ತೆಲಂಗಾಣದ ರಾಜಧಾನಿ ಹೈದರಾಬಾದ್ನ ಚಿಕ್ಕಡಪಲ್ಲಿಯಲ್ಲಿ ಮುಸ್ಲಿಂ ಸಮುದಾಯದ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲು ನಕಲಿ ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಸಿದ ಆರೋಪದ ಮೇಲೆ ಬಿಜೆಪಿಯ ಬೂತ್ ಮಟ್ಟದ ಏಜೆಂಟ್ (ಬಿಎಲ್ಎ) ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಆಕ್ಷೇಪಣೆ ಸಲ್ಲಿಕೆ ಗಡುವು ಮುಗಿಯಲು ಕೇವಲ ಒಂದು ದಿನ ಬಾಕಿ ಇರುವಾಗ ಈ ಮಹತ್ವದ ಕ್ರಮ ಜರುಗಿಸಲಾಗಿದೆ.
ಮುಶೀರಾಬಾದ್ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ERO) ಟಿ. ಪ್ರವೀಣ್ ಕುಮಾರ್ ರೆಡ್ಡಿ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ, ಬಿಜೆಪಿ ಬಿಎಲ್ಎ ಎಸ್. ಬಾಲಚಂದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಚಂದರ್ ಸಲ್ಲಿಸಿದ್ದ 30 ಅರ್ಜಿಗಳಲ್ಲಿ ಸಂಬಂಧಿತ ಮತದಾರರ ಹೆಸರುಗಳು ಮೊದಲೇ ಮುದ್ರಿತವಾಗಿದ್ದವು (ಪ್ರಿ-ಪ್ರಿಂಟೆಡ್) ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ನಕಲಿ ಫಾರ್ಮ್ಗಳು ಬಿಜೆಪಿ ಕಚೇರಿಯಿಂದಲೇ ಕೇಂದ್ರೀಕೃತವಾಗಿ ಸೃಷ್ಟಿಯಾಗಿರುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಇದೇ ರೀತಿಯ ಮುಂಚಿತವಾಗಿಯೇ ಮುದ್ರಿತವಾದ ಫಾರ್ಮ್ಗಳು ಹೈದರಾಬಾದ್ನ ಬಹಾದುರ್ಪುರ ಮತ್ತು ಗೋಶಾಮಹಲ್ ಕ್ಷೇತ್ರಗಳಲ್ಲೂ ಪತ್ತೆಯಾಗಿವೆ ಎನ್ನಲಾಗಿದೆ.
ಬಾಲಚಂದರ್ ಹೆಸರು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದ 30 ಮತದಾರರ ಪೈಕಿ ಕಾಂಗ್ರೆಸ್ನ ಒಬ್ಬ ಬೂತ್ ಏಜೆಂಟ್ ಕೂಡ ಸೇರಿದ್ದಾರೆ. ಎಫ್ಐಆರ್ ಪ್ರಕಾರ, ಸೆಪ್ಟೆಂಬರ್ 28ರಂದು ಬಾಲಚಂದರ್ ಮತಗಟ್ಟೆ ಸಂಖ್ಯೆ 210ರ ಬೂತ್ ಮಟ್ಟದ ಅಧಿಕಾರಿಗೆ (BLO) ಈ 30 ಫಾರ್ಮ್ಗಳನ್ನು ಬಲವಂತವಾಗಿ ನೀಡಲು ಯತ್ನಿಸಿದ್ದ. ಆದರೆ ಬಿಎಲ್ಒ ಮತ್ತು ಸೂಪರ್ವೈಸರ್ ಒಟ್ಟಿಗೆ ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿದಾಗ, ಆತ ಅರ್ಜಿಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.
ಬಳಿಕ ಅಕ್ಟೋಬರ್ 1ರಂದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಆ 30 ಮಂದಿ ಮತದಾರರು ಮುಶೀರಾಬಾದ್ನಲ್ಲೇ ವಾಸ್ತವ್ಯವಿರುವುದು ದೃಢಪಟ್ಟಿದೆ. ಇದರಿಂದ ದುರುದ್ದೇಶಪೂರ್ವಕವಾಗಿ ಸಲ್ಲಿಸಲಾಗಿದ್ದ ಆ ಎಲ್ಲ ಫಾರ್ಮ್ 7 ಅರ್ಜಿಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ಸರ್ಕಾರಿ ಅಧಿಕಾರಿಗೆ ತಪ್ಪು ಮಾಹಿತಿ ನೀಡಿದ್ದು ಹಾಗೂ ವಂಚನೆ ನಡೆಸಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 217 ಮತ್ತು 318(2) ಹಾಗೂ ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿಯಲ್ಲಿ ಆರೋಪಿಯ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ನಡುವೆ, ಗೋಶಾಮಹಲ್ನಲ್ಲೂ ಮುಸ್ಲಿಂ ಮತದಾರರನ್ನು ಗುರಿಯಾಗಿಸಿ ಇಂತಹದೇ ಕೃತ್ಯ ನಡೆದಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಆರೋಪಿಸಿದ್ದು, ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿರುವ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಎನ್. ರಾಮಚಂದರ್ ರಾವ್, ಪಕ್ಷವು ಯಾರ ಮತವನ್ನೂ ತೆಗೆದುಹಾಕಲು ಯತ್ನಿಸಿಲ್ಲ, ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
