Home ದೇಶ ಮತದಾರರ ಪಟ್ಟಿ ಹೈಜಾಕ್ ಮಾಡಲು ಬಿಜೆಪಿ ಸಂಚು: ಕೇಂದ್ರ ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಪತ್ರ

ಮತದಾರರ ಪಟ್ಟಿ ಹೈಜಾಕ್ ಮಾಡಲು ಬಿಜೆಪಿ ಸಂಚು: ಕೇಂದ್ರ ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ಪತ್ರ

0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಹೊರಗಿನವರನ್ನು ಅಕ್ರಮವಾಗಿ ಸೇರಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಏಜೆಂಟರು ಸಾವಿರಾರು ನಕಲಿ ‘ಫಾರಂ 6’ ಅರ್ಜಿಗಳನ್ನು ಸಲ್ಲಿಸುವ ಮೂಲಕ ಬಂಗಾಳದ ನಿವಾಸಿಗಳಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಬಂಗಾಳದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯಲ್ಲೇ ಇಂತಹ ಏಜೆಂಟರು ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಮಮತಾ ತಿಳಿಸಿದ್ದಾರೆ. “ಇದು ಮತದಾರರನ್ನು ಹೈಜಾಕ್ ಮಾಡುವ ಪ್ರಯತ್ನ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿ ಯಶಸ್ವಿಯಾಗಿ ಆಡಿದ ಅದೇ ನೀಚಾಟವನ್ನು ಈಗ ಬಂಗಾಳದಲ್ಲೂ ಪ್ರದರ್ಶಿಸುತ್ತಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಡಿಯಲ್ಲಿ ಸುಮಾರು 60 ಲಕ್ಷ ಪ್ರಕರಣಗಳು ಇಂದಿಗೂ ಬಾಕಿ ಇವೆ. ಹೀಗಿರುವಾಗ ಸದ್ದಿಲ್ಲದೆ 30,000 ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿರುವುದು ಕಾನೂನುಬಾಹಿರ ಮತ್ತು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳಿಗೆ ಸೂಕ್ತ ನೋಟಿಸ್ ನೀಡದೆ ಈ ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂಬುದು ಟಿಎಂಸಿ ಆರೋಪವಾಗಿದೆ.

ಇದೇ ವಿಷಯವಾಗಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. “ನಮ್ಮ ಪ್ರಶ್ನೆಗಳಿಗೆ ಆಯೋಗದ ಬಳಿ ಸಮರ್ಪಕ ಉತ್ತರಗಳಿಲ್ಲ. ಫಾರಂ 6 ಸಲ್ಲಿಸಿದವರ ಹೆಸರುಗಳನ್ನು ಬಹಿರಂಗಪಡಿಸಿ ಮತ್ತು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ” ಎಂದು ಅವರು ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ. ಫೆಬ್ರವರಿ 28, 2026ರ ನಂತರ ಸಲ್ಲಿಸಲಾದ ಯಾವುದೇ ಹೊಸ ಸೇರ್ಪಡೆ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

You cannot copy content of this page

Exit mobile version