Home ವಿದೇಶ ಕರಾಚಿಯಲ್ಲಿ ಉಗ್ರರ ಅಟ್ಟಹಾಸ: ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ

ಕರಾಚಿಯಲ್ಲಿ ಉಗ್ರರ ಅಟ್ಟಹಾಸ: ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ

0

​ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದು ರೇಂಜರ್ಸ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಇದರ ಬೆನ್ನಲ್ಲೇ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿರೋಧ ಒಡ್ಡಿವೆ. ಈ ಘಟನೆಯಲ್ಲಿ ಸಿಂಧ್ ರೇಂಜರ್ಸ್‌ನ ನಾಲ್ವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

​ಬಳಿಕ ಮತ್ತೊಂದು ಸ್ಫೋಟದ ನಂತರ ಮೊಸಾಮಿಯತ್ ಚೌರಂಗಿ ಮತ್ತು ಯೂನಿವರ್ಸಿಟಿ ರಸ್ತೆಯ ಮೆಟಿಯರಾಲಜಿಕಲ್ ಚೌರಂಗಿ ಪ್ರದೇಶಗಳಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದೆ. ಇದರಿಂದಾಗಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಸಂಚಾರವನ್ನು ಸ್ಥಗಿತಗೊಳಿಸಿವೆ. ಕ್ಷಿಪ್ರ ಕಾರ್ಯಪಡೆ (RRF),

ಪೊಲೀಸ್ ಕಮಾಂಡೋಗಳು ಮತ್ತು ಇತರ ವಿಶೇಷ ಪಡೆಗಳು ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ಕಾರ್ಯ ನಡೆಸಿವೆ. ಈ ವೇಳೆ ಉಭಯ ಪಕ್ಷಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಉಗ್ರರು ಹತರಾಗಿದ್ದಾರೆ. ಮತ್ತೊಬ್ಬ ಉಗ್ರನನ್ನು ಜೀವಂತವಾಗಿ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈ ದಾಳಿಯ ಜವಾಬ್ದಾರಿಯನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಯೋಜಿತ ಉಗ್ರಗಾಮಿ ಸಂಘಟನೆಯಾದ ಜಮಾತ್-ಉಲ್-ಅಹ್ರಾರ್ (JuA) ವಹಿಸಿಕೊಂಡಿದೆ. ತಮ್ಮ ‘ಖುಲಫಾ-ಎ-ರಾಶಿದೀನ್ ಇಸ್ತಿಶ್ಹಾದಿ ಬ್ರಿಗೇಡ್’ಗೆ ಸೇರಿದ ಆತ್ಮಹತ್ಯಾ ದಳ ಈ ದಾಳಿ ನಡೆಸಿದೆ ಎಂದು ಆ ಸಂಘಟನೆ ಪ್ರಕಟಿಸಿದೆ.

​ಸ್ಥಳೀಯರಲ್ಲಿ ಹೆಚ್ಚಿದ ಆತಂಕ

​ಈ ಘಟನೆಯಿಂದಾಗಿ ಸ್ಥಳೀಯವಾಗಿ ತೀವ್ರ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ಸಿಂಧ್ ಮುಖ್ಯಮಂತ್ರಿ ಸಯ್ಯದ್ ಮುರಾದ್ ಅಲಿ ಶಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ಫೋಟ ಮತ್ತು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿಗಳು ಹೆಚ್ಚುತ್ತಿವೆ. ಮುಖ್ಯವಾಗಿ ಟಿಟಿಪಿ ಮತ್ತು ಅದರ ಅಂಗಸಂಸ್ಥೆಗಳು ಸರಣಿ ದಾಳಿಗಳ ಮೂಲಕ ದೇಶದ ಭದ್ರತಾ ವ್ಯವಸ್ಥೆಗೆ ಸವಾಲೊಡ್ಡುತ್ತಿವೆ.

You cannot copy content of this page

Exit mobile version