ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (CID) ಪ್ರಮುಖ ಶಂಕಿತ ಆರ್‌ಡಿ ಪಾಟೀಲ್ ಅವರನ್ನು ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದೆ. ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ಆತನನ್ನು ಬಂಧಿಸಿದ ನಂತರ ಕಲಬುರಗಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸಿಐಡಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದನ್ನು ಮನ್ನಿಸಿ ಪಾಟೀಲನನ್ನು ಎಂಟು ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಪ್ರಕರಣವನ್ನು ಮತ್ತಷ್ಟು ಕೆದಕಲು ಸಿಐಡಿ ತಂಡ ಪಾಟೀಲನನ್ನು ವಿಚಾರಣೆ ನಡೆಸಲಿದೆ.
ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡಿದ ಇತರ ಐದು ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ತ್ರಿಮೂರ್ತಿ, ಸಲೀಂ, ಸಂತೋಷ್, ಅಂಬರೀಶ್ ಮತ್ತು ಸಾಗರ್ ಎನ್ನುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಕಲಬುರಗಿ ಅಭ್ಯರ್ಥಿ ಸೇರಿದಂತೆ ಮೂವರನ್ನು ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಅಕ್ಟೋಬರ್ 28ರಂದು ಕೆಇಎ ಕಲಬುಗಿ ಮತ್ತು ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರಥಮ ವಿಭಾಗದ ಸಹಾಯಕರ ಪ್ರವೇಶ ಪರೀಕ್ಷೆಯನ್ನು ನಡೆಸಿತು. ಪರೀಕ್ಷೆಯ ಸಮಯದಲ್ಲಿ, ಬ್ಲೂಟೂತ್ ಸಾಧನಗಳನ್ನು ಬಳಸಿದ್ದಕ್ಕಾಗಿ ಹಲವಾರು ಅಭ್ಯರ್ಥಿಗಳನ್ನು ಬಂಧಿಸಲಾಯಿತು.
ಪೊಲೀಸರ ಪ್ರಕಾರ, ಆರೋಪಿಗಳು ಬ್ಲೂಟೂತ್ ಸಾಧನಗಳನ್ನು ಪ್ರವೇಶ ಪರೀಕ್ಷೆಯಲ್ಲಿ ನಕಲು ಮಾಡಲು ಬಳಸುತ್ತಿದ್ದರು. ಹಲವಾರು ಅಭ್ಯರ್ಥಿಗಳ ಬಂಧನದ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.