Home ರಾಜಕೀಯ ಕೇರಳ ವಿಧಾನಸಭಾ ಚುನಾವಣೆ 2026: ಉತ್ತರ ಮಲಬಾರ್‌ನಲ್ಲಿ ಯುಡಿಎಫ್ ಅಬ್ಬರ; ಎಲ್‌ಡಿಎಫ್‌ಗೆ ಹಿನ್ನಡೆ ಸಾಧ್ಯತೆ

ಕೇರಳ ವಿಧಾನಸಭಾ ಚುನಾವಣೆ 2026: ಉತ್ತರ ಮಲಬಾರ್‌ನಲ್ಲಿ ಯುಡಿಎಫ್ ಅಬ್ಬರ; ಎಲ್‌ಡಿಎಫ್‌ಗೆ ಹಿನ್ನಡೆ ಸಾಧ್ಯತೆ

0

ತಿರುವನಂತಪುರಂ: 2026ರ ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ‘ಮನೋರಮಾ ನ್ಯೂಸ್-ಸಿ ವೋಟರ್’ ನಡೆಸಿರುವ ಸಮೀಕ್ಷೆಯು ಉತ್ತರ ಕೇರಳದ ರಾಜಕೀಯ ಚಿತ್ರಣದಲ್ಲಿ ಮಹತ್ವದ ಬದಲಾವಣೆಯನ್ನು ಮುನ್ಸೂಚಿಸಿದೆ. ಮಲಬಾರ್ ಭಾಗದ ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 25 ರಿಂದ 34 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಆಡಳಿತಾರೂಢ ಎಲ್‌ಡಿಎಫ್ (LDF) ಈ ಭಾಗದಲ್ಲಿ 4 ರಿಂದ 13 ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಕೇವಲ 745 ಮತಗಳಿಂದ ಸೋತಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರಿಗೆ ಈ ಬಾರಿಯೂ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ. ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಇಲ್ಲಿ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನು ಪೇರಾವೂರು ಕ್ಷೇತ್ರದಲ್ಲಿ ಹೈ-ವೋಲ್ಟೇಜ್ ಕದನ ಏರ್ಪಟ್ಟಿದೆ. ಮಾಜಿ ಆರೋಗ್ಯ ಸಚಿವೆ ಮತ್ತು ಎಲ್‌ಡಿಎಫ್‌ನ ಪ್ರಬಲ ನಾಯಕಿ ಕೆ.ಕೆ. ಶೈಲಜಾ ಟೀಚರ್ ಅವರು ಕಾಂಗ್ರೆಸ್‌ನ ಹಾಲಿ ಶಾಸಕ ಸನ್ನಿ ಜೋಸೆಫ್ ವಿರುದ್ಧ ಕಣಕ್ಕಿಳಿದಿದ್ದಾರೆ. ಸಮೀಕ್ಷೆಯ ಪ್ರಕಾರ, ಸನ್ನಿ ಜೋಸೆಫ್ ಅವರು ಶೈಲಜಾ ಅವರ ವಿರುದ್ಧ ಕೂದಲೆಳೆ ಅಂತರದ ಮುನ್ನಡೆ ಹೊಂದಿದ್ದಾರೆ. ಕಳೆದ ಬಾರಿ ಮತ್ತನೂರು ಕ್ಷೇತ್ರದಲ್ಲಿ ದಾಖಲೆಯ ಮತಗಳಿಂದ ಗೆದ್ದಿದ್ದ ಶೈಲಜಾ ಅವರಿಗೆ ಇಲ್ಲಿ ಕಠಿಣ ಪೈಪೋಟಿ ಎದುರಾಗಿದೆ.

ಬೇಪೋರ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಮತ್ತು ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರು ಪಿ.ವಿ. ಅನ್ವರ್ ವಿರುದ್ಧ ಸೆಣಸುತ್ತಿದ್ದಾರೆ. ಇಲ್ಲಿ ರಿಯಾಸ್ ಅವರಿಗೆ ಅಲ್ಪ ಪ್ರಾಬಲ್ಯವಿದೆ ಎಂದು ಸಮೀಕ್ಷೆ ಹೇಳಿದ್ದರೂ, ಹಣಾಹಣಿ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದೆ. ಒಟ್ಟಾರೆಯಾಗಿ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಎಲ್‌ಡಿಎಫ್ ತನ್ನ ಹಿಡಿತ ಸಾಧಿಸಿದರೆ, ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಯುಡಿಎಫ್ ಸಂಪೂರ್ಣ ಮೇಲುಗೈ ಸಾಧಿಸಲಿದೆ ಎಂದು ವರದಿ ತಿಳಿಸಿದೆ.

You cannot copy content of this page

Exit mobile version