ಫ್ರೀ ಬಸ್ ಅಂದ್ರೆ ಓಡೋಡಿ ಬರ್ತಾರೆ, ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗೆ ಕಳುಹಿಸುತ್ತಾರೆ!: ಕೇರಳ ಸಚಿವ ಸಿ.ಪಿ. ಜಾನ್

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರದಲ್ಲಿರುವ ಕೇರಳದಲ್ಲಿ, ಸಾರಿಗೆ ಸಚಿವ ಹಾಗೂ ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ (ಸಿಎಂಪಿ) ಪ್ರಧಾನ ಕಾರ್ಯದರ್ಶಿ ಸಿ.ಪಿ. ಜಾನ್ ಮಹಿಳೆಯರ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸರ್ಕಾರ ‘ಪ್ರಿಯದರ್ಶಿನಿ’ ಯೋಜನೆಯಡಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಬಳಸಿಕೊಳ್ಳಲು ಮಹಿಳೆಯರು ಮುಗಿಬೀಳುತ್ತಾರೆ ಎಂದು ಜಾನ್ ಹೇಳಿದ್ದಾರೆ. ಅದೇ ಮಹಿಳೆಯರು ತಮ್ಮ ಗಂಡ ಅಥವಾ ತಂದೆಗೆ ಅನಾರೋಗ್ಯ ಉಂಟಾದರೆ ಸರ್ಕಾರಿ ಆಸ್ಪತ್ರೆಗೆ ಸಾಲು ನಿಲ್ಲುತ್ತಾರೆ; ಆದರೆ ತಮ್ಮ ಮಕ್ಕಳನ್ನು ಮಾತ್ರ ಸಾವಿರಾರು ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ಮಹಿಳೆಯರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಪ್ರಯಾಣಕ್ಕೆ ಮತ್ತು ಆಸ್ಪತ್ರೆ ಚಿಕಿತ್ಸೆಗೆ ಕೈಯಲ್ಲಿ ಹಣವಿರುವುದಿಲ್ಲ, ಆದರೆ ಖಾಸಗಿ ಶಾಲೆಗಳ ಫೀಸ್ ನೀಡಲು ಮಾತ್ರ ಇಂತಹ ಮಹಿಳೆಯರಿಗೆ ಎಲ್ಲಿಂದ ಹಣ ಬರುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕ್ಷಮಾಪಣೆಗೆ ಆಗ್ರಹ

ಸಿ.ಪಿ. ಜಾನ್ ಅವರ ಈ ಹೇಳಿಕೆಗೆ ವಿಪಕ್ಷಗಳು ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (ಐದ್ವಾ) ನಾಯಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮಹಿಳೆಯರನ್ನು ಅವಮಾನಿಸುವಂತಹ ಹೇಳಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ. ಜಾನ್ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆದು ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಆದಾಗ್ಯೂ, ತಾವು ಯಾರನ್ನೂ ಅವಮಾನಿಸಿಲ್ಲ ಎಂದು ಜಾನ್ ಸ್ಪಷ್ಟನೆ ನೀಡಿದ್ದಾರೆ. ತಮ್ಮಂತೆ ತಮ್ಮ ಮಕ್ಕಳು ಬಡತನದಲ್ಲೇ ಉಳಿಯಬಾರದು ಎಂಬ ಒಳ್ಳೆಯ ಉದ್ದೇಶದಿಂದ ಮಹಿಳೆಯರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ತಾವು ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು