ಚಿಕ್ಕಬಳ್ಳಾಪುರ : ನಗರದ ಕನ್ನಡ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಡಾ. ಕೆ. ಸುಧಾಕರ್ ಬೆಂಬಲಿಗರು ಒತ್ತಾಯಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ನಡೆದ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡೋದು ಸರಿನಾ? ಜಿಲ್ಲೆಯಲ್ಲಿ ಶೋಷಿತರು, ಅಲ್ಪಸಂಖ್ಯಾತರು ಬದುಕುಬಾರದ?” ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕುಮಾರಣ್ಣ, ನೀನು ಡಿಕೆ ಅವರನ್ನೂ ಸಹಿಸಲ್ಲ, ಚೆಲುವಣ್ಣನನ್ನೂ ಸಹಿಸಲ್ಲ. ಓಬಿಸಿಯ ನನ್ನನ್ನೂ ಸಹಿಸಲ್ಲ. ಶೋಷಿತ ವರ್ಗದ ಶಾಸಕ ನನ್ನನ್ನು, ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನ್ನು ಅವಮಾನ ಮಾಡಿದ್ದೀವಾ?” ಎಂದು ಕಿಡಿಕಾರಿದರು.
“ನಾವು ನಿಮ್ಮ ಮನೆ ಕೂಲಿ ಕಾರ್ಮಿಕರು, ವಾಚ್‌ಮ್ಯಾನ್ ಕೆಲಸಕ್ಕೆ ಲಾಯಕ್ಕು, ನಿಮ್ಮ ಮನೆ ಕೂಲಿಗೆ ಬರ್ತೀವಿ, ನೀವು ಬಿಸಾಕೋ ಭಿಕ್ಷೆ ಅನ್ನ ತಿಂತೀವಿ ಅಂತ ಅಂದುಕೊಂಡಿದ್ದೀರಾ?” ಎಂದು ಪ್ರಶ್ನಿಸಿದ ಅವರು, “ನಾನು ತುಂಬಾ ತಾಳ್ಮೆಯಿಂದ ಇದ್ದೇನೆ. ಕುಮಾರಣ್ಣ ನೀವು ಓಬಿಸಿ ಹುಡುಗನನ್ನು ಟಾರ್ಗೆಟ್ ಮಾಡಿದ್ದೀರಾ?” ಎಂದು ಆರೋಪಿಸಿದರು.
ಇದೇ ವೇಳೆ, “ನಾನು ಒಬ್ಬನೇ ಒಕ್ಕಲಿಗ ನಾಯಕ ಡಿಕೆಶಿ ಪರವಾಗಿ ನಿಂತಿರೋದು. ನಿಮಗೆ ಕ್ಷೇತ್ರದಲ್ಲಿ ಒಕ್ಕಲಿಗರೂ ಬೆಳೀಬಾರದು, ಬೇರೆಯವರೂ ಬೆಳೆಯಬಾರದು? ಖಬರ್‌ದಾರ್ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ಹೆದರಲ್ಲ” ಎಂದು ಎಚ್ಚರಿಕೆ ನೀಡಿದರು.
ತಮ್ಮ ವಿರುದ್ಧ ಕೇಳಿಬಂದಿರುವ ಸಿಎ (CA) ಸೈಟ್ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಒಂದು ಎಕರೆ ಸಿಎ ಸೈಟ್ ಹೇಗೆ ಪಡೆದಿದ್ದೇನೆ ಎಂಬುದನ್ನು ಈಗಾಗಲೇ ವಿವರಿಸಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಹೇಗೆ ಬಂತು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಆಗ್ರಹಿಸಿದರು.
“ನಾನು ದುಬಾರಿ ಬದನೆಕಾಯಿ ಅಥವಾ ಕೆಜಿಗೆ 5 ಸಾವಿರ ರೂಪಾಯಿ ಬೆಲೆಯ ಟೊಮೆಟೊ ಬೆಳೆದು ಖರೀದಿಸಿದ್ದೇನೆ ಎಂದು ಹೇಳಿದರೂ ಹೇಳಬಹುದು. ಆದರೆ 32 ಎಕರೆ ಜಮೀನು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಕೊಡಬೇಕು” ಎಂದು ಸವಾಲು ಹಾಕಿದರು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಪ್ರದೀಪ್ ಈಶ್ವರ್, “ನಾನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ 65 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸುತ್ತಿದ್ದರು ಎಂದು ಹೇಳಿದ್ದೇನೆ. ಈಗ ಸಾಮಾನ್ಯ ವಾಚ್ ಕಟ್ಟಿಕೊಂಡು ಬಂದು ತೋರಿಸಿದರೆ ಹೇಗೆ? ಅವರು ಧರಿಸಿದ್ದ 65 ಲಕ್ಷದ ವಾಚ್‌ಗಳ ಫೋಟೋ ಹಾಗೂ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದೇನೆ” ಎಂದು ಹೇಳಿದರು.
ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಅವರು, “ನಾನು ಕುಮಾರಸ್ವಾಮಿ ಅವರ ಮನೆ ಮುಂದೆ ವಾಚ್‌ಮ್ಯಾನ್ ಕೆಲಸ ಮಾಡಲು ಸಿದ್ಧ. ನನ್ನ ಸಿಎ ಸೈಟ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಆದರೆ ಅವರು 32 ಎಕರೆ ಜಮೀನಿನ ದಾಖಲೆಗಳನ್ನು ಜನರ ಮುಂದೆ ಇಡಲಿ. ಆಗ ‘ಎಲ್ಲಿದ್ಯಪ್ಪ ಪ್ರದೀಪ್’ ಎಂದು ಕೇಳಬಹುದು” ಎಂದು ಟಾಂಗ್ ನೀಡಿದರು.
ಕೆಂಪೇಗೌಡ ಜಯಂತಿ ವೇದಿಕೆಯಲ್ಲಿ ಆರಂಭವಾದ ಈ ವಾಕ್ಸಮರ ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
