Friday, June 14, 2024

ಸತ್ಯ | ನ್ಯಾಯ |ಧರ್ಮ

ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಅಡಿಕೆ, ಬಾಳೆ, ಭತ್ತ ನಾಟಿ ಮಾಡಿ ಪ್ರತಿಭಟನೆ

ಸಾಲು ಸಾಲು ಮನವಿ ಪತ್ರ ಕೊಟ್ಟು, ಸಚಿವರು ಸಂಸದರ ಹಿಂದೆ ಮುಂದೆ ತಿರುಗಿದರೂ ಕೊನೆಗೆ ಇಲ್ಲಿನ ಗ್ರಾಮಸ್ಥರಿಗೆ ಕೆಸರು ಗದ್ದೆಯಂತಹ ರಸ್ತೆಯಲ್ಲೇ ಮಳೆಗಾಲ ಕಳೆದಂತಾಗಿದೆ. ಇದಕ್ಕೆ ಸುತ್ತಲಿನ ಸಂಬಂಧಪಟ್ಟ ಗ್ರಾಮಸ್ಥರು ಪ್ರತಿಭಟನೆಗೆ ಬಳಸಿದ ಮಾರ್ಗ ಮಾತ್ರ ಇಡೀ ರಾಜ್ಯವೇ ಈ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.

ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಾರಂಬಳ್ಳಿಯಿಂದ ನಿವಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ. ವಾರಂಬಳ್ಳಿ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು ಮತ್ತು ಹುಣಸೆಮಕ್ಕಿ ಗ್ರಾಮಗಳು ಈ ರಸ್ತೆಯ ಉದ್ದಕ್ಕೂ ಬರಲಿದೆ. ಇಷ್ಟು ಗ್ರಾಮಗಳ ನೂರಾರು ಸಂಖ್ಯೆಯ ಜನರ ಓಡಾಟ ಈ ಹಳ್ಳಿಗಳಲ್ಲಿ ಇದ್ದರೂ ಇಲ್ಲಿನ ರಸ್ತೆ ಮಾತ್ರ ಮನುಷ್ಯರು ಇರಲಿ, ಪ್ರಾಣಿಗಳೂ ಓಡಾಡುವಂತಿಲ್ಲ.

ಮೇಲಿಂದ ಮೇಲೆ ಮನವಿ ಕೊಟ್ಟರೂ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಇಲ್ಲಿನ ಸುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದ ಮಾರ್ಗ ವಿನೂತನವಾದದು. ಕೆಸರಿನ ಗದ್ದೆಯಂತಾಗಿದ್ದ ಈ ರಸ್ತೆಯ ಮಧ್ಯೆ ಅಡಿಕೆ, ಬಾಳೆ ನೆಟ್ಟು, ಭತ್ತದ ನಾಟಿ ಮಾಡಿ ಸುತ್ತಲಿನ ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗೆ ಹೆಂಗಸರು ಮಕ್ಕಳಾಧಿಯಾಗಿ ಸೇರಿ ತಮಗಾಗಿರುವ ಅನಾನುಕೂಲದ ಬಗ್ಗೆ ಪ್ರತಿಭಟನೆಗೆ ಇಳಿದಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಶಾಸಕರ ದಿವ್ಯ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದಾರೆ.

ಹೇಳಿಕೊಳ್ಳಲು ಇದು ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪರಂತಹ ಘಟಾನುಘಟಿಗಳ ತವರು ಜಿಲ್ಲೆ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಲಿ ಸಂಸದರಾಗಿರುವ ಜಿಲ್ಲೆ. ಇವರೆಲ್ಲರ ಪದವಿ, ಹುದ್ದೆಗಳು ಮಾತ್ರ ಇಲ್ಲಿನ ಸುತ್ತಲಿನ ಗ್ರಾಮಸ್ಥರಿಗೆ ಕನ್ನಡಿಯೊಳಗಿನ ಗಂಟು ಅಷ್ಟೆ. ಸ್ಥಳೀಯ ಶಾಸಕರೂ ಆಗಿರುವ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಇಲ್ಲಿಯವರೆಗೂ ಈ ಗ್ರಾಮದ ದುಸ್ಥಿತಿ ಬಗ್ಗೆ ಕ್ಯಾರೇ ಎನ್ನದ ಬಗ್ಗೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಎಷ್ಟು ಬಾರಿ ಮನವಿ ಮಾಡಿದರೂ ರಸ್ತೆ ರಿಪೇರಿ ಮಾಡಿಸಿಲ್ಲ. ಪ್ರಮುಖ ಸಂಪರ್ಕ ರಸ್ತೆಯೂ ಇದಾಗಿರುವುದರಿಂದ ಪ್ರತಿನಿತ್ಯ ನೂರಾರು ವಾಹನಗಳು ಇಲ್ಲಿ ಓಡಾಡುತ್ತವೆ. ಮಕ್ಕಳು ಶಾಲಾ ಕಾಲೇಜಿಗೆ ಹೋಗುವುದೂ ಈ ರಸ್ತೆಯಲ್ಲಿ ದುಸ್ತರವೆನಿಸಿದ ಬಗ್ಗೆ ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ಜನರ ಗಮನ ಸೆಳೆಯುವ ಪ್ರತಿಭಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಇತ್ತ ಮುಖ ಹಾಕುವರೇ ಅಥವಾ ತನ್ನದೂ ದಪ್ಪ ಚರ್ಮ ಎಂದು ಮತ್ತೆ ನಿರ್ಲಕ್ಷ್ಯ ತೋರುವರೇ ಸದ್ಯದಲ್ಲೇ ತಿಳಿಯಲಿದೆ.

Related Articles

ಇತ್ತೀಚಿನ ಸುದ್ದಿಗಳು