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಬಹಳ ಸಮಸ್ಯೆ ಉಂಟಾಗಲಿದೆ. ಸ್ಥಳೀಯರು ಮನೆ ಕಟ್ಟಿಕೊಳ್ಳಲು, ರಸ್ತೆ ಮಾಡಿಸಿಕೊಳ್ಳಲು ಅಥವಾ ಯಾವುದೇ ಮೂಲಭೂತ ಸೌಕರ್ಯಗಳನ್ನು ಪಡೆಯಲು ಕಷ್ಟಸಾಧ್ಯವಾಗಲಿದೆ. ಕುಡಿಯುವ ನೀರಿಗಾಗಿ ಬಾವಿ ತೋಡಬೇಕೆಂದರೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಇದು ಕ್ರಮೇಣ ಇಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಮತ್ತು ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎ. ಎಸ್. ಪೊನ್ನಣ್ಣ, ಬಿಡಿಎ ಅಧ್ಯಕ್ಷರಾದ ಎ. ಕೆ. ಹ್ಯಾರಿಸ್, ಹಾಸನ ಸಂಸದರಾದ ಶ್ರೇಯಸ್ ಪಟೇಲ್, ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜು, ಶೃಂಗೇರಿ ಶಾಸಕರಾದ ಟಿ. ಡಿ. ರಾಜೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು