ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಾಳಯದಿಂದ ಇಬ್ಬರು ಪ್ರಮುಖ ನಾಯಕರನ್ನು ಬುಧವಾರ ತನ್ನ ತೆಕ್ಕೆಗೆ ಸೆಳೇದುಕೊಂಡಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಆರ್ ಮಂಜುನಾಥ್ ಮತ್ತು ಡಿಸಿ ಗೌರಿ ಶಂಕರ್ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರಿದರು.
ಮೇ 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿಯ ಹಲವಾರು ನಾಯಕರನ್ನು ಸ್ವಾಗತಿಸುತ್ತಿದೆ.
ದಾಸರಹಳ್ಳಿ ಮಂಜುನಾಥ್
ದಾಸರಹಳ್ಳಿ ಮಂಜುನಾಥ್ ಎಂದೇ ಖ್ಯಾತರಾಗಿರುವ ಜೆಡಿಎಸ್‌ನ ಮಾಜಿ ಶಾಸಕ ಆರ್ ಮಂಜುನಾಥ್ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮಂಜುನಾಥ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜುನಾಥ್ ಬಿಜೆಪಿಯ ಎಸ್ ಮುನಿರಾಜು ವಿರುದ್ಧ ಸುಮಾರು 9 ಸಾವಿರ ಮತಗಳ ಅಂತರದಿಂದ ಸೋತಿದ್ದರು.
ದಾಸರಹಳ್ಳಿ ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಮಂಜುನಾಥ್ ಅವರ ಸೇರ್ಪಡೆಯೊಂದಿಗೆ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.
ಡಿಸಿ ಗೌರಿ ಶಂಕರ್
ಒಂದು ಕಾಲದ ಜೆಡಿಎಸ್ ನಿಷ್ಠಾವಂತ, ಎರಡು ಬಾರಿ ಜೆಡಿಎಸ್ ಮಾಜಿ ಶಾಸಕ ಗೌರಿ ಶಂಕರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಗೌರಿ ಶಂಕರ್ ಅವರು 2008ರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಅವರು 2018ರಲ್ಲಿ ಸ್ಪರ್ಧಿಸಿ ಯಶಸ್ವಿಯಾದರು. ಈ ವರ್ಷದ ಮೇ ವಿಧಾನಸಭೆ ಚುನಾವಣೆಯಲ್ಲಿ ಗೌರಿ ಶಂಕರ್ ಅವರು ಬಿಜೆಪಿಯ ಸುರೇಶ್ ಗೌಡ ವಿರುದ್ಧ ಸುಮಾರು 5,000 ಮತಗಳಿಂದ ಸೋತರು.
ಸಭೆಯಲ್ಲಿ ತುಮಕೂರಿನವರೇ ಆದ ಸಚಿವ ಕೆ ಎನ್ ರಾಜಣ್ಣ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.