Home ದೇಶ ಜಮ್ಮು-ಕಾಶ್ಮೀರದ ಗಂದರ್ಬಾಲ್‌ ಪ್ರದೇಶದಲ್ಲಿ ರಾತ್ರಿಯಿಡೀ ನಡೆದ ಎನ್‌ಕೌಂಟರ್: ಓರ್ವ ಉಗ್ರ ಸಾವು

ಜಮ್ಮು-ಕಾಶ್ಮೀರದ ಗಂದರ್ಬಾಲ್‌ ಪ್ರದೇಶದಲ್ಲಿ ರಾತ್ರಿಯಿಡೀ ನಡೆದ ಎನ್‌ಕೌಂಟರ್: ಓರ್ವ ಉಗ್ರ ಸಾವು

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ.

ಗಂದರ್ಬಾಲ್ ಜಿಲ್ಲೆಯ ಅರ್ಹಾಮಾ ಪ್ರದೇಶದಲ್ಲಿ ಉಗ್ರರ ಸಂಶಯಾಸ್ಪದ ಓಡಾಟದ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ, ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಕುರಿತು ಎಕ್ಸ್ (X) ನಲ್ಲಿ ಮಾಹಿತಿ ನೀಡಿರುವ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್, ಪ್ರದೇಶವನ್ನು ಸುತ್ತುವರಿದು ತಪಾಸಣೆ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಎಂದು ತಿಳಿಸಿದೆ.

ಸೇನಾ ಪಡೆಗಳು ಉಗ್ರರ ದಾಳಿಗೆ ಪ್ರತಿಯಾಗಿ ತಕ್ಕ ಉತ್ತರ ನೀಡಿದ್ದು, ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯಾಚರಣೆಯನ್ನು ಮರುಸಂಘಟಿಸಲಾಗಿದ್ದು, ಪ್ರದೇಶದಲ್ಲಿ ಇನ್ನೂ ಕೆಲವು ಉಗ್ರರು ಅಡಗಿರಬಹುದು ಎಂಬ ಶಂಕೆಯ ಮೇಲೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version