ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆರ್ಥಿಕ ಶಿಸ್ತಿನ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತುಗಳಲ್ಲ, ಬದಲಿಗೆ ಒಬ್ಬರಿಗೊಬ್ಬರು ಅಡ್ಡಿಪಡಿಸುವ ‘ಕುಂಟೆತ್ತುಗಳು’ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, “ಸಿದ್ದರಾಮಯ್ಯ ಅವರು ಸಮಾಜವಾದಿಯಲ್ಲ, ‘ಮಜಾರಾಮಯ್ಯ’. ರಾಜ್ಯದ ಆರ್ಥಿಕ ಪರಿಸ್ಥಿತಿ ಇಂದು ಐಸಿಯುನಲ್ಲಿದೆ. ಸಿಎಂ ಅವರು ಆರ್ಥಿಕ ಶಿಸ್ತಿನ ರೇಖೆ ದಾಟಿದ್ದರೂ, ದಾಟಿಲ್ಲ ಎಂಬಂತೆ ತೋರಿಸುವ ‘ಬ್ಲಾಕ್ ಮ್ಯಾಜಿಕ್’ ಮಾಡುತ್ತಿದ್ದಾರೆ,” ಎಂದು ಕಿಡಿಕಾರಿದರು. ರಾಜ್ಯ ಸರ್ಕಾರವು ವರ್ಷಕ್ಕೆ 45,600 ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತಿದ್ದು, ಪ್ರತಿದಿನ 125 ಕೋಟಿ ರೂಪಾಯಿ ಬಡ್ಡಿ ರೂಪದಲ್ಲೇ ವ್ಯಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳ ಹಣವನ್ನು ನೀಡದೆ ಜನರಿಗೆ ದೋಖಾ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಬಿಜೆಪಿ ನಾಯಕರನ್ನು ‘ಕಳ್ಳೆತ್ತುಗಳು’ ಎಂದು ಕರೆದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಚಲವಾದಿ ನಾರಾಯಣಸ್ವಾಮಿ ಖಾರವಾಗಿ ತಿರುಗೇಟು ನೀಡಿದರು. “ಸಿದ್ದರಾಮಯ್ಯನವರು ತಾವು ಮೊದಲಿಗಿದ್ದ ಪಕ್ಷಕ್ಕೆ ದೋಖಾ ಮಾಡಿ ಬಂದವರು. ಕಾಂಗ್ರೆಸ್‌ನ ‘ಕೈ’ ಚಿಹ್ನೆಯು ಈಗ ಆಕ್ಸಿಡೆಂಟ್‌ನಲ್ಲಿ ತುಂಡಾದ ನಿರ್ಜೀವ ಕೈಯಂತಾಗಿದೆ. ನಾವು ಕಳ್ಳೆತ್ತುಗಳಲ್ಲ, ನಿಮ್ಮಂತಹ ಕಳ್ಳೆತ್ತುಗಳು ದೇಶದಲ್ಲೇ ಇಲ್ಲ. ಕಾಂಗ್ರೆಸ್ ಎಂದರೆ ಕಳ್ಳೆತ್ತುಗಳ ಪಕ್ಷ ಎಂಬುದು ದೇಶಕ್ಕೆ ಗೊತ್ತಿದೆ,” ಎಂದು ವಾಗ್ದಾಳಿ ನಡೆಸಿದರು.
ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರವು ಜನರ ಮೇಲೆ ಮತ್ತಷ್ಟು ತೆರಿಗೆ ಭಾರ ಹೇರಲಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಈ ಸರ್ಕಾರವನ್ನು ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿದರು.
