Home ಆರೋಗ್ಯ ಕೇರಳದಲ್ಲಿ ಮತ್ತೆ ನಿಪಾ ವೈರಸ್ ಭೀತಿ: ಕೋಯಿಕ್ಕೋಡ್ ವ್ಯಕ್ತಿಗೆ ಪಾಸಿಟಿವ್, ಆರೋಗ್ಯ ಇಲಾಖೆ ಹೈ ಅಲರ್ಟ್!

ಕೇರಳದಲ್ಲಿ ಮತ್ತೆ ನಿಪಾ ವೈರಸ್ ಭೀತಿ: ಕೋಯಿಕ್ಕೋಡ್ ವ್ಯಕ್ತಿಗೆ ಪಾಸಿಟಿವ್, ಆರೋಗ್ಯ ಇಲಾಖೆ ಹೈ ಅಲರ್ಟ್!

0

ಕೇರಳ ರಾಜ್ಯದಲ್ಲಿ ಮತ್ತೊಮ್ಮೆ ನಿಪಾ ವೈರಸ್ (Nipah Virus) ಭೀತಿ ಎದುರಾಗಿದೆ. ಕೋಯಿಕ್ಕೋಡ್ ಜಿಲ್ಲೆಯ 43 ವರ್ಷದ ವ್ಯಕ್ತಿಯೊಬ್ಬರಿಗೆ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ನಿಪಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಸದರಿ ವ್ಯಕ್ತಿ ಗೋದಾಮೊಂದನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆತನನ್ನು ಪರೀಕ್ಷಿಸಿದ ವೈದ್ಯರು, ರೋಗಿಯ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ರವಾನಿಸಿದ್ದಾರೆ. ಈ ಪರೀಕ್ಷೆಯ ಅಂತಿಮ ವರದಿ ಇಂದು ಹೊರಬೀಳುವ ಸಾಧ್ಯತೆಯಿದ್ದು, ಸದ್ಯಕ್ಕೆ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರವು ಕೋಯಿಕ್ಕೋಡ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಪರಿಶೀಲನಾ ಸಭೆ ಕರೆದಿದೆ.

ವೈದ್ಯಕೀಯ ಮಂಡಳಿಯ ನೇತೃತ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಎನ್‌ಐವಿ ವರದಿ ಬಂದ ನಂತರ ಕಂಟೈನ್‌ಮೆಂಟ್ ವಲಯಗಳನ್ನು ನಿರ್ಮಿಸುವ ಹಾಗೂ ರಾಜ್ಯದಲ್ಲಿ ನಿರ್ಬಂಧಗಳನ್ನು ಹೇರುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ರೋಗಿಯು ಹಲವರನ್ನು ಭೇಟಿಯಾಗಿರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ‘ಕಾಂಟ್ಯಾಕ್ಟ್ ಟ್ರೇಸಿಂಗ್’ (ಸಂಪರ್ಕಿತರ ಪತ್ತೆ) ಆರಂಭಿಸಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ: ಕೆ. ಮುರಳೀಧರನ್ ಈ ಬೆಳವಣಿಗೆಯ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವ ಕೆ. ಮುರಳೀಧರನ್, ನಿಪಾ ವೈರಸ್ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಸೋಂಕಿನ ಲಕ್ಷಣಗಳಿದ್ದ ರೋಗಿಯು ಆರಂಭದಲ್ಲಿ ಚಿಕಿತ್ಸೆಗಾಗಿ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರಿಂದ, ಇತರರಿಗೂ ವೈರಸ್ ಹರಡಿರಬಹುದು ಎಂಬ ಆಶಂಕೆ ವ್ಯಕ್ತವಾಗಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗೆ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲು ಗುರುವಾರ ತಿರುವನಂತಪುರದಲ್ಲಿರುವ ಆರೋಗ್ಯ ಸಚಿವರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ.

You cannot copy content of this page

Exit mobile version