ಹಾಸನ: ಮಾನವನಿಗೆ ಅವನ ಹುಟ್ಟಿನಿಂದಲೇ ದೊರೆಯುವ ಹಕ್ಕುಗಳೆಂದರೇ ಬದುಕು, ಮಾತನಾಡುವುದು, ಧರ್ಮ, ಭಾಷೆ, ಉದ್ಯೋಗ ಇವುಗಳನ್ನು ಯಾರೂ ಮೊಟಕು ಮಾಡಬಾರದು. ಇವುಗಳನ್ನು ಕಾಪಾಡುವುದು ನಮ್ಮ ಸಂವಿಧಾನ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ತಿಳಿಸಿದರು.
ನಗರದ ಸಾಲಗಾಮ ರಸ್ತೆ ಬಳಿ ಇರುವ ಎಂ. ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣ ಸಂಘ, ಜಿಲ್ಲಾ ಚಾಪ್ಟರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ. ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಮಾನವ ಹಕ್ಕುಗಳ ಮುಖ್ಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅವರದೆಯಾದಂತಹ ಕಾನೂನಿನ ವ್ಯಾಪ್ತಿಯಾದಂತಹ ಜೀವನವನ್ನು ನಡೆಸುವುದು. ಮಾತನಾಡುವುದು ತನಗೆ ಸೂಕ್ತವಾದಂತಹ ಧರ್ಮ ಆಚರಣೆ ಮಾಡುವಂತಹ ಮತ್ತು ಸೂಕ್ತವಾದಂತಹ ಭಾಷೆಯಲ್ಲಿ ಮಾತನಾಡಲು, ಉದ್ಯೋಗ ಮಾಡುವುದು ಸೇರಿದಂತೆ ಪ್ರತಿಯೊಂದು ಹಕ್ಕುಗಳಿವೆ. ಯಾವುದೇ ವ್ಯಕ್ತಿಗೆ ಲಿಂಗದ ಆಧಾರದ ಮೇಲೆ ಇಲ್ಲವೇ ಧರ್ಮದ ಆಧಾರದ ಮೇಲೆ ಮತ್ತೆ ಇತರೆ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಹೇಳಿದರು.
ಈ ಭೂಮಿ ಮೇಲೆ ಜೀವಿಸುವ ಸ್ವಾತಂತ್ರ್ಯ, ಉದ್ಯೋಗ ಸೇರಿದಂತೆ ಇತರೆ ಮಾನವನ ಹಕ್ಕುಗಳಿವೆ. ಯಾರ ಹಕ್ಕುಗಳನ್ನು ಯಾರು ಮೊಟಕುಗೊಳಿಸಬಾರದು. ಮಾನವನ ಹಕ್ಕುಗಳು ಉಲ್ಲಂಘನೆಯಾದ ಪರಿಣಾಮ ಕಾನೂನುಗಳ ರಚನೆಯಾಗಿ ಜಾರಿಯಾಗುತ್ತಿದೆ. 1948ರಲ್ಲಿ ವಿಶ್ವ ಸಂಸ್ಥೆಯವರು ಮಾನವನ ಹಕ್ಕುಗಳ ಉಲ್ಲಂಘನೆ ಕುರಿತು ಡಿ.10 ದಿನವನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಘೋಷಣೆ ಮಾಡಿದೆ ಎಂದರು.
ಇತಿಹಾಸ ನೋಡಿದರೇ ತಾರತಮ್ಯ ಎಂಬುದು ಮೊದಲಿನಿಂದಲೂ ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ಕೂಡ ತಾರತಮ್ಯವನ್ನು ಕಾಣುತ್ತಿದ್ದೇವೆ. ಒಂದು ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ. ಲಿಂಗ ಶೋಷಣೆ, ಧರ್ಮ-ಧರ್ಮಗಳ ನಡುವೆ ವೈಮನಸ್ಸು, ಇನ್ನೊಂದು ಧರ್ಮವನ್ನು ದ್ವೇಷ ಮಾಡು, ಯಾವುದು ಕಡಿಮೆ ಹೆಚ್ಚು ಎಂದು ಯಾವ ಧರ್ಮವು ಹೇಳುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಪಾಲಿಸುತ್ತಿದ್ದೇವೆ ಎಂದು ಕಿವಿಮಾತು ಹೇಳಿದರು.
ಆದರೆ ಮತ್ತೊಂದು ಧರ್ಮದ ಬಗ್ಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಿಗೂ ಸಹ ಉತ್ತಮವಾಗಿ ನಮ್ಮ ಸಂವಿಧಾನದ ವ್ಯಾಪ್ತಿಯಲ್ಲಿ ಗೌರವಯುತ ಜೀವನ ಮಾಡುವಂತಹ ಹಕ್ಕುಗಳಿದ್ದು, ಅದನ್ನು ಯಾರು ಮೊಟಕು ಮಾಡಬಾರದು. ಮೊಟಕು ಮಾಡುವುದನ್ನು ತಡೆಯುವುದಕ್ಕೆ ಇರುವುದು ಒಂದೇ ವರ್ಗ ಅದೇ ಮಾನವ ವರ್ಗ ಎಂದು ಸಲಹೆ ನೀಡಿದರು. ಸಮಾಜದಲ್ಲಿ ನಡೆಯುವ ದೌರ್ಜನ್ಯ ಎಲ್ಲಾ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅದಕ್ಕಾಗಿ ಕಾನೂನು ರಚಿತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗೌರವ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ. ಶ್ರೀನಿವಾಸ್, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಶೀನಾ ಥಾಮಸ್, ವಕೀಲ ಅನ್ಸದ್ ಪಾಳ್ಯ, ಪ್ರಬುದ್ಧ ಮನಸ್ಸು ಸಮಾಜ ಪ್ರಗತಿಪರ ಚಿಂತಕ ಹೆಚ್.ಕೆ. ವಿವೇಕಾನಂದ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್. ಶರಣ್ಯ ಇತರರು ಉಪಸ್ಥಿತರಿದ್ದರು.
