ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಜಯ ಸಾಧಿಸಿ ಹತ್ತು ದಿನಗಳೇ ಕಳೆದಿದ್ದರೂ, ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈ ವಿಳಂಬವು ಪಕ್ಷದೊಳಗೆ ತೀವ್ರ ಭಿನ್ನಮತಕ್ಕೆ ಕಾರಣವಾಗಿದ್ದು, ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಅವರ ಬೆಂಬಲಿಗರ ನಡುವೆ ಶೀತಲ ಸಮರ ಆರಂಭವಾಗಿದೆ. ಬುಧವಾರ ಸಂಜೆ ವೇಣುಗೋಪಾಲ್ ಬೆಂಬಲಿಗರನ್ನು ಸತೀಶನ್ ಬೆಂಬಲಿಗರು ಮುತ್ತಿಗೆ ಹಾಕುವ ಮೂಲಕ ಅಸಮಾಧಾನ ಸ್ಫೋಟಗೊಂಡಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿರುವುದು ಕೇರಳ ಕಾಂಗ್ರೆಸ್‌ನ ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಗಳ ಹೊರಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. “ವಯನಾಡ್ ಅನ್ನು ಮರೆತುಬಿಡಿ, ನೀವು ಅಲ್ಲಿಂದ ಮತ್ತೆ ಗೆಲ್ಲಲು ಸಾಧ್ಯವಿಲ್ಲ” ಮತ್ತು “ವಯನಾಡ್ ಮುಂದಿನ ಅಮೇಥಿ ಆಗಬಹುದು” ಎಂಬ ಬರಹಗಳ ಮೂಲಕ ಹೈಕಮಾಂಡ್ ನಿರ್ಧಾರಕ್ಕೆ ಸ್ಥಳೀಯ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ವೇಣುಗೋಪಾಲ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡುವ ನಿರ್ಧಾರವನ್ನು ಜನರು ಕ್ಷಮಿಸುವುದಿಲ್ಲ ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಚುನಾವಣಾ ಗೆಲುವಿನ ರೂವಾರಿಗಳೆಂದು ಗುರುತಿಸಿಕೊಂಡಿರುವ ವಿ.ಡಿ. ಸತೀಶನ್ ಅಥವಾ ರಮೇಶ್ ಚೆನ್ನಿತ್ತಲ ಅವರನ್ನು ಕಡೆಗಣಿಸಿ, ಕೊನೆಯ ಕ್ಷಣದಲ್ಲಿ ವೇಣುಗೋಪಾಲ್ ಅವರನ್ನು ಕರೆತರುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಳಂಬವು ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಮುಸ್ಲಿಂ ಲೀಗ್ (IUML) ನಾಯಕರಲ್ಲೂ ಅಸಹನೆ ಮೂಡಿಸಿದೆ.
ಚುನಾವಣಾ ಫಲಿತಾಂಶ ಬಂದು ಇಷ್ಟು ದಿನಗಳಾದರೂ ಮುಖ್ಯಮಂತ್ರಿಯನ್ನು ಘೋಷಿಸದಿರುವುದು ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಮೈತ್ರಿ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ಎಲ್‌ಡಿಎಫ್ ಮತ್ತು ಬಿಜೆಪಿ, “ಸ್ಪಷ್ಟ ಜನಾದೇಶ ಸಿಕ್ಕರೂ ಕಾಂಗ್ರೆಸ್ ತನ್ನಲ್ಲೇ ನಾಯಕನನ್ನು ಆರಿಸಿಕೊಳ್ಳಲು ವಿಫಲವಾಗಿದೆ” ಎಂದು ವ್ಯಂಗ್ಯವಾಡಿವೆ. ಇದು ಕಾಂಗ್ರೆಸ್‌ನ ಸೈದ್ಧಾಂತಿಕ ದಿವಾಳಿತನ ಮತ್ತು ಅಧಿಕಾರ ದಾಹವನ್ನು ತೋರಿಸುತ್ತದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಬುಧವಾರ ಸಂಜೆ 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಭಿಪ್ರಾಯವನ್ನು ಪಡೆದಿರುವ ಹೈಕಮಾಂಡ್, ಚರ್ಚೆಗಳನ್ನು ಪೂರ್ಣಗೊಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಜೈರಾಮ್ ರಮೇಶ್, “ಕೇರಳದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಗುರುವಾರ ಅಧಿಕೃತವಾಗಿ ಘೋಷಿಸಲಾಗುವುದು” ಎಂದು ತಿಳಿಸಿದ್ದಾರೆ. ಯಾರು ಸಿಎಂ ಆಗುತ್ತಾರೆ ಎಂಬ ಕುತೂಹಲ ಈಗ ದೆಹಲಿಯಿಂದ ತಿರುವನಂತಪುರದವರೆಗೆ ಹರಡಿದೆ.
