ಮುಸ್ಲಿಂ ಮಹಿಳೆಯೊಬ್ಬಳು ‘ಖುಲಾ’ (Khula) ಪದ್ಧತಿಯ ಮೂಲಕ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆ ಅಥವಾ ಅನುಮೋದನೆ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಸ್ಲಿಂ ಪುರುಷನಿಗೆ ‘ತಲಾಖ್’ ಹೇಳುವ ಹಕ್ಕು ಹೇಗಿದೆಯೋ, ಅದೇ ರೀತಿ ಮಹಿಳೆಗೆ ವಿಚ್ಛೇದನ ಪಡೆಯಲು ‘ಖುಲಾ’ ಹಕ್ಕು ಲಭ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ. ನಿಶಾ ಬಾನು ಮತ್ತು ಶೋಭಾ ಅನ್ನಮ್ಮ ಈಪನ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. 2023 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ವಿವಾಹವಾಗಿದ್ದ ದಂಪತಿಯ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಪತ್ನಿಯು ಕೌಟುಂಬಿಕ ನ್ಯಾಯಾಲಯದಲ್ಲಿ ಪಡೆದಿದ್ದ ‘ಖುಲಾ’ ವಿಚ್ಛೇದನವನ್ನು ಎತ್ತಿಹಿಡಿದಿದೆ. ಖುಲಾ ಅಸಿಂಧು ಎಂದು ಘೋಷಿಸಬೇಕು, ಮದುವೆಯಲ್ಲಿ ನೀಡಿದ್ದ ವಜ್ರದ ಒಡವೆ ಮರಳಿ ಕೊಡಿಸಬೇಕು ಹಾಗೂ ತನಗುಂಟಾದ ಮಾನಸಿಕ ಯಾತನೆಗೆ ಪರಿಹಾರ ನೀಡಬೇಕೆಂದು ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಿಚ್ಛೇದನ ನೀಡಲು ಪತಿಯ ನಿರಾಕರಣೆ ಅಡ್ಡಿಯಾಗುವುದಿಲ್ಲ ಎಂದಿರುವ ಪೀಠ, ಖುಲಾ ಸಿಂಧುತ್ವಕ್ಕೆ ಮೂರು ಪ್ರಮುಖ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದೆ:
- ಮದುವೆಯನ್ನು ರದ್ದುಗೊಳಿಸಲು ಪತ್ನಿಯು ಸ್ಪಷ್ಟವಾಗಿ ಘೋಷಿಸುವುದು,
- ಮದುವೆಯ ಸಂದರ್ಭದಲ್ಲಿ ಪಡೆದ ಮೆಹರ್ (Dower) ಅಥವಾ ಇತರ ವಸ್ತುಗಳನ್ನು ಹಿಂತಿರುಗಿಸುವ ಪ್ರಸ್ತಾಪ,
- ಖುಲಾ ಘೋಷಣೆಗೆ ಮುನ್ನ ಸಂಧಾನಕ್ಕೆ ಪ್ರಾಮಾಣಿಕ ಯತ್ನ ನಡೆಸಿರುವುದು.
ಕುರಾನ್‌ನ ಎರಡನೇ ಅಧ್ಯಾಯದ 228 ಮತ್ತು 229 ನೇ ಶ್ಲೋಕಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಖುಲಾ ವಿಚಾರದಲ್ಲಿ ವಿಸ್ತೃತ ತನಿಖೆ ಅಥವಾ ಸಾಕ್ಷ್ಯ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪತಿಯ ಒಪ್ಪಿಗೆಯಿಲ್ಲದಿದ್ದರೂ ಮಹಿಳೆಯು ಖುಲಾ ಮೂಲಕ ವಿವಾಹ ಸಂಬಂಧ ಕಡಿದುಕೊಳ್ಳುವುದು ಆಕೆಯ ಮೂಲ ಹಕ್ಕಾಗಿದೆ ಎಂದು ನ್ಯಾಯಪೀಠ ಪುನರುಚ್ಚರಿಸಿದೆ.
