Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ರವಾಸಿಗರ ಸ್ವರ್ಗ – ಕವಲೇದುರ್ಗ

ಮಳೆಗಾಲವನ್ನು ಮಲೆನಾಡಿನಲ್ಲಿ ಇಷ್ಟ ಪಡದವರು ಯಾರಿದ್ದಾರೆ? ಸುತ್ತ ಹಸಿರ ಕಾಡುಗಳಿಂದ ತುಂಬಿ ತುಳುಕಾಡುತ್ತಿರುವ ಮಲೆನಾಡಿನ ಅರಣ್ಯಗಳ ನಡುವೆ ಅನೇಕ ಐತಿಹಾಸಿಕ ತಾಣಗಳಿವೆ.

ಮಳೆ ಬರುವ ಕಾಲದಲ್ಲಿ ಇಂತ ಒಂದು ಕಾಡಿಗೆ ಟ್ರಕ್ಕಿಂಗ್‌ ಹೋಗುವ ಮಜವೇ ಬೇರೆ. ನೀವು ಒಂದು ದಿನದ ಟ್ರಿಪ್‌ ಪ್ಲಾನ್‌ ಮಾಡೋದಾದ್ರೆ ನಾನು ನಿಮಗೆ ಒಂದು ಜಾಗ ಹೇಳ್ತೀನಿ.

ಅದೇ ಪ್ರವಾಸಿಗರ ಸ್ವರ್ಗ – ಕವಲೇದುರ್ಗ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಹಸುರು ಹೊದ್ದಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ ಹಾಗೂ ಜಿಟಿ ಜಿಟಿ ಮಳೆ ….ಇವೆಲ್ಲಾ ಬೆರೆತು ಸ್ವರ್ಗ ಸದೃಶ ಅನುಭವವನ್ನು ನಮಗೆ ನೀಡುತ್ತವೆ.

ಒಂದಾನೊಂದು ಕಾಲದಲ್ಲಿ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ಇದರ ಸುತ್ತ ಬೆಳೆದಿರುವ ದಟ್ಟ ಕಾಡಿನ ನಡುವೆ ಇರುವ ಕೋಟೆಯ ಒಳಗೆ ಇರುವ ರಾಜ, ರಾಣಿಯರ ಆರಮನೆಯ ದರ್ಬಾರು, ಈಜುಕೊಳ, ದೇವಾಲಯಗಳು ಅನೇಕ ಕಥೆಗಳನ್ನು ನಮಗೆ ಹೇಳುತ್ತವೆ.

ಕೋಟೆಯ ಗರ್ಭದ ಒಳಗಿದೆ ಚರಿತ್ರೆಯ ಪುಟಗಳು!

ಕವಲೇದುರ್ಗ ಎಂಬ ಹೆಸರು ಕಾವಲು ದುರ್ಗ ಎಂಬುದರಿಂದ ಬಂದಿದೆ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗಕ್ಕೆ ಭುವನಗಿರಿ ದುರ್ಗ ಎಂಬ ಹೆಸರಿದೆ.

9 ನೇ ಶತಮಾನದಲ್ಲಿ ಸ್ಥಾಪನೆಯಾದ ಕವಲೇದುರ್ಗ ಕೋಟೆಯು ವಿವಿಧ ಆಡಳಿತಗಾರರ ಆಳ್ವಿಕೆಯನ್ನು ಕಂಡಿದೆ. 14 ನೇ ಶತಮಾನದಲ್ಲಿ ಚೆಲುವರಂಗಪ್ಪರಿಂದ ನವೀಕರಿಸಲ್ಪಟ್ಟ ಈ ಕೋಟೆ ಕೆಳದಿ ಅರಸರ ತನಕ ವೈಭವದಿಂದ ಮೆರೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ (ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದ ಪ್ರಖ್ಯಾತ ರಾಣಿ ಚೆನ್ನಮ್ಮಾಜಿ ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಇದೇ ಕವಲೇದುರ್ಗ ಸಂಸ್ಥಾನದ ಕೋಟೆಯಲ್ಲಿ.

ಕೆಳದಿಯ ಅರಸ ವೆಂಕಟಪ್ಪ ನಾಯಕನು ಹದಿನಾರನೇ ಶತಮಾನದಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಿ ಅದನ್ನು ಒಂದು ಅಗ್ರಹಾರವನ್ನಾಗಿಸಿದ. ಮತ್ತಿನ ಮಠ ಎಂಬ ಶೃಂಗೇರಿ ಮಠದ ಶಾಖೆಯನ್ನೂ, ಒಂದು ಖಜಾನೆ, ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಕೊಳಗಳನ್ನು ನಿರ್ಮಿಸಿದನು.

16 ನೇ ಶತಮಾನದ ಕೆಳದಿಯ ನಾಯಕರವರೆಗೆ, ಏಳು ಬುರುಜುಗಳನ್ನು ನಿರ್ಮಿಸುವ ಮೂಲಕ ಕೋಟೆಯನ್ನು ಬಲಪಡಿಸಲಾಯಿತು. 1763 ರಲ್ಲಿ ಕೋಟೆಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಕ್ರಮಿಸಿಕೊಂಡರು.

ಏನಿದೆ ಈ ಕೋಟೆಯ ಒಳಗೆ?

ಸುಮಾರು ಆರು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆಯನ್ನು ಮಳೆ ನೀರು ಆಧಾರಿತ ತಾಂತ್ರಿಕತೆ ಬಳಸಿರುವುದನ್ನು ಕಾಣಬಹುದು.

ಮೂರು ಸುತ್ತಿನ ಕೋಟೆಯಾದ ಈ ಕವಲೇ ದುರ್ಗವನ್ನು ಬೃಹತ್‌ ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನು ಬಳಸಿ ಕಟ್ಟಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಹೆಬ್ಬಾಗಿಲಿದ್ದು,  ಅವುಗಳ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮಧ್ಯ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ.

ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ. ಇತ್ತೀಚಿನ ಉತ್ಖನನದಿಂದ, ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು,ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕ ಅಂದರೆ ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ,ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ – ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಕಾಣಸಿಗುತ್ತದೆ.

ಯಾವಾಗ ಚಾರಣ ಮಾಡಬಹುದು?

ನೀವು ಚಾರಣ ಪ್ರಿಯರಾಗಿದ್ದರೆ, ಒಂದು ದಿನ ಪೂರ್ತಿ ಕಾಡಿನಲ್ಲಿ, ಐತಿಹಾಸಿಕ ಅವಶೇಷಗಳ ನಡುವೆ ಇರಬೇಕು ಅಂತ ಇದ್ರೆ….ಕವಲೇದುರ್ಗ ಬೆಸ್ಟ್.‌ ನೀವು ವರ್ಷಪೂರ್ತಿ ಕವಲೇದುರ್ಗ ಕೋಟೆಗೆ ಚಾರಣ ಮಾಡಬಹುದು. ಆದರೂ ಆಗಸ್ಟ್ ಮತ್ತು ಏಪ್ರಿಲ್ ನಡುವೆ ಉತ್ತಮ ಸಮಯ. ಆದರೆ ಇಲ್ಲಿ ಯಾವುದೇ ವಾಸ್ತವ್ಯದ ಸೌಲಭ್ಯ ಇಲ್ಲ. ನೀವು ಹತ್ತಿರದಲ್ಲಿರುವ ತೀರ್ಥಹಳ್ಳಿ, ಶಿವಮೊಗ್ಗ ಅಥವಾ ಆಗುಂಬೆಯಲ್ಲಿ ತಂಗಬಹುದು. ಈ ಕೋಟೆ ಬೆಳಿಗ್ಗೆ 8:30 ರಿಂದ ಸಂಜೆ 5: 30 ರವರೆಗೆ ತೆರೆದಿರುತ್ತದೆ.

ಹೇಗೆ ತಲುಪುವುದು?

ಕವಲೇದುರ್ಗದಿಂದ ಸರಿಸುಮಾರು 51 ಮೈಲಿ ದೂರದಲ್ಲಿರುವ ಶಿವಮೊಗ್ಗ – ಹತ್ತಿರದ ರೈಲು ನಿಲ್ದಾಣ – ಉಳಿದ ದಾರಿಗಳಲ್ಲಿ ಕ್ಯಾಬ್ / ಟ್ಯಾಕ್ಸಿ ತೆಗೆದುಕೊಳ್ಳಿ. ಅಥವಾ ಕವಲೇದುರ್ಗ ಕೋಟೆಯಿಂದ ಸುಮಾರು 11 ಮೈಲಿ ದೂರದಲ್ಲಿರುವ ತೀರ್ಥಹಳ್ಳಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಕವಲೇದುರ್ಗದಲ್ಲಿ ನೀವು ನಡೆಯುತ್ತಾ, ಶಾಂತ ಕಾಡುಗಳ ಮಧ್ಯೆ ನೀವು ಚಾರಣ ಮಾಡಬಹುದು.

ಲೇಖನ – ಫೋಟೋಗ್ರಾಫಿ: ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು