ಮಹಿಳೆಯರು ಮನೆಯಲ್ಲೇ ಇರಬೇಕು, ಕುರಾನ್ ಇದನ್ನೇ ಬೋಧಿಸುತ್ತದೆ: ಮೌಲ್ವಿ ಹೇಳಿಕೆಗೆ ಐಯುಎಂಎಲ್ ಬೆಂಬಲ, ಸಿಎಂ ಸತೀಶನ್ ತೀವ್ರ ವಿರೋಧ

ತಿರುವನಂತಪುರಂ: ಮುಸ್ಲಿಂ ಮಹಿಳೆಯರ ಸಾರ್ವಜನಿಕ ಜೀವನದ ಕುರಿತು ಪ್ರಭಾವಿ ಮುಸ್ಲಿಂ ಧರ್ಮಗುರು ಮೌಲಾನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸಲಿಯಾರ್ ನೀಡಿರುವ ವಿವಾದಾತ್ಮಕ ಹೇಳಿಕೆಯು ಕೇರಳದಲ್ಲಿ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ನಾಂದಿ ಹಾಡಿದೆ. ಮಹಿಳೆಯರನ್ನು ಕೇವಲ ಮನೆಯ ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿರಿಸುವ ಇಂತಹ ಪ್ರತಿಗಾಮಿ ಚಿಂತನೆಯನ್ನು ಪ್ರಗತಿಪರ ಕೇರಳ ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಕಟುವಾಗಿ ವಿರೋಧಿಸಿದ್ದಾರೆ. ಆದರೆ, ಸರ್ಕಾರದಲ್ಲಿ ಅವರ ಮಿತ್ರಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮೌಲ್ವಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಹೊಸ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ಬುಧವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ತಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಇಂತಹ ನಿಲುವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದರು. “ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೋ ಅಥವಾ 19ನೇ ಶತಮಾನದಲ್ಲೋ? ಮಹಿಳೆಯರು ಸಮಾಜದ ಪ್ರತಿಯೊಂದು ರಂಗದಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಅವರನ್ನು ಮುಖ್ಯವಾಹಿನಿಯಿಂದ ದೂರವಿಡಲು ಬಯಸುವ ಚಿಂತನೆ ಸಮಾಜಕ್ಕೆ ಮಾರಕ” ಎಂದು ವಾಗ್ದಾಳಿ ನಡೆಸಿದರು.

ಇಸ್ಲಾಮಿಕ್ ಇತಿಹಾಸವನ್ನು ಉಲ್ಲೇಖಿಸಿದ ಅವರು, ಪ್ರವಾದಿ ಮೊಹಮ್ಮದರ ಮೊದಲ ಪತ್ನಿ ಖದೀಜಾ ಯಶಸ್ವಿ ವ್ಯಾಪಾರಿಯಾಗಿದ್ದರು, ಆಯೇಷಾ ಹಲವು ಐತಿಹಾಸಿಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ರಾಣಿ ಬಿಲ್ಕಿಸ್ ಕೂಡ ಸಕ್ರಿಯ ನಾಯಕತ್ವ ವಹಿಸಿದ್ದರು ಎಂದು ನಿದರ್ಶನಗಳನ್ನು ನೀಡಿದರು.

ಮತ್ತೊಂದೆಡೆ, ಐಯುಎಂಎಲ್ ರಾಜ್ಯಾಧ್ಯಕ್ಷ ಹಾಗೂ ಪ್ರಭಾವಿ ಧಾರ್ಮಿಕ ಮುಖಂಡ ಪಾಣಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಅವರು ಮೌಲ್ವಿ ಕಾಂತಪುರಂ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಮೌಲ್ವಿಯವರ ಮಾತಿನ ಉದ್ದೇಶ ಮಹಿಳೆಯರ ರಕ್ಷಣೆಯ ಹಿತದೃಷ್ಟಿಯಿಂದ ಕೂಡಿರಬಹುದು ಎಂದು ಹೇಳಿದ್ದಾರೆ.

ಕಳೆದ ವಾರ ಈದ್ ಮಿಲಾದ್ ಆಚರಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದ್ದ ಕಾಂತಪುರಂ, “ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಪುರುಷರೊಂದಿಗೆ ಬೆರೆಯುವುದು ಇಸ್ಲಾಂ ವಿರೋಧಿ. ಮಹಿಳೆಯರು ಮನೆಯಲ್ಲೇ ಶಾಂತವಾಗಿ ಇರಬೇಕು ಎಂದು ಕುರಾನ್ ಬೋಧಿಸುತ್ತದೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಬಂದರೆ ಭಾರೀ ಅನಾಹುತ ಸೃಷ್ಟಿಯಾಗುತ್ತದೆ” ಎಂದು ವಿವಾದಾತ್ಮಕ ಎಚ್ಚರಿಕೆ ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು